ಚನ್ನರಾಯಪಟ್ಟಣ| ಬಲವಂತದ ಭೂಸ್ವಾಧೀನವನ್ನು ರದ್ದುಪಡಿಸಲು ಸಿಪಿಐ(ಎಂ) ಆಗ್ರಹ

ಬೆಂಗಳೂರು: ಸುಮಾರು ಮೂರೂವರೆ ವರ್ಷಗಳಿಂದ ಬಲವಂತದ ಹಾಗೂ ಅನ್ಯಾಯದ ಕೆಐಎಡಿಬಿ ಭೂ ಸ್ವಾಧೀನ ವಿರೋಧಿಸಿ ಹೋರಾಡುತ್ತಿರುವ ರೈತರ ಹಕ್ಕೋತ್ತಾಯವಾಗಿರುವ ಚನ್ನರಾಯಪಟ್ಟಣ ಹೋಬಳಿ ಭೂ ಸ್ವಾಧೀನವನ್ನು ಸಂಪೂರ್ಣ ರದ್ದುಪಡಿಸುವ ತೀರ್ಮಾನವನ್ನು ಜುಲೈ 15 ರಂದು ಕರೆದಿರುವ ಸಭೆಯಲ್ಲಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಪ್ರಕಟಿಸಬೇಕು ಎಂದು  ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಡಾ. ಕೆ ಪ್ರಕಾಶ ಆಗ್ರಹಿಸಿದ್ದಾರೆ.   ಚನ್ನರಾಯಪಟ್ಟಣ

ಕೈಗಾರಿಕಾ ಬೆಳವಣಿಗೆಯ ಉದ್ದೇಶಕ್ಕಿಂತ ಭೂಮಿ ವ್ಯಾಪಾರದ ದಂದೆಕೋರರಿಗೆ ಲಾಭ ಮಾಡಿಕೊಡುವ ಕುಖ್ಯಾತಿಯನ್ನು ರಾಜ್ಯದ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಯ ಇತಿಹಾಸ ತೋರಿಸುತ್ತದೆ. ಇದುವರೆಗೂ ಕೆಐಎಡಿಬಿ ಸ್ವಾಧೀನ ಪಡಿಸಿಕೊಂಡಿರುವ ಗಣನೀಯ ಪ್ರಮಾಣದ ಭೂಮಿ ಕೈಗಾರಿಕೆಗಳ ಸ್ಥಾಪನೆಗೆ ಬಳಕೆಯೇ ಆಗಿಲ್ಲ ಎಂಬುದನ್ನು ಗಮನಿಸಬೇಕು. ಕೈಗಾರಿಕೆ ಉದ್ದೇಶಕ್ಕೆ ಸಾಧೀನಪಡಿಸಿಕೊಂಡು ಅನ್ಯ ಉದ್ದೇಶಗಳಿಗೆ ಬಳಸಿರುವುದನ್ನೂ ಗಮನಿಸಬೇಕು. ಭೂಮಿ ಸ್ವಾಧೀನಪಡಿಸಿಕೊಂಡ ನಂತರ ರೈತರಿಗೆ ಪರಿಹಾರ ನೀಡುವಲ್ಲಿ ಮಹಾ ವಂಚನೆಗಳನ್ನೂ ಇದು ಮಾಡಿದೆ. ಭೂಸ್ವಾಧೀನ ಮಾಡಿಕೊಳ್ಳುವಾಗ ಅನುಸರಿಸಬೇಕಾದ ಪರಿಸರ, ಮಾಲಿನ್ಯ ಮತ್ತು ಸಾಮಾಜಿಕ ಪರಿಣಾಮಗಳ ಬಗ್ಗೆ ಅಧ್ಯಯನವೇ ಇಲ್ಲವಾಗಿದೆ. ಕೆಐಎಡಿಬಿ’ಯ ಇಂತಹ ಕರ್ಮ ಕಾಂಡಗಳ ಬಗ್ಗೆ ಸಿಎಜಿ ಗಂಭೀರವಾದ ಆರೋಪಗಳನ್ನು ಮಾಡಿದೆ ಎಂದು ತಿಳಿಸಿದ್ದಾರೆ. ಚನ್ನರಾಯಪಟ್ಟಣ

ಇದನ್ನೂ ಓದಿ: ಧರ್ಮಸ್ಥಳದಲ್ಲಿ ಕೊಲೆ ಪ್ರಕರಣ| 1 ಗಂಟೆ 20 ನಿಮಿಷ ಹೇಳಿಕೆ ದಾಖಲು

ಏರೋಸ್ಪೇಸ್ ಹಾಗೂ ಡಿಫೆನ್ಸ್ ಕಾರಿಡಾರ್ ಹೆಸರಿನಲ್ಲಿ ಕೆಐಎಡಿಬಿ ಹಂತ 1-2 ಮತ್ತು ಎಸ್.ಇ.ಜಡ್. ಹೆಸರಿನಲ್ಲಿ ಭೂ ಸ್ವಾಧೀನ ಮಾಡಿಕೊಂಡ ಭೂಮಿಯಲ್ಲಿ ಸಂಬಂಧಿತ ಕೈಗಾರಿಕೆಗಳು ಬರದೇ ಖಾಲಿ ಬಿದ್ದಿವೆ. ಬದಲಿಗೆ, ಕೆಐಎಡಿಬಿ’ಯ ಬೃಹತ್ ಭ್ರಷ್ಟಾಚಾರದ ಕೂಸು ಚಾಣಕ್ಯ ವಿಶ್ವವಿದ್ಯಾಲಯದಂತಹ ಕೈಗಾರಿಕೆಯೇತರ ಸಂಸ್ಥೆಗಳು ಬಂದಿವೆ. ರಿಯಲ್ ಎಸ್ಟೇಟ್ ಕಂಪನಿಗಳಿಗೆ ಭೂಮಿಗಳನ್ನು ಹಂಚಲಾಗಿದೆ.  ಕರ್ನಾಟಕದಲ್ಲಿ ಕೈಗಾರಿಕೆಗಳ ಸ್ಥಾಪನೆ ಮತ್ತು ಬೆಳವಣಿಗೆ ವಿಚಾರದಲ್ಲಿ ಸರ್ಕಾರಕ್ಕೆ ಸಮತೋಲಿತವಾದ ಕಣ್ಣೋಟವೇ ಇಲ್ಲವಾಗಿದೆ. ರಾಜ್ಯದಲ್ಲಿರುವ ಒಟ್ಟಾರೆ ಕೈಗಾರಿಕೆಗಳ ಪೈಕಿ ಅರ್ಧಕ್ಕಿಂತ ಹೆಚ್ಚಿನ ಕೈಗಾರಿಕೆಗಳು ಬೆಂಗಳೂರು ಮತ್ತು ಬೆಂಗಳೂರಿನ ಹೊರವಲ್ಲದಲ್ಲೇ ಕೇಂದ್ರೀಕೃತವಾಗಿದೆ. ಇದರಿಂದಾಗಿ ರಾಜ್ಯದಲ್ಲಿ ವಿವಿಧ ಪ್ರದೇಶಗಳ ನಡುವೆ ವಿಪರೀತವಾದ ಅಸಮತೋಲನ ಉಂಟಾಗಿದೆ. ರಾಜ್ಯ ಸರ್ಕಾರವು ನಿಜವಾಗಿಯೂ ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಕೈಗಾರಿಕೆಗಳನ್ನು ಬೆಳೆಸಬೇಕೆಂದಿದ್ದರೆ, ಹಿಂದುಳಿದ ಜಿಲ್ಲೆ ಮತ್ತು ಪ್ರದೇಶಗಳಲ್ಲಿ ಆದ್ಯತೆಯಿಂದ ಸ್ಥಾಪಿಸಲು ಮುತುವರ್ಜಿ ವಹಿಸಬೇಕು ಎಂದಿದ್ದಾರೆ. ಚನ್ನರಾಯಪಟ್ಟಣ

ಈಗಾಗಲೇ ಬೆಂಗಳೂರು ನಗರ ತನ್ನ ತಾಳಿಕೆಯ ಮಿತಿಯನ್ನು ಮೀರಿಬಿಟ್ಟಿದೆ. ಸಾರಿಗೆ, ನೀರು, ರಸ್ತೆ, ಚರಂಡಿ, ಪರಿಸರ, ನೈರ್ಮಲ್ಯ, ಶಾಲೆ, ಆಸ್ಪತ್ರೆ ಎಲ್ಲವೂ ಬಿಕ್ಕಟ್ಟಿನಲ್ಲಿವೆ. ಬೆಂಗಳೂರಿನ ಜನತೆಯ ಸುಸ್ಥಿರ ಬದುಕಿಗೆ ಆಹಾರ ಪದಾರ್ಥಗಳು, ತರಕಾರಿಗಳು, ಹಣ್ಣು ಹಂಪಲುಗಳು, ಮುಂತಾದುವನ್ನು ಒದಗಿಸುವ ಬೆಂಗಳೂರಿನ ಹೊರವಲಯದ ಕೃಷಿ ಪ್ರದೇಶಗಳು ಜೀವಧಾತುವಾಗಿವೆ. ಈ ಹಿನ್ನೆಲೆಯಲ್ಲಿ ದೇವನಹಳ್ಳಿ ತಾಲೂಕಿನ ಕೃಷಿ ಪ್ರದೇಶಗಳು ಬೆಂಗಳೂರನ್ನು ಮತ್ತು ಅದರ ಜನತೆಯನ್ನು ಕಾಪಾಡಲು ಮತ್ತು ಬೇಸಾಯದ ಬದುಕನ್ನೇ ನಂಬಿರುವ ರೈತರ ಭೂಮಿಗಳನ್ನು ಕೃಷಿ ಪ್ರದೇಶಗಳಾಗಿ ಉಳಿಸುವುದು ಅತ್ಯಗತ್ಯವಾಗಿದೆ ಎಂದು ಪ್ರಕಾಶ್‌ ತಿಳಿಸಿದ್ದಾರೆ. ಚನ್ನರಾಯಪಟ್ಟಣ

ರಾಜ್ಯದ ಕಾಂಗ್ರೆಸ್ ಸರ್ಕಾರವು ಚೆನ್ನರಾಯಪಟ್ಟಣ ಭೂಸ್ವಾಧೀನವನ್ನು ತನ್ನದೇ ನೇತೃತ್ವದ ಯುಪಿಎ-2 ಸರ್ಕಾರ ಜಾರಿಗೊಳಿಸಿದ “ದಿ ರೈಟ್ ಟು ಫೇರ್ ಕಾಂಪೆನ್ಸೇಷನ್ ಅಂಡ್ ಟ್ರಾನ್ಸಫರೆನ್ಸಿ ಇನ್ ಲ್ಯಾಂಡ್ ಅಕ್ವಿಸಿಷನ್, ರಿಹ್ಯಾಬಿಲಿಟೇಷನ್ ಅಂಡ್ ರಿಸೆಟಲಮೆಂಟ್ ಆಕ್ಟ್, 2013” ನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಆದೇಶಿಸಿರುವುದು ಅಕ್ರಮವಾಗಿದೆ. ಒಮ್ಮೆ ಅಂತಿಮ ಅಧಿಸೂಚನೆ ಹೊರಡಿಸಿದ ನಂತರ ವಾಪಸ್ ಪಡೆಯಲಾಗದು ಎಂಬ ವಾದವೂ ಅತಾರ್ಕಿಕವಾಗಿದೆ. ಅಂತಿಮ ಅಧಿಸೂಚನೆಗಳನ್ನು ವಾಪಸ್ ಪಡೆದಿರುವುದಕ್ಕೆ ಉದಾಹರಣೆಗಳು ರಾಜ್ಯದಲ್ಲೂ ಮತ್ತೂ ದೇಶದಲ್ಲಿ ಹಲವು ಇವೆ. ಪ್ರಾಥಮಿಕ ಮತ್ತು ಅಂತಿಮ ಅಧಿಸೂಚನೆ ನಡುವಿನ ಒಂದು ವರ್ಷದ ಮಿತಿಯನ್ನು ಈ ಪ್ರಕರಣವು ಮೀರಿದೆ. ಇವೆರೆಡರ ನಡುವೆ ಮೂರು ವರ್ಷಗಳಿಗೂ ಹೆಚ್ಚಿನ ಸಮಯವಾಗಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಹೀಗಾಗಿ ಕಾನೂನಾತ್ಮಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಯಾವುದೇ ದೃಷ್ಟಿಯಿಂದಲೂ ರಾಜ್ಯ ಸರ್ಕಾರ ಚೆನ್ನರಾಯಪಟ್ಟಣ ಭೂಸ್ವಾಧೀನವನ್ನು ರದ್ದುಪಡಿಸುವುದು ಅತ್ಯಂತ ಸಮಂಜಸವಾದ ದಾರಿಯಾಗಿದೆ. ಇವೆಲ್ಲವನ್ನೂ ಮೀರಿ ರಾಜ್ಯದ ಕಾಂಗ್ರೆಸ್ ಸರ್ಕಾರ ಮುಂದುವರಿದಲ್ಲಿ, ರಾಜ್ಯದ ಕಾಂಗ್ರೆಸ್ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳ ನಡುವೆ ವ್ಯತ್ಯಾಸವಿಲ್ಲವೆಂದು ರಾಜ್ಯದ ಜನತೆ ತೀರ್ಮಾನಿಸುತ್ತಾರೆ ಮತ್ತು ಹೋರಾಟಗಳನ್ನು ತೀವ್ರಗೊಳಿಸುತ್ತಾರೆ. ಸಿಪಿಐ(ಎಂ) ಈ ಹೋರಾಟದಲ್ಲಿ ಸಂಪೂರ್ಣವಾಗಿ ತನ್ನನ್ನು ತೊಡಗಿಸಿಕೊಂಡು ಹೋರಾಟವನ್ನು ವಿಸ್ತರಿಸಲು ಮತ್ತು ತೀವ್ರಗೊಳಿಸಲು ಶ್ರಮಿಸುತ್ತದೆ. ಆದ್ದರಿಂದ, ಜುಲೈ 15 ರಂದು ಮುಖ್ಯಮಂತ್ರಿಗಳು ಕರೆದಿರುವ ಸಭೆಯಲ್ಲಿ ಚೆನ್ನರಾಯಪಟ್ಟಣ ಭೂಸ್ವಾಧೀನವನ್ನು ಪೂರ್ಣವಾಗಿ ರದ್ದುಪಡಿಸುವ ತೀರ್ಮಾನವನ್ನು ಪ್ರಕಟಿಸಬೇಕೆಂದು ಪ್ರಕಾಶ್‌ ಆಗ್ರಹಿಸಿದ್ದಾರೆ.

ಇದನ್ನೂ ನೋಡಿ: ಜುಲೈ 09 ರಂದು ಕಾರ್ಮಿಕರ ಮುಷ್ಕರ | ಮುಷ್ಕರಕ್ಕೆ ಕಾರಣಗಳೇನು? – ವಿಶ್ಲೇಷಣೆ ಎಸ್‌ ವರಲಕ್ಷ್ಮಿ Janashakthi Media

Donate Janashakthi Media

Leave a Reply

Your email address will not be published. Required fields are marked *