ಕಣ್ಣೂರು: ಕೇರಳ ರಾಜ್ಯದ ಕಣ್ಣೂರಿನಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷದ ಕಾರ್ಯಕರ್ತನೊಬ್ಬನನ್ನು ಹತ್ಯೆ ಮಾಡಲಾಗಿದೆ ಎಂಬ ವರದಿಗಳು ಬಂದಿವೆ. ಇಂದು(21.02.2022) ನಸುಕಿನ 1.30ರ ಸುಮಾರಿಗೆ ತಲಚ್ಚೇರಿಯ ನ್ಯೂ ಮಾಹೆಯಲ್ಲಿ ಈ ಘಟನೆ ನಡೆದಿದೆ.
ಕೊಲೆಯಾದವರನ್ನು ಪುನ್ನೋಲ್‌ನ ನಿವಾಸಿ ಎಂದು ಗುರುತಿಸಗಿದ್ದು, ಆತ ಮೀನುಗಾರನಾಗಿದ್ದವನು. ಸಮುದ್ರದಲ್ಲಿ ಕೆಲಸ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದ 54 ವರ್ಷದ ಕೊರಂಬಿಲ್ ಹರಿದಾಸ್ ಎಂಬಾತ ಕೊಲೆಯಾದ ವ್ಯಕ್ತಿ ಎಂದು ಪೊಲೀಸ್ ತಿಳಿಸಿದ್ದಾರೆ.
ಈ “ರಾಜಕೀಯ ಕೊಲೆ”ಯ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕರ್ತರು ಇದ್ದಾರೆ ಎಂದು ಸಿಪಿಐ(ಎಂ) ಆರೋಪಿಸಿದೆ. ವರದಿಗಳ ಪ್ರಕಾರ, ಹರಿದಾಸ್ ಅವರು ಸಿಪಿಐ(ಎಂ) ಪಕ್ಷದ ಸಕ್ರಿಯ ಸದಸ್ಯರಾಗಿದ್ದರು ಮತ್ತು ಅವರು ಕೆಲಸದಿಂದ ಮನೆಗೆ ಮರಳುತ್ತಿದ್ದಾಗ ಅವರ ಮನೆಯ ಮುಂದೆ ದಾಳಿ ಮಾಡಿದ್ದಾರೆ.
ಘಟನೆ ಬಳಿಕ ಅಕ್ಕಪಕ್ಕದಲ್ಲಿ ವಾಸವಿರುವ ಹರಿದಾಸ್ ಅವರ ಸಂಬಂಧಿಕರು ತಲಶ್ಶೇರಿಯ ಆಸ್ಪತ್ರೆಗೆ ಕರೆದೊಯ್ದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಹಲ್ಲೆ ನಡೆಸಿದ ಬಳಿಕ ನಾಲ್ವರ ತಂಡ ಎರಡು ಬೈಕ್‌ಗಳಲ್ಲಿ ಸ್ಥಳದಿಂದ ಪರಾರಿಯಾಗಿದೆ ಎಂದು ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೊಲೆ ಆರೋಪದ ಮೇಲೆ ಸಿಪಿಐ(ಎಂ) ನ್ಯೂ ಮಾಹೆ ಮತ್ತು ತಲಚ್ಚೇರಿ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸಲು ಯೋಜಿಸಿದೆ. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹತ್ಯೆಯಾದ ಕೆಲವೇ ಗಂಟೆಗಳ ನಂತರ ಕಳೆದ ವಾರದ ವೀಡಿಯೊವೊಂದು ಕಾಣಿಸಿಕೊಂಡಿತು, ಇದರಲ್ಲಿ ಸ್ಥಳೀಯ ಬಿಜೆಪಿ ನಾಯಕರೊಬ್ಬರು ತಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದವರನ್ನು ಪಕ್ಷದ ಕಾರ್ಯತಂತ್ರದ ಬಗ್ಗೆ ವಿವರಿಸುವುದು ವಿಡಿಯೋದಲ್ಲಿದೆ.
ಅಹಿತಕರ ಘಟನೆಯ ಬಳಿಕ ಕಣ್ಣೂರು ಜಿಲ್ಲೆಯಲ್ಲಿ ವಿಶೇಷವಾಗಿ ತಲಶ್ಶೇರಿಯಲ್ಲಿ ಪೊಲೀಸರು ಭದ್ರತೆಯನ್ನು ಬಲಪಡಿಸಿದ್ದಾರೆ. ಈ ಪ್ರದೇಶವು ಸಿಪಿಐ(ಎಂ) ಮತ್ತು ಸಂಘಪರಿವಾರದ ನಡುವಿನ ರಾಜಕೀಯ ಹತ್ಯೆಗಳ ಸುದೀರ್ಘ ಇತಿಹಾಸವನ್ನು ಹೊಂದಿದೆ.
ಸಿಪಿಐ(ಎಂ) ಕಣ್ಣೂರು ಜಿಲ್ಲಾ ಕಾರ್ಯದರ್ಶಿ ಎಂವಿ ಜಯರಾಜನ್ ಮಾತನಾಡಿ, ಕಣ್ಣೂರಿನಲ್ಲಿ ರಾಜಕೀಯ ಹತ್ಯೆಗಳನ್ನು ಕೈಬಿಡಲು ಇಷ್ಟಪಡದ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ತಮ್ಮ ಕ್ರೂರತೆಯನ್ನು ಪ್ರದರ್ಶಿಸುವ ಮೂಲಕ ಬಯಲು ಮಾಡಿದೆ. “ದೇವಸ್ಥಾನದಲ್ಲಿನ ಸಮಸ್ಯೆಯನ್ನು ಎರಡೂ ಕಡೆಯವರ ನಡುವೆ ಪರಿಹರಿಸಲಾಗಿದೆ ಮತ್ತು ಅದು ಯಾವುದೇ ರಾಜಕೀಯ ದ್ವೇಷವನ್ನು ಹೊಂದಿಲ್ಲ. ನಾವು ಯಾವಾಗಲೂ ಸಂಯಮದಿಂದ ಇರುತ್ತೇವೆ” ಎಂದಿದ್ದಾರೆ.
ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರು ಜನರ ಭದ್ರತೆ ಮತ್ತು ಶಾಂತಿಯನ್ನು ಹಾಳು ಮಾಡುವ ನಿರಂತರ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅಲ್ಲದೆ, ಆರೆಸ್ಸೆಸ್-ಬಿಜೆಪಿ ಗೂಂಡಾಗಳು ಪಕ್ಷದ ಮನೆಗಳಿಗೆ ನುಗ್ಗಿ ಕೊಲೆ ಮಾಡುವುದಾಗಿ ಘೋಷಿಸುವ ಮೂಲಕ ಹಿಂಸಾತ್ಮಕ ಪ್ರವೃತ್ತಿಯನ್ನು ಅನುಸರಿಸುತ್ತಿದ್ದಾರೆ. ಹತ್ಯೆಯ ಹಿಂದಿನ ಸಂಚಿನಲ್ಲಿ ಭಾಗಿಯಾದ ಎಲ್ಲರನ್ನೂ ಪತ್ತೆ ಹಚ್ಚಿ, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.