ನವದೆಹಲಿ : ಕೋವಿಡ್ ಮಹಾಸೋಂಕಿನ ಉಬ್ಬರ ದೇಶಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಮಾನವ ಜೀವಗಳ ಬಲಿ ತೆಗೆದುಕೊಳ್ಳುತ್ತಲೇ ಇದೆ. ಎಷ್ಟೆಲ್ಲ ಮನವಿ ಮಾಡಿಕೊಂಡರೂ ಕೇಂದ್ರ ಸರಕಾರ ಮಾನವ ಜೀವಗಳನ್ನು ಉಳಿಸಲು ಆಮ್ಲಜನಕದ ಹರಿವನ್ನು ಖಚಿತಗೊಳಿಸುವಲ್ಲಿ ವಿಫಲವಾಗಿದೆ. ಎಲ್ಲ ಆಸ್ಪತ್ರೆಗಳಿಗೆ, ಆರೋಗ್ಯ ಕೇಂದ್ರಗಳಿಗೆ ಮತ್ತು ಮನೆಯಲ್ಲಿ ಚಿಕಿತ್ಸೆ ಪಡೆಯುವವರಲ್ಲಿ ಅಗತ್ಯವಿರುವವರಿಗೆ ಆಕ್ಸಿಜನ್ ಪೂರೈಕೆ ಅಬಾಧಿತವಾಗಿ ಹರಿಯುವಂತೆ ಮಾಡಬೇಕೆಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಮತ್ತೊಮ್ಮೆ ಆಗ್ರಹಿಸಿದೆ. ತಕ್ಷಣವೇ ಒಂದು ಸಾಮೂಹಿಕ ಲಸಿಕೀಕರಣ ಕಾರ್ಯಕ್ರಮವನ್ನು ಆರಂಭಿಸಬೇಕು ಎಂದೂ ಅದು ಆಗ್ರಹಿಸಿದೆ.
ಕೋವಿಡ್ ಮಹಾಸೋಂಕಿನ ತಲ್ಲಣಕಾರೀ ಉಬ್ಬರದ ಬಗ್ಗೆ ಮಾತ್ರವಲ್ಲದೆ ಅದರಿಂದಾಗಿ ಎದ್ದಿರುವ ಜೀವನೋಪಾಯದ ಪ್ರಶ್ನೆಗಳು, ಸೆಂಟ್ರಲ್ ವಿಸ್ತಾವನ್ನು ಮುಂದುವರೆಸುವ ಅಸಹ್ಯಕರ ಸಂಗತಿ, ವಿಧಾನಸಭಾ ಚುನಾವಣೆಗಳ ಫಲಿತಾಂಶಗಳು, ತದನಂತರದ ಹಿಂಸಾಚಾರ ಹಾಗೂ ಕೋವಿಡ್ ಉಬ್ಬರದ ಹಿನ್ನೆಲೆಯಲ್ಲಿ ರೈತರ ಬೇಡಿಕೆಗಳನ್ನು ಸ್ವೀಕರಿಸಬೇಕಾದ ಅಗತ್ಯ ಬಗ್ಗೆ ಚರ್ಚಿಸಿದ ಪೊಲಿಟ್ಬ್ಯುರೊ ಸಭೆಯ ನಂತರ ನೀಡಿರುವ ಹೇಳಿಕೆಯನ್ನು ಈ ಮುಂದೆ ಕೊಡಲಾಗಿದೆ.
ಕೋವಿಡ್ ಮಹಾಸೋಂಕಿನ ಉಬ್ಬರ ದೇಶಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಮಾನವ ಜೀವಗಳ ಬಲಿ ತೆಗೆದುಕೊಳ್ಳುತ್ತಲೇ ಇದೆ. ಸಿಪಿಐ(ಎಂ) ಈ ತಪ್ಪಿಸಬಹುದಾಗಿದ್ದ ಸಾವುಗಳಿಗೆ ದುಖವನ್ನು ವ್ಯಕ್ತಪಡಿಸುತ್ತದೆ. ಮತ್ತು ಈ ರೀತಿ ಪ್ರಾಣ ಕಳಕೊಂಡವರ ಕುಟುಂಬಗಳಿಗೆಲ್ಲ ಸಂತಾಪವನ್ನು ವ್ತಕ್ತಪಡಿಸುತ್ತದೆ.
