ಸರ್ಕಾರದ ಅಸಂಬದ್ಧ ಧೋರಣೆಗಳಿಂದ ಹೆಚ್ಚುತ್ತಿರುವ ನಿರುದ್ಯೋಗದ ಬಿಕ್ಕಟ್ಟು

ಪ್ರೊ. ಪ್ರಭಾತ್ ಪಟ್ನಾಯಕ್
ಅನು:ಕೆ.ಎಂ.ನಾಗರಾಜ್
ಕೊರೊನಾ ಸಾಂಕ್ರಾಮಿಕದಿಂದಾಗಿ ಅರ್ಥವ್ಯವಸ್ಥೆಯಲ್ಲಿ ಉಂಟಾದ ಕುಸಿತದಿಂದ ಚೇತರಿಕೆಯು ಅಪೂರ್ಣವಾಗಿರುವುದೇ ಉದ್ಯೋಗ ನಿರ್ಮಾಣದಲ್ಲಿ ಜಡತೆ ಮತ್ತು ನಿರುದ್ಯೋಗ ದರ ಏರಿಕೆಗೆ ಕಾರಣ ಎನ್ನಲಾಗುತ್ತದೆ. ಆದರೆ ಜಿಡಿಪಿ ವೃದ್ಧಿಸಿದರೂ, ಉದ್ಯೋಗಾವಕಾಶಗಳು ಹೆಚ್ಚದಿದ್ದರೆ, ಅದು ಬೆಳವಣಿಗೆಯ ನಿಧಾನಗತಿಗಿಂತಲೂ ಮಿಗಿಲಾಗಿ, ಬೆಳವಣಿಗೆಯ ಸ್ವರೂಪವನ್ನು ಅಂದರೆ ಜಿಡಿಪಿ ಬೆಳವಣಿಗೆಯ ಪುನಶ್ಚೇತನ ಅಸಮವಾಗಿದೆ ಎಂಬುದನ್ನು ತೋರಿಸುತ್ತದೆ. ಉದ್ಯೋಗಾವಕಾಶಗಳನ್ನು ಕಲ್ಪಿಸಲು ‘ಉತ್ತೇಜನೆ’ಯ ಹೆಸರಿನಲ್ಲಿ ಬಂಡವಾಳಗಾರರಿಗೆ ಮಾತ್ರ ತೆರಿಗೆ ರಿಯಾಯಿತಿಗಳನ್ನು ಒದಗಿಸುತ್ತಿರುವ ಸರ್ಕಾರ, ಸರ್ಕಾರೀ ವಲಯದಲ್ಲಿ ಬಹು ದೊಡ್ಡ ಸಂಖ್ಯೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಮತ್ತು ಗ್ರಾಮೀಣ ಪ್ರದೇಶದಲ್ಲಿ ಮನರೇಗ ಸ್ಕೀಮಿಗೆ ಅಗತ್ಯವಾದ ವೆಚ್ಚವನ್ನು ಕೈಗೊಳ್ಳುತ್ತಿಲ್ಲ. ಸಿಎಂಐಇ ದತ್ತಾಂಶವು ಹೆಚ್ಚುತ್ತಿರುವ ನಿರುದ್ಯೋಗ ಬಿಕ್ಕಟ್ಟನ್ನು ಎತ್ತಿ ತೋರಿಸುವುದರ ಜೊತೆಯಲ್ಲೇ, ನಿರುದ್ಯೋಗದ ಬಗ್ಗೆ ಬಿಜೆಪಿ ಸರ್ಕಾರದ ಇಂತಹ ಚಿಂತನೆಯ ಅಸಂಬದ್ಧತೆಯನ್ನೂ ಬಹಿರಂಗಪಡಿಸುತ್ತದೆ. 

