ಬೆಂಗಳೂರು | ಸಂಸದರ ಅಮಾನತು ವಿರೋಧಿಸಿ ಸಿಪಿಐ(ಎಂ) ಪ್ರತಿಭಟನೆ

ಬೆಂಗಳೂರು: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ 146 ಪ್ರತಿಪಕ್ಷಗಳ ಸಂಸದರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ಸಿಪಿಐ(ಎಂ) ರಾಜ್ಯದ ಹಲವು ಭಾಗಗಳಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದೆ. ನಗರದಲ್ಲಿರುವ ಪಕ್ಷದ ರಾಜ್ಯ ಕಚೇರಿ ಮುಂಭಾಗ, ಬಸವನಗುಡಿಯ ಜ್ಯೋತಿ ಬಸು ಭವನ, ದಕ್ಷಿಣ ಕನ್ನಡದ ಬೆಳ್ತಂಗಡಿ ಮತ್ತು ತುಮಕೂರಿನಲ್ಲಿ‌ ಪಕ್ಷವು ಪ್ರತಿಭಟನೆ ನಡೆಸಿದೆ. ಕೇಂದ್ರ ಸರ್ಕಾರ ನಡೆಯನ್ನು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಘನತೆಯನ್ನು ಹಾಳುಗೆಡುವುವ ಪ್ರಜಾಪ್ರಭುತ್ವ ವಿರೋಧಿ  ನಡೆ ಎಂದು ಟೀಕಿಸಿರುವ ಪಕ್ಷವು ಸಂಸದರ ಅಮಾನತನ್ನು ತೀವ್ರವಾಗಿ ಖಂಡಿಸಿದೆ.

ಬೆಂಗಳೂರಿನ ಬಸವನಗುಡಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜು ಅವರು, “ಕಾರ್ಪೊರೇಟ್ ಬಂಡವಾಳದಾರರ ಲೂಟಿಯಾಗಿ ಸಂಸತ್ತನ್ನೂ ಬಲಿಕೊಡಲು ಮೋದಿ ಸರ್ಕಾರ ಸಿದ್ಧವಾಗಿದೆ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ತು ಅತ್ಯಂತ ಪ್ರಧಾನ ಅಂಗವಾಗಿದೆ, ಹೀಗಿದ್ದೂ ಪ್ರಶ್ನೆ ಕೇಳಿದ ಕಾರಣಕ್ಕಾಗಿ ಸಂಸದರನ್ನು ಅಮಾನತುಗೊಳಿಸುವ ಈ ಕ್ರಮವು ಸರ್ವಾಧಿಕಾರತನದ ಧೋರಣೆಯಾಗಿದೆ” ಎಂದರು.

ಇದನ್ನೂ ಓದಿ: ನೇಮಕಾತಿ ಹಗರಣ | ಕಿಂಗ್‌ಪಿನ್ ಆರ್‌ಡಿ ಪಾಟೀಲ್ ಸೇರಿ 12 ಜನರ ವಿರುದ್ಧ ಕೋಕಾ ಕಾಯ್ದೆ

“ಸಂಸತ್ ಭವನದಲ್ಲಿ ಕಲಾಪ ನಡೆಯುವ ವೇಳೆಯಲ್ಲೇ ದಾಳಿ ನಡೆದಿರುವುದು ಗಂಭೀರವಾದ ಭದ್ರತಾಲೋಪವಾಗಿದೆ. ಇದಕ್ಕೆ ಗೃಹ ಸಚಿವರಿಂದ ಉತ್ತರ ಬಯಸುವ, ಪ್ರಶ್ನಿಸುವ ಹಕ್ಕು ಸಂಸದರಿಗೆ ಇದೆ. ಆದರೆ ಮೋದಿ ಸರ್ಕಾರ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಗೌರವದಿಂದ ಕಾಣುತ್ತಿದೆ, ಇದನ್ನು ಎಲ್ಲ ಪ್ರಜಾಪ್ರಭುತ್ವವಾದಿಗಳು ಸರ್ಕಾರದ ನಡೆಯನ್ನು ಖಂಡಿಸಬೇಕು” ಎಂದು ಬಸವರಾಜು ಅವರು ಕರೆ ನೀಡಿದರು.

ಬಸವನಗುಡಿಯ ಬ್ಯೂಗಲ್ ರಾಕ್ ರಸ್ತೆಯ ಬಳಿ ಬಿತ್ತಿಪತ್ರ ಪ್ರದರ್ಶಿಸಿದ ಕಾರ್ಯಕರ್ತರು ಅಮಾನತು ವಾಪಸ್ ಪಡೆಯಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.  ಪ್ರತಿಭಟನೆಯಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ.ಪ್ರಕಾಶ್, ಎಸ್.ವರಲಕ್ಷ್ಮಿ, ಜಿ.ಸಿ. ಬಯ್ಯಾರೆಡ್ಡಿ, ಯಾದವಶೆಟ್ಟಿ, ಮುನಿವೆಂಕಟಪ್ಪ,  ಮುಖಂಡರಾದ ವಿಮಲಾ ಕೆಎಸ್‌, ಮಂಜುನಾಥ್‌, ಕೆ. ಮಹಾಂತೇಶ್‌, ಪ್ರತಾಪ್‌ ಸಿಂಹ, ಯಮುನಾ ಗಾಂವ್ಕರ್‌, ಗೌರಮ್ಮ, ದೇವಿ  ಮುನೀರ್ ಕಾಟಿಪಳ್ಳ ಇದ್ದರು.

ಈ ನಡುವೆ ದೆಹಲಿಯಲ್ಲಿ ವಿಪಕ್ಷಗಳ ಒಕ್ಕೂಟವಾದ ‘ಇಂಡಿಯಾ’ದ ನಾಯಕರು ಶುಕ್ರವಾರ ಇಲ್ಲಿನ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಅಧೀರ್ ರಂಜನ್ ಚೌಧರಿ, ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್, ಸಿಪಿಐ ಮುಖಂಡ ಡಿ.ರಾಜಾ, ಸಿಪಿಐ(ಎಂ) ಕಾರ್ಯದರ್ಶಿ ಸೀತಾರಾಂ ಯೆಚೂರಿ ಹಾಗೂ ಅಮಾನತುಗೊಂಡಿರುವ ಎಲ್ಲಾ ಸಂಸದರು ಸೇರಿದಂತೆ ಹಲವಾರು ನಾಯಕರು ಜಂತರ್ ಮಂತರ್ ಬಳಿ ಜಮಾಯಿಸಿ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.

ಇದನ್ನೂ ಓದಿ: ಭದ್ರತಾ ವೈಫಲ್ಯ | ರಾಜ್ಯದ ಮತ್ತೊಬ್ಬ ವಶಕ್ಕೆ; ಸಂಸತ್ತಿನ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡ ಸಿಐಎಸ್ಎಫ್

ಸರಕಾರವನ್ನು ಗುರಿಯಾಗಿಸಿ ಮಾತನಾಡಿದ ಸಿಪಿಐ(ಎಂ) ನಾಯಕ ಸೀತಾರಾಂ ಯೆಚೂರಿ, ಪ್ರಸ್ತುತ ಅಧಿಕಾರದಲ್ಲಿರುವವರಿಂದ ನಾವು ಪ್ರಜಾಪ್ರಭುತ್ವವನ್ನು ಉಳಿಸಬೇಕಾಗಿದೆ, ಸಂಸತ್ತಿನಲ್ಲಿ ಭದ್ರತಾ ಲೋಪದ ಘಟನೆಗೆ ಬಿಜೆಪಿ ಹೊಣೆ ಹೊರಬೇಕು ಎಂದು ಆಗ್ರಹಿಸಿದ್ದಾರೆ. ಕಾಂಗ್ರೆಸ್ ಸಂಸದ ದಿಗ್ವಿಜಯ ಸಿಂಗ್ ಮಾತನಾಡಿ, “ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸಂಸದರನ್ನು ಎಂದಾದರೂ ಅಮಾನತುಗೊಳಿಸಲಾಗಿದೆಯೇ? ನಾವು ಗೃಹ ಸಚಿವರಿಂದ ಹೇಳಿಕೆಗೆ ಮಾತ್ರ ಬೇಡಿಕೆ ಇಟ್ಟಿದ್ದೇವೆ” ಎಂದು ಹೇಳಿದ್ದಾರೆ.

ಡಿಸೆಂಬರ್ 13 ರಂದು, ಶೂನ್ಯ ವೇಳೆಯ ಕಲಾಪದಲ್ಲಿ ಇಬ್ಬರು ಜನರು ಲೋಕಸಭೆಯ ಸಂದರ್ಶಕರ ಗ್ಯಾಲರಿಯಿಂದ ಜಿಗಿದು ಸಂಸತ್ತಿನಲ್ಲಿ ಹಳದಿ ಬಣ್ಣದ ಹೊಗೆ ಬಾಂಬ್ ಅನ್ನು ಎಸೆದಿದ್ದರು. ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಗೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ. ಸಂಸತ್ತಿನ ಈ ಭದ್ರತಾ ಲೋಪದ ಬಗ್ಗೆ ಗೃಹ ಸಚಿವರಿಂದ ವಿವರವಾದ ಹೇಳಿಕೆಗಾಗಿ ಬೇಡಿಕೆ ಇಟ್ಟು ಪ್ರತಿಭಟನೆ ನಡೆಸಿದ ಕನಿಷ್ಠ 146 ಸಂಸದರನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಿಂದ ಅಮಾನತುಗೊಳಿಸಲಾಗಿದೆ.

ವಿಡಿಯೊ ನೋಡಿ: ಪೂಜಾ ಸ್ಥಳ ಕಾಯ್ದೆ ಜಾರಿಯಾಗಿದ್ದರೂ ಸಹ ಗ್ಯಾನವಾಪಿ,ಶಾಹಿ ಮಸೀದಿಯ ಸಮೀಕ್ಷೆಗೆ ಅನುಮತಿ ಕೊಟ್ಟಿದ್ದು ನ್ಯಾಯಬದ್ಧವೇ?

Donate Janashakthi Media

Leave a Reply

Your email address will not be published. Required fields are marked *