ಮುಸ್ಲಿಮರ ಮೇಲಿನ ಕ್ರೂರ ಕೋಮು ದಾಳಿಗಳು ಹಿನ್ನಡೆಗೆ ಪ್ರತೀಕಾರದ ಬಿಜೆಪಿಯ ಪ್ರಯತ್ನ

ನವದೆಹಲಿ : ಚುನಾವಣಾ ಫಲಿತಾಂಶಗಳ ನಂತರದ ಅವಧಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಮುಸ್ಲಿಂ ಸಮುದಾಯದವರ ಮೇಲೆ ನಡೆಯುತ್ತಿರುವ ದಾಳಿಗಳ ಉಬ್ಬರವನ್ನು ಸಿಪಿಐ(ಎಂ) ಪಾಲಿಟ್ ಬ್ಯೂರೋ ಖಂಡಿಸಿದೆ.

ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ಎತ್ತುಗಳನ್ನು ಸಾಗಿಸುತ್ತಿದ್ದ ಮೂವರು ಮುಸ್ಲಿಂ ಪುರುಷರನ್ನು ಹಸು ಕಳ್ಳಸಾಗಣೆದಾರರು ಎಂದು ಬ್ರಾಂಡ್ ಮಾಡಿ ಗೋರಕ್ಷಕರು ಎಂದು ಕರೆಯುವವರಿಂದ ಕೊಲೆಗೋಡಾಗಿದ್ದಾರೆ. ಅಲಿಘರ್‌ನಲ್ಲಿ ಕಳ್ಳತನದ ಆರೋಪದ ಮೇಲೆ ಮುಸ್ಲಿಂ ವ್ಯಕ್ತಿಯನ್ನು ಹೊಡೆದು ಕೊಂದಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದೆ.

ಮಧ್ಯಪ್ರದೇಶದ ಮಂಡಲದಲ್ಲಿ ಮುಸ್ಲಿಮರ ಹನ್ನೊಂದು ಮನೆಗಳನ್ನು, ಅವರ ರೆಫ್ರಿಜರೇಟರ್ ಗಳಿಂದ “ಗೋಮಾಂಸ” ವಶಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿದ ವರದಿಗಳ 24 ಗಂಟೆಗಳ ಒಳಗೆ ಕೆಡವಲಾಯಿತು.  ಲಕ್ನೋದ ಪ್ರಧಾನವಾಗಿ ಮುಸ್ಲಿಮರು ವಾಸಿಸುವ ಪ್ರದೇಶವಾದ ಅಕ್ಬರ್‌ ನಗರದಲ್ಲಿ, ನದಿ ಮುಂಭಾಗ ನಿರ್ಮಾಣಕ್ಕಾಗಿ ಸಾವಿರ ಕುಟುಂಬಗಳ ಮನೆಗಳನ್ನು ಬುಲ್ಡೋಜರ್ ನಿಂದ ನೆಲಸಮ ಮಾಡಲಾಯಿತು ಎಂದಿದೆ.

ಗುಜರಾತ್‌ನ ವಡೋದರಾದಲ್ಲಿ. ಮುಖ್ಯಮಂತ್ರಿಗಳ ವಸತಿ ಯೋಜನೆಯಡಿ ಕಡಿಮೆ ಆದಾಯ ವರ್ಗದ ವಸತಿ ಸಮುಚ್ಚಯದಲ್ಲಿ ಮುಸ್ಲಿಂ ಮಹಿಳೆಗೆ ಫ್ಲ್ಯಾಟ್ ಮಂಜೂರು ಮಾಡಿದ್ದನ್ನು ವಿರೋಧಿಸಿ ಅಕ್ಕಪಕ್ಕದ ಹಿಂದೂ ಸಮುದಾಯಕ್ಕೆ ಸೇರಿದವರು ಬಹಿರಂಗ ಪ್ರತಿಭಟನೆ ಮಾಡಿದ್ದಾರೆ.

ಹಿಮಾಚಲ ಪ್ರದೇಶದ ನಹಾನ್‌ನಲ್ಲಿ ಈದ್-ಅಲ್-ಅಧಾ ಸಮಯದಲ್ಲಿ ಹಸುವನ್ನು ಬಲಿ ನೀಡಿದ್ದಾರೆ ಎಂಬ ಆರೋಪದ ನಂತರ ಮುಸ್ಲಿಂರೊಬ್ಬರ ಅಂಗಡಿಯನ್ನು ಲೂಟಿ ಮಾಡಿ ಧ್ವಂಸಗೊಳಿಸಲಾಗಿದೆ. ಗೋಹತ್ಯೆ ಆರೋಪದಡಿ ಅವರ ವಿರುದ್ಧ ಒಂದು ಪ್ರಕರಣವೂ ದಾಖಲಾಗಿದೆ. ಪಟ್ಟಣದಲ್ಲಿನ ಇತರ ಎಲ್ಲಾ 16 ಮುಸ್ಲಿಂ ಅಂಗಡಿ ಮಾಲೀಕರು ಘಟನೆಯ ನಂತರ ಊರು ಬಿಟ್ಟು ಪಲಾಯನ ಮಾಡಬೇಕಾಗಿ ಬಂದಿದೆ.

ದೆಹಲಿಯ ಸಂಗಮ್ ವಿಹಾರ್‌ನ ನಿವಾಸಿಗಳು ಪಲಾಯನ ಮಾಡುತ್ತಿರುವ ವರದಿಗಳಿವೆ. ಪೂಜಾ ಸ್ಥಳದ ಬಳಿ ಹಸುವಿನ ಕಳೇಬರ ಕಂಡು ಬಂದ ಮೇಲೆ, ಹಿಂದುತ್ವ ಸಂಘಟನೆಗಳ ಸದಸ್ಯರು ಮಾಡಿದ ಪ್ರಚೋದನಕಾರಿ ಭಾಷಣಗಳ ನಂತರದ ಗಂಭೀರ ಪರಿಸ್ಥಿತಿಯಿಂದಾಗಿ ಈ ಪಲಾಯನಗಳು ಸಂಭವಿಸಿವೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅನುಭವಿಸಿದ ಹಿನ್ನಡೆಯ ನಂತರ ಕೋಮುವಾದಿ ದಾಳಿಗಳ ಇಂತಹ ತೀಕ್ಷ್ಣತೆ, ಬಿಜೆಪಿ ಮತ್ತು ಹಿಂದುತ್ವ ಕೋಮುವಾದಿ ಶಕ್ತಿಗಳು ಒಂದು ನವೀಕೃತ ಪ್ರತೀಕಾರದ ಭಾವನೆಯೊಂದಿಗೆ ಧ್ರುವೀಕರಣದ ತಮ್ಮ ಪ್ರಯತ್ನಗಳನ್ನು ತೀವ್ರಗೊಳಿಸುತ್ತವೆ ಎಂಬ ವಾಸ್ತವವನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತಿವೆ.

ಸಿಪಿಐ(ಎಂ)ನ ಪೊಲಿಟ್ ಬ್ಯೂರೋ ತನ್ನ ಎಲ್ಲಾ ಘಟಕಗಳಿಗೆ ಬಿಜೆಪಿ ಮತ್ತು ಇತರ ಕೋಮುವಾದಿ ಸಂಘಟನೆಗಳ ಇಂತಹ ನಿರ್ಲಜ್ಜ ಕುತಂತ್ರಗಳ ವಿರುದ್ಧ ಜಾಗರೂಕತೆಯಿಂದ ಇರುವಂತೆ ಕರೆ ನೀಡಿದೆ. ವಾತಾವರಣವನ್ನು ಹಾಳುಗೆಡಹುವ ಕೆಟ್ಟ ಪ್ರಯತ್ನಗಳ ಮತ್ತು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಗಳ ವಿರುದ್ಧ ತಕ್ಷಣವೇ ದೇಶದಾದ್ಯಂತ ಪಕ್ಷದ ಘಟಕಗಳು ಪ್ರತಿಭಟನೆಗಳನ್ನು ಆಯೋಜಿಸಬೇಕು ಎಂದೂ ಕರೆ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *