‘ನಕಲಿ ದಾಖಲೆ ಸೃಷ್ಟಿಸು’ ಕಂದಾಯ ನೌಕರನ ಮೇಲೆ ಶಾಸಕ ಎಂ.ಪಿ ರೇಣುಕಾಚಾರ್ಯ ಒತ್ತಡ

ಗುರುರಾಜ ದೇಸಾಯಿ

ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಕಂದಾಯ ನೌಕರರೊಬ್ಬರಿಗೆ “ನಕಲಿ ದಾಖಲೆ” ದೃಷ್ಟಿಸಿ ಹಣ ಬಿಡುಗಡೆ ಮಾಡುವಂತೆ ಒತ್ತಡ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸ್ವತಃ ನೌಕರನೇ ಜಿಲ್ಲಾಧಿಕಾರಿಗೆ ಈ ಕುರಿತು ದೂರು ಸಲ್ಲಿಸಿದ್ದಾರೆ. ದೂರಿನ ಪ್ರತಿ ಜನಶಕ್ತಿ ಮೀಡಿಯಾಗೆ ಲಭ್ಯವಾಗಿದೆ. 

ಶಾಸಕ ಎಂ.ಪಿ ರೇಣುಕಾಚಾರ್ಯ, ಸಾರ್ವಜನಿಕರನ್ನು ಮುಂದೆ ಬಿಟ್ಟು, ನನ್ನ ವಿರುದ್ಧ ಎತ್ತಿಕಟ್ಟಿದ್ದಾರೆ. ಕಚೇರಿಯಲ್ಲಿ ಉಸಿರುಗಟ್ಟುವ ವಾತಾವರಣದಲ್ಲಿ‌ ನಾನು ಕೆಲಸ ಮಾಡುತ್ತಿದ್ದೇನೆ. ಅತಿವೃಷ್ಟಿ ಮಳೆ ಪರಿಹಾರಕ್ಕಾಗಿ ನಕಲಿ ದಾಖಲೆ ಸೃಷ್ಟಿಸಿ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಶಾಸಕರು ಕುಮ್ಮಕ್ಕು ನೀಡಿದ್ದಾರೆ ಎಂದು ಕಂದಾಯ ನೌಕರ ಎಂ.ಎಸ್.ಪ್ರಶಾಂತ್ ಕುಮಾರ್ ದಾವಣಗೆರೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

ನ್ಯಾಮತಿ ತಾಲ್ಲೂಕು ಬೆಳಗುತ್ತಿ ಹೋಬಳಿ ಕಂದಾಯ ಘಟಕ ಕುಂಕುವ ವೃತ್ತದಲ್ಲಿ ಪ್ರಶಾಂತ್ ಕುಮಾರ್ ಕಾರ್ಯನಿರ್ವಹಿಸುತ್ತಿದ್ದಾರೆ. ಶಾಸಕರು ಹಾಗೂ ಅವರ ಬೆಂಬಲಿಗರ ಉಪಟಳ ತಾಳಲಾಗುತ್ತಿಲ್ಲ,‌ನನಗೆ ಸೂಕ್ತ ರಕ್ಷಣೆ ನೀಡಿ, ಶಾಸಕರು ಹಾಗೂ ಅವರ ಬೆಂಬಲಿಗರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ?: ಪ್ರಶಾಂತ್ ಕುಮಾರ್ ಜಿಲ್ಲಾಧಿಕಾರಿಗೆ ನೀಡಿದ ದೂರಿನ ಪತ್ರದ ಸಾರಾಂಶ ಈ ಕೆಳಗಿನಂತಿದೆ. “ಅಕ್ಟೋಬರ್ 30 ರಂದು ದೇವರಾಜ ಎನ್ನುವವರು ಪ್ರಶಾಂತ್ ಕುಮಾರ್ ರವರಿಗೆ ದೂರವಾಣಿ ಕರೆ ಮಾಡುತ್ತಾರೆ. ಆದರೆ ಆ ಕಾಲ್ ರಿಜಕ್ಟ್ ಆದ ಕಾರಣ, ಈ ವ್ಯಕ್ತಿ ನನ್ನ ಹೋಬಳಿಗೆ ಬರುವವರು ಇರಬೇಕು ಎಂದು ಆ ದೂರವಾಣಿಗೆ ಕರೆ ಮಾಡುತ್ತಾರೆ. ಆ ವ್ಯಕ್ತಿ ಶಾಸಕರು ನಿಮ್ಮ ಬಳಿ ಮಾತನಾಡುತ್ತಾರೆ ಎಂದು ಫೋನ್‌ನ್ನು ಶಾಸಕರಿಗೆ ಕೊಡುತ್ತಾರೆ. ” ಆಗ ಶಾದಕರು”, ತಕ್ಷಣ ಎಲ್ಲಾ ಕೆಲಸ ಬಿಟ್ಟು ನನ್ನ ಮನೆಗೆ ಬಾ ಎಂದು ಒತ್ತಾಯಿಸುತ್ತಾರೆ.

