ಮನಪಾ ಆಯುಕ್ತರನ್ನು ವಜಾಗೊಳಿಸಲು ಒತ್ತಾಯಿಸಿ ಸಿಪಿಐಎಂ ಕಾರ್ಯಕರ್ತರಿಂದ ಪಾಲಿಕೆ ಕಚೇರಿಗೆ ಮುತ್ತಿಗೆ, ಬಂಧನ

ಮಂಗಳೂರು : ಅಕ್ರಮ ಆಸ್ತಿ ಸಂಪಾದಿಸಿದ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ್ ಸಿ.ಎಲ್ ಅವರನ್ನು ಕೂಡಲೇ ವಜಾಗೊಳಿಸಲು ಒತ್ತಾಯಿಸಿ ನಗರದಲ್ಲಿಂದು ಸಿಪಿಐಎಂ ಕಾರ್ಯಕರ್ತರು ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿದರು.

ಭ್ರಷ್ಟ ಲೂಟಿಕೊರ ಆಯುಕ್ತರು ತೊಲಗಲೇಬೇಕೆಂದು ಸೇರಿದ್ದ ಪ್ರತಿಭಟನಾಕಾರರು ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗಿದರು. ಬಳಿಕ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯ ಬಿ.ಕೆ ಇಮ್ತಿಯಾಜ್ , ಪಾಲಿಕೆ ಆಯುಕ್ತ ಸ್ಮಾರ್ಟ್ ಸಿಟಿ ಸಹಿತ ಇತರೆ ಯೋಜನೆಯ ನೂರಾರೂ ಕೋಟಿ ಅನುದಾನವನ್ನು ನಗರದ ಅಭಿವೃದ್ಧಿಗೆ ಬಳಸುವ ಬದಲಾಗಿ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ. ಈ ಹಿಂದೆಯೇ ಮಂಗಳೂರಿನಿಂದ ವರ್ಗಾವಣೆಗೊಂಡಿದ್ದ ಪಾಲಿಕೆ ಆಯುಕ್ತರು ಎಷ್ಟು ಕೋಟಿ ದುಡ್ಡು ಕೊಟ್ಟು ಆ ವರ್ಗಾವಣೆಯನ್ನು ರದ್ದುಗೊಳಿಸಿದ್ದಾರೆಂದು ನಗರದ ಜನರಿಗೆ ತಿಳಿಸಬೇಕು. ಈಗ ಲೋಕಾಯುಕ್ತ ಬಲೆಗೆ ಬಿದ್ದ ಆಯುಕ್ತರನ್ನು ಬಂಧಿಸದೆ ಇರಲು ಇಲ್ಲಿನ‌ ಪಾಲಿಕೆ ಆಡಳಿತ ಬಿಜೆಪಿ ಮತ್ತು ಶಾಸಕ ವೇದವ್ಯಾಸ ಕಾಮತರು ಪರೋಕ್ಷವಾಗಿ ಶಾಮೀಲಾಗಿದ್ದಾರೆ.ರಾಜ್ಯ ಸರಕಾರವೂ ಈ ಆಯುಕ್ತರ ಪರವಾದ ಧೋರಣೆಗಳನ್ನು ಹೊಂದಿದೆ. ಜನರ ತೆರಿಗೆ ಹಣವನ್ನು ಲೂಟಿಗೈಯ್ಯಲು ಬಂದಿರುವ ಇಂತಹ ಭ್ರಷ್ಟ ಪಾಲಿಕೆ ಆಯುಕ್ತರು ಮಂಗಳೂರಿಗೆ ಬೇಕಾಗಿಲ್ಲ ಈ ಕೂಡಲೇ ವಜಾಗೊಳಿಸಿ ಎಂದು ಕಟುವಾಗಿ ಟೀಕಿಸಿದರು.