ಇದನ್ನು ಓದಿ: ಪಂಚರಾಜ್ಯ ಚುನಾವಣೆ : ಕೇರಳದಲ್ಲಿ ಎಲ್ಡಿಎಫ್ ಮತ್ತೆ ಅಧಿಕಾರಕ್ಕೆ ಬರಲು ಕಾರಣವೇನು?
ಎಷ್ಟೆಲ್ಲ ಮನವಿ ಮಾಡಿಕೊಂಡರೂ ಕೇಂದ್ರ ಸರಕಾರ ಮಾನವ ಜೀವಗಳನ್ನು ಉಳಿಸಲು ಆಮ್ಲಜನಕದ ಹರಿವನ್ನು ಖಚಿತಗೊಳಿಸುವಲ್ಲಿ ವಿಫಲವಾಗಿದೆ. ಎಲ್ಲ ಆಸ್ಪತ್ರೆಗಳಿಗೆ, ಆರೋಗ್ಯ ಕೇಂದ್ರಗಳಿಗೆ ಮತ್ತು ಮನೆಯಲ್ಲಿ ಚಿಕಿತ್ಸೆ ಪಡೆಯುವವರಲ್ಲಿ ಅಗತ್ಯವಿರುವವರಿಗೆ ಆಕ್ಸಿಜನ್ ಪೂರೈಕೆ ಅಬಾಧಿತವಾಗಿ ಹರಿಯುವಂತೆ ಮಾಡಬೇಕೆಂದು ಪೊಲಿಟ್ಬ್ಯುರೊ ಮತ್ತೊಮ್ಮೆ ಆಗ್ರಹಿಸುತ್ತದೆ.
ತಕ್ಷಣವೇ ಒಂದು ಸಾಮೂಹಿಕ ಲಸಿಕೀಕರಣ ಕಾರ್ಯಕ್ರಮವನ್ನು ಆರಂಭಿಸಬೇಕು. ಲಸಿಕೆಗಳನ್ನು ಎಲ್ಲ ಅಂತರರಾಷ್ಟ್ರೀಯ ಮತ್ತು ದೇಶದೊಳಗೆ ಲಭ್ಯವಿರುವ ಮೂಲಗಳಿಂದ ಪಡೆಯಬೇಕು. ಎಲ್ಲ ಸಾರ್ವಜನಿಕ ವಲಯದ ಲಸಿಕೆ ಉತ್ಪಾದನಾ ಸೌಕರ್ಯಗಳನ್ನು ಲಸಿಕೆ ಉತ್ಪಾದನೆಗೆ ಬಳಸಿಕೊಳ್ಳಬೇಕು. ಲಸಿಕೆ ಕಾರ್ಯಕ್ರಮಕ್ಕೆಂದು ಬಜೆಟಿನಲ್ಲಿ ನೀಡಿದ ರೂ.35,000 ಕೋಟಿಯನ್ನು ಇಂತಹ ಒಂದು ಲಸಿಕೆ ಕಾರ್ಯಕ್ರಮವನ್ನು ದೇಶಾದ್ಯಂತ ರಭಸದಿಂದ ಆರಂಭಿಸಲು ಬಳಸಿಕೊಳ್ಳಬೇಕು.