ಭಾರತದಂಥ ದೇಶಗಳಲ್ಲಿ ಶ್ರಮಿಕ ಪಡೆಯನ್ನು “ಉದ್ಯೋಗಿಗಳು” ಮತ್ತು “ನಿರುದ್ಯೋಗಿಗಳು” ಎಂದು ನಿಖರವಾಗಿ ವಿಂಗಡಿಸಿಲ್ಲ. ಏಕೆಂದರೆ, ಬಹುತೇಕ ಕೆಲಸಗಳು ಹಂಗಾಮಿಯಾಗಿಬಿಟ್ಟಿವೆ ಮತ್ತು ಈ ಪ್ರವೃತ್ತಿ ಹೆಚ್ಚುತ್ತಲೇ ಇದೆ. ಹಾಗಾಗಿ, ನಿರುದ್ಯೋಗದ ಮಟ್ಟವನ್ನು ಅಳೆಯುವುದು ಒಂದು ಬಲು ನಾಜೂಕಿನ ವ್ಯವಹಾರ. ಅಂದರೆ, ಒಬ್ಬ ವ್ಯಕ್ತಿಯನ್ನು ಗತಿಸಿದ ಒಂದು ನಿರ್ದಿಷ್ಟ ಅವಧಿಯಲ್ಲಿ ನಿನಗೆ ಎಷ್ಟು ದಿನಗಳ ಕೆಲಸ ದೊರಕಿತ್ತು ಎಂದು ಕೇಳುವುದು ಅವಶ್ಯವಾಗುತ್ತದೆ. ಈ ಕಾರಣದಿಂದಾಗಿ, ನಿರುದ್ಯೋಗದ ಅಳತೆಗಾಗಿ ವರ್ಷದ ಯಾವ ಅವಧಿಯನ್ನು ಗಣನೆಗೆ ತೆಗೆದುಕೊಳ್ಳಲಾಗಿತ್ತು ಮತ್ತು ಆ ಅವಧಿಯಲ್ಲಿ ಎಷ್ಟು ದಿನಗಳ ಕೆಲಸವನ್ನು ಗಣನೆಗೆ ತೆಗೆದುಕೊಳ್ಳಲಾಗಿತ್ತು ಎಂಬುದಕ್ಕೆ ಅನುಗುಣವಾಗಿ ನಿರುದ್ಯೋಗದ ಮಟ್ಟ ಬದಲಾಗುತ್ತಿರುತ್ತದೆ. ಅಂತೆಯೇ, ಈ ಸಂಬಂಧವಾಗಿ ನಡೆಸುವ ರಾಷ್ಟ್ರೀಯ ಮಾದರಿ ಸಮೀಕ್ಷೆಯು(ಎನ್‌ಎಸ್‌ಎಸ್) ಮೂರು ವಿಭಿನ್ನ ಪರಿಕಲ್ಪನೆಗಳಿಂದ ಕೂಡಿದೆ: ನಿರುದ್ಯೋಗದ ಸಾಮಾನ್ಯ ಮಟ್ಟ, ಸಾಪ್ತಾಹಿಕ ಮಟ್ಟ, ಮತ್ತು ದಿನವಹಿ ಮಟ್ಟ. ಈ ಪರಿಕಲ್ಪನೆಗಳ ಬಗ್ಗೆ ಇರುವ ವ್ಯಾಖ್ಯಾನಗಳ ಭಿನ್ನತೆಯ ಹೊರತಾಗಿಯೂ, ಈ ಸಂಸ್ಥೆಯು ಎರಡು ಸಮೀಕ್ಷೆಗಳನ್ನು (ಸರ್ವೆಗಳನ್ನು) ನಡೆಸುತ್ತಿತ್ತು. ಸಣ್ಣ ಸ್ಯಾಂಪಲ್ಲಿನ ಒಂದು ವಾರ್ಷಿಕ ಸರ್ವೆಯನ್ನು ಮತ್ತು ಒಂದು ದೊಡ್ಡ ಸ್ಯಾಂಪಲ್ಲಿನ ಸರ್ವೆಯನ್ನು ಪ್ರತಿ ಐದು ವರ್ಷಗಳಿಗೊಮ್ಮೆಯೂ ನಡೆಸುತ್ತಿತ್ತು. ಈ ಕಾರಣದಿಂದಾಗಿ ಈ ಸಂಸ್ಥೆಯು ನೀಡುತ್ತಿದ್ದ ವಾರ್ಷಿಕ ಅಂಕಿಅಂಶಗಳು ಹೆಚ್ಚು ನಿಖರತೆ ಹೊಂದಿದ್ದವು.

ನಿರುದ್ಯೋಗ ದರವನ್ನು, ಕೆಲಸ ಬಯಸುವ ಮತ್ತು ಅದನ್ನು ಮಾಡಲು ಸಿದ್ಧರಿರುವ ಕೆಲಸ ಇಲ್ಲದವರ ಸಂಖ್ಯೆ ಮತ್ತು ಶ್ರಮಿಕ ಪಡೆಯ (ಶ್ರಮಿಕ ಪಡೆಯಲ್ಲಿ ಉದ್ಯೋಗಿಗಳು ಹಾಗೂ ನಿರುದ್ಯೋಗಿಗಳೂ ಸೇರುತ್ತಾರೆ) ಒಟ್ಟು ಸಂಖ್ಯೆ ಇವುಗಳ ಅನುಪಾತ ಎಂದು ವ್ಯಾಖ್ಯಾನಿಸಲಾಗಿದೆ. ನಿರುದ್ಯೋಗದ ಬಗ್ಗೆ, ಸೆಂಟರ್ ಫಾರ್ ಮಾನಿಟರಿಂಗ್ ದಿ ಇಂಡಿಯನ್ ಎಕಾನಮಿ (ಸಿಎಂಐಇ) ಎಂಬ ಒಂದು ಖಾಸಗಿ ಸಂಸ್ಥೆಯು ಒಂದು ಮಾಸಿಕ ಸ್ಯಾಂಪಲ್ ಸರ್ವೆಯನ್ನು ಪ್ರತಿ ತಿಂಗಳೂ ನಡೆಸುತ್ತದೆ (ಪ್ರತಿ ವಾರವೂ ಒಂದು ಸಾಪ್ತಾಹಿಕ ಸ್ಯಾಂಪಲ್ ಸರ್ವೆಯನ್ನು ನಗರಗಳಲ್ಲಿ ನಡೆಸುತ್ತದೆ). ಸರ್ವೆ ಮಾಡಿದ ದಿನಾಂಕದಂದು ನೀವು ಉದ್ಯೋಗದಲ್ಲಿ ಇದ್ದಿರೇ ಎಂದು ಕೇಳುತ್ತಾರೆ. ಈ ಸಂಸ್ಥೆಯು ನಡೆಸುವ ಸರ್ವೆಯ ವಿಧಾನದ ಬಗ್ಗೆ ಕೆಲವು ಆಕ್ಷೇಪಣೆಗಳು ಇರಬಹುದು. ಆದರೆ ಬಹಳ ವರ್ಷಗಳಿಂದಲೂ ಅದು ಸುಸಂಗತ ಅಂಕಿಅಂಶಗಳನ್ನು ಒದಗಿಸುತ್ತಾ ಬಂದಿದೆ. ಈ ಅಂಕಿಅಂಶಗಳನ್ನು, ನಿರುದ್ಯೋಗದ ಪ್ರವೃತ್ತಿಗಳನ್ನು ವಿಶ್ಲೇಷಿಸಲು ಸಂಶೋಧಕರು ಬಳಸುತ್ತಿದ್ದಾರೆ.

ಅಕ್ಟೋಬರ್ 2023ರ ಸಿಎಂಐಇ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ನಿರುದ್ಯೋಗ ದರ ಶೇ. 10.05ರಷ್ಟಿದೆ. ಗ್ರಾಮೀಣದಲ್ಲಿ ಶೇ. 10.82ರಷ್ಟಿದ್ದರೆ, ನಗರಗಳಲ್ಲಿ ಶೇ. 8.44ರಷ್ಟಿದೆ. ಹಿಂದಿನ ತಿಂಗಳಲ್ಲಿ ಶೇ. 7.09ರ ಮಟ್ಟದಲ್ಲಿದ್ದ ಒಟ್ಟಾರೆ ನಿರುದ್ಯೋಗ ದರ, ಮೇ 2021ರ ನಂತರದಲ್ಲಿ ಇದೀಗ ಒಂದು ತೀವ್ರ ಏರಿಕೆಯನ್ನು ಕಂಡಿದೆ. (ಕೋವಿಡ್-19 ಹಿನ್ನೆಲೆಯಲ್ಲಿ ಮೋದಿ ಸರ್ಕಾರ ವಿಧಿಸಿದ ಕಠಿಣ ಲಾಕ್‌ಡೌನ್‌ನಿಂದಾಗಿ ಇದೇ ರೀತಿಯ ತೀವ್ರ ಏರಿಕೆ 2020ರಲ್ಲಿಯೂ ಇತ್ತು).

ಅಂಕಿಅಂಶಗಳ ಮತ್ತೊಂದು ಆಯಾಮ

ಈ ದರ ಹೆಚ್ಚಳವು ನಿರುದ್ಯೋಗ ಬಿಕ್ಕಟ್ಟಿನ ಬಗ್ಗೆ ಒಂದು ಚರ್ಚೆಯನ್ನು ಸ್ವಾಭಾವಿಕವಾಗಿ ಹುಟ್ಟುಹಾಕಿದೆ. ಆದರೆ, ನಾನು ಸಿಎಂಐಇ ಕೊಡುವ ಅಂಕಿಅಂಶಗಳಿಗಿಂತಲೂ ಭಿನ್ನವಾದ ಮತ್ತೊಂದು ಅಂಶವನ್ನು ಅನ್ವೇಷಿಸಲು ಬಯಸುತ್ತೇನೆ. ಸಿಎಂಐಇನ ಅಂದಾಜು ನಿರುದ್ಯೋಗ ದರವು ತಿಂಗಳಿನಿಂದ ತಿಂಗಳಿಗೆ ಗಮನಾರ್ಹವಾಗಿ ಬದಲಾಗುತ್ತಿರುವಂತೆ ತೋರುವುದರಿಂದ, ಮಾಸಿಕ ನಿರುದ್ಯೋಗ ದರದ ಬದಲು, ನಿರುದ್ಯೋಗ ಬಿಕ್ಕಟ್ಟು ಬೆಳೆಯುತ್ತಲೇ ಇದೆ ಎಂಬುದನ್ನು ದೃಢಪಡಿಸಲು ಸಿಎಂಐಇ ಅಂಕಿಅಂಶಗಳ ಮತ್ತೊಂದು ಆಯಾಮದ ಮೇಲೆ ಗಮನ ಹರಿಸುತ್ತೇನೆ. ಅಲ್ಲಿ ಒಂದು ನಿರ್ದಿಷ್ಟ ತರ್ಕವೂ ಇದೆ.

