ಭಾರತವನ್ನು ಮನುವಾದಿ ಹಿಂದೂರಾಷ್ಟ್ರವನ್ನಾಗಿ ಮಾಡಲು ಬಯಸಿವೆ
ತುಮಕೂರು : ಆರೆಸ್ಸೆಸ್-ಬಿಜೆಪಿಗಳು ಸಮಾಜವನ್ನು ಮತೀಯ ನೆಲೆಗಟ್ಟಿನಲ್ಲಿ ವಿಭಜಿಸುತ್ತಿವೆ ಭಾರತವನ್ನು ಮನುವಾದಿ ಹಿಂದೂ ರಾಷ್ಟ್ರವನ್ನಾಗಿ ಮಾಡಲು ಬಯಸಿವೆ ಎಂದು ಮಾಜಿ ಶಿಕ್ಷಣ ಸಚಿವರು, ಸಿ.ಪಿ.ಐ.(ಎಂ), ಪಾಲಿಟ್ ಬ್ಯೂರೋ ಸದಸ್ಯರಾದ ಎಂ.ಎ. ಬೇಬಿಯವರು ಉದ್ಘಾಟಿಸಿದರು.
‘ಸಮಗ್ರ, ಸಮೃದ್ಧ-ಕರ್ನಾಟಕ’ಕ್ಕಾಗಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)ದ 24ನೇ ರಾಜ್ಯ ಸಮ್ಮೇಳನದ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿ.ಪಿ.ಐ.(ಎಂ) ಪ್ರಜಾಪ್ರಭುತ್ವ ತತ್ವವನ್ನು ಪಾಲಿಸುತ್ತದೆ. ಪ್ರತಿಮೂರು ವರ್ಷಕ್ಕೊಮ್ಮೆ ಶಾಖೆಯಿಂದ ರಾಷ್ಟçಮಟ್ಟದವರೆಗೆ, ಸ್ವಯಂ ಟೀಕೆಯೊಂದಿಗೆ ಪ್ರಜಾಸತ್ತಾತ್ಮಕವಾಗಿ ತನ್ನ ನೀತಿಗಳನ್ನು ಚರ್ಚೆ ಮಾಡುತ್ತದೆ. ಹೇಗೆ ರೈತ-ಕಾರ್ಮಿಕರ, ಕೃಷಿಕೂಲಿಕಾರರ, ವಿದ್ಯಾರ್ಥಿ-ಯುವಜನ ಚಳುವಳಿಯನ್ನು ಬಲಗೊಳಿಸಬಹುದು ಎಂದು ಚರ್ಚಿಸುತ್ತದೆ. ಸಿಪಿಐ(ಎಂ) ಪಕ್ಷ ಇತರ ಪಕ್ಷಗಳಂತಲ್ಲ. ಪ್ರತಿ ಹಂತದಲ್ಲೂ ನಾಯಕತ್ವವನ್ನು ಪ್ರಜಾಪತ್ತಾತ್ಮಕವಾಗಿ ಚುನಾಯಿಸಲಾಗುತ್ತದೆ. ಮೂರು ದಿನಗಳ ಪ್ರತಿನಿಧಿ ಅಧಿವೇಶನದಲ್ಲಿ ರಾಜ್ಯ ಸಮ್ಮೇಳನದಲ್ಲಿ, ಹಾಗೆಯೇ ಮುಂದಿನ ವರ್ಷ ತಮಿಳು ನಾಡಿನ ಮಧುರೈನಲ್ಲಿ ಸಿಪಿಐ(ಎಂ) ಅಖಿಲ ಭಾರತ ಮಹಾಧಿವೇಶನದಲ್ಲಿ ಪ್ರಜಾಸತ್ತಾತ್ಮಕವಾಗಿ ಚರ್ಚಿಸಲಿದೆ ಎಂದರು.
ಕೊಪ್ಪಳ ಜಿಲ್ಲೆಯ ಮರಕುಂಬಿಯಲ್ಲಿ ನಡೆದ ದಲಿತರ ಮೇಲಿನ ತೀರ್ಪು ಬಂದಿದೆ. ದಲಿತರ ಮೇಲೆ ದೌರ್ಜನ್ಯ ಎಸಗಿದ ೯೮ ಜನರಿಗೆ ಜೀವಾವಧಿ ಶಿಕ್ಷೆಯಾಗಿದೆ. ಹತ್ತು ವರ್ಷಗಳ ಹಿಂದೆ ಮನುವಾದಿ, ಜಮೀನ್ದಾರಿ ಶಕ್ತಿಗಳು ಇಡೀ ಗ್ರಾಮದ ಮೇಲೆ ಧಾಳಿ ಮಾಡಿ ದಲಿತರ ಮನೆಗಳನ್ನು ನಾಶ ಮಾಡಿದ್ದರು. ಹಲವರ ಮೇಲೆ ಹಲ್ಲೆ ಮಾಡಿದರು. ಸಂಗಾತಿ ವಿರೇಶ ಅವರನ್ನು ಕೊಲೆ ಮಾಡಿ ರೈಲ್ವೆ ಹಳಿ ಮೇಲೆ ಬಿಸಾಡಿದ್ದರು. ಆಡಳಿತ ಯಾವುದೇ ಕ್ರಮವಹಿಸಿರಲಿಲ್ಲ. ಪ್ರತಿಭಟನೆಯ ನಂತರ ಈ ಕೃಷಿ ಕೂಲಿಕಾರರ ಸಂಘಟನೆ, ಸಿಪಿಐ(ಎಂ)ಗಳ ಹೋರಾಟದಿಂದ ಜಿಲ್ಲಾಡಳಿತ ಕ್ರಮವಹಿಸಿ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ. ಕೆಂಪುಬಾವುಟ ಮಾತ್ರವೇ ಜನರಿಗೆ ಇಂತಹ ನ್ಯಾಯ ಕೊಡಿಸಲು ಸಾಧ್ಯ ಎಂಬುದು ಸಾಬೀತಾಗಿದೆ ಎಂದರು.
