ಬೆಂಗಳೂರು | ಕಾರ್ಮಿಕರ ಹಕ್ಕಗಳನ್ನ ಕಸಿದುಳ್ಳುತ್ತಿರುವ ಕೇಂದ್ರ ಸರ್ಕಾರ ಸಿಪಿಐ(ಎಂ) ನಾಯಕಿ ಯು ವಾಸುಕಿ ಆಕ್ರೋಶ

ಬೆಂಗಳೂರು : “ಎಡರಂಗವು ನಿರಂತರವಾಗಿ ಒತ್ತಡ ಹೇರಿದ ಪರಿಣಾಮವಾಗಿ ದೇಶದಲ್ಲಿ ಮನರೇಗಾ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಆದರೆ ಇಂದಿನ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಾಯ್ದೆಯ ಹೆಸರನ್ನು ಬದಲಾಯಿಸಿರುವುದು ಮಾತ್ರವಲ್ಲದೆ ಹಲವು ಬದಲಾವಣೆಗಳನ್ನು ತಂದು ಕಾರ್ಮಿಕರ ಹಕ್ಕನೇ ಕಸಿದುಕೊಂಡಿದೆ. ಅಭಿವೃದ್ಧಿ ನೆಪದಲ್ಲಿ ಜನರ ಹಕ್ಕನೇ ಕಸಿದುಕೊಂಡಿದೆ. ಈ ಕಾಯ್ದೆಯನ್ನೇ ಸಮಾಧಿ ಮಾಡಲಾಗಿದೆ” ಎಂದು ಭಾರತ ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್‌ವಾದಿ(ಸಿಪಿಐಎಂ) ಪಾಲಿಟ್ ಬ್ಯುರೋ ಸದಸ್ಯೆ ಕಾಮ್ರೇಡ್ ಯು ವಾಸುಕಿ ಹೇಳಿದರು.

ಬೆಂಗಳೂರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಸಿಪಿಐಎಂ ರಾಜ್ಯ ಸಮಿತಿಯು ‘ಪರ್ಯಾಯ ರಾಜಕಾರಣಕ್ಕಾಗಿ ಜನದನಿ ರ‍್ಯಾಲಿ’ ಕಾರ್ಯಕ್ರಮವನ್ನು ಭಾನುವಾರ(ಡಿಸೆಂಬರ್ 21) ನಡೆಸಿದೆ. ಈ ಕಾರ್ಯಕ್ರಮವನ್ನು ಚನ್ನರಾಯಪಟ್ಟಣ ಭೂ ಹೋರಾಟಗಾರರು, ಆದಿವಾಸಿ ಹೋರಾಟಗಾರರು, ಧರ್ಮಸ್ಥಳ ಪ್ರಕರಣದ ಸಂತ್ರಸ್ತರ ಕುಟುಂಬ, ಮರಕುಂಬಿ ಪ್ರಕರಣದ ಹೋರಾಟಗಾರರು, ದೇವದಾಸಿ ವಿಮೋಚನಾ ಸಂಘಟನೆ, ಕೈಗಾರಿಕಾ, ಯುವಜನ, ವಿಧ್ಯಾರ್ಥಿ ನಾಯಕರು, ಐಟಿ ಉದ್ಯೋಗಿಗಳ ಸಂಘಟನೆ ಹೋರಾಟಗಾರರು ಕೆಂಬಾವುಟ ಮೇಲೆತ್ತಿ ಹಿಡಿಯುವ ಮೂಲಕಉದ್ಘಾಟಿಸಿದರು. ಬಳಿಕ ಉದ್ಘಾಟನಾ ಭಾಷಣ ಮಾಡಿದ ಯು ವಾಸುಕಿ ಕೇಂದ್ರ ಸರ್ಕಾರ ಮನರೇಗಾದ ಹೆಸರು ಬದಲಾಯಿಸಿರುವುದು ಮತ್ತು ಹಲವು ಕಾಯ್ದೆಯಲ್ಲಿ ಹಲವು ಬದಲಾವಣೆ ತಂದಿರುವುದನ್ನು ವಿರೋಧಿಸಿದರು.

