ಬೆಂಗಳೂರು : ವಿದ್ಯುತ್ ದರ ಏರಿಕೆ ಹಿಂಪಡೆಯಬೇಕು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ವಿಧಾನ ಸಭಾ ಚುನಾವಣೆ ಮುಗಿಯುತ್ತಿದ್ದಂತೆಯೆ ಏಪ್ರಿಲ್ ನಿಂದ ಪೂರ್ವಾನ್ವಯವಾಗುವಂತೆ ವಿದ್ಯುತ್ ದರವನ್ನು ತಲಾ ಯುನಿಟ್ ಗೆ 7 ರೂ ಗೆ ಹೆಚ್ಚಳ ಮಾಡಿರುವುದು ಮತ್ತು ಸುಮಾರು 5 ,6 ಹಂತಗಳ ಸ್ಲಾಬ್ ದರ ಹೊಂದಿದ್ದ ವಿಧಾನವನ್ನು ಎರಡು ಹಂತಗಳಿಗೆ ಬದಲಾಯಿಸಿರುವುದು ವ್ಯಾಪಕ ಬೆಲೆ ಏರಿಕೆಗೆ ಕಾರಣವಾಗಲಿದೆ. ಇದು ರಾಜ್ಯದ ಅಭಿವೃದ್ದಿಗೆ ಮಾರಕವಾಗಿದ್ದು ರಾಜ್ಯ ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ ಅಗತ್ಯ ಕ್ರಮವಹಿಸಬೇಕು ಎಂದು ಮುಖ್ಯಮಂತ್ರಿಯವರನ್ನು ಆಗ್ರಹಿಸಿದ್ದಾರೆ.
ನೂರು ಯುನಿಟ್ ಗಿಂತ ಹೆಚ್ಚುವರಿ ಬಳಸುವ ಗೃಹ ಬಳಕೆದಾರರು ಏಪ್ರಿಲ್ ನಿಂದ ಜೂಲೈ ತಿಂಗಳೊಳಗೆ ಬಡ್ಡಿ ಮತ್ತು ಅಸಲು ಸೇರಿ ಹಲವು ಸಾವಿರ ರೂಗಳ ಬಿಲ್ಗಳ ಹೊರೆಯನ್ನು ಭರಿಸ ಬೇಕಾಗುತ್ತದೆ. ಮಾತ್ರವಲ್ಲಾ, ಈ ಬೆಲೆ ಏರಿಕೆಯು ವಾಣಿಜ್ಯಕ್ಕಾಗಿ ಬಳಸುವವರ ಮೂಲಕ ಜನ ಸಾಮಾನ್ಯರು ಬಳಸುವ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗುತ್ತದೆ ಹಾಗೂ ಸಾವಿರಾರು ಸಣ್ಣ ಕೈಗಾರಿಕೆಗಳ ಮುಚ್ಚುವಿಕೆಗೆ, ಅಲ್ಲಿ ದುಡಿಯುವ ದಶ ಸಾವಿರಗಟ್ಟಲೇ ಕಾರ್ಮಿಕರ ಕುಟುಂಬಗಳ ಬೀದಿಪಾಲು ಮಾಡಲು ಕಾರಣವಾಗುತ್ತದೆ ಎಂದು ಆರೋಪಿಸಿದ್ದಾರೆ.
ನೂತನ ಸರಕಾರವೂ ಗೃಹ ಜ್ಯೋತಿ ಯೋಜನೆಯಡಿ ರಾಜ್ಯದ ಜನತೆ ಬಳಸುವ ಉಚಿತ ವಿದ್ಯುತ್ ಗೂ ಹೆಚ್ಚಿನ ಹೊರೆಯನ್ನು ಭರಿಸಬೇಕಾಗುತ್ತದೆ. ಕೆಈಆರ್ ಸಿಯು ವಿದ್ಯುತ್ ಬೆಲೆಯನ್ನು ಪರಿಷ್ಕರಿಸಿ ಹೆಚ್ಚಿಸುವುದರಿಂದ ಪ್ರತಿವರ್ಷವು ಜನ ಸಾಮಾನ್ಯರು ಹಾಗೂ ಮಧ್ಯಮ ವರ್ಗ ಬೆಲೆ ಏರಿಕೆಯ ಹೊರೆಯನ್ನು ನಿರಂತರವಾಗಿ ಭರಿಸಬೇಕಾಗುತ್ತದೆ. ಪ್ರತಿವರ್ಷವು ಸಣ್ಣ ಕೈಗಾರಿಕೆಗಳು ಹೊರೆಯನ್ನು ಭರಿಸಲಾಗದೇ ಮುಚ್ಚುವಂತಹ ಸ್ಥಿತಿ ಮುಂದುವರೆಯುತ್ತದೆ.
ಭ್ರಷ್ಡತೆಯು ಸೇರಿದ ದುಬಾರಿ ಬೆಲೆಯ ಖಾಸಗೀ ವಿದ್ಯುತ್ ಖರೀದಿಯನ್ನು ನಿಲ್ಲಿಸದ ಮತ್ತು ವಿದ್ಯುತ್ ಕಳ್ಳತನವನ್ನು ಹಾಗೂ ಸೋರುವಿಕೆಯನ್ನು ತಡೆಯಲಾಗದ ವಿದ್ಯುತ್ ಕಂಪನಿಗಳು ಮತ್ತು ಕೆಈಆರ್ ಸಿ ಜನರ ಮೇಲೆ ಪ್ರತಿವರ್ಷವೂ ವಿದ್ಯುತ್ ಬೆಲೆ ಏರಿಕೆಯ ಹೊರೆಯನ್ನು ಹೇರುತ್ತಿರುವುದು ಅಕ್ಷಮ್ಯವಾಗಿದೆ.
ರಾಜ್ಯ ಸರಕಾರ ದುಬಾರಿ ಬೆಲೆಯ ಖಾಸಗೀರಂಗದ ವಿದ್ಯುತ್ ಖರೀದಿಯನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕೆಈಆರ್ ಸಿ ಸಂಸ್ಥೆಯನ್ನು ಹುಟ್ಟು ಹಾಕಿದ್ದೇ, ವಿದ್ಯುತ್ ರಂಗದ ಖಾಸಗೀಕರಣಕ್ಕೆ ಮತ್ತು ಖಾಸಗೀ ರಂಗದ ವಿದ್ಯುತ್ ಬೆಲೆ ಏರಿಕೆಯನ್ನು ನಿಯಮಿತವಾಗಿ ಹೆಚ್ಚಿಸುವ ದುರುದ್ದೇಶದಿಂದ ಆದ್ದರಿಂದ ಅದನ್ನು ರದ್ದುಪಡಿಸಲು ಕ್ರಮವಹಿಸುವುದು ಅಗತ್ಯವಿದೆ ಎಂದು ಯು. ಬಸವರಾಜ್ ತಿಳಿಸಿದ್ದಾರೆ.