ನರೇಂದ್ರ ಮೋದಿ, ಆರೆಸ್ಸೆಸ್ ಬಿಜೆಪಿಗಳು ಕಳೆದ ಲೋಕಸಭಾ ಚುನಾವಣೆಯಲ್ಲಿ ೪೦೦ ಸ್ಥಾನಗಳನ್ನು ಗೆಲ್ಲಲು ಬಯಸಿದ್ದರು. ಭಾರತದ ಸಂವಿಧಾನವನ್ನು ಮೂಲಭೂತವಾಗಿ ಬದಲಾಯಿಸಿ ಭಾರತವನ್ನು ಫ್ಯಾಸಿಸ್ಟ್ ಮಾದರಿಯ ಮನುವಾದಿ ಹಿಂದೂರಾಷ್ಟçವನ್ನಾಗಿ ಮಾಡಲು ಅವರು ಬಯಸಿದ್ದರು. ಜನರು ಈ ಗುರಿಯನ್ನು ಸೋಲಿಸಿ ತೀರ್ಪು ಕೊಟ್ಟಿದ್ದಾರೆ. ಬಿಜೆಪಿ ಪಕ್ಷಕ್ಕೆ ಬಹುಮತ ನೀಡಲಿಲ್ಲ. ಬಿಜೆಪಿಯು ತೆಲುಗು ದೇಶಂ, ಜೆಡಿ(ಯು) ಪಕ್ಷಗಳ ಬೆಂಬಲದಿಂದ ಮಾತ್ರ ಸರಕಾರ ನಡೆಸಲು ಸಾಧ್ಯ. ಹೀಗಿದ್ದರೂ. ಆರೆಸ್ಸೆಸ್ ಮತ್ತು ಬಿಜೆಪಿಯವರು, ಮೋದಿಯವರು ಸಮಾಜವನ್ನು ಮತೀಯ ನೆಲೆಗಟ್ಟಿನಲ್ಲಿ ವಿಭಜಿಸಲು ಬಯಸಿದ್ದಾರೆ. ಜನರ ಐಕ್ಯತೆಯನ್ನು ಮುರಿಯುತ್ತಿದ್ದಾರೆ. ಕೋಮುಗಲಭೆಗಳನ್ನು ಹುಟ್ಟು ಹಾಕುತ್ತಿದ್ದಾರೆ. ಉತ್ತರ ಪ್ರದೇಶದ ಸಂಭಲ್‌ನಲ್ಲಿ ಕೋಮುಗಲಭೆ ಆಗಿದೆ. ಹಿಂದೂವಾಗಿದ್ದರೂ ದೇಶದ ಐಕ್ಯತೆಯ ಪರವಾಗಿ ಇರುವವರನ್ನು ಕೊಲ್ಲುತ್ತಿದ್ದಾರೆ. ವಿದ್ವಾಂಸ ಎಂ.ಎಂ ಕಲ್ಬುರ್ಗಿಯವರನ್ನು ಕೊಂದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ಬಾರ್ ಅಸೋಸಿಯೇಷನ್‌ನ ಸಭೆಯೊಂದರಲ್ಲಿ ಹಿರಿಯ ವಕೀಲ ದುಷ್ಯಂತ್ ದುವೆ ಭಾವೋದ್ವೇಗದಿಂದ ಅತ್ತರು. ದೇಶದಲ್ಲಿ ಜನರ ಐಕ್ಯತೆ ನಾಶ ಮಾಡಲಾಗುತ್ತಿದೆ ಎಂದು ಅವರು ನೊಂದಿದ್ದರು. 800 ವರ್ಷಗಳ ಹಿಂದೆ ಬಸವಣ್ಣ, ಶರಣರು ಕಾಯಕವೇ ಕೈಲಾಸ ಎಂದರು. ಈ ನೀತಿಗಳನ್ನು ನಾಶ ಮಾಡುವುದು ಆರೆಸೆಸ್ ಮತ್ತು ಬಿಜೆಪಿಗಳ ಗುರಿ. ಈ ಕೋಮುವಾದಿ, ಮನುವಾದಿ ಶಕ್ತಿಗಳನ್ನು ಸೋಲಿಸಬೇಕಿದೆ. ಎಡಪ್ರಜಾಸತ್ತಾತ್ಮಕ ಶಕ್ತಿಗಳನ್ನು ಬಲಪಡಿಸಬೇಕಿದೆ. ಅದು ಸಾಧ್ಯವಾಗಬೇಕಾದರೆ ಎಡಶಕ್ತಿಗಳನ್ನು ಹಾಗೂ ಸಿಪಿಐ(ಎಂ)ನ ಸ್ವತಂತ್ರ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದರು.