ಸಿಎಂಐಇ ಮುಖ್ಯಸ್ಥರ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಭಾರತದ ಶ್ರಮಿಕ ಪಡೆ (ಇದು ಉದ್ಯೋಗ ಹೊಂದಿದವರ ಸಂಖ್ಯೆಗೆ ಸಮಾನಾರ್ಥಕವಾಗಿದೆ) ವಾಸ್ತವವಾಗಿ 40 ಕೋಟಿಗಿಂತ ತುಸು ಹೆಚ್ಚಿನ ಮಟ್ಟದಲ್ಲೇ ನಿಂತಿದೆ. ಅಂದರೆ, ಉದ್ಯೋಗಾವಕಾಶಗಳು ವೃದ್ಧಿಸಿಲ್ಲ ಎಂದಾಗುತ್ತದೆ. ಅಕ್ಟೋಬರ್ 2023ರಲ್ಲಿ, ನಿರುದ್ಯೋಗ ದರ ಅಷ್ಟೊಂದು ತೀವ್ರವಾಗಿ ಏರಿದಾಗ, ಭಾರತದ ಒಟ್ಟು ಶ್ರಮಿಕ ಪಡೆಯ ಸಂಖ್ಯೆಯೂ ಒಂದು ಹಠಾತ್ ಹೆಚ್ಚಳವನ್ನು ತೋರಿಸುತ್ತದೆ. ಆದರೆ, ಒಂದು ಸರಳ ಲೆಕ್ಕಾಚಾರದ ಪ್ರಕಾರ, ಹಿಂದಿನ ಅವಧಿಗೆ ಹೋಲಿಸಿದರೆ ಒಟ್ಟು ಉದ್ಯೋಗಿಗಳ ಸಂಖ್ಯೆಯು ಬದಲಾಗದೆ ಉಳಿದಿದೆ ಎಂಬುದು ಕಂಡುಬರುತ್ತದೆ (ಈ ಅಂಶವು ನಿರುದ್ಯೋಗ ದರ ಏಕೆ ತೀವ್ರವಾಗಿ ಏರಿತು ಎಂಬುದನ್ನು ವಿವರಿಸುತ್ತದೆ). ಈ ರೀತಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಭಾರತದ ಅರ್ಥವ್ಯವಸ್ಥೆಯಲ್ಲಿ ಉದ್ಯೋಗಿಗಳ ಸಂಖ್ಯೆಯ ಸ್ಥಗಿತಗೊಂಡಿದೆ ಎಂಬುದು ಒಂದು ವಾಸ್ತವ ಸಂಗತಿ.

ಈ ಅಂಶವು 2019ರಿಂದಲೂ ಸಂಭವಿಸುತ್ತಿರುವ ನಿರುದ್ಯೋಗ ದರದ ಏರಿಕೆಯ ವಿದ್ಯಮಾನವನ್ನು ವಿವರಿಸುತ್ತದೆ. ಸಿಎಂಐಇ ಪ್ರಕಾರ, 2019ರಲ್ಲಿ ಶೇ. 5.27ರಷ್ಟಿದ್ದ ನಿರುದ್ಯೋಗ ದರವು 2020ರ ವೇಳೆಗೆ ಶೇ. 8ಕ್ಕೆ ಏರಿತ್ತು ಮತ್ತು ತದನಂತರದ ಎರಡು ವರ್ಷಗಳಲ್ಲಿ ಅನುಕ್ರಮವಾಗಿ ಶೇ. 5.98 ಮತ್ತು ಶೇ. 7.33ರಷ್ಟಿತ್ತು. ಇದು 2023ರಲ್ಲಿ ಇನ್ನಷ್ಟು ಏರಿಕೆ ಕಂಡಿದೆ. ಕಾರ್ಮಿಕ ಪಡೆಯ ಸಂಖ್ಯೆ ಹೆಚ್ಚಿದರೂ, ನಿರುದ್ಯೋಗ ದರದ ಈ ರೀತಿಯ ಏರಿಕೆಯು ಉದ್ಯೋಗದಲ್ಲಿರುವವರ ಒಟ್ಟು ಸಂಖ್ಯೆಯು ಬದಲಾಗದೆ ಉಳಿದದ್ದರ ಪರಿಣಾಮವೇ. ಮತ್ತು, ಕಾರ್ಮಿಕ ಪಡೆಯಲ್ಲಿ ಆಗಿರುವ ಹೆಚ್ಚಳವು, ಕಾರ್ಮಿಕ ಭಾಗವಹಿಸುವಿಕೆ ದರದಲ್ಲಿ ಆಗಿರುವ ಇಳಿಕೆಯನ್ನು ಸರಿದೂಗಿಸದ ಸನ್ನಿವೇಶದಲ್ಲಿ ದುಡಿಯುವ ವಯಸ್ಸಿನ ಜನಸಂಖ್ಯೆ ಬೆಳೆಯುತ್ತಿರುವುದರ ಪರಿಣಾಮವಾಗಿದೆ.

