ನವದೆಹಲಿ : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಉಗ್ರಗಾಮಿ ದೃಷ್ಟಿಕೋನಗಳನ್ನು ಹೊಂದಿರುವ ಸಂಘಟನೆಯಾಗಿದ್ದು, ತಾನು ವಿರೋಧಿಗಳೆಂದು ಬಗೆಯುವವರ ವಿರುದ್ಧ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಸಿಪಿಐ(ಎಂ) ಈ ಉಗ್ರಗಾಮಿ ದೃಷ್ಟಿಕೋನಗಳನ್ನು ಬಲವಾಗಿ ವಿರೋಧಿಸುತ್ತ ಬಂದಿದೆ ಮತ್ತು ಪಿಎಫ್‌ಐ ನ ಹಿಂಸಾತ್ಮಕ ಚಟುವಟಿಕೆಗಳನ್ನು ಯಾವಾಗಲೂ ಖಂಡಿಸಿದೆ. ಆದಾಗ್ಯೂ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಪಿಎಫ್‌ಐ ಅನ್ನು ಕಾನೂನುಬಾಹಿರ ಸಂಘವೆಂದು ಸಾರಿರುವ ಅಧಿಸೂಚನೆಯು ಈ ಸಮಸ್ಯೆಯನ್ನು ನಿಭಾಯಿಸುವ ಮಾರ್ಗವಲ್ಲ. ಆರ್‌ಎಸ್‌ಎಸ್ ಮತ್ತು ಮಾವೋವಾದಿಗಳಂತಹ ಸಂಘಟನೆಗಳ ಮೇಲಿನ ನಿಷೇಧಗಳು ಪರಿಣಾಮಕಾರಿಯಾಗಿಲ್ಲ ಎಂಬುದು ಹಿಂದಿನ ಅನುಭವದಿಂದ ಸಾಬೀತಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.
ಪಿಎಫ್‌ಐ ಕಾನೂನುಬಾಹಿರ ಅಥವಾ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಅದರ ವಿರುದ್ಧ ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ದೃಢವಾದ ಆಡಳಿತಾತ್ಮಕ ಕ್ರಮಗಳನ್ನು ವಹಿಸಬೇಕು, ಅದರ ಸಂಕುಚಿತ ಪಂಥವಾದಿ ಮತ್ತು ವಿಭಜಕ ಸಿದ್ಧಾಂತವನ್ನು ಜನರ ನಡುವೆ ಬಯಲಿಗೆಳೆಯಬೇಕು ಮತ್ತು ಅದರ ವಿರುದ್ಧ ರಾಜಕೀಯವಾಗಿ ಹೋರಾಡಬೇಕು ಎಂದು ಅದು ಹೇಳಿದೆ.
ಇದನ್ನೂ ಓದಿ : ದೇಶಾದ್ಯಂತ 5 ವರ್ಷ ಪಿಎಫ್ಐ ನಿಷೇಧ, ಕೇಂದ್ರ ಸರ್ಕಾರ ಘೋಷಣೆ
ಕೋಮು ಧ್ರುವೀಕರಣವನ್ನು ಸೃಷ್ಟಿಸುವ ಉದ್ದೇಶದಿಂದ ಪಿಎಫ್‌ಐ ಮತ್ತು ಆರ್‌ಎಸ್‌ಎಸ್ ಕೇರಳ ಮತ್ತು ಕರಾವಳಿ ಕರ್ನಾಟಕದಲ್ಲಿ ಹತ್ಯೆಗಳು ಮತ್ತು ಪ್ರತೀಕಾರದ ಹತ್ಯೆಗಳಲ್ಲಿ ತೊಡಗಿ ವಾತಾವರಣವನ್ನು ಕೆಡಿಸುತ್ತಿವೆ. ‘ಸನಾತನ ಸಂಸ್ಥಾ’ ಮತ್ತು ‘ಹಿಂದೂ ಜನಜಾಗೃತಿ ಸಮಿತಿ’ಯಂತಹ ಉಗ್ರಗಾಮಿ ಸಂಘಟನೆಗಳೂ ಇವೆ, ಇವುಗಳಿಗೆ ಸೇರಿದವರು ಪ್ರಖ್ಯಾತ ಜಾತ್ಯತೀತ ಲೇಖಕರು ಮತ್ತು ವ್ಯಕ್ತಿಗಳ ಹತ್ಯೆಗಳ ಆರೋಪಿಗಳಾಗಿವೆ ಎಂದು ನೆನಪಿಸಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ, ಈ ಎಲ್ಲಾ ಶಕ್ತಿಗಳು, ಅವು ಯಾವುದೇ ಉಗ್ರಗಾಮಿ ಬಹುಸಂಖ್ಯಾತ ಗುಂಪುಗಳನ್ನು ಅಥವಾ ಅಲ್ಪಸಂಖ್ಯಾತ ಗುಂಪುಗಳನ್ನು ಪ್ರತಿನಿಧಿಸುತ್ತಿರಲಿ, ನಾಡಿನ ಎಂದಿನ ಕಾನೂನುಗಳನ್ನು ಬಳಸಿಕೊಂಡು ಮತ್ತು ದೃಢವಾದ ಆಡಳಿತಾತ್ಮಕ ಕ್ರಮದ ಮೂಲಕ ಎದುರಿಸಬೇಕು ಎಂದಿದೆ.
ಅಂತಹ ಶಕ್ತಿಗಳನ್ನು ಎದುರಿಸುತ್ತ ಗಣರಾಜ್ಯದ ಜಾತ್ಯತೀತ-ಪ್ರಜಾಪ್ರಭುತ್ವದ ಸ್ವರೂಪವನ್ನು ಕಾಯ್ದುಕೊಳ್ಳುವುದು ಅಧಿಕಾರವನ್ನು ಚಲಾಯಿಸುವ ಮತ್ತು ಸಂವಿಧಾನವನ್ನು ಎತ್ತಿಹಿಡಿಯುವ ಪ್ರತಿಜ್ಞೆ ಮಾಡಿದವರ ಪ್ರಧಾನ ಕರ್ತವ್ಯವಾಗಿರಬೇಕು ಎಂದು ಪೊಲಿಟ್ ಬ್ಯುರೊ ಹೇಳಿದೆ.