ಮೋದಿ ಸರಕಾರದ ಅಡಳಿತದಲ್ಲಿ ಜನರ ಬಡತನ ಹೆಚ್ಚಾಗುತ್ತಿದೆ. ನವೆಂಬರ್ 1, 2025 ಹೊತ್ತಿಗೆ ಎಲ್.ಡಿ.ಎಫ್. ಸರಕಾರವು ಕೇರಳ ರಾಜ್ಯದಲ್ಲಿನ ಕಡು ಕಡುಬಡತನವನ್ನು ಸಂಪೂರ್ಣ ನಿವಾರಿಸುವ ಗುರಿಯನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದೆ. ಭಾರತದಲ್ಲಿ ರಾಜ್ಯ ಸರಕಾರಗಳಿಗೆ ಸಂಪನ್ಮೂಲಗಳ ಇತಿ ಮಿತಿ ಇದೆ. ಆದರೂ ಇಂತಹ ಜನಪರ ಗುರಿಯೊಂದಿಗೆ ಎಲ್.ಡಿ.ಎಫ್. ಸರಕಾರವು ಕೆಲಸ ಮಾಡುತ್ತಿದೆ. ಈ ಸರಕಾರದ ಪ್ರಯತ್ನಗಳಿಗೆ ಕರ್ನಾಟಕದ ಜನರ ಸೌಹಾರ್ದ ಬೆಂಬಲ ಬೇಕಿದೆ ಎಂದೂ ಬೇಬಿಯವರು ಹೇಳಿದರು.
ಭಾರತ ಹಸಿವಿನ ಗಣರಾಜ್ಯ –ಎ. ವಿಜಯರಾಘವನ್
ಮಾಜಿ ಸಂಸತ್ ಸದಸ್ಯರು, ಸಿ.ಪಿ.ಐ.(ಎಂ) ಪಾಲಿಟ್ ಬ್ಯೂರೋ ಸದಸ್ಯರಾದ ಎ. ವಿಜಯರಾಘವನ್ ಅವರು ಮಾತನಾಡಿ ಭಾರತದಲ್ಲಿ ಗಣತಂತ್ರದ ‘ಅಮೃತ ಕಾಲ್’ ಅನ್ನು, ಸಂವಿಧಾನ ಅಂಗೀಕಾರದ ೭೫ ನೇ ವರ್ಷದ ಆಚರಣೆ ನಡೆಸಲಾಗುತ್ತಿದೆ. ಭಾರತವು ಜಗತ್ತಿನ ಮೂರನೇ ದೊಡ್ಡ ಆರ್ಥಿಕತೆ ಆಗುತ್ತದೆ ಎಂದು ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ. ವಾಸ್ತವ ಭಿನ್ನವಾಗಿದೆ. ಇದು ಹಸಿವಿನ ಗಣರಾಜ್ಯ, ಅತಿದೊಡ್ಡ ಸಂಖ್ಯೆ ಬಡವರು, ಅತಿಹೆಚ್ಚು ಜನ ಭೂಹೀನರು, ಅತಿಹೆಚ್ಚು ಹಸಿದವರು ಭಾರತದಲ್ಲಿ ಇದ್ದಾರೆ. ಭಾರತದಲ್ಲಿ ದಲಿತರ ಮೇಲೆ ಅತಿ ಹೆಚ್ಚು ದೌರ್ಜನ್ಯಗಳಾಗುತ್ತಿವೆ. ಸರಕಾರ ಜನರ ಮೂಲಭೂತ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದರು.