ಬೆಳವಣಿಗೆಯ ಸ್ವರೂಪವೇ ಬದಲಾಗಿದೆ

ಕೊರೊನಾ ಸಾಂಕ್ರಾಮಿಕದಿಂದಾಗಿ ಅರ್ಥವ್ಯವಸ್ಥೆಯಲ್ಲಿ ಉಂಟಾದ ಕುಸಿತದಿಂದ ಚೇತರಿಕೆಯು ಅಪೂರ್ಣವಾಗಿರುವುದೇ  ಉದ್ಯೋಗಗಳ ಈ ಜಡತೆ ಮತ್ತು ನಿರುದ್ಯೋಗ ದರ ಏರಿಕೆಗೆ ಕಾರಣ ಎಂಬುದು ಅನೇಕ ವ್ಯಾಖ್ಯಾನಕಾರರ ಅಂಬೋಣ. ಈ ಅಭಿಪ್ರಾಯವು ಕಿಸಬಾಯಿ ದಾಸನ ಅದೇ ಹಾಡಿನಂತಾಗಬಾರದು ಎಂದಾದರೆ, ಜಿಡಿಪಿಯ ಸಾಧನೆಯನ್ನು ಉಲ್ಲೇಖಿಸಬೇಕಾಗುತ್ತದೆ. ಸಾಂಕ್ರಾಮಿಕದ ನಂತರದಲ್ಲಿ ಜಿಡಿಪಿಯ ಚೇತರಿಕೆಯು ನಿಧಾನವಾಗಿತ್ತು ಎಂಬುದು ನಿಜ. ಆದರೆ, “ಭಾರತವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ದೇಶ” ಎಂಬ ಸರ್ಕಾರದ ಹೆಗ್ಗಳಿಕೆಯ ಮೂಲಕ ಉದ್ಯೋಗದಲ್ಲಿರುವವರ ಒಟ್ಟು ಸಂಖ್ಯೆಯು ಬದಲಾಗದೆ ಉಳಿದ ಜಡತೆಯನ್ನು ವಿವರಿಸುವುದು ಸಾಧ್ಯವಿಲ್ಲ.

ಉದಾಹರಣೆಗೆ, 2019ಕ್ಕೆ ಹೋಲಿಸಿದರೆ, ನೈಜ ಜಿಡಿಪಿಯು 2023ರಲ್ಲಿ ಸುಮಾರು ಶೇ. 16ರಷ್ಟು ಏರಿಕೆ ಕಂಡಿದೆ (2023ರಲ್ಲಿ ಬೆಳವಣಿಗೆಯ ದರ ಶೇ. 6ರಷ್ಟು ಇದೆ ಎಂದು ಊಹಿಸಿಕೊಳ್ಳಲಾಗಿದೆ). ಜಿಡಿಪಿ ವೃದ್ಧಿಸಿದರೂ, ಉದ್ಯೋಗಾವಕಾಶಗಳು ಹೆಚ್ಚದಿದ್ದರೆ, ಈ ರೀತಿಯ ಬೆಳವಣಿಗೆಯು ಅದರ ನಿಧಾನಗತಿಗಿಂತಲೂ ಮಿಗಿಲಾಗಿ, ಬೆಳವಣಿಗೆಯ ಸ್ವರೂಪದ ಬಗ್ಗೆಯೇ ಏನನ್ನೋ ಹೇಳುತ್ತದೆ. ಒಂದು ವಾಸ್ತವಾಂಶವಾಗಿ ಹೇಳುವುದಾದರೆ, ಬೆಳವಣಿಗೆಯ ದರವನ್ನು ವೇಗಗೊಳಿಸಿದರೆ ಮಾತ್ರ ನಿರುದ್ಯೋಗವನ್ನು ನಿವಾರಿಸಬಹುದು ಎಂಬ ಪ್ರತಿಪಾದನೆಯು ಸಂಪೂರ್ಣವಾಗಿ ಅಸಮರ್ಥನೀಯ ಎಂಬುದನ್ನು ಭಾರತದ ಅನುಭವವೇ ತೋರಿಸುತ್ತದೆ. ಇನ್ನೂ ಸಂಕ್ಷಿಪ್ತವಾಗಿ ಹೇಳುವುದಾದರೆ, ನಿರುದ್ಯೋಗ ನಿವಾರಣೆಯು, ಬೆಳವಣಿಗೆಯನ್ನು ಹೇಗೆ ಸಾಧಿಸಲಾಗುತ್ತದೆ ಎಂಬುದನ್ನು ಅವಲಂಬಿಸಿರುತ್ತದೆ.

