ಪ್ರಧಾನಿಗಳು ಮತ್ತು ಕೇಂದ್ರ ಸರಕಾರಕ್ಕೆ ಸಿಪಿಐ(ಎಂ) ಪೊಲಿಟ್‍ಬ್ಯುರೊ ಕರೆ
ನವದೆಹಲಿ: ನೂತನ ಸಂಸತ್ ಭವನದ ಮೇಲೆ ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಲಾಂಛನವನ್ನು ಅನಾವರಣಗೊಳಿಸಿದ್ದಾರೆ. ಇದು ಭಾರತೀಯ ಸಂವಿಧಾನದ ಒಂದು ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) – ಸಿಪಿಐ(ಎಂ) ಪೊಲಿಟ್‍ಬ್ಯುರೊ ಅಭಿಪ್ರಾಯ ಪಟ್ಟಿದೆ. ಸಂವಿಧಾನವು ನಮ್ಮ ಪ್ರಜಾಪ್ರಭುತ್ವದ ಮೂರು ವಿಭಾಗಗಳನ್ನು – ಕಾರ್ಯಾಂಗ (ಸರ್ಕಾರ), ಶಾಸಕಾಂಗ (ಸಂಸತ್ತು ಮತ್ತು ರಾಜ್ಯ ವಿಧಾನ ಸಭೆಗಳು) ಮತ್ತು ನ್ಯಾಯಾಂಗ ಎಂದು ನಿಸ್ಸಂದಿಗ್ಧವಾಗಿ ವಿಂಗಡಿಸುತ್ತದೆ. ರಾಷ್ಟ್ರಪತಿಗಳು ಸಂಸತ್ತು ಸಭೆ ಸೇರುವಂತೆ ಆದೇಶಿಸುತ್ತಾರೆ. ಪ್ರಧಾನ ಮಂತ್ರಿಗಳು ಕಾರ್ಯಾಂಗದ ಮುಖ್ಯಸ್ಥರಾಗಿರುತ್ತಾರೆ. ಶಾಸಕಾಂಗವು ತನ್ನ ಸ್ವತಂತ್ರ ಪಾತ್ರವನ್ನು ನಿರ್ವಹಿಸುತ್ತದೆ, ಇದರಲ್ಲಿ ಕಾಯ್ದೆಗಳ ಶಾಸನ, ಕಾರ್ಯಾಂಗವನ್ನು ಹೊಣೆಗಾರವಾಗಿ ಮತ್ತು ಉತ್ತರದಾಯಿಯಾಗಿ ಇರಿಸುವುದು ಸೇರಿದೆ. ಮೂರು ವಿಭಾಗಗಳ ನಡುವಿನ ಈ ಸಾಂವಿಧಾನಿಕ ಅಧಿಕಾರಗಳ ವಿಂಗಡಣೆಯನ್ನು ಕಾರ್ಯಾಂಗದ ಮುಖ್ಯಸ್ಥರು ಬುಡಮೇಲು ಮಾಡುತ್ತಿದ್ದಾರೆ ಎಂದು ಪೊಲಿಟ್‍ಬ್ಯುರೊ ಟೀಕಿಸಿದೆ.
ಇದಲ್ಲದೆ, ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ಪೂಜೆ ಸಲ್ಲಿಸಿದರು. ಭಾರತದ ಸಂವಿಧಾನವು ಎಲ್ಲಾ ಭಾರತೀಯರಿಗೆ ತಮ್ಮ ನಂಬಿಕೆಯನ್ನು ಆಚರಿಸಲು ಮತ್ತು ಪ್ರತಿಪಾದಿಸಲು ಹಕ್ಕು ಮತ್ತು ರಕ್ಷಣೆಯನ್ನು ನೀಡುತ್ತದೆ. ಇದು ಕಸಿದುಕೊಳ್ಳಲಾಗದ ಹಕ್ಕು. ಅದೇ ಸಮಯದಲ್ಲಿ, ಪ್ರಭುತ್ವವು ಯಾವುದೇ ನಂಬಿಕೆ/ಧರ್ಮವನ್ನು ಪ್ರತಿಪಾದಿಸುವುದಿಲ್ಲ ಅಥವಾ ಆಚರಿಸುವುದಿಲ್ಲ ಎಂದು ಭಾರತದ ಸಂವಿಧಾನವು ಸ್ಪಷ್ಟವಾಗಿ ವಿಧಿಸುತ್ತದೆ.
ಪ್ರಧಾನಮಂತ್ರಿಗಳು ಮತ್ತು ಕೇಂದ್ರ ಸರ್ಕಾರವು ಭಾರತದ ಸಂವಿಧಾನವನ್ನು ರಕ್ಷಿಸಲು ಮತ್ತು ಎತ್ತಿಹಿಡಿಯುವೆವು ಎಂದು ಅಧಿಕಾರ ಸ್ವೀಕರಿಸುವಾಗ ತಾವು ಮಾಡಿದ ವಿಧ್ಯುಕ್ತ ಪ್ರಮಾಣವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೋ ಕರೆ ನೀಡಿದೆ.