ನಮ್ಮದು ಅಸಮಾನತೆಯಿಂದ ಕೂಡಿರುವ ಸಮಾಜ. ಎಲ್ಲ ಪಕ್ಷಗಳೂ ಜನರಿಗಾಗಿ ಇದ್ದೇವೆ ಎನ್ನುತ್ತಾರೆ. ಇವರು ಶ್ರೀಮಂತರ ಮತ್ತು ಬಂಡವಾಳಗಾರರ ಆಸ್ತಿ ಹೆಚ್ಚಳ ಮಾಡುವುದಕ್ಕಾಗಿ ಅವರು ಕೆಲಸ ಮಾಡುತ್ತಾರೆ. ಕಮ್ಯೂನಿಸ್ಟ್ ಪಕ್ಷ ಕಾರ್ಮಿಕರ ಪಕ್ಷ, ಕೃಷಿ ಕೂಲಿಕಾರರ ಪಕ್ಷ, ಶೋಷಿತ ದಲಿತರ ಪಕ್ಷ, ಹೋರಾಟ ನಿರತರ ಪಕ್ಷ. ಕೆಲವು ಪಕ್ಷಗಳು ಕೆಲವೇ ಕುಟುಂಬಗಳ ಹಿಡಿತದಲ್ಲಿರುತ್ತವೆ. ಧುರೀಣರು, ನಂತರ ಅವರ ಮಕ್ಕಳು, ಮೊಮ್ಮಕ್ಕಳು ಆ ಪಕ್ಷದ ನಾಯಕತ್ವವನ್ನು ವಹಿಸಿಕೊಂಡು ಹೋಗುವ ಪಕ್ಷಗಳಾಗಿವೆ. ಸಿಪಿಐ(ಎಂ) ಆ ರೀತಿಯ ಪಕ್ಷವಲ್ಲ ಎಂದರು.
ಬಿಜೆಪಿಯು ತನಗೆ ಬಹುಮತ ಇಲ್ಲವಾದರೂ ತನ್ನ ನೀತಿಗಳನ್ನು ಬದಲಿಸಿಕೊಂಡಿಲ್ಲ. ಜನರ ಅವಶ್ಯಕ ವಸ್ತುಗಳ ಬೆಲೆ ಶೇ. 20 ರಷ್ಟು ಏರಿಕೆಯಾಗಿದೆ. ಅದರಲ್ಲಿ ಗೋಧಿ ಶೇ. 63 , ಅಕ್ಕಿ ಶೇ. ೫೩, ತರಕಾರಿ ಶೇ. 40 ಶೇ. ಹೆಚ್ಚಳ ಆಗಿವೆ. ಜಗತ್ತಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬಹಳ ಮುಂದುವರಿದಿದೆ. ಯುವಜನರು ಆಧುನಿಕ ಗುಣಮಟ್ಟದ ಶಿಕ್ಷಣ ಬಯಸುತ್ತಿದ್ದಾರೆ. ಆದರೆ ಜನರಿಗೆ ಸರಕಾರಗಳು ವಂಚನೆ ಎಸಗುತ್ತಿವೆ. ಖಾಸಗಿ ವೈದ್ಯಕೀಯ, ಇಂಜಿನೀಯರಿಂಗ್ ಕಾಲೇಜುಗಳು ಕರ್ನಾಟಕದಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿವೆ. ದೇಶದಲ್ಲೀಗ 140 ಕೋಟಿ ಜನರು. ಆದರೆ ಈ ದೇಶದ ಸರಕಾರವು ಕೇವಲ ಅದಾನಿ ಅಂಬಾನಿ, ಟಾಟಾ, ಬಿರ್ಲಾ ಮುಂತಾದ 5 ಕುಟುಂಬಗಳಿಗಾಗಿ ನಡೆಯುತ್ತಿದೆ. ಬಡವರ ಸಮಸ್ಯೆಗಳನ್ನು ಬಗೆಹರಿಸುದು ಬಿಟ್ಟು ಬಡವರನ್ನು ಶೋಷಿಸುವ ಶಕ್ತಿಗಳಿಗೆ ರಕ್ಷಣೆ ಕೊಡುವ ವ್ಯವಸ್ಥೆ ನಮ್ಮಲ್ಲಿದೆ. ಶೇ. 25 ರಷ್ಟು ಬಂದರುಗಳು, ಶೇ. 20 ವಿಮಾನ ನಿಲ್ದಾಣಗಳು, ಶೇ. 25 ಸಿಮೆಂಟ್ ಕೈಗಾರಿಕೆಗಳು, ಏರ್ ಇಂಡಿಯಾದಂತಹ ಸಂಸ್ಥೆಗಳು ಎಲ್ಲವನ್ನೂ ಈ ಬಂಡವಾಳಗಾರರಿಗೆ ಕೊಡಲಾಗುತ್ತಿದೆ. ಇಂತಹ ನೀತಿಗಳನ್ನು ಬದಲಿಸಲು ಕೆಂಬಾವುಟ ದೃಢವಾದ ಹೋರಾಟಗಳನ್ನು ನಡೆಸಲಿದೆ. ಎಲ್ಲೆಲ್ಲಿ ಎಡಪಕ್ಷಗಳು ಅಧಿಕಾರವನ್ನು ಗಳಿಸಿಕೊಳ್ಳುತ್ತವೋ ಅಲ್ಲಿ ಜನರ ಬದುಕನ್ನು ಉತ್ತಮ ಪಡಿಸಲು ಕೆಲಸ ಮಾಡುತ್ತಿದೆ.
ಕೇರಳದಲ್ಲಿ ಪ್ರಬಲವಾದ ಜಮೀನ್ದಾರಿ ವ್ಯವಸ್ಥೆ ಇತ್ತು. 1957 ರಲ್ಲಿ ಅಧಿಕಾರಕ್ಕೆ ಬಂದ ಇ.ಎಂ.ಎಸ್. ಸರಕಾರದ ಮೊತ್ತ ಕಮ್ಯೂನಿಸ್ಟ್ ಸರಕಾರ ಮೊದಲ ಆದೇಶವು ಭೂಮಿಯಿಂದ ರೈತರನ್ನು ಒಕ್ಕಲೆಬ್ಬಿಸಬಾರದು ಎಂಬುದಾಗಿತ್ತು. 1967 ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಎಡ ನೇತೃತ್ವದ ಸರಕಾರವು ‘ಉಳುವವನೇ ಭೂಮಿಯ ಒಡೆಯ’ ನೀತಿಯಂತೆ ರೈತರಿಗೆ ಭೂಮಿಯನ್ನು ಹಂಚಿತು. 28 ಲಕ್ಷ ಗೇಣಿದಾರರಿಗೆ ರಕ್ಷಣೆ ನೀಡಿತು. ಕೇರಳದಲ್ಲಿ 1970 ಜನವರಿ 1 ರ ಹೊತ್ತಿಗೆ 32 ಲಕ್ಷ ರೈತರು ಭೂಮಿಯ ಒಡೆಯರಾದರು. ಇಂತಹ ನೀತಿಗಳ ಪರಿಣಾಮವಾಗಿ ಇಡೀ ದೇಶದಲ್ಲಿ ಸಾಕ್ಷರತೆ, ಜೀವಿತಾವಧಿಯಲ್ಲಿ ಕೇರಳವು ಮೊದಲ ಸ್ಥಾನದಲ್ಲಿದೆ. ದೇಶದಲ್ಲೇ ಅತ್ಯುತ್ತಮ ಆರೋಗ್ಯ ವ್ಯವಸ್ಥೆಯನ್ನು ಹೊಂದಿದೆ. ಅತ್ಯಂತ ಹೆಚ್ಚಿನ ಮಹಿಳಾ ಸಾಕ್ಷರತೆ ಇರುವುದು ಕೇರಳದಲ್ಲಿ. ಸಂವಿಧಾನದ ಮಿತಿಗಳ ಚೌಕಟ್ಟಿನಲ್ಲಿಯೇ ರಾಜ್ಯ ಸರಕಾರವಾದ ಕೇರಳ ಸರಕಾರ ಕೆಲಸ ಮಾಡಬೇಕಿದೆ. ಇಷ್ಟಾದರೂ ಪ್ರತಿಯೊಬ್ಬರಿಗೂ ಸ್ವಂತ ಎರಡು ಕೋಣೆಗಳ ಮನೆ ಕೊಡಲು ಯೋಜನೆ ರೂಪಿಸಿದೆ. ಇಡೀ ದೇಶಕ್ಕೆ ಈ ದೃಷ್ಟಿಕೋನ ಬೇಕು. ಮೋದಿ ಸರಕಾರಕ್ಕೆ ದ್ವೇಷ ಹರಡುವುದು ಗುರಿ. ಹಣಬಲ ದೇಶದ ರಾಜಕಾರಣದಲ್ಲಿ ಎದ್ದುಕಾಣುತ್ತಿದೆ. ಬಿಜೆಪಿಯೂ ಹಣಬಲವನ್ನು ದುರ್ಬಳಕೆ ಮಾಡುತ್ತಿದೆ. ಕೋಮುವಾದವೂ ಇದಕ್ಕೆ ಸೇರಿಕೊಂಡಿದೆ. ಇತರ ಪಕ್ಷಗಳೂ ಹಣಬಲ ಬಳಸುತ್ತಿದ್ದಾರೆ. ಕರ್ನಾಟಕದಲ್ಲಿಯೂ ಹಣಬಲದ ರಾಜಕೀಯ ವಿಪರೀತ ಹೆಚ್ಚಿದೆ. ಇಲ್ಲಿ ಶಾಸಕರೊಬ್ಬರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು ಮತ್ತು ಇಂತಹದ್ದೇ ಹಲವು ವಿಚಾರಗಳಿಗಾಗಿ ಆಗಾಗ ಕರ್ನಾಟಕ ದೇಶವ್ಯಾಪಿ ಸುದ್ದಿಯಾಗುತ್ತಿರುತ್ತದೆ.