ಇದನ್ನೂ ಓದಿ: ಕಾರವಾರ|ಡಾ. ವಿಠ್ಠಲ ಭಂಡಾರಿ ನೆನಪಿನ ಉಪನ್ಯಾಸ ಕಾರ್ಯಕ್ರಮ

ಉದ್ಯೋಗಾವಕಾಶಗಳ ಜಡತೆಯ ಹಿಂದಿರುವ ಕಾರಣವೆಂದರೆ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಳೆದ ಕೆಲವು ವರ್ಷಗಳಲ್ಲಿ ಬೆಳವಣಿಗೆಯ ಸ್ವರೂಪವೇ ಬದಲಾಗಿದೆ. ಬೆಳವಣಿಗೆಯ ಈ ಮಾದರಿಯು ಅತಿ ಕಡಿಮೆ ಸಂಖ್ಯೆಯ ಉದ್ಯೋಗಗಳನ್ನು ಸೃಷ್ಟಿಸಿದೆ. ಸದಾ ಕಾಲವೂ ದುಃಸ್ಥಿತಿಯಲ್ಲಿದ್ದ ಸಣ್ಣ ಕೈಗಾರಿಕೆ ಮತ್ತು ಕಿರು ಉತ್ಪಾದನಾ ವಲಯದಿಂದ ಸರ್ಕಾರದ ಪ್ರೋತ್ಸಾಹ-ಬೆಂಬಲವನ್ನು, ನವ-ಉದಾರವಾದಿ ನೀತಿಗಳ ಜಾರಿಯಿಂದಾಗಿ, ಹಿಂಪಡೆದುದರಿಂದ ಮತ್ತು ಈ ವಲಯವನ್ನು ಅನಿರ್ಬಂಧಿತ ವಿದೇಶಿ ಸ್ಪರ್ಧೆಗೆ ತೆರೆದಿಟ್ಟದ್ದರಿಂದ ಮತ್ತು ಮೋದಿ ಸರ್ಕಾರದ ನೋಟುಗಳ ರದ್ದತಿ ಮತ್ತು ಜಿಎಸ್‌ಟಿ ಜಾರಿಯಂಥಹ ನಿರ್ಧಾರಗಳಿಂದಾಗಿ ಈ ವಲಯದ ಸಂಕಷ್ಟಗಳು ಹೆಚ್ಚಿದವು. ಇವೆಲ್ಲಕ್ಕಿಂತಲೂ ಹೆಚ್ಚಾಗಿ, ಕೋವಿಡ್-19ರ ಕಠಿಣ ಲಾಕ್‌ಡೌನ್ ಈ ವಲಯದ ಮೇಲೆ ಒಂದು ಭಾರೀ ವಿನಾಶಕಾರಿ ಪರಿಣಾಮವನ್ನು ಬೀರಿತು. ಈ ಎಲ್ಲ ಅಂಶಗಳಿಂದಾಗಿ ಈ ವಲಯವು ಇನ್ನೂ ಚೇತರಿಸಿಕೊಂಡಿಲ್ಲ. ಅರ್ಥವ್ಯವಸ್ಥೆಯ ಕೋವಿಡ್-ನಂತರದ ಪುನಶ್ಚೇತನದ ಲಾಭವು ಅತಿ ಹೆಚ್ಚು ಉದ್ಯೋಗಾವಕಾಶಗಳನ್ನು ಒದಗಿಸುವ ಈ ವಲಯಕ್ಕೆ ದಕ್ಕಲಿಲ್ಲ. ಬಿಕ್ಕಟ್ಟಿನಿಂದ ಈ ವಲಯವು ಇನ್ನೂ ಹೊರಬಂದಿಲ್ಲ. ಜಿಡಿಪಿ ಬೆಳವಣಿಗೆಯ ಅಸಮ ಪುನಶ್ಚೇತನವೇ ಈ ಉದ್ಯೋಗ-ಸಾಂದ್ರ ವಲಯವು ಉದ್ಯೋಗ ಒದಗಿಸುವಲ್ಲಿ ಹಿಂದೆ ಬೀಳಲು ಕಾರಣವಾಗಿದೆ. ಈಗ ಅದರ ಬೆಳವಣಿಗೆಯು ಶೂನ್ಯ ಮಟ್ಟದಲ್ಲಿದೆ.