ಜೀವನೋಪಾಯದ ಪ್ರಶ್ನೆಗಳು: ಮಹಾಸೋಂಕು ಮತ್ತು ದೇಶದ ಹಲವು ಭಾಗಗಳಲ್ಲಿ ಹಾಕಿರುವ ಲಾಕ್ಡೌನ್ಗಳಿಂದಾಗಿರುವ ಅಡೆ-ತಡೆಗಳಿಂದಾಗಿ ಲಕ್ಷಾಂತರ ಜನಗಳು ತಮ್ಮ ಉದ್ಯೋಗಗಳನ್ನು ಕಳಕೊಂಡಿದ್ದಾರೆ. ಈ ಅವಧಿಯಲ್ಲಿ ಉದ್ಯೋಗಗಳಿಗೆ ರಕ್ಷಣೆ ಕೊಡಬೇಕು ಎಂದು ನಿರ್ದೇಶನ ನೀಡುವ ಅಧಿಕಾರ ಕೇಂದ್ರ ಸರಕಾರಕ್ಕೆ ಇದೆ. ಜನಗಳ ಜೀವನೋಪಾಯಗಳನ್ನು ರಕ್ಷಿಸಲು ಈ ಅಧಿಕಾರವನ್ನು ಬಳಸಿಕೊಳ್ಳಬೇಕು ಎಂದು ಪೊಲಿಟ್ ಬ್ಯುರೊ ಆಗ್ರಹಿಸುತ್ತದೆ.
ಆದಾಯ ತೆರಿಗೆ ವ್ಯಾಪ್ತಿಯ ಹೊರಗಿರುವ ಎಲ್ಲ ಕುಟುಂಬಗಳಿಗೆ ತಿಂಗಳಿಗೆ ರೂ.7,500 ನಗದು ವರ್ಗಾವಣೆ ಮಾಡಬೇಕಾದ್ದು ಈಗ ಅತ್ಯಗತ್ಯವಾಗಿದೆ. ಇದು ಕೂಡಲೇ ಆರಂಭವಾಗಬೇಕು.
ಆಹಾರ ಧಾನ್ಯಗಳು: ಕೋಟ್ಯಂತರ ಟನ್ ಆಹಾರ ಧಾನ್ಯಗಳು ಕೇಂದ್ರೀಯ ಗೋಡೌನುಗಳಲ್ಲಿ ಕೊಳೆಯುತ್ತಿವೆ. ಇವನ್ನು ಅಗತ್ಯವಿರುವ ಎಲ್ಲರಿಗೂ ಹಂಚಬೇಕು.
ಸೆಂಟ್ರಲ್ ವಿಸ್ತಾ ನಿರ್ಮಾಣವನ್ನು ನಿಲ್ಲಿಸಬೇಕು
ಇಂತಹ ಮಾನವ ಆರೋಗ್ಯ ದುರಂತದ ಸಮಯದಲ್ಲಿ ಸಾವಿರಾರು ಕೋಟಿ ರೂ.ಗಳನ್ನು ಖರ್ಚು ಮಾಡಿ ಸೆಂಟ್ರಲ್ ವಿಸ್ತಾ ಪರಿಯೋಜನೆಯನ್ನು ಮುಂದುವರೆಸುತ್ತಿರುವುದು ಅಸಹ್ಯಕರವಾದ ಸಂಗತಿ. ಇದನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಆ ಹಣವನ್ನು ಜನಗಳಿಗೆ ಆಕ್ಸಿಜನ್ ಮತ್ತು ಇತರ ಸೌಕರ್ಯಗಳನ್ನು ಒದಗಿಸಲು ವರ್ಗಾಯಿಸಬೇಕು.
ವಿಧಾನಸಭಾ ಚುನಾವಣೆಗಳು
ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಈ ನಾಲ್ಕು ಪ್ರಮುಖ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳು ಬಿಜೆಪಿಗೆ ಒಂದು ತೀವ್ರ ಹಿನ್ನಡೆ. ಕೋಮುವಾದಿ ಧ್ರುವೀಕರಣವನ್ನು ತೀಕ್ಷ್ಣಗೊಳಿಸಿ, ಅಪಾರ ಹಣವನ್ನು ಖರ್ಚುಮಾಡಿ, ಕೇಂದ್ರೀಯ ಸಂಸ್ಥೆಗಳನ್ನು ಆಕ್ರಮಣಕಾರೀ ರೀತಿಯಲ್ಲಿ ದುರುಪಯೋಗಪಡಿಸಿಕೊಂಡು ಮತ್ತು ಚುನಾವಣಾ ಯಂತ್ರದಲ್ಲಿಯೇ ಕೈವಾಡ ನಡೆಸಿ ಸರ್ವಪ್ರಯತ್ನಗಳನ್ನು ಮಾಡಿದರೂ ಬಿಜೆಪಿ ಜನಗಳ ಬೆಂಬಲ ಪಡೆಯುವಲ್ಲಿ ವಿಫಲವಾಗಿದೆ, ಮತ್ತು ನಿರ್ಣಾಯಕ ರೀತಿಯಲ್ಲಿ ಸೋತಿದೆ.