ಕೋಮುವಾದ, ಜಾತಿವಾದವನ್ನು ದುರ್ಬಳಕೆ ಮಾಡಲಾಗುತ್ತಿದೆ. ಈ ನೀತಿಗಳು ಬದಲಾಗಬೇಕು. ಶ್ರೀಮಂತರ ಪರವಾದ ನೀತಿಗಳಿಗೆ ಪರ್ಯಾಯ ನೀತಿಗಳು ಬರಬೇಕು. ಕಾರ್ಮಿಕರು, ಕೃಷಿಕೂಲಿಕಾರರು, ರೈತರು, ಶೋಷಿತರು ಸೇರಿ ಈ ಸಮಾಜದ ಸ್ವರೂಪವನ್ನು ಬದಲಿಸಬೇಕು. ಎಡಪಕ್ಷಗಳನ್ನು, ಸಿಪಿಐ(ಎಂ) ಅನ್ನು ಬಲಪಡಿಸಬೇಕು. ಮೂರು ದಿನಗಳ ಸಮ್ಮೇಳನವು ಈ ವಿಷಯಗಳನ್ನು ಚರ್ಚಿಸಲಿದೆ ಎಂದು ವಿಜಯ ರಾಘವನ್ ಹೇಳಿದರು.
ಪ್ರಗತಿಪರ ಚಿಂತಕ ದೊರೈ ರಾಜ್ ಅವರು ಮಾತನಾಡಿ ಕೊಪ್ಪಳ ಜಿಲ್ಲೆಯಲ್ಲಿ ಅಸ್ಪೃಶ್ಯರು, ದಲಿತರ ಮೇಲೆ ನಡೆದ ದೌರ್ಜನ್ಯದ ವಿರುದ್ಧ ಹೋರಾಟಕ್ಕಾಗಿ ಸಿಪಿಐ(ಎಂ) ಪಕ್ಷವನ್ನು ಅಭಿನಂದಿಸಿದರು. ತಾತ್ವಿಕ ನೆಲೆಗಟ್ಟಿರುವ ರಾಜಕೀಯ ಹೋರಾಟ ಮುಖ್ಯ. ಅಧಿಕಾರ ರಾಜಕಾರಣಕ್ಕಾಗಿ ಆರೆಸ್ಸೆಸ್‌ನಂತಹ ಸಂಘಟನೆ ಜಾತಿ-ಜಾತಿ, ಸಮುದಾಯ-ಸಮುದಾಯಗಳ ನಡುವೆ ದ್ವೇಷವನ್ನು ಹುಟ್ಟು ಹಾಕುತ್ತಿದೆ. ಅದು ವಿನಾಶದ ಸಿದ್ದಾಂತ. ಆರೆಸೆಸ್ ಬಿಜೆಪಿ ಅಧಿಕಾರ ರಾಜಕಾರಣವನ್ನು ಉದ್ಯಮವನ್ನಾಗಿ ಮಾಡಿಕೊಂಡಿವೆ. ಇಂತಹ ಶಕ್ತಿಗಳಿಗೆ ಅಧಿಕಾರ ಸಿಗದಂತೆ ಜನತೆ ರಚ್ಚರ ವಹಿಸಬೇಕಾಗಿದೆ ಎಂದರು.
ಸಿ.ಪಿ.ಐ.(ಎಂ) ರಾಜ್ಯ ಕಾರ್ಯದರ್ಶಿಮಂಡಳಿ ಸದಸ್ಯೆ ಕೆ. ನೀಲಾ ಅವರು ಮಾತನಾಡಿ, ತುಮಕೂರು ತೋಂಟದ ಎಡಯೂರು ಸಿದ್ದಲಿಂಗಸ್ವಾಮಿಯವರ ನೆಲ. 700 ಯತಿಗಳ ಊರು. ಕರ್ನಾಟಕ ರಾಜ್ಯದಲ್ಲಿ ಬರ ಬಂದಾಗ ಹಸಿದ ಜನರಿಗೆ ಅನ್ನವಿನ್ನಿಕ್ಕಿದ ಮಠ ಇಲ್ಲಿದೆ. ಅದು ಸಿದ್ದಗಂಗ ಮಠ. ಹನ್ನೆರಡನೇ ಶತಮಾನದ ಶರಣರ ಚಳುವಳಿಯ ಆಶಯವನ್ನು ನಾಶ ಮಾಡುವ ಕೆಲಸವನ್ನು ಈಗ ಆರೆಸ್ಸೆಸ್ ಬಿಜೆಪಿಗಳು ತೀವ್ರಗೊಳಿಸಿವೆ. ಉತ್ತರ ಕರ್ನಾಟಕದಲ್ಲಿ ಮುಸ್ಲಿಮರು ಯಾರೂ ಇಲ್ಲದ ಊರಿನಲ್ಲೂ ಮೋಹರಂ ಆಚರಿಸುತ್ತಾರೆ. ಜನ. ಅಂತಹ ಸೌಹಾರ್ದತೆ ಇದೆ. ಇಂದು ವಿಚಾರ ಕ್ರಾಂತಿಗೆ ಆಹ್ವಾನ ಮಾಡಿದ ಕುವೆಂಪು ಅವರ ಜನ್ಮದಿನ. ‘ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ, ಮತಿಯಿಂದ ದುಡಿಯಿರೈ ಲೋಕಹಿತಕೆ’ ಎಂದು, ಹಾಗೆಯೇ ‘ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ, ಬಡತನವ ಬುಡಮಟ್ಟ ಕೀಳಲೈತನ್ನಿ’ ಎಂದೂ ಅವರು ಕರೆ ನೀಡಿದರು.
