ನವದೆಹಲಿ: ಪ್ರತಿಪಕ್ಷಗಳ ನಾಯಕರ ಮೇಲೆ ಗುರಿಯಿಡಲು ಮತ್ತು ಅವರನ್ನು ಸಂಸದರಾಗಿ ಅನರ್ಹಗೊಳಿಸಲು ಬಿಜೆಪಿ ಈಗ ಕ್ರಿಮಿನಲ್ ಮಾನನಷ್ಟ ಮಾರ್ಗವನ್ನು ಬಳಸಲು ಹೊರಟಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಬಲವಾಗಿ ಖಂಡಿಸಿದೆ. ರಾಹುಲ್ ಗಾಂಧಿಯವರಿಗೆ ಶಿಕ್ಷೆ ವಿಧಿಸಿರುವುದು ಮತ್ತು ಅವರನ್ನು ಅನರ್ಹಗೊಳಿಸುವಲ್ಲಿ ತೋರಿಸಿರುವ ಆತುರವು ಟೀಕೆಗಳಿಗೆ ಬಿಜೆಪಿಯ ಅಸಹಿಷ್ಣುತೆಯ ಮಟ್ಟದ ಒಂದು ನಿರ್ಲಜ್ಜ ಪ್ರದರ್ಶನವಾಗಿದೆ ಮತ್ತು ಬಿಜೆಪಿಯ ಅಸಹ್ಯಕರ ನಿರಂಕುಶ ಚಾರಿತ್ರ್ಯವನ್ನು ಇದು ಬಿಂಬಿಸುತ್ತದೆ ಎಂದು ಅದು ವರ್ಣಿಸಿದೆ.
ಮಾರ್ಚ್ 25-26ರಂದು ನವದೆಹಲಿಯಲ್ಲಿ ಸಭೆ ಸೇರಿದ ಪೊಲಿಟ್‍ಬ್ಯುರೊ ಪ್ರತಿಪಕ್ಷಗಳ ನಾಯಕರಿಗೆ ಕಿರುಕುಳ ಕೊಡಲಾಗುತ್ತಿದೆ ಎಂದು ಹೇಳುತ್ತ ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಲು ಕೇಂದ್ರೀಯ ಸಂಸ್ಥೆಗಳನ್ನು ಈಗಾಗಲೇ ದುರುಪಯೋಗ ಪಡಿಸಿಕೊಳ್ಳುವುದಲ್ಲದೆ, ಈಗ ಇದನ್ನೂ ಬಳಸುತ್ತಿದೆ ಎಂದು ಅಭಿಪ್ರಾಯ ಪಟ್ಟಿದೆ. ಆರೆಸ್ಸೆಸ್/ಬಿಜೆಪಿ ಕೂಡ ಹಲವಾರು ರಾಜ್ಯಗಳಲ್ಲಿ ರಾಜಕೀಯ ವಿರೋಧಿಗಳ ವಿರುದ್ಧ ಅತ್ಯಂತ ಕ್ಷುದ್ರ ಕಾರಣಗಳಿಗೆ ಎಫ್‌ಐಆರ್‌ಗಳನ್ನು ಸಲ್ಲಿಸಿವೆ ಮತ್ತು ಪ್ರಕರಣಗಳನ್ನು ದಾಖಲಿಸಿದೆವೆ. ಎಎಪಿ ನಾಯಕ ಮತ್ತು ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಲಾಗಿದ್ದು, ಜೈಲಿನಲ್ಲಿದ್ದಾರೆ. ತೀರಾ ಇತ್ತೀಚೆಗೆ ಇ.ಡಿ./ಸಿಬಿಐ ಗುರಿಯಾಗಿಸಿದ ಮತ್ತು ಕಿರುಕುಳಕ್ಕೊಳಗಾದ ಇತರರಲ್ಲಿ ಲಾಲು ಪ್ರಸಾದ್ ಯಾದವ್, ತೇಜಸ್ವಿ ಯಾದವ್ ಮತ್ತು ಅವರ ಕುಟುಂಬ(ಆರ್ ಜೆ ಡಿ), ಶ್ರೀಮತಿ ಕವಿತಾ(ಬಿ ಆರ್ ಎಸ್) ಮತ್ತು ಇತರ ಅನೇಕರು ಇದ್ದಾರೆ.
