ಪ್ರಜಾತಂತ್ರದ ಬಿಕ್ಕಟ್ಟುಗಳೂ ನಾಯಕತ್ವದ ಸವಾಲುಗಳೂ

ನವ ಭಾರತದ ಸಂಕೀರ್ಣ ಸನ್ನಿವೇಶದಲ್ಲಿ  ಹೋರಾಟಗಳ ನಾಯಕತ್ವವೂ ನಿರ್ಣಾಯಕವಾಗುತ್ತದೆ
ಪ್ರಜಾಪ್ರಭುತ್ವವನ್ನು ತನ್ನ ನರನಾಡಿಗಳಲ್ಲೂ ಪ್ರವಹಿಸುವಂತೆ ಎಚ್ಚರವಹಿಸುವ ಯಾವುದೇ ಚಲನಶೀಲ ಸಮಾಜದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳು ಕ್ರಿಯಾಶೀಲವಾಗಿಯೂ, ಉತ್ಸಾಹಭರಿತವಾಗಿಯೂ ಹಾಗೂ ದೀರ್ಘಕಾಲೀನ ಗುರಿಯ ಕಂಪನಶೀಲತೆಯೊಂದಿಗೂ (Vibrancy) ಜೀವಂತಿಕೆಯಿಂದ ಇದ್ದಾಗ ಮಾತ್ರ ಅಂತಹ ಸಮಾಜ ವರ್ತಮಾನದಲ್ಲಿ ಬಾಳುತ್ತಾ ಭವಿಷ್ಯವನ್ನು ನಿರ್ಣಾಯಕವಾಗಿ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ, ಪ್ರಾಚೀನ-ಮಧ್ಯಕಾಲೀನ ಜೀವನ ಮೌಲ್ಯಗಳೇ ಇಂದಿಗೂ ಜನಸಾಮಾನ್ಯರ ನಿತ್ಯಬದುಕನ್ನು ಪ್ರಭಾವಿಸುತ್ತಿರುವಾಗ, ಈ ಜೀವಂತಿಕೆಯನ್ನು ಕಾಪಾಡಿಕೊಳ್ಳಬೇಕಾದರೆ,  ಮುಂದುವರೆದ, ಕಲಿತ ಹಾಗೂ ಸಾಂವಿಧಾನಿಕ ಸವಲತ್ತುಗಳನ್ನು ಅನುಭವಿಸಿ ಹಿತವಲಯದಲ್ಲಿರುವ ಒಂದು ಸಮಾಜದ ಚಿಂತನೆಗಳು, ಆಲೋಚನಾ ವಿಧಾನ ಮತ್ತು ವಿಚಾರ ಧಾರೆಗಳು ಪ್ರಭಾವ ಬೀರುತ್ತಲೇ ಕ್ರಿಯಾಶೀಲವಾಗಿರುವುದು ಅತ್ಯವಶ್ಯ. ಬಿಕ್ಕಟ್ಟು

-ನಾ ದಿವಾಕರ

77 ವರ್ಷಗಳ ಸ್ವತಂತ್ರ ಆಳ್ವಿಕೆ, 75 ವರ್ಷಗಳ ಗಣತಂತ್ರದ ಅನುಭವದೊಂದಿಗೆ ಭಾರತ ಇಂತಹ ಒಂದು Vibrant ಸಮಾಜವನ್ನು ಸಹಜವಾಗಿ ಸೃಷ್ಟಿಸಬೇಕಿತ್ತು. ಇಂತಹ ಸಮಾಜ ಸೃಷ್ಟಿಗೆ ಪೂರಕವಾದ ನೂರಾರು ಹೋರಾಟಗಳು ಕಳೆದ ಐದಾರು ದಶಕಗಳಲ್ಲೇ ನಮ್ಮ ನಡುವೆ ನಡೆದಿದ್ದು ಇಂದಿಗೂ ಸಕ್ರಿಯವಾಗಿವೆ. ವರ್ತಮಾನದ ಪರಿಸ್ಥಿತಿಯಲ್ಲಿ ವಿಶಾಲ ಸಮಾಜ ಮತ್ತು ವಿಶೇಷವಾಗಿ ತಳಸಮಾಜದ ಅವಕಾಶವಂಚಿತ ಜನತೆ ಎದುರಿಸುತ್ತಿರುವ ಜಟಿಲ ಜೀವನ ನಿರ್ವಹಣೆಯ ಸಮಸ್ಯೆಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ರಾಜಕೀಯವಾಗಿ, ಸಮಾಜದ ಆಧುನಿಕತೆ, ವೈಚಾರಿಕ-ವೈಜ್ಞಾನಿಕತೆ ಮತ್ತು ಆರೋಗ್ಯಕರ ವಾತಾವರಣದ ಅಡಿಪಾಯವನ್ನೇ ಅಲುಗಾಡಿಸುವ ರೀತಿಯಲ್ಲಿ ಕ್ರಿಯಾಶೀಲವಾಗಿವೆ. ಈ ಸಮಸ್ಯೆಗಳಿಗೆ ಕಾರಣಗಳನ್ನು ನಮ್ಮ ಸಮಾಜದಲ್ಲಿ ಬೇರೂರಿರುವ ಪ್ರಾಚೀನ ಚಿಂತನೆಗಳಲ್ಲಿ ಕಾಣುವಷ್ಟೇ ಪ್ರಮಾಣದಲ್ಲಿ, ಭಾರತವನ್ನು ವಿಕಾಸದತ್ತ ಕೊಂಡೊಯ್ಯುತ್ತಿರುವ ಅಧಿಕಾರ ರಾಜಕಾರಣ ಮತ್ತು ಸಾಂಸ್ಕೃತಿಕ ಪಲ್ಲಟಗಳಲ್ಲೂ ಕಾಣಬಹುದು. ಬಿಕ್ಕಟ್ಟು

ಜನಪರ ಚಳುವಳಿಗಳು ವಿಭಿನ್ನ ಸೈದ್ಧಾಂತಿಕ ನೆಲೆಗಳಲ್ಲಿ ಸಮಾಜದ ನಡುವೆ ಬೆಳೆಸುತ್ತಿರುವ ಚಲನಶೀಲತೆಯನ್ನು ಭಂಗಗೊಳಿಸಲು ಅಧಿಕಾರ ರಾಜಕಾರಣದ ವಾರಸುದಾರರು ನಿರಂತರ ಪ್ರಯತ್ನ ನಡೆಸುತ್ತಲೇ ಇದ್ದಾರೆ. ತಮ್ಮ ಅಧಿಕಾರ, ಸಂಪತ್ತು ಮತ್ತು ಹಿತಕರ ಮೂಲ ಸೌಕರ್ಯಗಳ ರಕ್ಷಣೆಗಾಗಿ, ಶಾಶ್ವತ ಆಧಿಪತ್ಯಕ್ಕಾಗಿ ಹಾಗೂ ರಾಜಕಾರಣವನ್ನು ಪೋಷಿಸುವ ಮಾರುಕಟ್ಟೆ ಶಕ್ತಿಗಳನ್ನು ಕಾಪಾಡುವ ಸಲುವಾಗಿ, ರಾಜಕೀಯ ನಾಯಕರು ಜನಪರ ಚಳುವಳಿಗಳ  ನಡುವೆ ಬೇಲಿಗಳ ಕಟ್ಟುವುದನ್ನು ಪಕ್ಷಾತೀತ ಲಕ್ಷಣವಾಗಿ ಕಾಣಬಹುದು. ಇಲ್ಲಿ ಆಳ್ವಿಕೆಯಲ್ಲಿರುವ ಪಕ್ಷಗಳು ತಮ್ಮ ಆಡಳಿತ ನೀತಿಗಳನ್ನು ವಿರೋಧಿಸುವ ಜನಸಮೂಹಗಳನ್ನು ಅಥವಾ ಸಂಘಟನೆಗಳನ್ನೇ ಗುರಿ ಮಾಡಿಕೊಂಡು, ಅಲ್ಲಿನ ನಾಯಕತ್ವಗಳನ್ನು ಮತ್ತು ತಾತ್ವಿಕ ಭೂಮಿಕೆಗಳನ್ನು ದುರ್ಬಲಗೊಳಿಸುವ ಪ್ರಯತ್ನದಲ್ಲಿರುತ್ತವೆ. ಬಿಕ್ಕಟ್ಟು

ಇದನ್ನೂ ಓದಿ: ಬ್ರಾಂಡ್ ಬೆಂಗಳೂರಿನಲ್ಲಿ ಬಡವರಿಗೆ ಜಾಗವಿಲ್ಲವೆ? ಬೀದಿ ವ್ಯಾಪಾರಿಗಳ ಎತ್ತಂಗಡಿ ನಿಲ್ಲಿಸಿ!

ಹೋರಾಟ ಚಳುವಳಿಗಳ ಹೆಜ್ಜೆಗಳ ನಡುವೆ

ಈ ಸವಾಲುಗಳ ನಡುವೆಯೇ ಸ್ವತಂತ್ರ ಭಾರತ ನೂರಾರು ಜನಪರ ಚಳುವಳಿಗಳಿಗೆ ಸಾಕ್ಷಿಯಾಗಿದ್ದು, ರಾಜಕೀಯ ಸಿದ್ಧಾಂತದ, ತತ್ವ ಸಿದ್ಧಾಂತಗಳ ಚೌಕಟ್ಟುಗಳನ್ನು ದಾಟಿದ ಹಾಗೂ ತಳಸಮಾಜದ ಹಕ್ಕೊತ್ತಾಯಗಳಿಗಾಗಿ ಯಾವುದೇ ಅಸ್ಮಿತೆಗಳಿಗೆ ಒಳಗಾಗದೆ ಹೋರಾಟಗಳನ್ನು ನಾವು ಕಂಡಿದ್ದೇವೆ. ದಲಿತ, ಆದಿವಾಸಿ, ಮಹಿಳಾ ಸಮೂಹ, ಅಲ್ಪಸಂಖ್ಯಾತ ಸಮುದಾಯಗಳು, ಭಾಷಿಕ/ಧಾರ್ಮಿಕ ಅಲ್ಪಸಂಖ್ಯಾತರು, ನಿರ್ಲಕ್ಷಿತ-ಅವಕಾಶವಂಚಿತ/ಅಂಚಿಗೆ ದೂಡಲ್ಪಟ್ಟ ಜನಸಮೂಹಗಳು, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರು, ಅನೌಪಚಾರಿಕ ಕ್ಷೇತ್ರದ  (Informal Sector) ವಲಸೆ ಕಾರ್ಮಿಕರು, ರೈತ ಸಮುದಾಯ, ಕೃಷಿ ಕಾರ್ಮಿಕರು, ಭೂ ಹೀನರು ಮತ್ತು ಭೂಮಿಯ ಹಕ್ಕುಗಳಿಂದ ವಂಚಿತರಾದವರು, ಹೀಗೆ ಹತ್ತು ಹಲವು ಆಯಾಮಗಳಲ್ಲಿ ಹೋರಾಟಗಳು ರೂಪುಗೊಂಡಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನೇಕ ಜನಪರ ಯೋಜನೆಗಳಿಗೆ ಈ ಹೋರಾಟಗಳ ಒತ್ತಾಸೆ ಮತ್ತು ಒತ್ತಾಯಗಳೇ ಕಾರಣವಾಗಿದೆ ಎನ್ನುವುದು ವಾಸ್ತವ. ಬಿಕ್ಕಟ್ಟು