ನಿಷ್ಪ್ರಯೋಜಕ ಉಪಕ್ರಮಗಳು

ಬಿಜೆಪಿ ಸರ್ಕಾರವು ತನ್ನ ಬಳಿ ಹೊಂದಿರುವ ಆರ್ಥಿಕ ಪ್ರೋತ್ಸಾಹದ ಎಲ್ಲ ಉಪಕ್ರಮಗಳೂ ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಅಸಮರ್ಥವಾಗಿವೆ. ಈ ಎಲ್ಲ ಉಪಕ್ರಮಗಳೂ ಬಂಡವಾಳಗಾರರಿಗೆ ಅಧಿಕ ಹೂಡಿಕೆ ಮಾಡಲು ಅನುಕೂಲವಾಗುವಂತೆ ಅನೇಕ ರೀತಿಯ ಉತ್ತೇಜಕಗಳನ್ನು ಒದಗಿಸುವುದರ ಸುತ್ತಲಷ್ಟೇ ಗಿರಕಿ ಹೊಡೆಯುತ್ತವೆ. ಅವುಗಳ ಉದ್ದೇಶ ಜಿಡಿಪಿ ಬೆಳವಣಿಗೆಯ ದರವನ್ನು ವೇಗಗೊಳಿಸುವುದಷ್ಟೇ. ಆದಾಗ್ಯೂ, ಈ ಎಲ್ಲವೂ ಎರಡು ಸ್ಪಷ್ಟ ಕಾರಣಗಳಿಂದಾಗಿ ನಿಷ್ಪ್ರಯೋಜಕವಾಗಿವೆ: ಮೊದಲನೆಯದು, ಕೆಲವೇ ಕೆಲವು ಮಂದಿಯ ಹಿಡಿತದಲ್ಲಿರುವ (ಆಲಿಗೋಪೊಲಿಸ್ಟಿಕ್) ಮಾರುಕಟ್ಟೆಯಲ್ಲಿ, ಬಂಡವಾಳಗಾರರು ತಮ್ಮ ಹೂಡಿಕೆಯಿಂದ ಎಷ್ಟು ಬೇಡಿಕೆ ಉಂಟಾಗಬಹುದು ಎಂಬ ನಿರೀಕ್ಷೆಯನ್ನು ಅವಲಂಬಿಸಿಯೇ ಹೂಡಿಕೆ ಮಾಡುತ್ತಾರೆ. ಆದ್ದರಿಂದ, ಬೇಡಿಕೆಯನ್ನು ವೃದ್ಧಿಸುವ ಕ್ರಮಗಳನ್ನು ಕೈಗೊಳ್ಳದಿದ್ದರೆ, ಬಂಡವಾಳಗಾರರಿಗೆ ಹೆಚ್ಚು ಹಣ ನೀಡುವುದರಿಂದಷ್ಟೇ ಹೂಡಿಕೆಯನ್ನು ಹೆಚ್ಚಿಸಲಾಗದು. ಒಂದು ವೇಳೆ ಬೇಡಿಕೆ ಹೆಚ್ಚುವ ಸಂಭವ ಇಲ್ಲದಿದ್ದರೆ ಅವರು ಹೂಡಿಕೆಯನ್ನು ಕೈಗೊಳ್ಳದೇ ತಮಗೆ ನೀಡಿದ ಹಣವನ್ನು ಜೇಬಿಗೆ ಹಾಕಿಕೊಳ್ಳುತ್ತಾರೆ. ಅದಕ್ಕಿಂತಲೂ ಮುಖ್ಯವಾದ  ಒಂದು ಅಂಶವೆಂದರೆ, ಈ ಉದ್ದೇಶಕ್ಕಾಗಿ ಬಂಡವಾಳಗಾರರಿಗೆ ಹಣ ಒದಗಿಸಲು ಸರ್ಕಾರವು ತನ್ನ ಕೆಲವು ಖರ್ಚು-ವೆಚ್ಚಗಳನ್ನು ಕಡಿತಗೊಳಿಸುತ್ತದೆ (ವಿತ್ತೀಯ ಕೊರತೆಯನ್ನು ನಿಗದಿತ ಮಿತಿಯೊಳಗೆ ಇಟ್ಟುಕೊಳ್ಳುವ ಸಲುವಾಗಿ). ಆದರೆ, ಬಂಡವಾಳಗಾರರು ತಮಗೆ ಒದಗಿಸಿದ ಹಣವನ್ನು ಪೂರ್ಣವಾಗಿ ಹೂಡಿಕೆಗಾಗಿ ವಿನಿಯೋಗಿಸದ ಕಾರಣ, ಬೇಡಿಕೆಯು ನಿವ್ವಳವಾಗಿ ಕುಗ್ಗುತ್ತದೆ, ಅಂದರೆ, ಅರ್ಥವ್ಯವಸ್ಥೆ ಕುಗ್ಗುತ್ತದೆ. ಹಾಗಾಗಿ, ಇದು ಉದ್ದೇಶಿಸಿದ್ದಕ್ಕೆ ವಿರುದ್ಧವಾದ ಪರಿಣಾಮವನ್ನು ಉಂಟುಮಾಡುತ್ತದೆ.

ಎರಡನೆಯದಾಗಿ, ಈ ಹಣ ಒಂದು ವೇಳೆ ಪೂರ್ಣವಾಗಿ ಹೂಡಿಕೆಯಾಗಿ ಆ ಮೂಲಕ ಜಿಡಿಪಿಯ ಬೆಳವಣಿಗೆಯನ್ನು ಹೆಚ್ಚಿಸಿದರೂ ಸಹ, ಯಾವ ವಲಯಗಳಲ್ಲಿ ಇಂಥಹ ಹೂಡಿಕೆಯಾಗಿರುತ್ತದೆಯೊ, ಅವು ಉದ್ಯೋಗ-ಸಾಂದ್ರವಲ್ಲದ ವಲಯಗಳು. ವಿಷಯವನ್ನು ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಸರ್ಕಾರ ಕೈಗೊಳ್ಳುವ ಕ್ರಮಗಳು, ಅತಿ ಹೆಚ್ಚು ಉದ್ಯೋಗಾವಕಾಶಗಳನ್ನು ಒದಗಿಸುವ ಸಣ್ಣ ಕೈಗಾರಿಕೆ ಮತ್ತು ಕಿರು ಉತ್ಪಾದನಾ ವಲಯವನ್ನು ಉತ್ತೇಜಿಸುವ ನಿಟ್ಟಿನಲ್ಲಿಲ್ಲ.