ಇದನ್ನು ಓದಿ: ಮೋದಿ ಹೆಸರನ್ನು ಟೀಕಿಸಿದ ರಾಹುಲ್ ಗಾಂಧಿಗೆ 2 ವರ್ಷ ಜೈಲು; ತೀರ್ಪು ನೀಡಿದ ಕೋರ್ಟಿನಿಂದಲೇ ಜಾಮೀನು
ಅದಾಣಿಯನ್ನು ಕಟೆಕಟೆಯಲ್ಲಿ ನಿಲ್ಲಿಸಲು ನಿರಾಕರಿಸುವ ಲಜ್ಜೆಗೇಡಿತನ
ಹಿಂಡೆನ್‌ಬರ್ಗ್ ವರದಿಯು 2014 ರಿಂದ ಭಾರತವನ್ನು ಆಳಲು ಬಂದಿರುವ ಕಾರ್ಪೊರೇಟ್-ಕೋಮುವಾದಿ ನಂಟು ಕಾರ್ಯನಿರ್ವಹಿಸುತ್ತಿರುವ ನೀಚ ವಿಧಾನವನ್ನು ಬಹಿರಂಗಪಡಿಸಿದೆ ಎಂದು ಪೊಲಿಟ್‍ಬ್ಯುರೊ ವಿಶ್ಲೇಷಿಸಿತು. 2014 ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ, ಅದಾಣಿ ಸಮೂಹವು ಫೋರ್ಬ್ಸ್ ಪ್ರಕಾರ 7.1 ಬಿಲಿಯನ್(ಶತಕೋಟಿ) ಡಾಲರ್ ಮಾರುಕಟ್ಟೆ ಬಂಡವಾಳವನ್ನು ಹೊಂದಿತ್ತು. ಇದು 2022 ರ ಹೊತ್ತಿಗೆ 200 ಶತಕೋಟಿಗೆ ನಾಗಾಲೋಟ ಹೂಡಿದೆ. ಅಂತರಾಷ್ಟ್ರೀಯ ಶ್ರೇಯಾಂಕದಲ್ಲಿ, 2014 ರಲ್ಲಿ 609 ನೇ ಸ್ಥಾನದಲ್ಲಿದ್ದ ಅದಾಣಿ ದಾಪುಗಾಲಿನ ನಡೆ 2022 ರಲ್ಲಿ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗುವ ಮಟ್ಟಕ್ಕೆ ಬೆಳೆಸಿದೆ.
ಬಿಜೆಪಿ ಸರ್ಕಾರವು ಅದಾಣಿ ಗುಂಪಿನ ನಿರ್ಲಜ್ಜ ದುಷ್ಕೃತ್ಯಗಳನ್ನು ಲೋಪಗಳನ್ನು ನಾಚಿಕೆಯಿಲ್ಲದೆ ಸಮರ್ಥಿಸಿಕೊಳ್ಳುತ್ತಿದೆ. ಬಂಟ ಬಂಡವಾಳಶಾಹಿಗಳೊಂದಿಗೆ ಅದರ ಈ ನಂಟು ಜನರು ಕಷ್ಟಪಟ್ಟು ಸಂಪಾದಿಸಿದ ಸಾವಿರಾರು ಕೋಟಿ ರೂಪಾಯಿಗಳನ್ನು ರಾಷ್ಟ್ರೀಕೃತ ಹಣಕಾಸು ಸಂಸ್ಥೆಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಎಲ್‍ಐಸಿಗಳಿಂದ ಲೂಟಿ ಮಾಡಲು ಅನುಕೂಲ ಕಲ್ಪಿಸಿ ಕೊಟ್ಟಿದೆ. ಅದಾಣಿ ಗಾಥೆಯ ಬಗ್ಗೆ ಯಾವುದೇ ರೀತಿಯ ವಿಚಾರಣೆ ನಡೆಸಲು ಅದರ ಲಜ್ಜೆಗೇಡಿ ನಿರಾಕರಣೆಯು ಅದನ್ನು ಸಂಪೂರ್ಣವಾಗಿ ಬಯಲಿಗೆಳೆದಿದೆ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ಅದಾಣಿ ಸಮೂಹದ ದುಷ್ಕೃತ್ಯಗಳ ಕುರಿತು ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕೆಂಬ ಆಗ್ರಹವನ್ನು ಪೊಲಿಟ್ ಬ್ಯೂರೋ ಪುನರುಚ್ಚರಿಸಿದೆ. ಅದಾಣಿ ಗುಂಪಿನ ವಿರುದ್ಧ ಕಾನೂನಿನ ನಿಬಂಧನೆಗಳ ಪ್ರಕಾರ ಕ್ರಮ ಕೈಗೊಳ್ಳಬೇಕು.
ಇದನ್ನು ಓದಿ: ಹಿಂಡನ್ ಬರ್ಗ್ ವರದಿ : ಅದಾನಿ ಸಮೂಹದ ಅಕ್ರಮ, ವಂಚನೆಗಳ ಚಿತ್ರ
ಆಳುವ ಪಕ್ಷವೇ ಸಂಸತ್ತನ್ನು ಅಸ್ತವ್ಯಸ್ತಗೊಳಿಸಿದ ಅಭೂತಪೂರ್ವ ಘಟನೆ
ತನ್ನ ಅಧಿಕಾರಾವಧಿಯಲ್ಲಿ ಮಿಂಚಿನ ವೇಗದ ಏರಿಕೆಯನ್ನು ಕಂಡಿರುವ ವ್ಯಾಪಾರಿ ಸಮೂಹದೊಂದಿಗಿನ ತನ್ನ ಸಂಬಂಧದ ಬಗ್ಗೆ ಪ್ರಶ್ನೆಗಳನ್ನು ಎದುರಿಸಲು ಸಾಧ್ಯವಾಗದ ಬಿಜೆಪಿಯು ಸಂಸತ್ತಿನಲ್ಲಿ ಚರ್ಚೆ ನಡೆಸಲು ಅಥವಾ ಜೆಪಿಸಿಯ ಬೇಡಿಕೆಯನ್ನು ಒಪ್ಪಿಕೊಳ್ಳಲು ಹಟಮಾರಿತನದಿಂದ ನಿರಾಕರಿಸುತ್ತಿದೆ.
ಭಾರತದ ಪ್ರಜಾಪ್ರಭುತ್ವದ ಸ್ಥಿತಿಗತಿ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಯನ್ನು ನೆಪವಾಗಿಟ್ಟುಕೊಂಡು ಆಳುವ ಪಕ್ಷದ ಸದಸ್ಯರು ದಿನಗಟ್ಟಲೆ ಲೋಕಸಭೆಯನ್ನು ಸ್ತಬ್ಧಗೊಳಿಸಿದ್ದು ಅಭೂತಪೂರ್ವ. ಇದರಿಂದ ಯಾವುದೇ ಚರ್ಚೆಯಿಲ್ಲದೆ ಕೇಂದ್ರ ಬಜೆಟ್ ಅಂಗೀಕಾರವಾಗುವಂತಾಯಿತು ಎಂದು ಪೊಲಿಟ್‍ಬ್ಯುರೊ ಸಭೆ ಗಮನಿಸಿತು.
ಸಂಸತ್ತನ್ನು ಅಸ್ತವ್ಯಸ್ತಗೊಳಿಸಿರುವುದಲ್ಲದೆ, ಕೇಂದ್ರ ಕಾನೂನು ಸಚಿವರು ಮತ್ತು ಉಪರಾಷ್ಟ್ರಪತಿಯಂತಹ ಸಾಂವಿಧಾನಿಕ ಅಧಿಕಾರಿಗಳು ನ್ಯಾಯಾಂಗದ ಮೇಲೆ ದಾಳಿ ನಡೆಸುವ ಹೇಳಿಕೆಗಳನ್ನು ಮತ್ತೆ-ಮತ್ತೆ ನೀಡುತ್ತಲೇ ಇದ್ದಾರೆ.