ಆದರೆ ತತ್ವ , ಸಿದ್ಧಾಂತ ಹಾಗೂ ರಾಜಕೀಯ ಆಲೋಚನಾ ವಿಧಾನಗಳು ಈ ಹೋರಾಟಗಳ ನಡುವೆ ಕೆಡವಲಾಗದ ಗಟ್ಟಿ ಗೋಡೆಗಳನ್ನು ನಿರ್ಮಿಸಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಮೇಲೆ ಉಲ್ಲೇಖಿಸಿರುವ ವಿವಿಧ ಹೋರಾಟಗಳ ಒಳಹೊಕ್ಕು ನೋಡಿದಾಗ ಪ್ರತಿಯೊಂದು ಹಂತದಲ್ಲೂ, ಪ್ರತಿಯೊಂದು ಆವರಣದಲ್ಲೂ ತಾತ್ವಿಕ ಭಿನ್ನತೆ, ಸೈದ್ಧಾಂತಿಕ ಭಿನ್ನಾಭಿಪ್ರಾಯ, ಸಾಂಘಿಕ ಅಸ್ಮಿತೆಯ ಒತ್ತಾಸೆಗಳು, ರಾಜಕೀಯ ನಿಲುವು, ಸಾಂಸ್ಕೃತಿಕ ಅಭಿವ್ಯಕ್ತಿಯ ವೈವಿಧ್ಯತೆಗಳು ಇವೆಲ್ಲವೂ ಸಹ ಕಾಣುತ್ತವೆ. ಭಾರತದಂತಹ ವೈವಿಧ್ಯಮಯ ಸಂಸ್ಕೃತಿ ಮತ್ತು ಭಾಷೆಗಳ ದೇಶದಲ್ಲಿ ಇದು ಸಹಜವಾಗಿಯೇ ಕಾಣುತ್ತದೆ. ಇದನ್ನು ನಿರಾಕರಿಸಿ ಮುನ್ನಡೆಯುವುದು ಜನದ್ರೋಹವಾಗಿಯೂ ಕಾಣುತ್ತದೆ. ಆದರೆ ಈ ಹೋರಾಟಗಳ ಗುರಿ ಮತ್ತು ಧ್ಯೇಯ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆ, ತಳಸಮಾಜದ ಉನ್ನತಿ, ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎಂಬ ಔದಾತ್ಯಗಳೇ ಆಗಿರುವಾಗ, ಸಂದರ್ಭಕ್ಕೆ ಅನುಗುಣವಾಗಿ, ಈ ತಡೆಗೋಡೆಗಳನ್ನು ದಾಟಿ ಕೈಜೋಡಿಸುವ ಅವಶ್ಯಕತೆಯನ್ನು ಮನಗಾಣಬೇಕಿದೆ. ಬಿಕ್ಕಟ್ಟು

ವರ್ತಮಾನದ ಸಂಕೀರ್ಣ ಸವಾಲುಗಳು

ವರ್ತಮಾನ ಭಾರತವು ಎದುರಾಗುತ್ತಿರುವ ಸಂಕೀರ್ಣ ಸಮಸ್ಯೆಗಳು ಮತ್ತು ದಿನದಿಂದ ದಿನಕ್ಕೆ ಹಿಗ್ಗುತ್ತಲೇ ಇರುವ ಸಾಮಾಜಿಕ ಒಳಬಿರುಕುಗಳು (Fault lines) ಹಾಗೂ ಸಾಂಸ್ಕೃತಿಕ ಪಲ್ಲಟಗಳು ಜನಪರ ಹೋರಾಟಗಳ ಮುಂದೆ ಬಹುದೊಡ್ಡ ಸವಾಲುಗಳನ್ನು ತಂದು ನಿಲ್ಲಿಸಿದೆ. ಭಾರತದ ಬಹುತ್ವ ಸಂಸ್ಕೃತಿಯನ್ನು ಕ್ರಮೇಣವಾಗಿ ಶಿಥಿಲಗೊಳಿಸಿ, ಏಕ ಸಂಸ್ಕೃತಿ, ಏಕ ಭಾಷೆ, ಏಕ ಧರ್ಮದ ನೆಲೆಯಲ್ಲಿ ವೈವಿಧ್ಯಮಯ ಭಾರತವನ್ನು ಏಕರೂಪತೆಯೆಡೆಗೆ ಕೊಂಡೊಯ್ಯುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಈ ಪ್ರಯತ್ನಗಳಿಗೆ ಪ್ರತಿಯಾಗಿ ರೂಪುಗೊಳ್ಳಬೇಕಾದ ಸೆಕ್ಯುಲರ್‌ ಪ್ರತಿರೋಧಗಳು ಮಾತ್ರ ಧರ್ಮ, ಜಾತಿ ಮತ್ತು ಭಾಷಿಕ ನೆಲೆಗಳಲ್ಲಿ ವಿಘಟಿತವಾಗುತ್ತಾ ಕೆಲವೊಮ್ಮೆ ಆಳುವ ವರ್ಗಗಳೊಡನೆ ಹೊಂದಾಣಿಕೆ ಮಾಡಿಕೊಳ್ಳುವ ಹಂತಕ್ಕೂ ತಲುಪಿರುವುದನ್ನು ನೋಡುತ್ತಿದ್ದೇವೆ.  ಪಕ್ಷ ರಾಜಕಾರಣದ ಸಂಕುಚಿತ ಚೌಕಟ್ಟಿನಿಂದಾಚೆ ನಿಂತು ನೋಡಿದಾಗ, ವಿಶಾಲ ಸಮಾಜದ ಎಲ್ಲ ಸ್ತರಗಳಲ್ಲೂ, ಈ ವಿಘಟನೆ ಸೃಷ್ಟಿಸಿರುವ ಆತಂಕಗಳನ್ನು ನಿವಾರಿಸುವುದು, ನೈಜ ಪ್ರಜಾಪ್ರಭುತ್ವವಾದಿಗಳ ಆದ್ಯತೆಯಾಗಬೇಕಿದೆ. ಬಿಕ್ಕಟ್ಟು

ಈ ನಿವಾರಣೆಯ ಹಾದಿಯಲ್ಲಿ ನಮಗೆ ನೇರವಾಗಿ ಗೋಚರಿಸುವ ವಾಸ್ತವ ಎಂದರೆ ಹೋರಾಟಗಳ ನಿರಂತರತೆಯ, ಚಲನಶೀಲತೆಯನ್ನು ಕಾಪಾಡಲು ಬೇಕಾದ ಒಳಗೊಳ್ಳುವಿಕೆಯ ಹಾಗೂ ಈ ಪ್ರಕ್ರಿಯೆಯನ್ನು ಸೃಜನಶೀಲಗೊಳಿಸಲು ಅಗತ್ಯವಾದ ನಾಯಕತ್ವದ ಕೊರತೆ ಅಥವಾ ಅಪಕ್ವತೆ. ಜನಪರ ಹೋರಾಟಗಳು ಶೂನ್ಯದಲ್ಲಿ ಸೃಷ್ಟಿಯಾಗುವುದಿಲ್ಲ. ಸಾಂದರ್ಭಿಕ ಜಟಿಲ ಸಮಸ್ಯೆಗಳು ಜನರನ್ನು ಹೋರಾಟಕ್ಕೆ ಪ್ರೇರೇಪಿಸುತ್ತವೆ. ಈ ಜನಾಕ್ರೋಶಗಳಿಗೆ ಒಂದು ಸೂಕ್ತ ಮಾರ್ಗದರ್ಶನ, ಮಾದರಿ ಮತ್ತು ಭವಿಷ್ಯದ ಹಾದಿಯ ಸ್ಪಷ್ಟತೆಯನ್ನು ನೀಡಲು ಒಂದು ಸಮರ್ಥ ನಾಯಕತ್ವ ಬೇಕಾಗುತ್ತದೆ ಭಾರತ ಕಂಡ ಬಹುತೇಕ ಹೋರಾಟಗಳಲ್ಲಿ ಇಂತಹ ನಾಯಕತ್ವವು ರೂಪುಗೊಂಡು ಯಶಸ್ವಿಯಾಗಿದ್ದರೂ, ಎಡಪಂಥೀಯ ಮತ್ತು ಮಹಿಳಾ ಆಂದೋಲನಗಳನ್ನು ಹೊರತುಪಡಿಸಿದರೆ, ಇತರ ಸಂದರ್ಭಗಳಲ್ಲಿ ನಾಯಕತ್ವಗಳು ಅಧಿಕಾರ ರಾಜಕಾರಣದಲ್ಲಿ ಲೀನವಾಗುವುದರಲ್ಲೋ ಅಥವಾ ನಿಕಟವಾಗುವ ಮೂಲಕ ಪ್ರಸ್ತುತತೆ ಕಳೆದುಕೊಳ್ಳುವುದರಲ್ಲೋ ಪರ್ಯವಸಾನ ಹೊಂದುತ್ತವೆ. ಬಿಕ್ಕಟ್ಟು

ಇದು ಸಾರ್ವತ್ರಿಕ ಅಥವಾ ಸಾಮಾನ್ಯೀಕರಿಸಬಹುದಾದ ಸತ್ಯವೇನಲ್ಲ ಆದರೂ ಅಲ್ಲಗಳೆಯಲಾಗದ ನೆಲದ ವಾಸ್ತವ (Ground Reality)̤  ಹಾಗಾಗಿ ತಳಸಮಾಜದ ಜನಸಾಮಾನ್ಯರು ಕಟ್ಟಿದ ಕನಸುಗಳನ್ನು ಸಾಕಾರಗೊಳಿಸುವ ಹಾದಿಯಲ್ಲಿ, ಅಡೆತಡೆಗಳನ್ನು ನಿವಾರಿಸಿಕೊಂಡು, ಅಧಿಕಾರ ಕೇಂದ್ರಗಳೊಡನೆ ಸಂಘರ್ಷ ನಡೆಸುತ್ತಾ, ಇಡೀ ಹೋರಾಟವನ್ನು ತತ್ವ-ಸಿದ್ಧಾಂತದ ನೆಲೆಯಲ್ಲಿ ಅಥವಾ ಸ್ಪಷ್ಟ ಸಿದ್ಧಾಂತ ಇಲ್ಲದೆಯೂ ಜನಪರ ಕಾಳಜಿಯ ನೆಲೆಯಲ್ಲಿ, ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ನಾಯಕತ್ವದ ಅವಶ್ಯಕತೆಯನ್ನು ಅಲ್ಲಗಳೆಯಲಾಗುವುದಿಲ್ಲ. ಇಲ್ಲವಾದರೆ ಎರಡನೆ ಸ್ವಾತಂತ್ರ್ಯ ಸಂಗ್ರಾಮ ಎಂಬ ಹೆಗ್ಗಳಿಕೆಯೊಂದಿಗೆ ಚಾಲನೆ ಪಡೆದ ಅಣ್ಣಾ ಹಜಾರೆ ನೇತೃತ್ವದ 2012ರ ಭ್ರಷ್ಟಾಚಾರ ವಿರೋಧಿ ಆಂದೋಲನದ ಹಾಗೆ, ಸ್ಥಾಪಿತ ಅಧಿಕಾರ ಕೇಂದ್ರಗಳಲ್ಲಿ ಲೀನವಾಗಿ, ಬೀದಿಗಿಳಿದು ಹೋರಾಡಿದ ಸಾವಿರಾರು ಕಾರ್ಯಕರ್ತರಿಗೆ ವಿಶ್ವಾಸ ದ್ರೋಹ ಬಗೆದಂತಾಗುತ್ತದೆ. ಬಿಕ್ಕಟ್ಟು

ಧ್ಯೇಯ ಗುರಿ ಮತ್ತು ನಾಯಕತ್ವದ ಜವಾಬ್ದಾರಿ

ಯಾವುದೇ ಹೋರಾಟವಾದರೂ ಈ ಅಪಾಯವನ್ನು ಎದುರಿಸಿ, ತನ್ನ ಮೂಲ ಸ್ಥಾಯಿಯಿಂದ ವಿಮುಖವಾಗದೆ, ತಾನಿಟ್ಟ ಗುರಿ, ಸಾಧಿಸಲು ಅಪೇಕ್ಷಿಸುವ ಧ್ಯೇಯ ಮತ್ತು ಜನರ ಹಿತಾಸಕ್ತಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಾಗಬೇಕು. ಇಲ್ಲಿ ನಾಯಕತ್ವ ಎನ್ನುವುದು ನಿರ್ಣಾಯಕವಾಗುತ್ತದೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ವಿದ್ಯುನ್ಮಾನ ತಂತ್ರಜ್ಞಾನದ ಪ್ರಸರಣ, ಸಂವಹನ ಮಾಧ್ಯಮಗಳ ಸಾರ್ವತ್ರೀಕರಣ ಹಾಗೂ ಜನಸಂಪರ್ಕ ಸಾಧನಗಳ ಹೊಸ ರೂಪಗಳ ಕಾರಣದಿಂದ, ನಾಯಕತ್ವದ ಆದ್ಯತೆಗಳೂ, ಆಯ್ಕೆಗಳೂ ರೂಪಾಂತರಗೊಂಡಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. 1990ರ ದಶಕದಲ್ಲೂ ಸಹ ಬಹುತೇಕ ಹೋರಾಟ-ನಿರತ ಕಾರ್ಯಕರ್ತರಿಗೆ ತಮ್ಮ ನಾಯಕರ ಮುಖಪರಿಚಯವೇ ಇರುತ್ತಿರಲಿಲ್ಲ. ಪತ್ರಿಕೆಗಳಲ್ಲಿನ ಭಾವಚಿತ್ರಗಳಿಂದಲೇ ತೃಪ್ತಿಪಡಬೇಕಿತ್ತು. ನಾಯಕರಿಗೂ ಸಹ ತಳಮಟ್ದದವರೆಗೂ ಸದಸ್ಯರೊಡನೆ ಸಂಭಾಷಿಸುವ, ಸಂವಾದಿಸುವ ಅಥವಾ ಪ್ರತಿಕ್ರಿಯಿಸುವ ಅವಕಾಶಗಳು ಸೀಮಿತವಾಗಿದ್ದವು. ಸಾಂಘಿಕ ನೆಲೆಯಲ್ಲಿ ಪದಾಧಿಕಾರಿಗಳು, ಮುಂಚೂಣಿ ನಾಯಕರು ಮಾತ್ರ ಇದರ ಫಲಾನುಭವಿಗಳಾಗುತ್ತಿದ್ದರು. ಬಿಕ್ಕಟ್ಟು