ಶಾಸಕರ ಕರೆಗೆ ಓಗೊಟ್ಟ ನಾನು ಸುಮಾರು ಬೆಳಗ್ಗೆ 11-40 ರ ಸಮಯಕ್ಕೆ ಅವರ ಮನೆಗೆ ಹೋದೆ. ಆಗ ಅವರ ಮನೆಯ ಹಾಲ್ ನಲ್ಲಿ ನನ್ನ ಕುಂಕುವ ವೃತ್ತಕ್ಕೆ ಸಂಬಂಧಪಟ್ಟ ಕೂಗನಹಳ್ಳಿ ಗ್ರಾಮದ ಸದರಿ ಶ್ರೀ ದೇವರಾಜ್ ಅರಸ್, ಶ್ರೀ ಕೆ.ಹೆಚ್, ಉಮೇಶ್‌ನಾಯ್ಕ ಬಿನ್ ಜೀಮಾನಾಯ್ಕ, ಶ್ರೀ ಮಂಜಾನಾಯ್ಕ ಬಿನ್ ರಾಮಾನಾಯ್ಕ ಸೇರಿದಂತೆ ಕೆಲವು ಗ್ರಾಮಸ್ಥರು ಮತ್ತು ಇತರೆ ಸಾರ್ವಜನಿಕರು ಕಿಕ್ಕಿರಿದು ಸೇರಿದ್ದರು. ಆಗ ನಾನು ಮಾನ್ಯ ಶಾಸಕರಿಗೆ ಗೌರವ ಸಲ್ಲಿಸಿ ವಿಷಯವನ್ನು ಕೇಳಿದಾಗ, ಅವರು ಕೂಗನಹಳ್ಳಿ ಗ್ರಾಮಕ್ಕೆ ಸಂಬಂಧಿಸಿದಂತೆ ಕೂಗನಹಳ್ಳಿ ಗ್ರಾಮದ ವಾಸಿಗಳಾದ ಶ್ರೀಮತಿ ರೂಪಾಬಾಯಿ ಕೋಂ ಛತ್ರಪತಿನಾಯ್ಕ, ಶ್ರೀರಾತಿ ಸಾವಿತ್ರಿಬಾಯಿ ಕೋಂ ಕೆ.ಹೆಚ್. ಮಂಜುನಾಥನಾಯ್ಕ,  ಶ್ರೀ ಶಿವರಾಜನಾಯ್ಕ ಬಿನ್ ಟೋಗ್ಯಾನಾಯ್ಕ ಇವರುಗಳ ಮನೆಗಳಿಗೆ ಮಳೆಯಿಂದ ಹಾನಿಯಾದ ಬಗ್ಗೆ ಪರಿಹಾರ ಬರುವಂತೆ ಕಡತ ತಯಾರಿಸಿಕೊಡಬೇಕೆಂದು ಹೇಳಿದರು. ಅದಕ್ಕೆ ನಾನು ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರಿಗೆ ವಾಸ್ತವಾಂಶದ ಬಗ್ಗೆ ವಿವರಣೆಯನ್ನು ನೀಡಿದನು, ಸದರಿ ಕಡತಗಳನ್ನು ಈ ಹಿಂದೆಯೇ ವಾಸ್ತವಾಂಶದ ವರದಿಯೊಂದಿಗೆ ಮೇಲಾಧಿಕಾರಿಗಳಿಗೆ ಸಲ್ಲಿಸಿರುವುದಾಗಿ ತಿಳಿಸಿದನು.