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, ನಗರ ಪಾಲಿಕೆಯಲ್ಲಿ ಆಡಳಿತ ನಡೆಸುವ ಬಿಜೆಪಿ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದ್ದು ಅದರ ಪ್ರತಿಫಲವೇ ಸ್ವತಃ ಆಯುಕ್ತರು ಅಕ್ರಮ ಆಸ್ತಿ ಸಂಪಾದನೆ ಮಾಡುವ ಮೂಲಕ ಬೇಲಿಯೇ ಎದ್ದು ಹೊಲ ಮೇಯ್ದ ಹಾಗೆ ಅಗಿದೆ. ಕೋಟ್ಯಂತರ ಬೆಲೆ ಬಾಳುವ ಮೂರು ಮನೆಗಳನ್ನು ಹೊಂದಿರುವ ಈ ಭ್ರಷ್ಟ ಆಯುಕ್ತರಿಗೆ ತನ್ನ ಅಧಿಕಾರದ ಅವಧಿಯಲ್ಲಿ ಬಡವರಿಗೆ ಒಂದು ತುಂಡು ನಿವೇಶನ ನೀಡಲು ಸಾಧ್ಯವಾಗಿಲ್ಲ. ವಾಲ್ಮೀಕಿ ಹಗರಣ ಮೂಡ ಹಗರಣದ ಬಗ್ಗೆ ಉದ್ದುದ್ದ ಮಾತನಾಡುವ ಶಾಸಕ ವೇದವ್ಯಾಸರಿಗೆ ತನ್ನ ಕಾಲಬುಡದಲ್ಲಿರುವ ಮನಪಾ ಆಯುಕ್ತರ ಅಕ್ರಮ ಆಸ್ತಿಯ ಬಗ್ಗೆ ಮಾತನಾಡಲು ಎದೆಗಾರಿಕೆ ಇಲ್ಲವೇ..? ಎಂದು ಪ್ರಶ್ನಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಿಪಿಐಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸಂತೋಷ್ ಬಜಾಲ್, ಸುಂದರ ಸಮ್ರದ್ದ ಸ್ವಚ್ಛ ಮಂಗಳೂರು ನಿರ್ಮಾಣದಲ್ಲಿ ಕೈಜೋಡಿಸಬೇಕಾದ ಶಾಸಕ ಆಯುಕ್ತರ ಜೋಡಿ ಇಡೀ ಮಂಗಳೂರನ್ನು ಕಬಳಿಸಲು ಹೊಂಚು ಹಾಕುತ್ತಿದ್ದು,ಇದರ ವಿರುದ್ಧ ಮಂಗಳೂರಿನ ಪ್ರಜ್ಞಾವಂತ ಜನತೆ ಎಚ್ಚೆತ್ತುಕೊಳ್ಳಬೇಕೆಂದು ಕರೆ ನೀಡಿದರು.

ಪ್ರತಿಭಟನೆಯಲ್ಲಿ ಸಿಪಿಐಎಂ ಜಿಲ್ಲಾ ಮುಖಂಡ ಜೆ ಬಾಲಕೃಷ್ಣ ಶೆಟ್ಟಿ,ಯೋಗೀಶ್ ಜಪ್ಪಿನಮೊಗರು,ಜಯಂತಿ ಶೆಟ್ಟಿ, ಮಹಿಳಾ ಮುಖಂಡರಾದ ಪ್ರಮೀಳಾ ದೇವಾಡಿಗ,ಅಸುಂತ ಡಿಸೋಜ,ಯೋಗಿತಾ ಉಳ್ಳಾಲ, ಯುವಜನ ನಾಯಕರಾದ ರಿಜ್ವಾನ್ ಹರೇಕಳ,ಜಗದೀಶ್ ಬಜಾಲ್,ಸಾಮಾಜಿಕ ಚಿಂತಕರಾದ ಜೆ ಇಬ್ರಾಹಿಂ ಜೆಪ್ಪುರವರು ಭಾಗವಹಿಸಿದ್ದರು.

ಮುತ್ತಿಗೆ ಚಳುವಳಿಯ ನೇತ್ರತ್ವವನ್ನು ಸಿಪಿಐಎಂ ಮಂಗಳೂರು ನಗರ ಮುಖಂಡರಾದ ಪ್ರಮೀಳಾ ಶಕ್ತಿನಗರ,ದಯಾನಂದ ಶೆಟ್ಟಿ, ಅಶೋಕ್ ಶ್ರೀಯಾನ್, ಭಾರತಿ ಬೋಳಾರ,ನಾಗೇಶ್ ಕೋಟ್ಯಾನ್,ದೀಪಕ್ ಬಜಾಲ್,ನವೀನ್ ಕೊಂಚಾಡಿ, ತಯ್ಯೂಬ್ ಬೆಂಗರೆ,ಕ್ರಷ್ಣ ತಣ್ಣೀರುಬಾವಿ,ರೆಹಮಾನ್, ರಿಯಾಜ್,ಶಶಿಧರ್ ಶಕ್ತಿನಗರ, ಉಮೇಶ್ ಮುಂತಾದವರು ವಹಿಸಿದ್ದರು.

ಪಾಲಿಕೆ ಕಚೇರಿಗೆ ನುಗ್ಗಿ ಮುತ್ತಿಗೆ ಹಾಕಲು ಪ್ರಯತ್ನಿಸಿದ ಸಿಪಿಐಎಂ ಹೋರಾಟಗಾರರನ್ನು ಪೊಲೀಸರು ಬಲಪ್ರಯೋಗದಿಂದ ತಡೆದರು. ಆಕ್ರೋಶಗೊಂಡ ಪ್ರತಿಭಟನಾಕಾರರು ನಂತರ ರಸ್ತೆ ತಡೆ ಮಾಡಿದ್ದು,ಕೂಡಲೇ ಕಾರ್ಯಪ್ರವ್ರತ್ತರಾದ ಪೋಲಿಸರು ಅವರನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.

Donate Janashakthi Media

Leave a Reply

Your email address will not be published. Required fields are marked *