ಬಗರ್ ಹುಕುಂ-ಅರಣ್ಯ ಸಾಗುವಳಿ ರೈತ-ಕೂಲಿಕಾರರ ಹಕ್ಕು ರಕ್ಷಣೆಗಾಗಿ, ಬಲವಂತದ ಭೂ ಸ್ವಾಧೀನದ ವಿರುದ್ಧ, ರೈತ ವಿರೋಧಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ರದ್ಧತಿಗಾಗಿ, ಬಡವರ ಮನೆ ನಿವೇಶನಕ್ಕಾಗಿ, ಸಾಲಮನ್ನಾ ಹಾಗೂ ಕನಿಷ್ಟ ಬೆಂಬಲ ಬೆಲೆ ಶಾಸನಕ್ಕಾಗಿ, ಹಾಗೂ ರೈತ ವಿರೋಧಿ ಕೇಂದ್ರ ಬಜೆಟ್ ವಿರೋಧಿಸಿ, ಮತ್ತು ಇತರೆ ಬೇಡಿಕೆಗಳಿಗಾಗಿ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಗಳ ನೇತೃತ್ವದಲ್ಲಿ ಫೆಬ್ರವರಿ 10, 2025 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹಮ್ಮಿಕೊಂಡಿರುವ ಬೃಹತ್ ರೈತ-ಕೃಷಿಕೂಲಿಕಾರರ ಅಹೋರಾತ್ರಿ ಧರಣಿಯನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಕರ್ನಾಟಕ ರಾಜ್ಯ ಸಮಿತಿಯು ಬೆಂಬಲಿಸುತ್ತದೆ ಎಂದು ರಾಜ್ಯ ಕಾರ್ಯದರ್ಶಿ ಡಾ. ಕೆ.ಪ್ರಕಾಶ್ ತಿಳಿಸಿದ್ದಾರೆ.
ಹಲವು ದಶಕಗಳಿಂದ ಭೂಮಿಯಲ್ಲಿ ಉಳುಮೆ ಮಾಡುತ್ತಾ ಬಗೈರ್ ಹುಕುಂ ಅರ್ಜಿಗಳನ್ನು ಹಾಕಿಕೊಂಡು ಭೂಮಂಜೂರಾತಿಗಾಗಿ ಕಾಯುತ್ತಿರುವ ಸುಮಾರು 15 ಲಕ್ಷ ರೈತರಿಗೆ ಸರ್ಕಾರ ವಂಚನೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಭೂ ಮಂಜೂರಾತಿಗಾಗಿನ ಅರ್ಜಿಗಳನ್ನು ಸಾರಾಸಗಟಾಗಿ ವಜಾ ಮಾಡಲಾಗುತ್ತಿದೆ. ರೈತರ ಭೂಮಿಯನ್ನು ವಶಪಡಿಸಿಕೊಂಡು ಲ್ಯಾಂಡ್ ಬ್ಯಾಂಕ್ ಹೆಸರಿನಲ್ಲಿ ಕಾರ್ಪೊರೇಟ್ ಕಂಪನಿಗಳಿಗೆ ನೀಡಲು ಪ್ರಯತ್ನಗಳು ನಡೆದಿವೆ. ರೈತರನ್ನು ಭೂಮಿಯಿಂದ ಒಕ್ಕಲೆಬ್ಬಿಸುವ ಪ್ರಯತ್ನಗಳನ್ನು ಸಿಪಿಐ(ಎಂ) ವಿರೋಧಿಸುತ್ತದೆ. ಅದೇ ರೀತಿ ಅರಣ್ಯ ಕಾಯ್ದೆಯ ಅವೈಜ್ಞಾನಿಕ ಮಾನದಂಡಗಳ ಹೆಸರಲ್ಲಿ ಲಕ್ಷಾಂತರ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನಗಳು ನಡೆದಿವೆ. ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆಯನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ : ಬಲವಂತದ ಭೂ ಸ್ವಾಧೀನ ವಿರೋಧಿಸಿ ಫೆ.10 ರಿಂದ ರೈತ-ಕೃಷಿಕೂಲಿಕಾರರ ಬೃಹತ್ ವಿಧಾನ ಸೌಧ ಚಲೋ-ಅನಿರ್ದಿಷ್ಟಾವಧಿ ಧರಣಿ
ರಾಜ್ಯದಾದ್ಯಂತ ಇರುವ ಲಕ್ಷಾಂತರ ಎಕರೆ ಸರ್ಕಾರಿ ಕಂದಾಯ ಭೂಮಿಗಳನ್ನು ಪರಿಭಾವಿಸಲ್ಪಟ್ಟ ಅರಣ್ಯ ವ್ಯಾಪ್ತಿಗೆ ವರ್ಗಾಯಿಸಲಾಗಿದೆ. ಈ ರೀತಿ ವರ್ಗಾಯಿಸಲ್ಪಟ್ಟ ಭೂಮಿಗಳನ್ನು ಅರಣ್ಯ ಇಲಾಖೆ ತನ್ನ ಹೆಸರಿಗೆ ಇಂಡೀಕರಣ ಮಾಡಿಸಿಕೊಂಡು ಪೊಲೀಸ್ ರಕ್ಷಣೆಯಲ್ಲಿ ಒಕ್ಕಲೆಬ್ಬಿಸುತ್ತಿರುವುದು ತೀವ್ರ ಗತಿಯಲ್ಲಿ ನಡೆಯುತ್ತಿದೆ. ಅರಣ್ಯ ಕಾಯ್ದೆಯಲ್ಲಿರುವ ರೈತ-ವಿರೋಧಿ ಅಂಶಗಳನ್ನು ಕೈಬಿಡಬೇಕೆಂದು ಸಿಪಿಐ(ಎಂ) ಒತ್ತಾಯಿಸುತ್ತದೆ. ಕರ್ನಾಟಕದ ಭೂಸುಧಾರಣಾ ಕಾಯ್ದೆಗೆ ಹಿಂದಿನ ಬಿಜೆಪಿ ಸರ್ಕಾರ ತಿದ್ದುಪಡಿ ತಂದು, ಭೂಮಿತಿ ಮತ್ತು ಬಂಡವಾಳಿಗರು ನೇರವಾಗಿ ಭೂಮಿ ಖರೀದಿಸುವಂತಹ ಅವಕಾಶಗಳನ್ನು ನೀಡಲಾಗಿದೆ. ಇದನ್ನು ತಿದ್ದುಪಡಿ ಮಾಡುತ್ತೇವೆಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಎರಡು ವರ್ಷವಾಗುತ್ತಿದ್ದರೂ ಮಾಡಿಲ್ಲ. ಬದಲಿಗೆ ಬಿಜೆಪಿಯ ನೀತಿಗಳನ್ನೇ ಮುಂದುವರಿಸಿದೆ ಎಂದಿದ್ದಾರೆ.
ದೆಹಲಿಯಲ್ಲಿ ರೈತರ ಹೋರಾಟದಿಂದಾಗಿ ಬಿಜೆಪಿ ಸರ್ಕಾರ ಕೈಬಿಟ್ಟ ಕೃಷಿ ಕಾಯ್ದೆಗಳ ಅಂಶಗಳನ್ನೇ ಆಧರಿಸಿ ಕಾಯ್ದೆಗಳನ್ನು ರೂಪಿಸಲು ರಾಜ್ಯದ ಕಾಂಗ್ರೆಸ್ ಮುಂದಾಗಿದೆ. ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದ ಹೆಸರಲ್ಲಿ ಅಪಾರ ಪ್ರಮಾಣದಲ್ಲಿ ಭೂಮಿಯನ್ನು ನೀಡುವ ಭರವಸೆಯನ್ನು ಬಂಡವಾಳಿಗರಿಗೆ ಕಾಂಗ್ರೆಸ್ ಸರ್ಕಾರ ನೀಡುತ್ತಿದೆ. ರೈತರ ಭೂಮಿಯನ್ನು ಕಿತ್ತು ಕಾರ್ಪೊರೇಟ್‌ಗಳಿಗೆ ನೀಡುವ ಈ ಕ್ರಮವನ್ನು ಸಿಪಿಐ(ಎಂ) ವಿರೋಧಿಸುತ್ತದೆ ಎಂದಿದ್ದಾರೆ.
ಬಲವಂತದ ಭೂ ಸ್ವಾಧೀನವು ಪ್ರತಿಯೊಂದು ತಾಲ್ಲೂಕಿನಲ್ಲೂ ನಡೆಯುತ್ತಿದೆ. ನೈಸ್ ನಂತಹ ಖಾಸಗಿ ಕಂಪನಿಗಳು ಕೂಡ KIADB ಜೊತೆ ಅಕ್ರಮ ಕೂಟ ರಚಿಸಿಕೊಂಡು ಭೂ ಕಬಳಿಕೆಯಲ್ಲಿ ನಿರತವಾಗಿವೆ. ಬೆಂಗಳೂರು ಸುತ್ತಮುತ್ತ ಸುಮಾರು ನೂರು ಕಿ.ಮೀ ವ್ಯಾಪ್ತಿಯಲ್ಲಿ ಪಿ.ಆರ್.ಆರ್., ಕೆ.ಹೆಚ್.ಬಿ, ಬಿ.ಡಿ.ಎ., ಬಿ.ಎಂ.ಆರ್.ಡಿ.ಎ. ಸೇರಿದಂತೆ ವಿವಿಧ ಯೋಜನಾ ಪ್ರಾಧಿಕಾರಗಳ ಹೆಸರುಗಳಲ್ಲಿ ವ್ಯಾಪಕವಾದ ಭೂ ಸ್ವಾಧೀನ ಅಧಿಸೂಚನೆಗಳನ್ನು ಹೊರಡಿಸಲಾಗುತ್ತಿದೆ. ರೈತರ ಹಕ್ಕುಗಳಿಗೆ ಸ್ವಲ್ಪ ಅವಕಾಶ ಇದ್ದ ಭೂ ಸ್ವಾಧೀನ ಕಾಯ್ದೆ 2013 ಅನ್ನು ರಾಜ್ಯದ ಯಾವುದೇ ಭೂ ಸ್ವಾಧೀನದ ಸಂದರ್ಭದಲ್ಲಿ ಅನ್ವಯಿಸದೇ ದೊಡ್ಡ ಪ್ರಮಾಣದ ವಂಚನೆ ನಡೆಸಲಾಗುತ್ತಿದೆ. ರೈತರ ಪ್ರಜಾಸತ್ತಾತ್ಮಕ ಆಕ್ಷೇಪಣೆಗಳನ್ನು ತೀವ್ರ ದಮನದ ಮೂಲಕ ಸದೆಬಡಿಯಲಾಗುತ್ತಿದೆ.
ಇಂತಹ ಪ್ರಶ್ನೆಗಳ ಪರಿಹಾರಕ್ಕಾಗಿ ರಾಜ್ಯದ ರೈತರು ಮತ್ತು ಕೂಲಿಕಾರರು ಬೃಹತ್ ಸಂಖ್ಯೆಯಲ್ಲಿ ರಾಜಧಾನಿಯಲ್ಲಿ ಫೆಬ್ರವರಿ 10 ರಿಂದ ಅಹೋರಾತ್ರಿ ಧರಣಿಗೆ ಮುಂದಾಗಿರುವುದನ್ನು ಸಿಪಿಐ(ಎಂ) ಪಕ್ಷವು ಬೆಂಬಲಿಸುತ್ತದೆ. ರೈತರು ಮತ್ತು ಕೂಲಿಕಾರರ ಹೋರಾಟದ ಜೊತೆಯಲ್ಲಿ ನಿಲ್ಲುತ್ತದೆ. ರಾಜ್ಯ ಸರ್ಕಾರವು ಈ ಪ್ರಶ್ನೆಗಳನ್ನು ಪರಿಹರಿಸಲು ಮುಂದಾಗಬೇಕು ಎಂದು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ನೋಡಿ : ಕೇಂದ್ರ ಬಜೆಟ್ 2025 : ಬಡವರಿಗೆ ಏನೂ ಇಲ್ಲ! ಶ್ರೀಮಂತರಿಗಾಗಿ ಮಂಡಿಸಿದ ಬಜೆಟ್ Janashakthi Media