ಆದರೆ ಡಿಜಿಟಲ್‌ ಯುಗವು ಹೋರಾಟ ಅಥವಾ ಚಳುವಳಿಯ ಮೇಲ್ಪದರದ ನಾಯಕತ್ವ ಹಾಗೂ ತಳಮಟ್ಟದ ಕಾರ್ಯಕರ್ತರ ನಡುವೆ ನೇರ ಸಂಪರ್ಕ ಏರ್ಪಡಿಸುವ ತಂತ್ರಜ್ಞಾನಗಳ ಮೂಲಕ, ಸ್ಪಂದನೆಯ ಅವಕಾಶಗಳನ್ನು ಹೆಚ್ಚಿಸಿರುವುದೇ ಅಲ್ಲದೆ, ಮೇಲ್ದರ್ಜೆಯ ನಾಯಕರಿಗೆ ತಮ್ಮನ್ನೇ ನಂಬಿರುವ ಅಸಂಖ್ಯಾತ ಜನರನ್ನು ನೇರವಾಗಿ ಎದುರಿಸುವ ಅವಕಾಶಗಳನ್ನು ಕಲ್ಪಿಸಿದೆ. ಇದು ದೆಹಲಿಯಿಂದ ಕೋಲಾರದವರೆಗೆ ಜಿಲ್ಲಾ-ತಾಲ್ಲೂಕು-ಹೋಬಳಿ-ಗ್ರಾಮಗಳವರೆ ವಿಸ್ತರಿಸಿರುವ ಒಂದು ಸರಪಳಿ. ಹಾಗಾಗಿ ಯಾವುದೇ ಸ್ತರದಲ್ಲಾಗಲಿ ನಾಯಕತ್ವ ವಹಿಸುವವರಿಗೆ, ತಮ್ಮನ್ನು ತಮ್ಮ ನಡೆನುಡಿಯನ್ನು ಸಾಧಾರಣ ಕಾರ್ಯಕರ್ತರೂ ಸಹ ಸದಾ ಗಮನಿಸುತ್ತಿರುತ್ತಾರೆ,ಫೇಸ್‌ಬುಕ್‌, ಇನ್ಸ್‌ಟಾಗ್ರಾಂ, ಟ್ವಿಟರ್‌ ಮೊದಲಾದ ಸಾಮಾಜಿಕ ಮಾಧ್ಯಮ ತಾಣಗಲಲ್ಲಿ ತಮ್‌ ವಿರೋಧ, ಪ್ರತಿರೋಧ, ಅನಿಸಿಕೆಗಳನ್ನು ಅಭಿವ್ಯಕ್ತಪಡಿಸುವ ಅವಕಾಶ ಕಾರ್ಯಕರ್ತರಿಗೆ ಮುಕ್ತವಾಗಿರುತ್ತದೆ, ಎಂಬ ಪರಿವೆ, ಎಚ್ಚರ ಇರಬೇಕಾಗುತ್ತದೆ. ಬಿಕ್ಕಟ್ಟು

ನಾಯಕತ್ವದ ಹೊಣೆ-ತಲ್ಲಣಗಳ ನಡುವೆ

ಹಾಗಾಗಿ ನಾಯಕತ್ವ ಎನ್ನುವುದು ಸರ್ವವ್ಯಾಪಿ ಲಕ್ಷಣ ಪಡೆದುಕೊಂಡಿದ್ದರೂ ಸದಾ ಕಾರ್ಯಕರ್ತರ ಕಣ್ಗಾವಲಿಗೆ ಒಳಗಾಗಿರುವುದರಿಂದ, ಉತ್ತರದಾಯಿತ್ವ ಇರುವ ಜವಾಬ್ದಾರಿಯುತ ಕಾರ್ಯನಿರ್ವಹಣೆಯ ಒಂದು ಸ್ಥಾನವಾಗಿ ರೂಪಾಂತರಗೊಂಡಿದೆ. ತಮ್ಮ ನಾಯಕರ ಪ್ರಶ್ನಾರ್ಹ ನಡೆ, ತೀರ್ಮಾನಗಳಲ್ಲಿ ಸಾಂಘಿಕ ಚೌಕಟ್ಟಿನಲ್ಲಿ ವ್ಯಕ್ತಪಡಿಸುವ ನಿರ್ಬಂಧಗಳ ನಡುವೆಯೂ, ಸಾಮಾಜಿಕ ಸಂವಹನ ಮಾಧ್ಯಮಗಳ ಮೂಲಕ ಅಸಮಾಧಾನಗಳನ್ನು ವ್ಯಕ್ತಪಡಿಸುವ ವ್ಯಕ್ತಿ ಸ್ವಾತಂತ್ರ್ಯವನ್ನು ತಂತ್ರಜ್ಞಾನ ಯುಗ ಕಲ್ಪಿಸಿದೆ. ಒಂದು ಸ್ವಾಭಾವಿಕ ಪ್ರಕ್ರಿಯೆಯಾದ ಈ ಅಸಮಾಧಾನಗಳನ್ನು ನಿವಾರಿಸುವ ಮತ್ತು ಎಲ್ಲರನ್ನೂ ಒಳಗೊಳ್ಳುವ ( All inclusive) ಮಾದರಿಯನ್ನು ಅನುಸರಿಸುವ ನೈತಿಕ ಜವಾಬ್ದಾರಿ ಎಲ್ಲ ಸ್ತರಗಳ ನಾಯಕತ್ವದ ಮೇಲೆಯೂ ಇರುತ್ತದೆ. ಇಲ್ಲಿ ನಾಯಕತ್ವಗಳು ವಿಫಲವಾದ ಕಡೆಯೆಲ್ಲಾ ಸಾಂಘಿಕ ವಿಘಟನೆ, ವಿಭಜನೆ ಮತ್ತು ಪ್ರತ್ಯೇಕ ಬಣ ಸ್ಥಾಪನೆ ಆಗಿರುವುದಕ್ಕೆ ದಲಿತ, ಎಡಪಕ್ಷಗಳ, ಪ್ರಗತಿಪರ ಸಂಘಟನೆಗಳ ಚರಿತ್ರೆಯೇ ಸಾಕ್ಷಿ.

ಈಗ ಈ ವೈಫಲ್ಯ ಪರಾಮರ್ಶೆಗೊಳಗಾಗುವ ಅಥವಾ ಪರಸ್ಪರ ಚರ್ಚೆ ನಡೆಸುವ ಮಾರ್ಗಗಳಿಗೆ ಮುಕ್ತವಾದ ಅವಕಾಶಗಳು ಲಭ್ಯವಾಗಿವೆ. ಹಾಗಾಗಿ ನಾಯಕತ್ವದ ಸ್ಥಾನದಲ್ಲಿರುವವರು ತಮ್ಮ ಸಾಂಘಿಕ ಜವಾಬ್ದಾರಿ, ವೈಯುಕ್ತಿಕ ನೈತಿಕತೆ, ವ್ಯಕ್ತಿಗತ ಉತ್ತರದಾಯಿತ್ವ ಹಾಗೂ ತತ್ವ ಬದ್ಧತೆಯನ್ನು ಗಂಭೀರವಾಗಿ ಗಮನಿಸುತ್ತಲೇ ಮುನ್ನಡೆಯಬೇಕಾಗುತ್ತದೆ. ಈ ಮುನ್ನಡೆಗೆ ತೊಡಕಾಗಿ ಪರಿಣಮಿಸಿರುವುದು ಮತ್ತದೇ ವಿದ್ಯುನ್ಮಾನ ಸಂವಹನ ಸೇತುವೆಗಳು ಮತ್ತು ಸಾಮಾಜಿಕ ಮಾಧ್ಯಮ ತಾಣಗಳು. ಇದು ತೊಡಕು ಏಕಾಗುತ್ತದೆ ಎಂದರೆ, ನಾಯಕತ್ವದ ವ್ಯಕ್ತಿಗತ ಮಹತ್ವಾಕಾಂಕ್ಷೆಗಳಲ್ಲಿ ಒಂದಾಗಿರಬಹುದಾದ ತನ್ನ ಮುಂದಾಳತ್ವದ ಹಿರಿಮೆ ಮತ್ತು ಮೇಲರಿಮೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಮೂಲಕ ಸಮಾಜದಲ್ಲಿನ ವೈಯುಕ್ತಿಕ ಸ್ಥಾನಮಾನಗಳನ್ನು, ಕ್ಷಣ ಮಾತ್ರದಲ್ಲಿ ಲಕ್ಷಾಂತರ ಜನರಿಗೆ ತಲುಪಿಸುವ ಅವಕಾಶವನ್ನು ಡಿಜಿಟಲ್‌ ಯುಗ ಕಲ್ಪಿಸಿದೆ. ಬಿಕ್ಕಟ್ಟು

ಹಾಗಾಗಿ ದಲಿತ, ಆದಿವಾಸಿ, ಮಹಿಳಾ, ಅಲ್ಪಸಂಖ್ಯಾತ, ಕಾರ್ಮಿಕ ಹೀಗೆ ಯಾವುದೇ ಹೋರಾಟಗಳ ಮುಂದಾಳತ್ವ ವಹಿಸಿರುವವರು ʼನಾಯಕತ್ವದ ಆತ್ಮರತಿʼಯಿಂದ (Self aggrandisement of leadership) ಹೊರಬಂದು, ಮೇಲರಿಮೆಯ ಅಹಮಿಕೆಗಳನ್ನು ದೂರ ಇರಿಸಿ, ಎಲ್ಲರೊಳಗೊಂದಾಗುವ-ಎಲ್ಲರನ್ನು ಒಳಗೊಳ್ಳುವ (One among all & All inclusive) ಗುಣಗಳನ್ನು ಹೊಂದಿರುವುದು ಅತ್ಯವಶ್ಯ, ಕಾಲದ ಅನಿವಾರ್ಯತೆ. ಆದರೆ ಮನುಷ್ಯ ಸಹಜವಾದ ಕೆಲವು ಲಕ್ಷಣಗಳು ಆಧುನಿಕತೆಯಿಂದ ನಶಿಸಿಹೋಗುವುದಿಲ್ಲ ಎಂಬ ಮನಶ್ಶಾಸ್ತ್ರೀಯ ತತ್ವದ ನೆಲೆಯಲ್ಲಿ ನೋಡಿದಾಗ, ತಮ್ಮನ್ನು ಸಾರ್ವಜನಿಕವಾಗಿ ವಿಜೃಂಭಿಸಿಕೊಳ್ಳುವ ಹಾಗೂ ಕಾರ್ಯಕರ್ತರಲ್ಲಿ ಆಯ್ದ ಕೆಲವರನ್ನು ʼ ಹಿಂಬಾಲಕರು ʼ (Followers)ಎಂದು ಬಿಂಬಿಸುವ ಮೇಲ್ಪದರ ಸಮಾಜದ (Elite society) ಲಕ್ಷಣಗಳಿಗೆ ಸುಲಭವಾಗಿ ತುತ್ತಾಗುವುದನ್ನು ಅಲ್ಲಗಳೆಯಲಾಗುವುದಿಲ್ಲ. ಬಿಕ್ಕಟ್ಟು

ಸ್ವಯಂ ಹೇರಿಕೆಯ ಸಂಹಿತೆಗಳ ಅವಶ್ಯಕತೆ

ಭಾರತದ ಸಾಂಪ್ರದಾಯಿಕ, ಬಹುತೇಕ ಧಾರ್ಮಿಕ ಸಮಾಜದಲ್ಲಿ ಈ (ಅವ)ಲಕ್ಷಣಗಳಿಗೆ ಪೂರ್ವನಿದರ್ಶನಗಳಾಗಿ ಮಠಮಾನ್ಯಗಳು, ಧಾರ್ಮಿಕ ಸಂಸ್ಥೆಗಳು, ಆಧ್ಯಾತ್ಮಿಕ ಕೇಂದ್ರಗಳು ನಮ್ಮ ಮುಂದೆ ಸದಾ ಜೀವಂತವಾಗಿರುತ್ತವೆ. ಸಾಹಿತ್ಯ ಸಮ್ಮೇಳನದಂತಹ ಸಂವೇದನಾಶೀಲ ಸಾಂಸ್ಕೃತಿಕ ವಾತಾವರಣದಲ್ಲೂ ರಾಜಸಿಂಹಾಸನ, , ಸಾರೋಟು, ಮೆರವಣಿಗೆಗಳು ಇಂದಿಗೂ ನಡೆಯುತ್ತಿರುವುದು ಇದರ ಮತ್ತೊಂದು ಆಯಾಮ. ಜನಪರ ಹೋರಾಟಗಳ ನಾಯಕತ್ವ ವಹಿಸಿರುವವರಿಗೆ ಇವೆಲ್ಲವೂ ಪೂರ್ವ ಎಚ್ಚರಿಕೆಗಳಾಗಿ ಕಾಣಬೇಕಿದೆ. ಈ ನಿಟ್ಟಿನಲ್ಲಿ ನಾಯಕತ್ವಗಳು ಈ ಕೆಲವು ಸ್ಪಪ್ರೇರಿತ ಸಂಹಿತೆಗಳನ್ನು ಹೇರಿಕೊಳ್ಳುವುದು ವರ್ತಮಾನದ ತುರ್ತು :

1. ಹೋರಾಟ/ಚಳುವಳಿಗಳು ವ್ಯಕ್ತಿಗತ ಸಾಮಾಜಿಕ ಜೀವನದ ಒಂದು ಭಾಗವಾಗಿರಬೇಕು. ಬದುಕು ನಿರ್ವಹಣೆಯ ಮಾರ್ಗಗಳಾಗಕೂಡದು.

2. ಸಾಂಘಿಕ ತತ್ವ-ಸಿದ್ಧಾಂತಗಳಿಂದಾಚೆಗಿನ ಆಲೋಚನಾ ವಿಧಾನಗಳೊಡನೆ ಅನುಸಂಧಾನ ನಡೆಸುವ ವ್ಯವಧಾನ, ಕ್ಷಮತೆ ಮತ್ತು ಔದಾರ್ಯ ಇರಬೇಕು.

3. ಆದರೆ ಅವುಗಳಿಂದ ಆಕರ್ಷಿತರಾಗಿ ಸೀಮೋಲ್ಲಂಘನ ಮಾಡುವ ತವಕ/ಹತಾಶೆ/ಆಕಾಂಕ್ಷೆಗಳು ಇರಕೂಡದು

4. ವ್ಯಕ್ತಿಗತ ಜೀವನದ/ವೈಯುಕ್ತಿಕ ಬದುಕಿನ ಪ್ರಸಂಗಗಳು (ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಇತ್ಯಾದಿ) ಸ್ವಗೃಹದ ನಾಲ್ಕು ಗೋಡೆಗಳಿಗೆ ಸೀಮಿತವಾಗಿರಬೇಕು. ಸಾರ್ವಜನಿಕ ಆಚರಣೆಗಳಾಗಿ ವಿಜೃಂಭಿಸಕೂಡದು. ಬಿಕ್ಕಟ್ಟು

5. ಸಂಘಟನೆಗಳ ಸದಸ್ಯರನ್ನು ಅಥವಾ ಅವರಲ್ಲಿ ಆಯ್ದ ಕೆಲವರನ್ನು ಹಿಂಬಾಲಕರನ್ನಾಗಿ ಮಾಡಿಕೊಳ್ಳುವ ಪ್ರವೃತ್ತಿಯಿಂದ ದೂರ ಇರಬೇಕು. ಎಲ್ಲರನ್ನೂ ಸಮಾನ ಸಹವರ್ತಿಗಳಾಗಿ ನೋಡಬೇಕು. ಬಿಕ್ಕಟ್ಟು

6. ಎಲ್ಲರನ್ನೊಳಗೊಳ್ಳುವ (Inclusive) ರಾಜಕೀಯದಲ್ಲಿ “ಇಲ್ಲಿ ಯಾರೂ ಮುಖ್ಯರಲ್ಲ-ಯಾರೂ ಅಮುಖ್ಯರಲ್ಲ” ಎಂಬ ಕುವೆಂಪು ವಾಣಿ ಧ್ಯೇಯವಾಕ್ಯವಾಗಬೇಕು.

7. ವೈಯುಕ್ತಿಕ ಆಚರಣೆಗಳಿಗೆ (ಹುಟ್ಟುಹಬ್ಬ- ವಿವಾಹ ವಾರ್ಷಿಕೋತ್ಸವ ಇತ್ಯಾದಿ) ಸುದ್ದಿಪತ್ರಿಕೆಗಳನ್ನು , ಸಾಮಾಜಿಕ ಮಾಧ್ಯಮಗಳನ್ನು, ಯು ಟ್ಯೂಬ್‌ ಇತ್ಯಾದಿಗಳನ್ನು ವೇದಿಕೆಯಾಗಿ ಬಳಸಿಕೊಳ್ಳಕೂಡದು. (ವಿಶೇಷವಾಗಿ ಪೂರ್ಣಪುಟದ ಜಾಹೀರಾತು, ಸುತ್ತಲೂ ರಂಗೋಲಿಯ ಚುಕ್ಕೆಗಳಂತಿರುವ ಹಿಂಬಾಲಕರ ಭಾವಚಿತ್ರಗಳು) ಬಿಕ್ಕಟ್ಟು

8. ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಊಳಿಗಮಾನ್ಯ ಮಾದರಿಯ ಕ್ವಿಂಟಲ್‌ ತೂಕದ ಭಾರತದ ಹಾರ, ತುರಾಯಿ, ಶಾಲು, ರಾಜಪೇಟಗಳನ್ನು ಮತ್ತು ಮೆರವಣಿಗೆಗಳನ್ನು ನಿರಾಕರಿಸಬೇಕು. ಬಿಕ್ಕಟ್ಟು

9. ಮತೀಯವಾದ-ಮತಾಂಧತೆ-ಕೋಮುವಾದ ಇವುಗಳ ಮೂಲ ಅಡಿಪಾಯವಾದ ಊಳಿಗಮಾನ್ಯ ತತ್ವ- ಪಿತೃಪ್ರಧಾನತೆಯ ಮನಸ್ಥಿತಿಯಿಂದ ಸಂಪೂರ್ಣ ಮುಕ್ತವಾಗಬೇಕು. ಆಗ ಸಾಂಘಿಕ ಯಜಮಾನಿಕೆ, ಪ್ರತ್ಯೇಕತೆ, ಹಠಮಾರಿ ಧೋರಣೆ, ನಾನತ್ವ ಮತ್ತು ಮೇಲರಿಮೆಯ ಅಹಮಿಕೆಗಳು ತಂತಾನೇ ಇಲ್ಲವಾಗುತ್ತವೆ.

ವರ್ತಮಾನದ ಭಾರತ ಎದುರಿಸುತ್ತಿರುವ ರಾಜಕೀಯ ಬಹುಸಂಖ್ಯಾವಾದ, ಸಾಂಸ್ಕೃತಿಕ ಏಕರೂಪತೆಯ ಹೇರಿಕೆ, ಇದರಿಂದಲೇ ಸೃಷ್ಟಿಯಾಗುವ ಶ್ರೇಷ್ಠತೆಯ ಕಲ್ಪನೆ ಮತ್ತು ದ್ವೇಷಾಸೂಯೆಗಳು, ಶ್ರೇಣೀಕೃತ ಜಾತಿ ವ್ಯವಸ್ಥೆಯ ಶ್ರೇಷ್ಠತೆಯ ಕಲ್ಪನೆಗಳು, ಪಿತೃಪ್ರಧಾನತೆ-ಪುರುಷಾಧಿಪತ್ಯ ಇವೆಲ್ಲವೂ ಭಾರತೀಯ ಸಂವಿಧಾನಕ್ಕೆ ಮತ್ತು ಪ್ರಜಾಪ್ರಭುತ್ವದ ಆಶಯಗಳಿಗೆ ತದ್ವಿರುದ್ಧವಾದ ಮನಸ್ಥಿತಿಗಳು. ಇದನ್ನು ʼಮನುವಾದʼ ಎಂದು ಏಕೀಭವಿಸುವುದಕ್ಕಿಂತಲೂ, ಸಹಜವಾಗಿ ಭಾರತದ ಸಾಂಪ್ರದಾಯಿಕ ವಾತಾವರಣ ಎಲ್ಲರಲ್ಲೂ ಸೃಷ್ಟಿಸಿರಬಹುದಾದ ಅಪಸವ್ಯಗಳು ಎಂದು ಭಾವಿಸುವುದರ ಮೂಲಕ, ತಳಸಮಾಜದಿಂದ ಮೇಲ್ಪದವರೆಗೂ ಶೋಷಣೆಗೊಳಗಾದ ಜನತೆಯ ತಲ್ಲಣಗಳಿಗೆ ಸ್ಪಂದಿಸುವ ಮಾನವೀಯ ಮೌಲ್ಯಗಳನ್ನು ವ್ಯಕ್ತಿಗತವಾಗಿ, ವೈಯ್ಯುಕ್ತಿಕ ನೆಲೆಯಲ್ಲಿ ಕಾಪಾಡಿಕೊಂಡು, ಬಿಂಬಿಸುವುದು ನಾಯಕತ್ವದ ಮೂಲ ಲಕ್ಷಣ ಎಂದೇ ಪರಿಗಣಿಸಬೇಕು.

ಇದನ್ನು ಗ್ರಾಂಥಿಕವಾಗಿ ಹೊಸ ಅಧ್ಯಯನದ ಮೂಲಕ ಕಲಿಯಬೇಕಿಲ್ಲ. ಫುಲೆ, ಅಂಬೇಡ್ಕರ್‌, ಗಾಂಧಿ, ಠಾಗೋರ್‌ ಮತ್ತಿತರ ದಾರ್ಶನಿಕರು ಈ ರೀತಿಯಲ್ಲಿ ಬಾಳಿ ಬದುಕಿ ನಮ್ಮ ನಡುವೆ ಇದ್ದು ಹೋಗಿದ್ದಾರೆ. ಅವರನ್ನೇ ಆರಾಧಿಸುವ ಪ್ರಗತಿಪರ-ಜನಪರ ಸಂಘಟನೆಗಳ ನಾಯಕತ್ವಗಳಿಗೆ ಈ ದಾರ್ಶನಿಕರ ದೂರಗಾಮಿ ದೃಷ್ಟಿಕೋನ ಮತ್ತು ಮಾನವೀಯ ಸಂವೇದನೆ ನಿರ್ದೇಶಕ ತತ್ವಗಳಾಗಬೇಕು.

ಇಲ್ಲವಾದರೆ ಈ ಅಮೂಲ್ಯ ಜೀವಗಳ ಹೆಸರನ್ನೇ ಮುಂದಿಟ್ಟುಕೊಂಡು ನಾವು ನಡೆಸುವ ಹೋರಾಟ/ಚಳುವಳಿಗಳು ತಮ್ಮ ನೈತಿಕತೆಯನ್ನೇ ಕಳೆದುಕೊಳ್ಳುತ್ತವೆ. 21ನೆ ಶತಮಾನದಲ್ಲಿ ಭಾರತದ ಜನಸಂಖ್ಯೆಯ ಶೇಕಡಾ 34ರಷ್ಟಿರುವ ಮಿಲೆನಿಯಂ ಮಕ್ಕಳಿಗೆ ಭವಿಷ್ಯದ ಭಾರತವನ್ನು ಕಟ್ಟಿಕೊಡುವ ಹಾದಿಯಲ್ಲಿರುವ ಜನಪರ-ಪ್ರಗತಿಪರ-ಎಡಪಂಥೀಯ-ದಲಿತ-ಮಹಿಳಾ-ಅಲ್ಪಸಂಖ್ಯಾತ ಹೋರಾಟಗಳ ಸಾಂಘಿಕ ಗುರಿ ಇವರಾಗಿರಬೇಕು, ನಮ್ಮ ದೃಷ್ಟಿಕೋನ-ಮುಂಗಾಣ್ಕೆ ಇವರತ್ತ ನೆಟ್ಟಿರಬೇಕು. ಈ ನಿಟ್ಟಿನಲ್ಲಿ ನಾಯಕತ್ವದ ಪ್ರಶ್ನೆ ಎಷ್ಟು ನಿರ್ಣಾಯಕವಾಗಿರುತ್ತದೆ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಲೇ ಇರುತ್ತದೆ.

ಇದನ್ನೂ ನೋಡಿ: ಕೌಶಲ್ಯದ ಹೆಸರಲ್ಲಿ ಕಾರ್ಮಿಕ ಮಂಡಳಿಯ ಹಣ ವ್ಯಯ – ಕಾರ್ಮಿಕ ಸಂಘಟನೆಗಳ ಆಕ್ಷೇಪ

Donate Janashakthi Media

Leave a Reply

Your email address will not be published. Required fields are marked *