ಸಿಪಿಐಎಂ ನಾಯಕ ಸೀತಾರಾಂ ಯೆಚೂರಿ ಇನ್ನಿಲ್ಲ

ನವದೆಹಲಿ : ತೀವ್ರ ಶ್ವಾಸಕೋಶದ ಸೋಂಕಿನಿಂದಾಗಿ ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

72 ವರ್ಷದ ಯೆಚೂರಿ ಅವರನ್ನು ಆಗಸ್ಟ್ 19 ರಂದು ನ್ಯುಮೋನಿಯಾ ತರಹದ ಎದೆ ಸೋಂಕಿನ ಚಿಕಿತ್ಸೆಗಾಗಿ ಏಮ್ಸ್‌ಗೆ ದಾಖಲಿಸಲಾಗಿತ್ತು. ಅವರು ವೆಂಟಿಲೇಟರ್ ನಲ್ಲಿದ್ದು, ವೈದ್ಯರ ತಂಡ ಅವರನ್ನು ಉಳಿಸಲು ಸಾಕಷ್ಟು ಪ್ರಯತ್ನ ನಡೆಸಿತ್ತು.

ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (SFI) ಮೂಲಕ ಸಾರ್ವಜನಿಕ ರಂಗ ಪ್ರವೇಶಿಸಿದ ಯೆಚೂರಿ, 1975 ರಲ್ಲಿ ಸೀತಾರಾಮ್ ಯೆಚೂರಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಸದಸ್ಯತ್ವ ಪಡೆದರು. ಮೂರು ಅವಧಿಗೆ ಸಿಪಿಐಎಂ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಇಂಡಿಯಾಕೂಟ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ (ಜೆಎನ್‌ಯು) ವಿದ್ಯಾರ್ಥಿಯಾಗಿದ್ದಾಗ ತುರ್ತು ಪರಿಸ್ಥಿತಿಯ ಸಮಯದಲ್ಲಿ ಅವರನ್ನು ಬಂಧಿಸಲಾಗಿತ್ತು. 1977 ಮತ್ತು 1988 ರ ನಡುವೆ ಮೂರು ಬಾರಿ ಜೆಎನ್‌ಯು ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

2004 ರಲ್ಲಿ ಯುಪಿಎ ಸರ್ಕಾರವನ್ನು ರಚಿಸುವಲ್ಲಿ ಸೀತಾರಾಂ ಯೆಚೂರಿ ಮಹತ್ವದ ಪಾತ್ರವನ್ನು ವಹಿಸಿದರು. ಇತ್ತೀಚೆಗೆ 45 ಲ್ಯಾಟರಲ್ ಎಂಟ್ರಿ ಅಧಿಕಾರಿಗಳ ನೇಮಕ ಜಾಹೀರಾತು ಕುರಿತು ಕೇಂದ್ರ ಸರ್ಕಾರದ ವಿರುದ್ಧ ಯೆಚೂರಿ ತೀವ್ರ ಟೀಕೆ ಮಾಡಿದ್ದರು. ನಂತರ ಕೇಂದ್ರ ಸರ್ಕಾರ ಆ ಹುದ್ದೆಗಳ ಜಾಹೀರಾತನ್ನು ಹಿಂಪಡೆದಿತ್ತು.

 

Donate Janashakthi Media

Leave a Reply

Your email address will not be published. Required fields are marked *