ಆಗ ಮಾನ್ಯ ಶಾಸಕರು ನೀನು ವಾಸ್ತವಾಂಶದ ವರದಿಯನ್ನು ಸಲ್ಲಿಸಿದರೆ ಅವರಿಗೆ ಪರಿಹಾರ ಸಿಗುವುದಿಲ್ಲ, ನಿನ್ನ ವರದಿಯನ್ನು ಬದಲಾಯಿಸು ಎಂದು ಹೇಳಿದರು. ಅದಕ್ಕೆ ನಾನು ಆಗುವುದಿಲ್ಲ ಎಂದು ತಿಳಿಸಿದರು. ಆಗ ಅವರು ತಾಲ್ಲೂಕಿನಲ್ಲಿ ಈ ತರಹ ಪ್ರಕರಣಗಳನ್ನು ನಾನೇ ಸಾಕಷ್ಟು ಮಾಡಿಸಿದ್ದೇನೆ, ‘ನಿನ್ನದೇನು ವಿಶೇಷ’, ಎಂದು ಗದರಿಸಿದರು. ಅದಕ್ಕೆ ನಾನು ಆಗುವುದಿಲ್ಲ ಸರ್ ಎಂದು ವಿನಮ್ರರಾಗಿ ತಿಳಿಸಿದನು. ಆಗ ನೀನು ಸತ್ಯಹರಿಶ್ಚಂದ್ರನಾಗಲು ಹೋಗಬೇಡ, ನಾನು ಹೇಳಿದಂತೆ ಮಾಡು ಇಲ್ಲವಾದಲ್ಲಿ ನನ್ನ ತಾಲ್ಲೂಕನ್ನು ಬಿಟ್ಟು ಬೇರೆಕಡೆ ಹೋಗು ಎಂದು ಗದರಿಸಿದರು. ಆಗ ನಾನು ಟ್ರಾನ್ಸ್‌ಫರ್ ಮಾಡಿದರೆ ಎಲ್ಲಿಗೆ ಬೇಕಾದರೂ ಹೋಗಿ ಕೆಲಸ ಮಾಡುತ್ತೇನೆ ಎಂದು ಉತ್ತರಿಸಿದೆ.

