ರಾಯಚೂರು : ರಾಯಚೂರು ವಿಶ್ವವಿದ್ಯಾಲಯದಲ್ಲಿ ಪೀಠೋಪಕರಣ ಖರೀದಿಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಖರೀದಿ ವೇಳೆ ಮಾರುಕಟ್ಟೆ ದರಕ್ಕಿಂತಲೂ ಶೇ, 900 ರಷ್ಟು ಹೆಚ್ಚಿನ ದರ ನೀಡಿ ಖರೀದಿಸಲಾಗಿದೆ. ಟೆಂಡರ್ ನಿಯಮ ಉಲ್ಲಂಘಿಸಿ, ಅರ್ಹರಲ್ಲದ ಎಜೆನ್ಸಿ ಬಳಿ ವ್ಯವಹಾರ ಮಾಡಲಾಗಿದ್ದು, ಖರೀದಿಯ ಗುಣಮಟ್ಟವೂ ಕಳಪೆಯಾಗಿದೆ ಎಂದು ತನಿಖಾ ವರದಿಯಿಂದ ಬಹಿರಂಗಗೊಂಡಿದೆ.
ಹಿಂದುಳಿದ ಜಿಲ್ಲೆ ಎನ್ನುವ ಹಣೆ ಪಟ್ಟಿ ಕಟ್ಟಿಕೊಂಡಿರುವ ರಾಯಚೂರಿನಲ್ಲಿ ಭ್ರಷ್ಟಾಚಾರ ಆರೋಪ ಪ್ರಕರಣ ಸಂಚಲನ ಸೃಷ್ಟಿಸಿತ್ತು. ರಾಯಚೂರು ವಿಶ್ವ ವಿದ್ಯಾಲಯ ದಲ್ಲಿ ಕಡಿಮೆ ಬೆಲೆಯ ಸಿಸಿಟಿವಿಗಳು, ಸ್ಮಾರ್ಟ್ ಟಿವಿಗಳನ್ನ ದುಪ್ಪಟ್ಟು ದರಕ್ಕೆ ಖರೀದಿಸುವ ಮೂಲಕ ಅನುದಾನ ದುರ್ಬಳಕೆ ಆರೋಪ ಕೇಳಿ ಬಂದಿತ್ತು. ನಂತರದಲ್ಲಿ ತನಿಖಾ ಸಮಿತಿಯನ್ನು ರಚಿಸಲಾಗಿತ್ತು. ಆ ತನಿಖಾ ಸಮಿತಿಯಿಂದ ದುಪ್ಪಟ್ಟು ಹಣ ನೀಡಿ ಖರೀದಿ ಮಾಡಲಾಗಿದೆ ಎಂಬ ಸತ್ಯಾಂಶ ಹೊರಬಿದ್ದಿದೆ.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ 2022-23ನೇ ಸಾಲಿನ ಸರಕಾರದ ವಿವೇಚನಾ ಕೋಟಾದಡಿ ಈ ಉಪಕರಣಗಳ ಖರೀದಿಗೆ 9.85 ಕೋಟಿ ರೂ.ಗಳ ಅನುದಾನವನ್ನು ವಿಶ್ವವಿದ್ಯಾಲಯಕ್ಕೆ ನೀಡಲಾಗಿತ್ತು. ವಿಶ್ವವಿದ್ಯಾಲಯ ಸಲ್ಲಿಸಿದ್ದ ಕ್ರಿಯಾ ಯೋಜನೆಗೂ ಮಂಜೂರಾತಿಯೂ ನೀಡಲಾಗಿತ್ತು. ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ದೂರುಗಳು ಬಂದ ಹಿನ್ನಲೆಯಲ್ಲಿ ರಾಯಚೂರು ಜಿಲ್ಲಾಧಿಕಾರಿಯಿಂದ ತನಿಖೆ ನಡೆಸಲಾಗಿತ್ತು. ತನಿಖಾ ವರದಿ ಕೆಕೆಆರ್‌ಡಿಬಿಗೆ ಸಲ್ಲಿಸಲಾಗಿದ್ದು, ಮಾರುಕಟ್ಟೆ ದರಕ್ಕಿಂತ ಶೇ 900 ಹೆಚ್ಚುವರಿ ಮೊತ್ತ ಪಾವತಿಸಿರುವುದನ್ನು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಿಸಿಟಿವಿ ಕ್ಯಾಮೆರಾಗಳು, ಸ್ಮಾರ್ಟ್ ಟಿವಿಗಳು ಹಾಗೂ ಪೀಠೋಪಕರಣಗಳ ಖರೀದಿಗೆ 9.85 ಕೋಟಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿ 7.38 ಕೋಟಿ ಹಣವನ್ನ ಬಿಡುಗಡೆ ಮಾಡಲಾಗಿತ್ತಂತೆ. ಆ ಪೈಕಿ ಒಟ್ಟು 2.79 ಕೋಟಿ ಹಣವನ್ನ ಬರೀ ಸಿಸಿಟಿವಿಗಳು, ಸ್ಮಾರ್ಟ್ ಟಿವಿಗಳು ಹಾಗೂ ಅವುಗಳಿಗೆ ಬೇಕಾಗುವ ಉಪಕರಣಗಳಿಗಾಗಿಯೇ ಖರ್ಚು ಮಾಡುವ ಮೂಲಕ ಅನುದಾನ ದುರ್ಬಳಕೆ ಆರೋಪ ಕೇಳಿ ಬಂದಿತ್ತು.
ಕೆಟಿಪಿಪಿ ಕಾಯ್ದೆ ಉಲ್ಲಂಘನೆ : ಬೆಂಗಳೂರು ಮೂಲದ ಮೆ. ನಂದಿ ಎಂಟರ್‌ಪ್ರೈಸೆಸ್ ಎಲ್-1ರವರು ಕೇವಲ 2.94 ಕೋಟಿ ರೂ ಸರಾಸರಿ ವಹಿವಾಟು ಹೊಂದಿರುವವರು. ಎಲ್-1 ವಹಿವಾಟು ಮಾನದಂಡಗಳು, ಹಿಂದಿನ ಅನುಭವದ ದಾಖಲೆಗಳು ಮತ್ತು ಮೂಲ ಸಲಕರಣೆ ತಯಾರಕ ಹೊಂದಿಲ್ಲ. ಈ ಏಜೆನ್ಸಿಯವರು ತಾಂತ್ರಿಕವಾಗಿ ಅರ್ಹ ಇಲ್ಲದಿದ್ದರೂ ಅವರ ಟೆಂಡರ್ ಅಂಗೀಕರಿಸಿ ಗುತ್ತಿಗೆ ನೀಡಿ ಕೆಟಿಪಿಪಿ ಕಾಯಿದೆ ಉಲ್ಲಂಘಿಸಲಾಗಿದೆ ಎಂಬುದು ತನಿಖೆಯಿಂದ ಬಯಲಾಗಿದೆ.
ಸಕ್ಷಮ ಪ್ರಾಧಿಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆಯದೇ ಸಿಸಿಟಿವಿ ಉಪಕರಣ ಖರೀದಿಗೆ ಟೆಂಡರ್ ಕರೆದಿರುವುದು ಕೆಟಿಪಿಪಿ ಕಾಯಿದೆ ಉಲ್ಲಂಘನೆಯಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
ಶೇ 900 ಹೆಚ್ಚುವರಿ ಹಣ ಪಾವತಿ : ರಾಯಚೂರು ವಿಶ್ವವಿದ್ಯಾಲಯ ಖರೀದಿಸಿದ್ದ ಸಾಮಗ್ರಿಗಳನ್ನು ಈಗ ಪರಿಶೀಲಿಸಲಾಗಿದ್ದು. ಸರಬರಾಜುದಾರರು ಪೂರೈಸಿದ 8 ಐಟಂಗಳನ್ನು ಮಾದರಿಯಾಗಿ ಪರಿಶೀಲನೆ ನಡೆಸಲಾಗಿದೆ. ಅಧಿಕೃತ ಮಾರಾಟಗಾರರಿಂದ ದರಗಳನ್ನು ಪಡೆದು ಹೊಂದಾಣಿಕೆ ಮಾಡಿದಾಗ ಶೇ 200ದಿಂದ 900ರಷ್ಟು ಹೆಚ್ಚುವರಿಯಾಗಿರುವುದು ಕಂಡು ಬಂದಿದೆ. ಅಂದಾಜು ದರಪಟ್ಟಿಯಲ್ಲಿ ಮತ್ತು ಸರಬರಾಜುದಾರರ ದರಪಟ್ಟಿಯಲ್ಲಿ ಶೇ 7.25ದಿಂದ ಶೇ 263ರಷ್ಟು ಶೇ 7. 