ಇದನ್ನು ಓದಿ: ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ತೀವ್ರ ಸೋಲು – ಸಿಪಿಐ(ಎಂ) ಪೊಲಿಟ್ ಬ್ಯುರೊ
ಈ ಫಲಿತಾಂಶಗಳು ಭಾರತೀಯ ಗಣತಂತ್ರದ ಜಾತ್ಯತೀತ ಪ್ರಜಾಪ್ರಭುತ್ವ ಚಾರಿತ್ರ್ಯವನ್ನು ಕಾಯ್ದುಕೊಳ್ಳಲು ಮತ್ತು ನಮ್ಮ ಜನಗಳ ಬದುಕುಗಳನ್ನು ಬಹಳಷ್ಟು ಉತ್ತಮಪಡಿಸಲು ದೇಶದಲ್ಲಿ ನಡೆಯುತ್ತಿರುವ ಹೋರಾಟಗಳನ್ನು ಜನತಾ ಆಂದೋಲನಗಳನ್ನು ಮತ್ತಷ್ಟು ಬಲಿಷ್ಟಗೊಳಿಸಬೇಕು.
ಕೇರಳ: ಪೊಲಿಟ್ಬ್ಯುರೊ ಕೇರಳದ ಎಡ ಪ್ರಜಾಪ್ರಭುತ್ವ ರಂಗ ಭಾರೀ ವಿಜಯ ಗಳಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸುತ್ತದೆ. ಎಲ್ಡಿಎಫ್ ನಲ್ಲಿ ಮತ್ತೊಮ್ಮೆ ವಿಶ್ವಾಸವಿಟ್ಟು ಮುಂದಿನ ಸರಕಾರವನ್ನು ರಚಿಸಲು ಅದನ್ನು ಮತ್ತೆ ಚುನಾಯಿಸಿರುವುದಕ್ಕೆ ಕೇರಳದ ಜನತೆಗೆ ಧನ್ಯವಾದವನ್ನು ಅರ್ಪಿಸುತ್ತದೆ. ಅಧಿಕಾರದಲ್ಲಿರುವ ಸರಕಾರವನ್ನು ಮತ್ತೆ ಚುನಾಯಿಸಿರುವ ಈ ಘಟನೆ ನಾಲ್ಕು ದಶಕಗಳ ನಂತರ ಸಂಭವಿಸಿದೆ. ಈ ಬಾರಿ ಎಲ್ಡಿಎಫ್ ಕಳೆದ ಬಾರಿಗಿಂತಲೂ ಉತ್ತಮ ಫಲಿತಾಂಶವನ್ನು ಪಡೆದಿದೆ.
ಇದನ್ನು ಓದಿ: ಎಲ್.ಡಿ.ಎಫ್.ಗೆ ಅಭೂತಪೂರ್ವ ಚಾರಿತ್ರಿಕ ಜನಾದೇಶ – ಸಿಪಿಐ(ಎಂ) ಕೇರಳ ರಾಜ್ಯ ಕಾರ್ಯದರ್ಶಿ ಮಂಡಳಿ
ಕೇರಳದ ಜನತೆ ಈಗಿರುವ ಸರಕಾರದ ಕಾರ್ಯನಿರ್ವಹಣೆ, ಅದು ಅನುಸರಿಸಿದ ಪರ್ಯಾಯ ಧೋರಣೆಗಳು, ನೈಸರ್ಗಿಕ ವಿಪತ್ತುಗಳನ್ನು, ಮಹಾಸೋಂಕಿನ ಪರಿಣಾಮಗಳನ್ನು ನಿಭಾಯಿಸಿದ ವೈಖರಿ, ಕೈಗೊಂಡ ಜನಕಲ್ಯಾಣ ಕ್ರಮಗಳು ಮತ್ತು ಕೇರಳ ಸಮಾಜದ ಜಾತ್ಯತೀತ ಪ್ರಜಾಸತ್ತಾತ್ಮಕ ಸಾಮರಸ್ಯಭರಿತ ಸ್ವರೂಪವನ್ನು ರಕ್ಷಿಸಿಕೊಂಡಿರುವುದಕ್ಕೆ ಮತ ನೀಡಿದ್ದಾರೆ.
ಪಶ್ಚಿಮ ಬಂಗಾಳ: ಬಿಜೆಪಿ ತನ್ನ ಹಣಬಲ ಮತ್ತು ಕೈಚಳಕಗಳ ಹೊರತಾಗಿಯೂ ಒಂದು ತೀವ್ರ ಹಿನ್ನಡೆಯನ್ನು ಅನುಭವಿಸಿದೆ. ಬಂಗಾಳದ ಜನತೆ ಕೋಮುವಾದಿ ಧ್ರುವೀಕರಣದ ತತ್ವವನ್ನು ಅತ್ಯಂತ ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ.
ಇದನ್ನು ಓದಿ: ಬಿಜೆಪಿಯನ್ನು ಸೋಲಿಸುವ ಜನಗಳ ಆಕಾಂಕ್ಷೆಯಿಂದಾಗಿ ಟಿಎಂಸಿಗೆ ಪ್ರಯೋಜನವಾಗಿದೆ: ಬಿಮನ್ ಬಸು
ಸಿಪಿಐ(ಎಂ) ಮತ್ತು ಎಡಪಕ್ಷಗಳ ಫಲಿತಾಂಶ ಅತ್ಯಂತ ನಿರಾಶಾದಾಯಕವಾಗಿದೆ. ಬಿಜೆಪಿಯನ್ನು ಸೋಲಿಸುವ ಜನಗಳ ಆಕಾಂಕ್ಷೆಯಿAದಾಗಿ ಉಂಟಾದ ತೀಕ್ಷ್ಣವಾದ ಧ್ರುವೀಕರಣದ ಮಧ್ಯೆ ಸಂಯುಕ್ತ ಮೋರ್ಚಾ ಹಿಂಡಿಹಿಪ್ಪೆಯಾಗಿದೆ. ಪಕ್ಷ ಇದರಿಂದ ಅಗತ್ಯ ಪಾಟಗಳನ್ನು ಕಲಿಯಲು ಈ ಫಲಿತಾಂಶಗಳ ಸ್ವವಿಮರ್ಶಾತ್ಮಕ ಪರಾಮರ್ಶೆಯನ್ನು ನಡೆಸುತ್ತದೆ.
ತಮಿಳುನಾಡು: ಡಿಎಂಕೆ ನೇತೃತ್ವದ ರಂಗ ಒಂದು ಪ್ರಭಾವಪೂರ್ಣ ವಿಜಯವನ್ನು ಗಳಿಸಿದೆ. ತಮಿಳುನಾಡಿನ ಜನತೆ ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟವನ್ನು ತಿರಸ್ಕರಿಸಿದ್ದಾರೆ ಮತ್ತು ಅಧಿಕಾರದಲ್ಲಿದ್ದ ಎಐಎಡಿಎಂಕೆ ಸರಕಾರವನ್ನು ಸೋಲಿಸಿದ್ದಾರೆ.
ಇದನ್ನು ಓದಿ: ಆರು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ ಸಿಪಿಐ(ಎಂ)ಗೆ ಎರಡರಲ್ಲಿ ಜಯ
ಅಸ್ಸಾಂ: ಇಲ್ಲಿ ಮಾತ್ರವೇ ಬಿಜೆಪಿ ತನ್ನ ಸರಕಾರವನ್ನು ಹೇಗೋ ಉಳಿಸಿಕೊಂಡಿದೆ. ಮತಗಳಿಕೆಯ ಪಾಲನ್ನು ನೋಡಿದರೆ ಬಿಜೆಪಿ ಮೈತ್ರಿಕೂಟ ಮತ್ತು ಮಹಾಜೋತ್ ನಡುವಿನ ಅಂತರ ಕಡಿಮೆಯಿದೆ.
ಮತದಾನ ನಂತರದ ಹಿಂಸಾಚಾರ
ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸಿದ ನಂತರ ನಮ್ಮ ಸದಸ್ಯರು ಮತ್ತು ಬೆಂಬಲಿಗರ ಮೇಲೆ ತೃಣಮೂಲ ಕಾಂಗ್ರೆಸ್ ಹಿಂಸಾಚಾರದಲ್ಲಿ ತೊಡಗಿರುವುದನ್ನು ಪೊಲಿಟ್ ಬ್ಯುರೊ ಬಲವಾಗಿ ಖಂಡಿಸುತ್ತದೆ. ಇಂತಹ ದಾಳಿಗಳು ಹೆಚ್ಚುತ್ತಿವೆ. ಈಗಾಗಲೇ ಪಕ್ಷದ ಒಬ್ಬ ಸಂಗಾತಿ ಕಾಕೋಲಿ ಖೇತ್ರಪಾಲ್ ಮತ್ತು ಐ.ಎಸ್.ಎಫ್.ನ ಹಸನುಝ್ಝಮಾನ್ ಜೀವಗಳನ್ನು ಅವರು ತೆಗೆದಿದ್ದಾರೆ. ಇಂತಹ ಭಯೋತ್ಪಾದನೆ ಮತ್ತು ಹಿಂಸಾಚಾರದ ರಾಜಕೀಯವನ್ನು ನಿಲ್ಲಿಸಬೇಕು ಎಂದು ಪೊಲಿಟ್ ಬ್ಯುರೊ ತೃಣಮೂಲ ಕಾಂಗ್ರೆಸ್ಗೆ ಕರೆ ನೀಡುತ್ತದೆ. ಇದನ್ನು ಪ್ರತಿರೋಧಿಸಲಾಗುವುದು ಮತ್ತು ಹಿಮ್ಮೆಟ್ಟಿಸಲಾಗುವುದು.
ತ್ರಿಪುರಾದಲ್ಲಿ ಸಿಪಿಐ(ಎಂ) ಮತ್ತು ಅದರ ಬೆಂಬಲಿಗರ ವಿರುದ್ಧ ದುಷ್ಟ ದಾಳಿಗಳನ್ನು ಹರಿಯ ಬಿಟ್ಟಿರುವುದು ಬಿಜೆಪಿ. ಇತ್ತೀಚೆಗೆ ಸ್ವಾಯತ್ತ ಜಿಲ್ಲಾ ಮಂಡಳಿ ಚುನಾವಣೆಗಳಲ್ಲಿ ಸೋತ ನಂತರ ಅದು ಈ ದಾಳಿಗಳನ್ನು ನಡೆಸಿದೆ.
ರೈತ ಹೋರಾಟ
ಕೋವಿಡ್ ಉಬ್ಬರ ತೀವ್ರಗೊಳ್ಳುತ್ತಿರುವಾಗ, ಇದೀಗ ಕೇಂದ್ರ ಸರಕಾರ ಸುಮಾರು ಆರು ತಿಂಗಳಿಂದ ಹೋರಾಟ ನಡೆಸಿರುವ ರೈತರ ಬೇಡಿಕೆಗಳನ್ನು ಒಪ್ಪಿಕೊಳ್ಳಬೇಕಾದ ಸಮಯ.
ಕೇಂದ್ರ ಸರಕಾರ ತಕ್ಷಣವೇ ಹೋರಾಟನಿರತ ರೈತರ ಮುಖಂಡರನ್ನು ಮಾತುಕತೆಗೆ ಕರೆಯಬೇಕು ಮತ್ತು ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕೆಂಬ ಅವರ ಆಗ್ರಹವನ್ನು ಒಪ್ಪಿಕೊಳ್ಳಬೇಕು.