ಆಗ ಶಾಸಕರು ನೀನು ನಾಳೆಯಿಂದ ಡ್ಯೂಟಿಗೆ ಬರಬೇಡ, ರಜೆ ಹಾಕಿ ಹೋಗು ಎಂದು ಆದೇಶಿಸುವ ರೀತಿಯಲ್ಲಿ ಗದರಿಸಿದರು. ಆಗ ನಾನು ರಜೆ ಹಾಕುವುದು ನನ್ನ ವೈಯಕ್ತಿಕ ವಿಚಾರ ಎಂದು ಹೇಳಿದಾಗ, ಶಾಸಕರು ನನಗೆ ಗೆಟ್ಔಟ್ ಎಂದು ಗದರಿಸಿದರು. ತಕ್ಷಣ ನಾನು ಅವರ ಮನೆಯಿಂದ ಹೊರಗೆ ಬಂದೆ. ಶಾಸಕರು ತಾವೇ ಫೋನ್ ಕರೆಯಲ್ಲಿ ನನ್ನನ್ನು ತಮ್ಮ ಮನೆಗೆ ಕರೆಸಿ ಸಾರ್ವಜನಿಕರ ಎದುರು ಗೆಟ್ ಔಟ್ ಎಂದು ಗದರಿಸಿರುವುದು, ಒಬ್ಬ ಸಾಮಾನ್ಯ ವ್ಯಕ್ತಿಗೂ ಸಹ ತರವಲ್ಲದ ರೀತಿಯಾಗಿರುತ್ತದೆ. ಇದು ನನ್ನ ಮನಸ್ಸಿಗೆ ಸಾಕಷ್ಟು ಅವಮಾನ ಮತ್ತು ಕಸಿವಿಸಿ ಉಂಟುಮಾಡಿದಂತಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಘಟನೆ ಕುರಿತು ಜನಶಕ್ತಿ ಮೀಡಿಯಾ, ರೇಣುಕಾಚಾರ್ಯರನ್ನು ಸಂಪರ್ಕಿಸಿದಾಗ, ಆ ಕರೆಯನ್ನು ಅವರ ಪಿಎ ಸ್ವೀಕರಿಸಿದರು. ” ಸಾಹೇಬರು ಬ್ಯೂಸಿ ಇದ್ದಾರೆ, ಅವರಿಗೆ ಫೋನ್‌ ಕೊಡಲು ಸಾಧ್ಯವಿಲ್ಲ ಎಂದರು. ಈ ರೀತಿ ಅವರ ಮೇಲೆ ದೂರು ಬಂದಿದೆ ನಿಜವೇ? ಎಂದು ಕೇಳಿದಾಗ ಪ್ರತಿಕ್ರಿಯಿಸಲು ಹಿಂದೇಟು ಹಾಕಿದರು. ನಂತರ ಶಾಸಕರು ನಿಮ್ಮ ಜೊತೆ ಮಾತನಾಡುತ್ತಾರೆ ಎಂದು ವಿವರಿಸಿದರು. ಶಾಸಕರು ಪ್ರತಿಕ್ರಿಯೆ ನೀಡಿದ್ದಲ್ಲಿ ಅಪ್ಡೇಟ್‌ ಮಾಡಲಾಗುವುದು.

ಇದನ್ನೂ ಓದಿ : ಮಹಿಳೆಯರ ಮೇಲಿನ ದೌರ್ಜನ್ಯ- ಸುರಕ್ಷತೆಯ ನಿರ್ಲಕ್ಷ್ಯ

ಕೆ. ಮಹಾಂತೇಶ್

ಈ ಘಟನೆಯ ಕುರಿತು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ್ ಪ್ರತಿಕ್ರಿಯಿಸಿದ್ದು, ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೂ ಆಗಿರುವ‌ ಹೊನ್ನಾಳಿ ಶಾಸಕ‌ ಶ್ರೀ ರೇಣುಕಾಚಾರ್ಯ ಅವರು ಅತಿಸೃಷ್ಟಿಯಿಂದ ತೊಂದರೆಗೀಡಾದ ಕುಟುಂಬಗಳಿಗೆ ಸಿಗಬೇಕಾದ ಪರಿಹಾರವನ್ನು ಅನರ್ಹರಿಗೆ ಕೊಡಿಸಲು ತಮ್ಮ ಕ್ಷೇತ್ರದ ಸರ್ಕಾರಿ ನೌಕರರ ಮೇಲೆ ಒತ್ತಡ ಹೇರಿರುವ ಘಟನೆ ತೀವ್ರ ಖಂಡನಾರ್ಹ.

ಈ‌ ಸಂಬಂಧ ನ್ಯಾಮತಿ ತಾಲೂಕಿನ ಗ್ರಾಮಲೆಕ್ಕಿಗ(ವಿಎ) ಪ್ರಶಾಂತ್ ಕುಮಾರ್ ದಾವಣಗೆರೆ ಜಿಲ್ಲಾಧಿಕಾರಿ ಅವರಿಗೆ ದೂರುನೀಡಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು ನಿಯಮಬಾಹಿರವಾಗಿ ಕಂದಾಯ ಇಲಾಖೆಯಿಂದ ಸುಳ್ಳು ದಾಖಲೆ ಸೃಷ್ಟಿಸಿ ತಮ್ಮ ಕ್ಷೇತ್ರದ ಅನರ್ಹ ಜನರಿಗೆ ಲಕ್ಷಾಂತರ ರುಪಾಯಿ ನಷ್ಟವಾಗಿದೆ ಎಂದು ತೋರಿಸಲು ನನ್ನ ಮೇಲೆ ಮಾನಸಿಕ ಹಿಂಸೆ ಹಾಗೂ ಬೆದರಿಕೆ ಹಾಕಿ ನನಗೆ ಮತ್ತು ನನ್ನ ಸರ್ಕಾರಿ ಕೆಲಸಕ್ಕೆ ಚ್ಯುತಿ ತಂದಿದ್ದಾರೆ ಹೀಗಾಗಿ ಶಾಸಕ ರೇಣುಕಾಚಾರ್ಯ ಅವರ ವಿರುದ್ಧ ಕ್ರಮ ವಹಿಸಬೇಕು ಹಾಗೂ ನನಗೆ ಸರ್ಕಾರಿ ಕೆಲಸ ಮಾಡಲು ಅನುವು ಮಾಡಿ ಕೊಡಬೇಕೆಂದು ಜಿಲ್ಲಾಧಿಕಾರಿ ಅವರನ್ನು ಕೋರಿದ್ದಾರೆ. ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಹೇಗೆ ಭ್ರಷ್ಟಾಚಾರ ತಾಂಡವಾಡುತ್ತಿದೆ ಮತ್ತು ಸರ್ಕಾರಿ ಸೌಲಭ್ಯಗಳು ಹೇಗೆ ಅನರ್ಹರು ಹಾಗೂ ಬಿಜೆಪಿಯ ಬಾಲಂಗೋಚಿಗಳಿಗೆ ತಲುಪುತ್ತಿದೆ ಎನ್ನುವುದಕ್ಕೆ ಇದೊಂದು ಜ್ವಲಂತ ಉದಾಹರಣೆಯಾಗಿದೆ ಎಂದು ಮಹಾಂತೇಶ್‌ ತಿಳಿಸಿದ್ದಾರೆ.

ಆಮ್ ಆದ್ಮಿ ಪಕ್ಷದ ಹೊನ್ನಾಳಿ ತಾಲ್ಲೂಕ ಅಧ್ಯಕ್ಷ, ಗುರುಪಾದಯ್ಯ ಮಠದ ಪ್ರತಿಕ್ರಿಯಿಸಿದ್ದು,  ಮಳೆ ಹಾನಿಯಿಂದ ಬಿದ್ದ ಪ್ರದೇಶಗಳಿಗೆ ಸರಕಾರ ಪರಿಹಾರ ನೀಡುವಂತೆ ಸೂಚಿಸಿದೆ. ಆದರೆ ಶಾಸಕ ರೇಣುಕಾಚಾರ್ಯ, ತಮ್ಮ ಪ್ರಭಾವವನ್ನು ಬಳಸಿ ಬೀಳದೆ ಇರುವ ಮನೆಗಳ ದಅಖಲೆಗಳನ್ನು ಸೃಷ್ಟಿಸಿ ವಿಎ ಮತ್ತು ತಹಶೀಲ್ದಾರ್‌ಗೆ ಒತ್ತಡ ಹೇರುತ್ತಿದ್ದಾರೆ. ಇದರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಿದ್ದೇವೆ ಎಂದರು.

Donate Janashakthi Media

Leave a Reply

Your email address will not be published. Required fields are marked *