ಜನತೆಯ ಸಂಕಟಗಳ ವಿರುದ್ಧ ಹೋರಾಟ ತೀವ್ರಗೊಳಿಸಲು ಮತ್ತು ಎಡ-ಪ್ರಜಾಸತ್ತಾತ್ಮಕ ಪರ್ಯಾಯ ರಾಜಕೀಯ ರಂಗವನ್ನು ರೂಪಿಸಲು ಸಿಪಿಐ(ಎಂ) ರಾಜ್ಯ ಸಮ್ಮೇಳನ ನಿರ್ಧಾರ

ಬೆಂಗಳೂರು: ರಾಜ್ಯದ ರೈತರು, ಕಾರ್ಮಿಕರು, ಕೂಲಿಕಾರರು, ದುರ್ಬಲ ವರ್ಗಗಳು, ಮಧ್ಯಮ ವರ್ಗಗಳು ಮತ್ತು ಇತರೆ ಜನ ವಿಭಾಗಗಳ ಮೇಲೆ ಸಂಕಟಗಳನ್ನು ಹೇರಿರುವ ಕೇಂದ್ರ-ರಾಜ್ಯ ಸರ್ಕಾರಗಳ ನೀತಿಗಳ ವಿರುದ್ಧ ಹೋರಾಟಗಳನ್ನು ತೀವ್ರಗೊಳಿಸಲು ಮತ್ತು ಕರ್ನಾಟಕದಲ್ಲಿ ಎಡ-ಪ್ರಜಾಸತ್ತಾತ್ಮಕ ಪರ್ಯಾಯ ರಾಜಕೀಯ ರಂಗವನ್ನು ರೂಪಿಸಲು ಸಿಪಿಐ(ಎಂ) ತೀರ್ಮಾನಿಸಿದೆ ಎಂದು ಸಿಪಿಐ(ಎಂ)ನ ರಾಜ್ಯ ಕಾರ್ಯದರ್ಶಿ ಡಾ. ಪ್ರಕಾಶ್ ಕೆ. ತಿಳಿಸಿದ್ದಾರೆ.

ಸಿಪಿಐ(ಎಂ) ಪಕ್ಷದ ರಾಜ್ಯ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಮೋದಿ ಸರ್ಕಾರವು ದೇಶದ ಬಹುಸಂಖ್ಯಾತ ಬಡವರನ್ನು ಬಲಿಕೊಟ್ಟು ಮತೀಯವಾದಿ ನೀತಿಗಳ ನೆರಳಲ್ಲಿ ಕಾರ್ಪೊರೇಟ್ ಬಂಡವಾಳದಾರರ ಹಿತಕ್ಕಾಗಿ ನವ-ಉದಾರವಾದಿ ನೀತಿಗಳನ್ನು ಆಕ್ರಮಣಕಾರಿಯಾಗಿ ಜಾರಿ ಮಾಡುತ್ತಿದೆ. ಇತ್ತ ರಾಜ್ಯದ ಕಾಂಗ್ರೆಸ್ ಸರ್ಕಾರವೂ ಮೋದಿ ಸರ್ಕಾರದ ರೀತಿಯ ನೀತಿಗಳನ್ನೇ ಅನುಸರಿಸುತ್ತಿದೆ ಎಂದು ಸಮ್ಮೇಳನದಲ್ಲಿ ಮಂಡಿಸಿದ ರಾಜಕೀಯ ವರದಿಯಲ್ಲಿ ವಿಶ್ಲೇಷಿಸಿದೆ. ಇದರಿಂದ ಬಡವರು, ಕೂಲಿ ಕಾರ್ಮಿಕರು, ರೈತರು, ಕಾರ್ಮಿಕರು ಮತ್ತು ಇತರೆ ದುಡಿಯುವ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬೆಲೆ ಏರಿಕೆ, ನಿರುದ್ಯೋಗ, ಉದ್ಯೋಗ ಅಔದ್ರತೆ, ರೈತರ ಬೆಳೆಗೆ ಸಿಗದ ಬೆಲೆ, ಬಲವಂತದ ಭೂಸ್ವಾಧೀನ, ಶಿಕ್ಷಣ, ಆರೋಗ್ಯ, ಮತ್ತು ಇತರೆ ನಾಗರೀಕ ಸೇವೆಗಳ ದುಬಾರಿ, ಇತ್ಯಾದಿ ಸಮಸ್ಯೆಗಳಿಂದಾಗಿ ಜರ್ಜರಿತಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ದಲಿತರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಹೆಚ್ಚಿನ ಸಮಸ್ಯೆಗಳನ್ನು ಅನುಭವಿಸುತ್ತಿರುವ ಕುರಿತು ಸಮ್ಮೇಳನ ಆತಂಕ ವ್ಯಕ್ತಪಡಿಸಿದೆ ಎಂದರು.

ಆರ್.ಎಸ್.ಎಸ್. ಮತ್ತು ಅದರ ಪರಿವಾರವು ಧಾರ್ಮಿಕ ಹಾಗೂ ಜನರ ಧಾರ್ಮಿಕ ನಂಬಿಕೆಗಳನ್ನು ದುರುಪಯೋಗಪಡಿಸಿಕೊಂಡು ಮತೀಯವಾದಿ ನೆಲೆಯಲ್ಲಿ ಜನರ ಐಕ್ಯತೆಯನ್ನು ಮುರಿಯಲು ನಡೆಸುತ್ತಿರುವ ಪ್ರಯತ್ನಗಳನ್ನು ಹತ್ತಿಕ್ಕುವಲ್ಲಿ ರಾಜ್ಯ ಸರ್ಕಾರವು ವಿಫಲವಾಗಿದೆ ಎಂದು ಸಮ್ಮೇಳನವು ಅಭಿಪ್ರಾಯಪಟ್ಟಿದೆ. ಕೋಮು ವಿಭಜನೆ ತಡೆಗಟ್ಟುವ ವಿಚಾರದಲ್ಲಿ ಹಾಗೂ ಜನತೆಯ ಐಕ್ಯತೆಯನ್ನು ಕಾಪಾಡಲು ಸಿಪಿಐ(ಎಂ)ನ ಕಾರ್ಯಕರ್ತರು ಮುಂಚೂಣಿಯಲ್ಲಿರುವಂತೆ ಪಕ್ಷದ ಕಾರ್ಯಕರ್ತರಿಗೆ ಸಮ್ಮೇಳನವು ಕರೆ ನೀಡಿದೆ. ಎಂದು ತಿಳಿಸಿದರು.

ಭೂರಹಿತ ಕುಟುಂಬಗಳಿಗೆ ಮನೆ ನಿವೇಶನ, ಅರಣ್ಯ ಸಾಗುವಳಿದಾರರಿಗೆ ರಕ್ಷಣೆ, ಬಲವಂತದ ಭೂಸ್ವಾಧೀನ ಕೈಬಿಡಲು, ಕರಾಳ ಕೃಷಿ ಕಾಯ್ದೆಗಳ ರದ್ದತಿಗಾಗಿ, ಸಾರ್ವಜನಿಕ ಆಸ್ತಿಗಳ ಖಾಸಗೀಕರಣದ ವಿರುದ್ಧ, ಫೆಬ್ರವರಿ 10 ರಂದು ತಿಂಗಳಲ್ಲಿ ನಡೆಯುವ ಪಾದಯಾತ್ರೆಗೆ ಬೆಂಬಲ, ಐಸಿಡಿಎಸ್ ಯೋಜನೆ ದುರ್ಬಲಗೊಳಿಸುವುದರ ವಿರುದ್ಧ, ದಲಿತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳಿಗೆ ಕಡಿವಾಣಕ್ಕೆ ಒತ್ತಾಯಿಸಿ, ಸಾರ್ವಜನಿಕ ಪಡಿತರ ವ್ಯವಸ್ಥೆ ಬಲಪಡಿಸಲು ಹಾಗೂ ಬಡವರ ಬಿಪಿಎಲ್ ಕಾರ್ಡ್ ರದ್ಧತಿ ವಿರೋಧಿಸಿ, ಸಾಗರ ಮಾಲಆ ಯೋಜನೆಯಿಂದ ಕರಾವಳಿ ಜನರ ಮೇಲಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳ ನಿವಾರಣೆಗೆ ಒತ್ತಾಯಿಸಿ, ಕೃತಕ ಬುದ್ಧಮತ್ತೆಯಿಂದ ಹೆಚ್ಚುತ್ತಿರುವ ಉದ್ಯೋಗ ನಷ್ಟವನ್ನು ತಡೆಗಟ್ಟಲು, ಕೈಗಾರಿಕಾ ಉದ್ಯೋಗ (ಸ್ಥಾಯಿ ಆದೇಶ) ಕಾಯ್ದೆಯಿಂದ ಐಟಿ/ಐಟಿಇಎಸ್ ವಲಯಕ್ಕೆ ವಿನಾಯಿತಿ ನೀಡಿರುವುದನ್ನು ವಿರೋಧಿಸಿ, ಬಿಬಿಎಂಪಿ, ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳನ್ನು ಶೀಘ್ರವೇ ನಡೆಸುವಂತೆ ಒತ್ತಾಯಿಸುವ ನಿರ್ಣಯಗಳು ಸೇರಿದಂತೆ 33 ನಿರ್ಣಯಗಳನ್ನು ಸಮ್ಮೇಳನವು ಅಂಗೀಕರಿಸಿದೆ. ಅಸಂಘಟಿತ ಕಾರ್ಮಿಕರಿಗೆ ಸಮಗ್ರ ಸಾಮಾಜಿಕ ಭದ್ರತೆ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರು, ಅಂಗನವಾಡಿ, ಬಿಸಿಯೂಟ, ಪಂಚಾಯಿತಿ, ಹಮಾಲಿ, ಸಾರಿಗೆ ಇತ್ಯಾದಿ ಶ್ರಮಜೀವಿ ವರ್ಗಗಳ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಸಮ್ಮೇಳನ ನಿರ್ಣಯ ಕೈಗೊಂಡಿದೆ ಮತ್ತು ಈ ನಿಟ್ಟಿನಲ್ಲಿ ನಡೆಯುವ ಹೋರಾಟಗಳನ್ನು ಬೆಂಬಲಿಸಲು ತೀರ್ಮಾನಿಸಿದೆ ಎಂದರು.

ಇದನ್ನೂ ಓದಿ : ದೇಗುಲಗಳಲ್ಲಿ ಪುರುಷರು ಮೇಲಂಗಿ ಕಳಚುವ ಪದ್ಧತಿ ಕೈಬಿಡಲು ಚಿಂತನೆ: ಸಿಎಂ ಪಿಣರಾಯಿ ವಿಜಯನ್

ಆರ್ಥಿಕ ಮತ್ತು ಸಾಮಾಜಿಕ ನೀತಿಗಳಲ್ಲಿ ವ್ಯತ್ಯಾಸವಿಲ್ಲದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳು ಕಾರ್ಯನಿರ್ವಹಿಸುತ್ತಿರುವುದನ್ನು ಸಮ್ಮೇಳನವು ಗುರುತಿಸಿದೆ. ಜನರ ಸಂಕಷ್ಟಗಳನ್ನು ದುರುಪಯೋಗ ಪಡಿಸಿಕೊಂಡು ಕೋಮುವಾದವನ್ನು ಬೆಳೆಸಲಾಗುತ್ತಿದೆ. ಜನತೆಗೆ ನೀತಿಗಳ ಪರ್ಯಾಯ ಮತ್ತು ರಾಜಕೀಯ ಪರ್ಯಾಯ ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಜನತೆಗೆ ಅಗತ್ಯವಾದ ಒಂದು ಎಡ-ಪ್ರಜಾಸತ್ತಾತ್ಮಕ ಶಕ್ತಿಗಳ ಪರ್ಯಾಯ ರಾಜಕೀಯ ರಂಗವನ್ನು ರೂಪಿಸಲು ಸಿಪಿಐ(ಎಂ) ರಾಜ್ಯ ಸಮ್ಮೇಳನವು ತೀರ್ಮಾನಿಸಿದೆ. ರಾಜ್ಯದ ಎಡ ಪಕ್ಷಗಳು ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳು, ಸಂಘಟನೆಗಳು, ಶಕ್ತಿಗಳು ಮತ್ತು ವ್ಯಕ್ತಿಗಳನ್ನು ಒಗ್ಗೂಡಿಸಿ ಈ ರಂಗವನ್ನು ಕಟ್ಟಲು ಉದ್ದೇಶಿಸಲಾಗಿದೆ.

ಹೋರಾಟಗಳು ಮತ್ತು ಆಂದೋಲನಗಳಲ್ಲಿ ಸಿಪಿಐ(ಎಂ) ಮತ್ತು ಇತರೆ ಕಮ್ಯುನಿಸ್ಟ್ ಪಕ್ಷಗಳು ಮುಂಚೂಣಿಯಲ್ಲಿದ್ದರೂ ಚುನಾವಣೆಗಳಲ್ಲಿ ಕಮ್ಯುನಿಸ್ಟ್ ಪಕ್ಷಗಳ ಮತಗಳಿಕೆ ಪ್ರಮಾಣ ಕುಸಿಯುತ್ತಿರುವುದನ್ನು ಗಂಭೀರವಾಗಿ ಸಮ್ಮೇಳನವು ವಿಮರ್ಶಿಸಿದೆ. ಕೆಳಹಂತದ ಪಕ್ಷ ಸಂಘಟನೆಗೆ ಒತ್ತು ಮತ್ತು ಸಮೂಹಗಳ ರಾಜಕೀಯ ಪ್ರಜ್ಞೆಯನ್ನು ಎತ್ತರಿಸಬೇಕೆಂದು ಸಮ್ಮೇಳನವು ತೀರ್ಮಾನ ಮಾಡಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಗೋಪಾಲಕೃಷ್ಣ ಹರಳಹಳ್ಳಿ,  ಸೈಯದ್‌ ಮುಜೀಬ್‌, ಎಂ.ಪಿ. ಮುನಿವೆಂಕಟಪ್ಪ, ಕೆ. ಮಹಾಂತೇಶ್‌, ಚಂದ್ರಪ್ಪ ಹೋಸ್ಕೇರಾ ಇದ್ದರು.

ಇದನ್ನೂ ನೋಡಿ : ಅಂಬೇಡ್ಕರ್ ನಮಗೆ ವ್ಯಸನ‌ ಅಲ್ಲ, ನಿತ್ಯ ಸ್ಮರಣೆ! -ಸಂತೋಷ್ ಲಾಡ್ Janashakthi Media

Donate Janashakthi Media

Leave a Reply

Your email address will not be published. Required fields are marked *