ಬಿಜೆಪಿಯೇತರ ಆಳ್ವಿಕೆಯಿರುವ ರಾಜ್ಯಗಳಲ್ಲಿ ರಾಜ್ಯಪಾಲರುಗಳು ಬಿಜೆಪಿಯ ರಾಜಕೀಯ ಉದ್ದೇಶಗಳಿಗೆ ನೆರವಾಗುವ ಪಾತ್ರವಹಿಸುವುದನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಾರೆ ಎಂಬ ಸಂಗತಿಯತ್ತವೂ ಪೊಲಿಟ್‍ಬ್ಯುರೊ ಗಮನ ಸೆಳೆದಿದೆ.
ಕೋಮು ಧ್ರುವೀಕರಣವನ್ನು ತೀಕ್ಷ್ಣಗೊಳಿಸಲು ಹೊಸ-ಹೊಸ ಸುಳ್ಳುಗಳು
ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರ ವಿರುದ್ಧ ಸಂಘಟಿತ ದಾಳಿಗಳ ಹೆಚ್ಚುತ್ತಿರುವ ಘಟನೆಗಳನ್ನು ತೀವ್ರ ಕಳವಳದಿಂದ ಗಮನಿಸಿದ ಸಿಪಿಐ(ಎಂ) ಪೊಲಿಟ್‍ಬ್ಯುರೊ ಗೋರಕ್ಷಕರಿಂದ ಮುಸ್ಲಿಂ ಯುವಕರ ಹತ್ಯೆ ಅವ್ಯಾಹತವಾಗಿ ನಡೆಯುತ್ತಲೇ ಇದೆ, ಮತ್ತು ಚರ್ಚ್‌ಗಳು ಮತ್ತು ಕ್ರಿಶ್ಚಿಯನ್ ಸಮುದಾಯದ ಸದಸ್ಯರು, ವಿಶೇಷವಾಗಿ ಕ್ರಿಶ್ಚಿಯನ್ ಬುಡಕಟ್ಟು ಜನಾಂಗದವರ ಮೇಲೆ ದಾಳಿಗಳು ಹಲವಾರು ರಾಜ್ಯಗಳಿಂದ ವರದಿಯಾಗಿವೆ ಎಂದಿದೆ. ಕೋಮು ಧ್ರುವೀಕರಣವನ್ನು ಹೆಚ್ಚಿಸಲು, ಹೊಸ -ಹೊಸ ಹುಸಿ ಕಥನಗಳು ಮತ್ತು ಇತಿಹಾಸಗಳನ್ನು, ವಿಶೇಷವಾಗಿ ಚುನಾವಣೆಗಳು ನಡೆಯಲಿರುವ ರಾಜ್ಯಗಳಲ್ಲಿ ಸೃಷ್ಟಿಸಲಾಗುತ್ತಿದೆ.
ಕರ್ನಾಟಕದ ಬಿಜೆಪಿ ಸರ್ಕಾರವು ಒಬಿಸಿ ಕೋಟಾದಡಿಯಲ್ಲಿ ಮುಸ್ಲಿಮರಿಗೆ ಮೀಸಲಾತಿಯನ್ನು ರದ್ದುಗೊಳಿಸಲು ನಿರ್ಧರಿಸಿದೆ. ರಾಜ್ಯ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವಾಗಲೇ ಇದು ನಡೆದಿದೆ. ರಾಜ್ಯದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ಮೇಲೆ ವ್ಯಾಪಕ ಹಲ್ಲೆಗಳು ಮತ್ತು ಕಿರುಕುಳಗಳು ತೀವ್ರಗೊಳ್ಳುತ್ತಿವೆ ಎಂದು ಸಿಪಿಐ(ಎಂ) ಹೇಳಿದೆ.
ಇದನ್ನು ಓದಿ: ತ್ರಿಪುರಾ ಚುನಾವಣೋತ್ತರ ಹಿಂಸಾಚಾರ; ತನಿಖೆಗೆ ಆಗಮಿಸಿದ್ದ ಸಂಸದೀಯ ತಂಡದ ಮೇಲೆ ದಾಳಿ
ಬಿಜೆಪಿ ‘ಚುನಾವಣಾ ಅಜೇಯ’ ಎಂಬುದು ಹುಸಿ ಪ್ರಚಾರ
ಒಟ್ಟು ಮಾಧ್ಯಮ ವ್ಯವಸ್ಥೆಯ ಮೇಲೆ ಹಿಡಿತ ಹೊಂದಿರುವ ಮೋದಿ ಸರಕಾರ ತನ್ನನ್ನು ಚುನಾವಣಾ ಅಜೇಯ ಎಂದು ಬಿಂಬಿಸಿಕೊಳ್ಳುತ್ತಿದೆ. ಇದು ಸಂಪೂರ್ಣವಾಗಿ ದಾರಿತಪ್ಪಿಸುವ ಸಂಗತಿ ಎಂದು ಪೊಲಿಟ್‍ಬ್ಯುರೊ ಚುನಾವಣಾ ಅಂಕಿ-ಅಂಶಗಳನ್ನು ವಿಶ್ಲೇಷಿಸುತ್ತ ಅಭಿಪ್ರಾಯ ಪಟ್ಟಿದೆ. ಹಿಂದಿನ ಸುತ್ತಿನ ಅಸೆಂಬ್ಲಿ ಚುನಾವಣೆಗಳಲ್ಲಿ ಬಿಜೆಪಿ ಗುಜರಾತ್ ಅನ್ನು ಉಳಿಸಿಕೊಂಡಿದೆ, ಅದು ಹಿಮಾಚಲ ಪ್ರದೇಶದಲ್ಲಿ ತನ್ನ ಹಾಲಿ ಸರ್ಕಾರವನ್ನು ಕಳೆದುಕೊಂಡಿತು ಮತ್ತು ಕಳೆದ 15 ವರ್ಷಗಳಿಂದ ಅದು ನಿಯಂತ್ರಿಸುತ್ತಿದ್ದ ದಿಲ್ಲಿ ಮುನ್ಸಿಪಲ್ ಕಾರ್ಪೊರೇಶನ್ ಅನ್ನು ಸಹ ಕಳೆದುಕೊಂಡಿತು.
ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮೇಘಾಲಯದ 3 ಈಶಾನ್ಯ ರಾಜ್ಯಗಳ ಇತ್ತೀಚಿನ ಚುನಾವಣೆಗಳಲ್ಲಿ ಬಿಜೆಪಿ 180 ರಲ್ಲಿ 46 ಸ್ಥಾನಗಳನ್ನು ಮಾತ್ರ ಗೆದ್ದಿದೆ. ತ್ರಿಪುರಾದಲ್ಲಿ ಅದರ ಶಾಸಕರು 46 ರಿಂದ 32 ಕ್ಕೆ ಇಳಿದಿದ್ದಾರೆ. ನಾಗಾಲ್ಯಾಂಡ್‌ನಲ್ಲಿ ಅದು 12 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹಳ ದೂರದಲ್ಲಿ 2ನೇ ಸ್ಥಾನದಲ್ಲಿದೆ. ಮೇಘಾಲಯದಲ್ಲಿ ಕೇವಲ 2 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿ, ಉಳಿದ 58 ಸ್ಥಾನಗಳಲ್ಲಿ ಠೇವಣಿ ಕಳೆದುಕೊಂಡಿತು. ಚಲಾವಣೆಗೊಂಡ ಮತಗಳಲ್ಲಿ ತ್ರಿಪುರಾದಲ್ಲಿ ಬಿಜೆಪಿ ಶೇಕಡಾ 38.97 ಗಳಿಸಿತು; ನಾಗಾಲ್ಯಾಂಡ್‌ನಲ್ಲಿ ಶೇ.18.81 ಮತ್ತು ಮೇಘಾಲಯದಲ್ಲಿ ಶೇ.9.33. ಆದಾಗ್ಯೂ, ಸ್ಥಳೀಯ ಪ್ರಾದೇಶಿಕ ಪಕ್ಷಗಳೊಂದಿಗೆ ಅದು ಎಲ್ಲಾ ಮೂರು ರಾಜ್ಯಗಳಲ್ಲಿ ಸರ್ಕಾರದಲ್ಲಿದೆ.
ಪುಣೆ ಜಿಲ್ಲೆಯ ಕಸ್ಬಾ ಪೇಟ್ ವಿಧಾನಸಭಾ ಉಪಚುನಾವಣೆಯಲ್ಲಿ, ಎರಡು ದಶಕಗಳಿಂದ ನಿರಂತರವಾಗಿ ಗೆದ್ದಿದ್ದ ಬಿಜೆಪಿಯ ಹಾಲಿ ಸ್ಥಾನವನ್ನು ಎಂವಿಎ ಯ ಕಾಂಗ್ರೆಸ್ ಅಭ್ಯರ್ಥಿ ವಶಪಡಿಸಿಕೊಂಡರು.
ಇದನ್ನು ಓದಿ: ಕೇರಳ ಎಡರಂಗ ಸರ್ಕಾರದಿಂದ 87 ಲಕ್ಷ ಪಡಿತರದಾರರಿಗೆ ಉಚಿತ ಆಹಾರ ಕಿಟ್ ವಿತರಣೆ
ಪಶ್ಚಿಮ ಬಂಗಾಳದ ಸಾಗರ್ದಿಘಿ ವಿಧಾನಸಭಾ ಉಪಚುನಾವಣೆಯಲ್ಲಿ, ಟಿಎಂಸಿ 2011 ರಿಂದ ಗೆದ್ದುಕೊಂಡು ಬಂದಿದ್ದ ಸ್ಥಾನವನ್ನು ಈಬಾರಿ ಕಾಂಗ್ರೆಸ್‍ಗೆ ಸೋತಿದೆ. 2021 ರಲ್ಲಿ ಟಿಎಂಸಿ ಈ ಸ್ಥಾನವನ್ನು ಬಿಜೆಪಿಗಿಂತ 50,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿತ್ತು. ಈ ಬಾರಿ ಕಾಂಗ್ರೆಸ್-ಎಡ ಅಭ್ಯರ್ಥಿ ಸುಮಾರು 23,000 ಮತಗಳಿಂದ ಗೆದ್ದು ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ.
ತ್ರಿಪುರಾ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶಗಳ ಪ್ರಾಥಮಿಕ ವಿಶ್ಲೇಷಣೆಯನ್ನು ಮಾಡಿದ ಪೊಲಿಟ್ ಬ್ಯೂರೋ , ವಿರೋಧ ಪಕ್ಷಗಳು ಕಾರ್ಯನಿರ್ವಹಿಸಲು ಅವಕಾಶವಿಲ್ಲದ ಅಸಾಧಾರಣ ಪರಿಸ್ಥಿತಿಯಲ್ಲಿ ಚುನಾವಣೆಗಳನ್ನು ನಡೆಸಲಾಯಿತು ಮತ್ತು ಅವು ಕಳೆದ ಐದು ವರ್ಷಗಳ ಅವಧಿಯಲ್ಲಿ ನಿರಂತರ ದಾಳಿ ಮತ್ತು ಭಯೋತ್ಪಾದನೆಗೆ ಒಳಗಾಗಿದ್ದವು ಎಂದು ಹೇಳಿದೆ.
ಕೇರಳ ಎಲ್‌ಡಿಎಫ್ ಮೇಲೆ ಗುರಿ
ಎಲ್‌ಡಿಎಫ್ ಸರ್ಕಾರ ಮತ್ತು ಕೇರಳದ ಮುಖ್ಯಮಂತ್ರಿಯನ್ನು ವೈಯಕ್ತಿಕ ನಿಂದನೆ ಮತ್ತು ಅವಹೇಳನಗಳಿಗೆ ಗುರಿಪಡಿಸುವುದನ್ನು ಪೊಲಿಟ್ ಬ್ಯೂರೋ ಬಲವಾಗಿ ಖಂಡಿಸಿದೆ. ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಬಿಜೆಪಿಯ ತಾಳಕ್ಕೆ ತಕ್ಕಂತೆ ಇದೇ ರೀತಿಯ ಚಟುವಟಿಕೆಗಳಲ್ಲಿ ತೊಡಗಿದೆ. ಇಂತಹ ಪ್ರಯತ್ನಗಳಿಗೆ ಕೇರಳದ ಜನತೆ ತಕ್ಕ ತಿರುಗೇಟು ನೀಡಲಿದ್ದಾರೆ ಎಂದು ಪೊಲಿಟ್‍ಬ್ಯುರೊ ಸಭೆ ಎಚ್ಚರಿಸಿದೆ.
ಜನಗಳ ಹೋರಾಟಗಳು ಬೆಳೆಯುತ್ತಿವೆ
ಈ ನಡುವೆ ವಿವಿಧ ವಿಭಾಗಗಳ ಜನಗಳ ಹೋರಾಟಗಳು ಬೆಳೆಯುತ್ತಿವೆ ಎಂದು ಪೊಲಿಟ್‍ಬ್ಯುರೊ ಅಭಿಪ್ರಾಯ ಪಟ್ಟಿದೆ.
ಸಂಯುಕ್ತ ಕಿಸಾನ್ ಮೋರ್ಚಾ(ಎಸ್‍ಕೆಎಂ) ಮಾರ್ಚ್ 20 ರಂದು ದೆಹಲಿ ರಾಮಲೀಲಾ ಮೈದಾನದಲ್ಲಿ ಕಿಸಾನ್ ಮಹಾ ಪಂಚಾಯತ್ ಅನ್ನು ಯಶಸ್ವಿಯಾಗಿ ನಡೆಸಿದೆಮತ್ತು ಕೃಷಿಯ ಮೇಲೆ ಬೆಳೆಯುತ್ತಿರುವ ಕಾರ್ಪೊರೇಟ್ ನಿಯಂತ್ರಣದ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳಿಗೆ ಕರೆ ನೀಡಿದೆ.
ಇದನ್ನು ಓದಿ: ದಿಲ್ಲಿಯಲ್ಲಿ “ಮಜ್ದೂರ್-ಕಿಸಾನ್ ಅಧಿಕಾರ್ ಮಹಾಧಿವೇಶನ”
ಮಹಾರಾಷ್ಟ್ರ ಕಿಸಾನ್ ಸಭಾ ಮಾರ್ಚ್ 12 ರಂದು ನಾಶಿಕ್‌ನಿಂದ ಮುಂಬೈಗೆ ಮೂರನೇ ಲಾಂಗ್ ಮಾರ್ಚ್ ಅನ್ನು ಪ್ರಾರಂಭಿಸಿತು. ಪಾದಯಾತ್ರೆ ಮುಂಬೈ ತಲುಪುವ ಮೊದಲೇ ಶಿಂಧೆ-ಬಿಜೆಪಿ ರಾಜ್ಯ ಸರ್ಕಾರವು ಈರುಳ್ಳಿಗೆ ಕ್ವಿಂಟಲ್ ಗೆ 350 ರೂ.ಗಳ ಸಬ್ಸಿಡಿ, 88,000ಕ್ಕೂ ಹೆಚ್ಚು ರೈತರ ಸಾಲ ಮನ್ನಾ ಇತ್ಯಾದಿ ಸೇರಿದಂತೆ ಎಲ್ಲಾ ಬೇಡಿಕೆಗಳನ್ನು ಒಪ್ಪಿಕೊಳ್ಳಬೇಕಾಗಿ ಬಂದಿದೆ..
ಹಲವಾರು ರಾಜ್ಯಗಳಲ್ಲಿ ಮುಷ್ಕರಗಳನ್ನು ಪ್ರಾರಂಭಿಸಿದ ವಿದ್ಯುಚ್ಛಕ್ತಿ ನೌಕರರು ಬಿಜೆಪಿ ಸರ್ಕಾರವು ಒಗ್ಗಟ್ಟಿನ ಮತ್ತು ದೃಢನಿಶ್ಚಯದ ಟ್ರೇಡ್ ಯೂನಿಯನ್ ಕ್ರಮಗಳಿಗೆ ತಲೆಬಾಗುವಂತೆ ಮಾಡಿದ್ದಾರೆ ರಾಜ್ಯ ಸರ್ಕಾರಿ ನೌಕರರು, ಅಂಗನವಾಡಿ ನೌಕರರು ಮತ್ತು ಯೋಜನಾ ನೌಕರರು ದೇಶದ ಹಲವೆಡೆ ಮುಷ್ಕರ ನಡೆಸಿದ್ದಾರೆ ಎಂದು ಅದು ಹೇಳಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