ನಮ್ಮನ್ನು ಆಳುವವರು ಹಸಿವು, ಬಡತನವನ್ನು ಹೆಚ್ಚು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬಾಣಂತಿಯರು ಸಾಯುತ್ತಿದ್ದಾರೆ. ನಮ್ಮ ಹೊಲ ನಮ್ಮ ಕೈಯಲ್ಲಿಲ್ಲ. ಕಾರ್ಪೋರೇಟ್ ಕಂಪನಿಗಳ ಕೈಗೆ ಹೋಗುತ್ತಿದೆ. ಎಡಪಕ್ಷಗಳ ಹೋರಾಟದಿಂದ ದೇಶದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ಬಂತು. ಅದು ನಗರಕ್ಕೂ ಅಗತ್ಯವಿದೆ. ಮನುವಾದಿ ಆರೆಸ್ಸೆಸ್ ಬಿಜೆಪಿಯವರು ರಾಜ್ಯದಲ್ಲಿ ಅಸಮಾನತೆ, ಜಾತಿತಾರತಮ್ಯದ ವಿರುದ್ಧದ ವಚನ ಚಳುವಳಿ ನಡೆದೇ ಇಲ್ಲ ಎನ್ನುತ್ತಿದ್ದಾರೆ. ಸರ್ವರ ಹಿತವನ್ನು ಕಾಯುವ, ಹಸಿವನ್ನು ನಿವಾರಿಸುವ ಚಳುವಳಿ, ವಚನ ಚಳುವಳಿ. ‘ವಚನ- ನಿಜ ದರ್ಶನ’ ಪುಸ್ತಕವನ್ನು ಓದಿ, ಪ್ರಸಾರ ಮಾಡುವ ಮೂಲಕ ಸತ್ಯವನ್ನು ಹೇಳುವ ಕೆಲಸ ಮಾಡೋಣ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ್ ಅವರು ಮಾತನಾಡಿ, ಕೋಮುವಾದಿ, ಜನ ವಿರೋಧಿ ನೀತಿಗಳ ಬಿಜೆಪಿ ಸರಕಾರವನ್ನು ಸೋಲಿಸಿ ನಾವು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತಂದೆವು. ಆದರೆ ಕಾಂಗ್ರೆಸ್ ಸರಕಾರ ಜನರ ನಿರೀಕ್ಷೆಯಂತೆ ಕೆಲಸ ಮಾಡದೇ ಜನವಿರೋಧಿ ದಾರಿಯಲ್ಲಿ ಹೋಗುತ್ತಿದೆ. ತನ್ನದೇ ಸರಕಾರದ ಗ್ಯಾರಂಟಿ ಯೋಜನೆಗಳ ದುರ್ಬಲಗೊಳಿಸುತ್ತಿದೆ. ಅಂಗನವಾಡಿಗಳನ್ನು ಖಾಸಗೀಕರಿಸ ಪ್ರಯತ್ನಿಸಲಾಗುತ್ತಿದೆ. ಐ.ಟಿ. ರಂಗಲ್ಲಿ ೧೪ ಗಂಟೆಗಳ ಕೆಲಸದ ನೀತಿಯ ಜಾರಿಗೆ ಹೊರಟಿದೆ, ಇಂತಹ ನೀತಿಗಳ ವಿರುದ್ಧ ಸಿಪಿಐ(ಎಂ) ಹೋರಾಟ ರೂಪಿಸಲಿದೆ ಎಂದರು.
ಸಭೆಯ ಆರಂಭದಲ್ಲಿ ಮಾತನಾಡಿದ ಸಿ.ಪಿ.ಐ.(ಎಂ) ರಾಜ್ಯ ಕಾರ್ಯದರ್ಶಿಮಂಡಳಿ ಸದಸ್ಯ ಸೈಯ್ಯದ್ ಮುಜೀಬ್, ತುಮಕೂರಿನಲ್ಲಿ ಸ್ವಾತಂತ್ರ್ಯ ಪೂರ್ವದಲ್ಲೇ ಬೀಡಿ ಕಾರ್ಮಿಕರ ಚಳುವಳಿ, ಮುನಿಸಿಪಲ್ ಕಾರ್ಮಿಕರು, ರೈತ ಚಳುವಳಿ ಇಲ್ಲಿ ಆರಂಭವಾಗಿದೆ. ಬ್ರಿಟೀಷ್ ಪೋಲಿಸ್ ಗೋಲಿಬಾರ್‌ನಲ್ಲಿ ಮೂರು ಜನ ಹೋರಾಟಗಾರರು ತೀರಿಕೊಂಡ ಸ್ವಾತಂತ್ರ್ಯ ಚೌಕದಿಂದ ಮೆರವಣಿಗೆ ಮಾಡಿದ್ದೇವೆ. ಜಿಲ್ಲೆಯಲ್ಲಿ ಕೆ.ಆರ್. ನಾಯಕ್, ಹಾಗಲವಾಡಿ ಚೆನ್ನಪ್ಪ, ಕೃಷ್ಣಸ್ವಾಮಿ ಮುಂತಾದ ಕಮ್ಯೂನಿಸ್ಟ್ ಹೋರಾಟಗಾರರ ಹೋರಾಟದ ಪರಂಪರೆ ಇದೆ. ಆದರೆ ಈಗ ತೆಂಗು, ಅಡಿಕೆ, ಶೇಂಗಾ ಬೆಳೆ ರೈತರು ಕಷ್ಟದಲ್ಲಿದ್ದಾರೆ. ಈಲ್ಲೆಯ ಹಾಗೂ ರಾಜ್ಯದ ಜನರ ಸಂಕಷ್ಟಗಳ ಪರಿಹಾರಕ್ಕಾಗಿ ಮೂರು ದಿನಗಳ ಸಮ್ಮೇಳನ ನಡೆಯಲಿದ್ದು, ತುಮಕೂರಿನ ಜನರ ಸಹಕಾರದಿಂದ ಸಮ್ಮೇಳನ ಯಶಸ್ವಿಯಾಗುತ್ತಿದೆ ಎಂದರು.
ವೇದಿಕೆಯ ಮೇಲೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್. ರೇವಣ್ಣ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಮೀನಾಕ್ಷಿ ಸುಂದರಂ. ಕೆ.ಪ್ರಕಾಶ್, ಮುನಿವೆಂಕಟಪ್ಪ, ಗೋಪಾಲಕೃಷ್ಣ ಹರಳಹಳ್ಳಿ, ಯಾದವಶೆಟ್ಟಿ, ಕೇಂದ್ರ ಸಮಿತಿ ಸದಸ್ಯ ಕೆ.ಎನ್. ಉಮೇಶ್. ಪಕ್ಷದ ಹಿರಿಯ ನಾಯಕರಾದ ಜಿ.ಎನ್. ನಾಗರಾಜ್, ವಿಜೆಕೆ ನಾಯರ್ ಸೇರಿದಂತೆ ಅನೇಕರಿದ್ದರು.
ಡಿಸೆಂಬರ್ 29 ರಿಂದ 31 ರವರೆಗೆ ತುಮಕೂರಿನಲ್ಲಿ ನಡೆಯುತ್ತಿದ್ದು, ಈ ಸಮ್ಮೇಳನದ ಅಂಗವಾಗಿ ಬೃಹತ್ ಮೆರವಣಿಗೆಯು ಸ್ವಾತಂತ್ರ್ಯ ಚೌಕದಿಂದ ಟೌನಾ ಹಾಲ್‌ವೆರೆಗೆ ನಡೆಯಿತು. ವಿವಿಧ ಜಿಲ್ಲೆಗಳ ಪ್ರತಿನಿಧಿಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಪುಸ್ತಕ ಬಿಡುಗಡೆ : ಸಿಪಿಐ(ಎಂ) ರಾಜ್ಯ ಸಮ್ಮೇಳನದ ಭಾಗವಾಗಿ ಬಹಿರಂಗ ಸಭೆಯಲ್ಲಿ ಆರು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಗುರುರಾಜ ದೇಸಾಯಿ ಬರೆದ ಮರಕುಂಬಿ ಚಾರಿತ್ರಿಕ ತೀರ್ಪು, ಎನ್ ಕೆ ವಸಂತರಾಜ್ ಸಂಪಾದಿಸಿರುವ ಹೀಗಿದ್ದರು ಯೆಚುರಿ – ಒಡನಾಡಿಗಳ ನೆನಪು, ಅಚ್ಛೇ ದಿನ್’ ಗೆ ಸವಾಲು – ಸೀತಾರಾಂ ಯೆಚುರಿ, ವಿಶ್ವಕುಂದಾಪುರ ಕನ್ನಡಕ್ಕೆ ಅನುವಾದಿಸಿರುವ ಎ.ಕೆ.ಗೋಪಾಲನ್ – ಸಂಸತ್ತಿನಲ್ಲಿ ಒಬ್ಬ ಕಮ್ಯುನಿಸ್ಟನ ನುಡಿಗಳು, ಇಎಂಎಸ್ ರವರ, ಯಡೂರ ಮಹಾಬಲ ಕನ್ನಡಕ್ಕೆ ಅನುವಾದಿಸಿರುವ ಫ್ಯಾಸಿಸಂ, ಎರಡನೇ ಮಹಾಯುದ್ಧ ಮತ್ತು ಕ್ವಿಟ್ ಇಂಡಿಯಾ ಹೋರಾಟ ಹಾಗೂ ಪಿಚ್ಚಳ್ಳಿ ಶ್ರೀನಿವಾಸ್ ಸಂಪಾದಿಸಿರುವ ಬರುತಿಹೆವು ನಾವು ಹೋರಾಟದ ಹಾಡು ಪುಸ್ತಕಗಳು ಬಿಡುಗಡೆಗೊಂಡವು.