25ರಿಂದ 263 ರಷ್ಟು ವ್ಯತ್ಯಾಸ ಕಂಡು ಬಂದಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವಿಶ್ವವಿದ್ಯಾಲಯವು ಪ್ರತಿ 65 ಇಂಚಿನ ಅಲ್ಟ್ರಾ ಎಚ್ಡಿ ಟಿವಿಗೆ ರೂ. 2,13,696 ಪಾವತಿಸಿದೆ. ಆದರೆ ಅದರ ಎಂಆರ್‌ಪಿ ಬೆಲೆ ರೂ. 1,35,900. ಪ್ರತಿ 32 ಇಂಚಿನ ಅಲ್ಟ್ರಾ ಎಚ್ಡಿ ಸ್ಮಾರ್ಟ್ ಟಿವಿಗೆ 82,586 ರೂ. ನೀಡಿದ್ದರೆ, ಅದರ ಎಂಆರ್‌ಪಿ 23,900 ರೂ. ಇದೆ. ಡೆಸ್ಕ್‌ಟಾಪ್ ಖರೀದಿಗಾಗಿ ರೂ. 2,00,000 ಅಂದಾಜಿಸಲಾಗಿತ್ತು. ಆದರೆ ರೂ. 3,07,434 ನಷ್ಟು ಖರೀದಿ ಮಾಡಿದ್ದಾರೆ. ಬ್ರಾಂಡೆಡ್ ಅಲ್ಲದ ಡೆಸ್ಕ್ಟಾಪ್ ಖರೀದಿಸಿದ್ದಾರೆ. ಅದರ ಬೆಲೆ ಮಾರುಕಟ್ಟೆಯಲ್ಲಿ ರೂ. 1,25,000ಗಿಂತ ಕಡಿಮೆ ಇದೆ ಎಂಬುದಾಗಿ ತಿಳಿದು ಬಂದಿದೆ. ಜಿಎಸ್‌ಟಿಯಲ್ಲೂ ಹೆಚ್ಚಿನ ಹಣವನ್ನು ಪಡೆಯಲಾಗಿದೆ. ಜಿಎಸ್ಟಿ 18%. ಬದಲಾಗಿ 28% ಜಿಎಸ್‌ಟಿ ಬಿಲ್ ಮಾಡಿ ಹೆಚ್ಚುವರಿಯಾಗಿ ಹಣ ಸಂಗ್ರಹಿಸಲಾಗಿದೆ ಎಂಬುದಾಗಿ ವರದಿಯಿಂದ ತಿಳಿದು ಬಂದಿದೆ.
ಸಿಸಿ ಕ್ಯಾಮೆರಾ, ನೆಟ್‌ವರ್ಕಿಂಗ್ ಕೇಬಲ್, ಸ್ಮಾರ್ಟ್ ಟಿವಿ ಕಂಟ್ರೋಲ್ ರೂಮ್ ಮತ್ತಿತರ ಉಪಕರಣಗಳನ್ನು ಖರೀದಿಸಲಾಗಿದೆ. ಖರೀದಿಯಲ್ಲಿಆಗಿರುವ ಅವ್ಯವಹಾರದ ಕುರಿತು ರಾಯಚೂರು ಜಿಲ್ಲಾಧಿಕಾರಿ ತನಿಖೆ ನಡೆಸಿ ಕೆಕೆಆರ್‌ಡಿಬಿಗೆ ಸಲ್ಲಿಸಿದ್ದಾರೆ. ಈ ಅಕ್ರಮಗಳು ನಡೆದಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲಿ, ಲೋಟಿಕೋರರು ಪ್ರಭಾವಿಗಳಾಗಿದ್ದು, ಯಾವುದೇ ಮುಲಾಜಿಲ್ಲದೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ.