ಬಸ್ ಪ್ರಯಾಣ ದರ ಶೇ.15 ರಷ್ಟು ಹೆಚ್ಚಳ ಖಂಡಿಸಿ ಸಿಪಿಐ(ಎಂ) ಪ್ರತಿಭಟನೆ

ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ಪ್ರಯಾಣಿಕರ ಸಾರಿಗೆ ದರಗಳು ಶೇಕಡ 15 ರಷ್ಟು ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಸಿಪಿಐ(ಎಂ) ಬೆಂಗಳೂರು ಜಿಲ್ಲಾ ಸಮಿತಿಗಳು ಖಂಡಿಸುತ್ತವೆ. ಡೀಸೆಲ್ ದರಗಳ ಹೆಚ್ಚಳ ಮತ್ತು ಸಿಬ್ಬಂದಿ ವೆಚ್ಚ ಹೆಚ್ಚಳದ ನೆಪದಲ್ಲಿ ದರ ಏರಿಕೆ ಮಾಡಿರುವುದು ಅಪ್ರಜಾಸತ್ತಾತ್ಮಕ ಮತ್ತು ಅವೈಜ್ಞಾನಿಕವಾಗಿದೆ. ಮೇಲಾಗಿ ಸಾಮಾನ್ಯ ಜನರ ವಿರೋಧಿಯಾಗಿದೆ ಎಂದು ಸಿಪಿಐ(ಎಂ)  ಪಕ್ಷದ ನಾಯಕರು ಫ್ರೀಡಂ ಪಾರ್ಕ್‌ ಬಳಿ ಪ್ರತಿಭಟನೆ ನಡೆಸಿದರು.  ಬಸ್ 

ಡೀಸೆಲ್ ಹೆಚ್ಚಳವಾಗಿದೆ ಎನ್ನುವ ಸರ್ಕಾರ, ಡೀಸೆಲ್ ದರ ಇಳಿದಾಗ ದರಗಳನ್ನು ಎಂದಾದರೂ ಕಡಿಮೆ ಮಾಡಿದೆಯೇ?  ಅದಕ್ಕಿಂತ ಮುಖ್ಯವಾಗಿ ಸಾರ್ವಜನಿಕ ಸಾರಿಗೆಯ ಡೀಸೆಲ್ ದರಗಳನ್ನು ಕಡಿಮೆ ಇಡಬೇಕಾದ್ದು ಸರಕಾರದ ಜವಾಬ್ದಾರಿಯಾಗಿದೆ. ವಿಪರ್ಯಾಸವೆಂದರೆ ಸಾರಿಗೆ ನಿಗಮಗಳಿಗೆ ಪೂರೈಸುವ ಡೀಸೆಲ್ ದರವು ಮುಕ್ತ ಮಾರುಕಟ್ಟೆ ದರಗಳಿಗಿಂತ ದುಬಾರಿಯಾಗಿದೆ. ಸರಕಾರಕ್ಕೆ ನಿಜಕ್ಕೂ ವೆಚ್ಚವನ್ನು ಕಡಿಮೆ ಮಾಡಬೇಕೆಂದಿದ್ದರೆ ಸಾರಿಗೆ ನಿಗಮಗಳಿಗೆ ಪೂರೈಸುವ ಡೀಸೆಲ್ ದರವನ್ನು ಸಬ್ಸಿಡಿ ದರದಲ್ಲಿ ಪೂರೈಸಬೇಕು ಅಥವಾ ಮುಕ್ತ ಮಾರುಕಟ್ಟೆ ದರಗಳಲ್ಲಾದರೂ ಪೂರೈಸಬೇಕು. ಆದ್ದರಿಂದ ಶೇಕಡ 15ರ ದರ ಹೆಚ್ಚಳಕ್ಕೆ ಡೀಸೆಲ್ ದರ ಹೆಚ್ಚಳ ಕಾರಣ ಎನ್ನುವುದು ಸುಳ್ಳು ನೆಪವಾಗಿದೆ ಎಂದು ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ : ಸಾರಿಗೆ ನೌಕರರ ಕುಟುಂಬದವರಿಗೆ ನಗದು ರಹಿತ ಚಿಕಿತ್ಸಾ ಯೋಜನೆ ಅತ್ಯಂತ ಉತ್ತಮ ಕಾರ್ಯಕ್ರಮ: ಸಿಎಂ ಸಿದ್ದರಾಮಯ್ಯ

ಸಿಬ್ಬಂದಿ ವೆಚ್ಚ ಹೆಚ್ಚಳವಾಗಿರುವುದು ಮತ್ತೊಂದು ಕಾರಣವೆನ್ನಲಾಗಿದೆ. ಈಗಾಗಲೇ ನಾಲ್ಕು ನಿಗಮಗಳಲ್ಲಿ ಸಿಬ್ಬಂದಿಗಳಿಗೆ ಸುಮಾರು 3 ವರ್ಷಗಳ ವೇತನ ಬಾಕಿ ನೀಡಬೇಕಿದೆ ಮತ್ತು ಹೊಸ ವೇತನ ಒಪ್ಪಂದ ಮಾಡಬೇಕಿದೆ. 1950 ರ ಆರ್.ಟಿ.ಸಿ ಕಾಯ್ದೆ ಪ್ರಕಾರ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಸರ್ಕಾರ ಬಜೆಟ್ ಬೆಂಬಲ ನೀಡುವುದು ಅಗತ್ಯ. ಏಕೆಂದರೆ ಸಾರ್ವಜನಿಕ ಹಿತ ದೃಷ್ಟಿಯಿಂದ ಒದಗಿಸುವ ಸಾರಿಗೆಯನ್ನು ಲಾಭ ನಷ್ಟದ ಲೆಕ್ಕದಲ್ಲಿ ನೋಡಬಾರದು. ನಷ್ಟ ಉಂಟಾದಲ್ಲಿ ಸರಕಾರ ಅದನ್ನು ಭರಿಸಬೇಕಾಗುತ್ತದೆ. ಸಾರ್ವಜನಿಕ ಸಾರಿಗೆಗಳು ಎಲ್ಲಾ ಸಂದರ್ಭಗಳಲ್ಲೂ ಲಾಭವನ್ನು ತರಲು ಆಗುವುದಿಲ್ಲ. ಸಾರಿಗೆ ನಿಗಮಗಳ ಅರ್ಧದಷ್ಟು ಮಾರ್ಗ ಕಾರ್ಯಾಚರಣೆಗಳು ಗ್ರಾಮಾಂತರದಲ್ಲಿ ಇರುವುದರಿಂದ ಸಹಜವಾಗಿಯೇ ನಷ್ಟ ಹೊಂದುತ್ತದೆ. ಜನರ ಹಿತದೃಷ್ಟಿಯಿಂದ ಸರಕಾರ ಅದನ್ನು ಭರಿಸಬೇಕು. ಅದರ ಬದಲಿಗೆ ಬೆಲೆ ಹೆಚ್ಚಳ ಮಾಡುವುದು ಜನ ವಿರೋಧಿ ನಡೆಯಾಗಿದೆ ಎಂದು ಆರೋಪಿಸಿದರು.

ಸಾರಿಗೆ ನಿಗಮಗಳ ನಷ್ಟ ಕಡಿಮೆ ಮಾಡಲು ಸಾರ್ವಜನಿಕರ, ರಾಜಕೀಯ ಪಕ್ಷಗಳ ಸಲಹೆಗಳನ್ನು ಆಡಳಿತ ವರ್ಗ ಪಡೆಯಬಹುದು. ಆಡಳಿತಾತ್ಮಕ ವಿಧಾನಗಳಲ್ಲಿ ಸಾಕಷ್ಟು ನಷ್ಟ ಕಡಿಮೆ ಮಾಡಬಹುದು. ಪ್ರಯಾಣಿಕರ ಸಾರಿಗೆ ದರ ಹೆಚ್ಚಳ ಉತ್ತಮ ಮಾರ್ಗವಲ್ಲ. ಎಲೆಕ್ಟ್ರಿಕ್ ಬಸ್ಸುಗಳನ್ನು ನಿಗಮಗಳೇ ಕಾರ್ಯಾಚರಣೆಯನ್ನು ಮಾಡಿದರೆ ಸಾಕಷ್ಟು ಆದಾಯ ಹೆಚ್ಚುತ್ತದೆ. ಖಾಸಗಿ ಕಂಪನಿಗಳ ಜೊತೆ ದುಬಾರಿ ಒಪ್ಪಂದಗಳನ್ನು ಮಾಡಿಕೊಂಡು ನಿಗಮಗಳೇ ನಷ್ಟ ಉಂಟು ಮಾಡಿಕೊಳ್ಳುತ್ತಿವೆ. ನಿಗಮಗಳ ಬಸ್ಸುಗಳ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡುವ ಮೂಲಕ ನಷ್ಟ ಕಡಿಮೆ ಮಾಡಬಹುದು ಎಂದು ಸಿಪಿಐ(ಎಂ) ತಿಳಿಸಿದೆ.

ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದ ನರಳುತ್ತಿರುವ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ರಾಜ್ಯ ಸರ್ಕಾರದ ಬಸ್ ಪ್ರಯಾಣ ದರ ಹೆಚ್ಚಳದ ತೀರ್ಮಾನವನ್ನು ವಾಪಸ್ಸು ಪಡೆಯಬೇಕೆಂದು ಸಿಪಿಐ(ಎಂ) ಆಗ್ರಹಿಸಿದೆ.

ಪ್ರತಿಭಟನೆಯಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಕೆ. ಪ್ರಕಾಶ್, ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಸ್. ವರಲಕ್ಷ್ಮಿ, ಕೆ. ಮಹಾಂತೇಶ್ , ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಬಿ. ಎನ್ ಮಂಜುನಾಥ್, ಮುಖಂಡರಾದ ಕೆ.ಎಸ್. ವಿಮಲಾ, ಗೌರಮ್ಮ, ಕೆ.ಎಸ್ ಲಕ್ಷ್ಮಿ. ಶ್ರೀಪತಿ, ನಾಗರಾಜ, ಟಿ ಸುರೇಂದ್ರರಾವ್, ಹನುಮಂತರಾವ್ ಹವಲ್ದಾರ್, ರಾಜಣ್ಣ, ಎಚ್.ಎನ್. ಗೋಪಾಲಗೌಡ ಸೇರಿದಂತೆ ಅನೇಕರಿದ್ದರು.

ಇದನ್ನೂ ನೋಡಿ : ಬಸ್‌ ‍ಪ್ರಯಾಣ ದರ ಹೆಚ್ಚಳ ವಿರೋಧಿಸಿ ಸಿಪಿಐ(ಎಂ) ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *