ಬೆಂಗಳುರು: ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಮತ್ತಿತರೆ ಬೇಡಿಕೆಗಳನ್ನು ಬಗೆಹರಿಸುವಂತೆ ಎಂದು ಸಿಪಿಐ(ಎಂ) ಕರ್ನಾಟಕ ರಾಜ್ಯ ಕಾರ್ಯದರ್ಶಿ ಡಾ. ಪ್ರಕಾಶ್ ಕೆ. ತಿಳಿಸಿದರು.
ಕರ್ನಾಟಕ ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳಲ್ಲಿನ ಕಾರ್ಮಿಕರು ೧.೧.೨೦೨೪ ರಿಂದ ವೇತನ ಪರಿಷ್ಕರಣೆ, ಇದರ ಹಿಂದಿನ ಅವಧಿಯ ೩೮ ತಿಂಗಳ ಹಿಂಬಾಕಿ ಮತ್ತು ಅಕ್ರಮವಾಗಿ ವಜಾ ಆಗಿರುವ ಕಾರ್ಮಿಕರ ಮರುನೇಮಕ, ಇತ್ಯಾದಿ ಬೇಡಿಕೆಗಳಿಗೆ ಆಗ್ರಹಿಸಿ ೨೦೨೫ ಆಗಸ್ಟ್ ೫ ನೇ ತಾರೀಖಿನಿಂದ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದೆ ಎಂದು ಹೆಳಿದರು.
ಸಾರಿಗೆ ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ತಾವು ಸಕಾರಾತ್ಮಕವಾಗಿ ಪರಿಹರಿಸಲು ತುರ್ತು ಮಧ್ಯಪ್ರವೇಶ ಮಾಡುವುದು ಅಗತ್ಯವಾಗಿದೆ. ತಮ್ಮ ನೇತೃತ್ವದ ರಾಜ್ಯ ಸರ್ಕಾರವು ಸಮಸ್ಯೆಗಳನ್ನು ಪರಿಹರಿಸಲು ವಿಫಲವಾದಲ್ಲಿ, ಕಾರ್ಮಿಕರ ಮುಷ್ಕರವನ್ನು ಸಿಪಿಐ(ಎಂ) ಪಕ್ಷವು ಬೆಂಬಲಿಸಲು ತೀರ್ಮಾನ ಮಾಡಿದೆ. ಆದ್ದರಿಂದ ರಾಜ್ಯದ ಜನತೆಯ ಹಿತದೃಷ್ಟಿಯಿಂದ ಮತ್ತು ಸಾರಿಗೆ ಕಾರ್ಮಿಕರ ಬದುಕಿನ ದೃಷ್ಟಿಯಿಂದ ತಾವು ಸಮಸ್ಯೆಗಳನ್ನು ಇತ್ಯರ್ಥ ಮಾಡಬೇಕೆಂದು ಸಿಪಿಐ(ಎಂ) ಒತ್ತಾಯಿಸುತ್ತದೆ. ಎಂದರು
ಹಿಂದಿನ ಬಿಜೆಪಿ ಸರ್ಕಾರ ತನ್ನ ಕೊನೆ ಕಾಲದಲ್ಲಿ ಶೇ.೧೫ ರಷ್ಟು ವೇತನ ಹೆಚ್ಚಳ ಮಾಡಿತು. ಈ ಹೆಚ್ಚಳದ ೩೮ ತಿಂಗಳ ಹಿಂಬಾಕಿಯನ್ನು ಸರ್ಕಾರ ನೀಡಬೇಕಾಗಿದೆ. ಜೊತೆಗೆ ೧.೧.೨೦೨೪ ರಿಂದ ವೇತನ ಹೆಚ್ಚಳದ ಮಾತುಕತೆ ಮಾಡಬೇಕಾಗಿದೆ. ಇದಲ್ಲದೆ ಇನ್ನೂ ಹಲವಾರು ಬೇಡಿಕೆಗಳಿವೆ. ಇವೆಲ್ಲವೂ ನ್ಯಾಯಬದ್ಧವಾಗಿ ಸಾರಿಗೆ ಕಾರ್ಮಿಕರಿಗೆ ಸಿಕ್ಕಬೇಕಾದ ಅಂಶಗಳಾಗಿವೆ.
ಹಿಂಬಾಕಿ ನೀಡಲು ಆಗುವುದಿಲ್ಲ ಎಂಬ ತಮ್ಮ ಸರ್ಕಾರದ ಧೋರಣೆಯು ಸಾರಿಗೆ ಕಾರ್ಮಿಕರಲ್ಲಿ ಅಪಾರವಾದ ಅತೃಪ್ತಿಯನ್ನು ಉಂಟು ಮಾಡಿದೆ. ಜೊತೆಗೆ ೨೦ ತಿಂಗಳಾದರೂ ಚಾಲ್ತಿ ವೇತನ ಮಾತುಕತೆ ಮಾಡದಿರುವುದರ ಬಗ್ಗೆಯೂ ಅತೃಪ್ತಿ ಹೆಚ್ಚಾಗಿದೆ.
ಸರ್ಕಾರವು ನಿರ್ಲಕ್ಷ್ಯ ಧೋರಣೆ ತಾಳುತ್ತಿದೆ ಎಂಬ ಬಗ್ಗೆ ಅತೃಪ್ತಿ ತೀವ್ರಗೊಳ್ಳುತ್ತಿದೆ. ಈ ಅತೃಪ್ತಿಯು ಕೇವಲ ಸಾರಿಗೆ ಕಾರ್ಮಿಕರಿಗೆ ಮಾತ್ರ ನಿಲ್ಲದೆ ಸಾರ್ವಜನಿಕರ ನಡುವೆಯೂ ಹಬ್ಬಲಿದೆ. ರಾತ್ರಿ ಹಗಲು ಶ್ರಮ ಹಾಕಿ ದುಡಿಯುವ ಸಾರಿಗೆ ಕಾರ್ಮಿಕರಿಗೆ ನ್ಯಾಯಬದ್ಧ ಬೇಡಿಕೆಗಳನ್ನು ಈಡೇರಿಸಿದರೆ ಹಣ ಕೊರತೆಯಾಗುತ್ತದೆ ಎಂದು ವಾದಿಸುವ ಸರ್ಕಾರ, ಒಂದು ವಿದೇಶಿ ಫಾಕ್ಸ್ ಕಾನ್ ಕಂಪನಿಗೆ ೬ ಸಾವಿರ ಕೋಟಿ ರೂಪಾಯಿ ಸಬ್ಸಿಡಿ ನೀಡಲು ಹಣದ ಕೊರತೆ ಮಾತೇ ಆಡುವುದಿಲ್ಲ ಎಂಬುದನ್ನು ಸಾರಿಗೆ ಕಾರ್ಮಿಕರು ಗಮನಿಸುತ್ತಿದ್ದಾರೆ.
ರಾಜ್ಯ ಸರ್ಕಾರವು ತಮ್ಮ ನೇತೃತ್ವದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಗ್ಯಾರಂಟಿ ಯೋಜನೆ ಪ್ರಕಟಿಸಿದ್ದು, ರಾಜ್ಯದಲ್ಲಿ ಅದರ ಯಶಸ್ಸಿಗೆ ಸಾರಿಗೆ ಕಾರ್ಮಿಕರು ಅತ್ಯಂತ ಹೆಚ್ಚಿನ ಮುತುವರ್ಜಿಯಿಂದ ಕೆಲಸ ಮಾಡುತ್ತಿದ್ದಾರೆ. ಈ ಯೋಜನೆಯಿಂದ ಸರ್ಕಾರಕ್ಕೆ ಸಿಕ್ಕಿರುವ ಗೌರವಕ್ಕೆ ತಳಹಂತದ ಸಾರಿಗೆ ಕಾರ್ಮಿಕರ ಶ್ರಮವೂ ಮುಖ್ಯ ಕಾರಣವಾಗಿದೆ. ಇಡೀ ದೇಶದಲ್ಲಿ ಕರ್ನಾಟಕ ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಅಪಾರ ಸಂಖ್ಯೆಯ ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ಈ ಪ್ರಶಸ್ತಿಗಳ ಹೆಮ್ಮೆಯ ಹಿಂದಿರುವುದು ಸಾರಿಗೆ ಕಾರ್ಮಿಕರ ಪರಿಶ್ರಮ ಎಂಬುದನ್ನು ತಾವು ಗಮನಿಸಬೇಕಾಗಿದೆ.
ತಮ್ಮ ನೇತೃತ್ವದಲ್ಲಿ ನಡೆದ ಎರಡು ಸಭೆಗಳಲ್ಲಿ ಬೇಡಿಕೆಗಳನ್ನು ಈಡೇರಿಸುವ ಸಕಾರಾತ್ಮಕ ಭರವಸೆಗಳನ್ನು ತಾವು ನೀಡಿದ್ದಿರಿ. ಆದರೆ ಜುಲೈ ೪ ರಂದು ನಡೆದ ಸಭೆಯಲ್ಲಿ ಹಿಂಬಾಕಿಯನ್ನು ತಳ್ಳಿ ಹಾಕಿರುವುದು ಏಕೆಂದು ಅರ್ಥವಾಗುತ್ತಿಲ್ಲ. ಇದ್ದಕ್ಕಿದ್ದಂತೆ ತಮ್ಮ ನಿಲುವನ್ನು ಬದಲಾಯಿಸಿಕೊಳ್ಳಲು ಕಾರಣ ತಿಳಿಯದಾಗಿದೆ.
ಪ್ರತಿದಿನವೂ ಲಕ್ಷಾಂತರ ಕರ್ನಾಟಕದ ಪ್ರಯಾಣಿಕರನ್ನು ಸಾಗಿಸುವ ಸಾರಿಗೆ ಕಾರ್ಮಿಕರು ಒಂದು ರೀತಿ ಸರ್ಕಾರದ ಮುಖವಾಣಿಯಿದ್ದಂತೆ. ಬೇಡಿಕೆಗಳನ್ನು ತಾವು ಈಡೇರಿಸಿದರೆ, ಕೋಟ್ಯಾಂತರ ಜನರ ನಡುವೆ ಪ್ರಚಾರವಾಗುತ್ತದೆ. ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ಇಂತಹ ಅವಕಾಶವನ್ನು ತಾವು ಕಳೆದುಕೊಳ್ಳಬಾರದಾಗಿ ಸಿಪಿಐ(ಎಂ) ಭಾವಿಸುತ್ತದೆ. ಆದ್ದರಿಂದ ಆಗಸ್ಟ್ ೫ ರಿಂದ ನಡೆಯುವ ಸಾರಿಗೆ ಮುಷ್ಕರವನ್ನು ತಡೆಯುವ ಪ್ರಯತ್ನವನ್ನು ತಾವು ಮಾಡಬೇಕೆಂದು ಮತ್ತು ರಾಜ್ಯದ ಜನತೆಗೆ ಆಗುವ ತೊಂದರೆಯನ್ನು ತಪ್ಪಿಸಬೇಕೆಂದು ಸಿಪಿಐ(ಎಂ) ಒತ್ತಾಯಿಸುತ್ತದೆ.