ಇದನ್ನೂ ಓದಿ: ಹಿಂಸೆ ಪ್ರತಿಹಿಂಸೆಗೆ ಬಲಿಯಾಗುವುದು ನಾಗರಿಕತೆ

ವಿಪರ್ಯಾಸವೆಂದರೆ, ಉದ್ಯೋಗಾವಕಾಶಗಳನ್ನು ಕಲ್ಪಿಸುವ ಹೆಸರಿನಲ್ಲಿ ಬಂಡವಾಳಗಾರರಿಗೆ ತೆರಿಗೆ ರಿಯಾಯಿತಿಗಳನ್ನು ಒದಗಿಸುತ್ತಿರುವಾಗ, ಸರ್ಕಾರಿ ವಲಯದಲ್ಲಿ ಖಾಲಿ ಇರುವ ಬಹು ದೊಡ್ಡ ಸಂಖ್ಯೆಯ ಹುದ್ದೆಗಳನ್ನು ಭರ್ತಿ ಮಾಡಲು ಅಗತ್ಯವಾದ ವೆಚ್ಚವನ್ನು ಸರ್ಕಾರವೇ ಕೈಗೊಳ್ಳುವುದಿಲ್ಲ. ಈ ಪರಿಸ್ಥಿತಿಗೆ ಹಣಕಾಸಿನ ಕೊರತೆಯೇ ಕಾರಣವೆಂಬುದು ಮೇಲ್ನೋಟದಲ್ಲಿ ತೋರುತ್ತದೆ. ಆದರೆ, ಹಣಕಾಸಿನ ಈ ಕೊರತೆಗೆ ಒಂದು ಕಾರಣ ಬಂಡವಾಳಗಾರರಿಗೆ ಒದಗಿಸುವ ತೆರಿಗೆ ರಿಯಾಯಿತಿಗಳೇ. ಅಲ್ಲದೆ, ನಿರುದ್ಯೋಗ ದರ, ಅದರಲ್ಲೂ ವಿಶೇಷವಾಗಿ ಅಕ್ಟೋಬರ್ ಅಂಕಿಅಂಶಗಳು ಸೂಚಿಸುವಂತೆ ಗ್ರಾಮೀಣ ನಿರುದ್ಯೋಗ ದರ ಏರುತ್ತಿರುವ ಸಂದರ್ಭದಲ್ಲಿ, ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಕಡಿತಗೊಳಿಸುತ್ತಿರುವುದೂ ಸಹ ಒಂದು ವಿಪರ್ಯಾಸವೇ ಸರಿ.

ದೊಡ್ಡ ದೊಡ್ಡ ಬಂಡವಾಳಗಾರರ ಪರವಾಗಿ ಹೊಂದಿರುವ ತನ್ನ ನಿರ್ದಯ ವರ್ಗ ಪಕ್ಷಪಾತದೊಂದಿಗೆ ಬಿಜೆಪಿ ಸರ್ಕಾರವು ಉದ್ಯೋಗ ಖಾತ್ರಿ ಯೋಜನೆಯನ್ನು ವಿರೋಧಿಸುತ್ತಲೇ ಬಂದಿದೆ. ಒಂದಲ್ಲಾ ಒಂದು ನೆಪದಲ್ಲಿ ಅದು ಈ ಯೋಜನೆಯನ್ನು ಕೊನೆಗೊಳಿಸಲು ಹಾತೊರೆಯುತ್ತಿದೆ. ಭ್ರಷ್ಟಾಚಾರದ ಆರೋಪಗಳು ಈ ಯೋಜನೆಯನ್ನು ಮತ್ತಷ್ಟು ಮೊಟಕುಗೊಳಿಸಲು ಈಗ ಹೊಸ ನೆಪವಾಗಿವೆ. ಸಿಎಂಐಇ ದತ್ತಾಂಶವು ಹೆಚ್ಚುತ್ತಿರುವ ನಿರುದ್ಯೋಗ ಬಿಕ್ಕಟ್ಟನ್ನು ಎತ್ತಿ ತೋರಿಸುವುದರ ಜೊತೆಯಲ್ಲೇ, ನಿರುದ್ಯೋಗದ ಬಗ್ಗೆ ಬಿಜೆಪಿ ಸರ್ಕಾರವು ಹೊಂದಿರುವ ಚಿಂತನೆಯ ಅಸಂಬದ್ಧತೆಯನ್ನೂ ಬಹಿರಂಗಪಡಿಸುತ್ತದೆ.

“ನಿರುದ್ಯೋಗ ದರ ಏರುತ್ತಿದೆ”

ವ್ಯಂಗ್ಯಚಿತ್ರ ಕೃಪೆ: ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್

“ ಇದಕ್ಕಾಗಿ ಒಬ್ಬರು

ಒಂಭತ್ತು ವರ್ಷಗಳಿಂದ

ದಿನಕ್ಕೆ 20 ಗಂಟೆ

ದುಡಿಯುತ್ತಿದ್ದಾರೆ”

 

 

 

 

 

ವಿಡಿಯೋ ನೋಡಿ: ಮಾನವೀಯತೆ ಜಾಗಕ್ಕೆ ಮತೀಯತೆ ಬಂದಿದೆ – ಬರಗೂರು ರಾಮಚಂದ್ರಪ್ಪ Janashakthi Media

Donate Janashakthi Media

Leave a Reply

Your email address will not be published. Required fields are marked *