ಇದನ್ನೂ ಓದಿ : ಮುಖ್ಯಮಂತ್ರಿ ಬದಲಾವಣೆಯಲ್ಲ, ನೀತಿ ಬದಲಾವಣೆ ಬಗ್ಗೆ ಮಾತನಾಡಿ : ಡಾ ಕೆ ಪ್ರಕಾಶ್

“ಇದು ಜನ ಸಾಮಾನ್ಯರಿಗೆ ವಿಕಸಿತ ಭಾರತವಲ್ಲ ಜನರಿಗೆ ಅವಿಕಸಿತ ಭಾರತ. ಕೇಂದ್ರ ಸರ್ಕಾರವು ಮನರೇಗಾದ ಹೆಸರನ್ನು ವಿಬಿ–ಜಿ ರಾಮ್‌ ಜಿ ಎಂದು ಬದಲಾಯಿಸಿದೆ. ತನ್ನ ಬೋಗಸ್ ಉತ್ಪನ್ನದ ಮಾರಾಟಕ್ಕಾಗಿ ರಾಮನ ಹೆಸರನ್ನು ಬಳಸಿಕೊಂಡಿದೆ. ಈ ಹಿಂದೆ ಮನರೇಗಾ ಅಡಿಯಲ್ಲಿ ಬೇಡಿಕೆ ಆಧಾರದಲ್ಲಿ ಉದ್ಯೋಗವನ್ನು ನೀಡಲಾಗುತ್ತಿತ್ತು. ಆದರೆ ಈಗ ಕೇಂದ್ರ ಸರ್ಕಾರ ನೀಡಿದ ಅನುದಾನದಲ್ಲಿ ಎಷ್ಟು ಉದ್ಯೋಗ ನೀಡಲು ಸಾಧ್ಯವೋ ಅಷ್ಟು ಮಾತ್ರ ನೀಡಲಾಗುತ್ತದೆ. ಇದು ಕಾರ್ಮಿಕರ ಮೇಲೆ ಕೇಂದ್ರ ಸರ್ಕಾರ ಮಾಡಿದ ದಾಳಿ” ಎಂದು ತಿಳಿಸಿದರು.

“ಉಳಿದ ಪಕ್ಷಗಳು ಜಾತಿ, ಧರ್ಮ ಆಧಾರದಲ್ಲಿ ಜನರನ್ನು ವಿಂಗಡಿಸುತ್ತಿರುವಾಗ ಕಮ್ಯೂನಿಸ್ಟ್ ಪಕ್ಷಗಳು ಜನತೆಯ ಪರವಾಗಿ ಧ್ವನಿ ಎತ್ತುತ್ತಿದೆ. ಸದ್ಯ ನಾವು ನಿಜವಾದ ರಾಜಕೀಯವೇನು ಎಂಬ ಬಗ್ಗೆ ಚಿಂತನೆ ನಡೆಸಬೇಕು. ಶಾಸಕರು, ಸಂಸದರು, ಕೌನ್ಸಿಲರ್‌ಗಳು ಆಗುವುದು, ಸ್ವಯಂ ಪ್ರಚಾರದಲ್ಲೇ ತೊಡಗುವುದು ನಿಜವಾದ ರಾಜಕೀಯವಲ್ಲ. ಜನರಿಗೆ ಮೂಲಭೂತ ಸೌಕರ್ಯ ಒದಗಿಸಬೇಕು, ಜನರ ಸಮಸ್ಯೆಗಳಿಗೆ ಸ್ಪಂದಿಸುವುದು, ಜನರ ಪರವಾಗಿ ಹೋರಾಡುವುದು ನಿಜವಾದ ರಾಜಕೀಯ” ಎಂದು ಹೇಳಿದರು.

“ಹಲವು ಮಂದಿ ರಾಜಕೀಯದ ಬಗ್ಗೆ ನಾವು ಯಾಕೆ ತಲೆಕೆಡಿಸಿಕೊಳ್ಳಬೇಕು, ನಾವು ನಮ್ಮ ಕೆಲಸ ಮಾಡಿಕೊಂಡಿರುತ್ತೇವೆ ಎನ್ನುತ್ತಾರೆ. ಮರ ದೃಢವಾಗಿ ನಿಲ್ಲಲ್ಲು ಎಷ್ಟೇ ಪ್ರಯತ್ನಿಸಿದರೂ ಗಾಳಿ ಅದಕ್ಕೆ ಅವಕಾಶ ನೀಡದು. ಹಾಗೆಯೇ ಇಂದಿನ ಪರಿಸ್ಥಿತಿ ನಮ್ಮನ್ನು ಹೋರಾಟಕ್ಕೆ ದೂಡುತ್ತದೆ. ಈ ಹೋರಾಟದ ಹಾದಿಯಲ್ಲಿ ನಮ್ಮ ಅಸ್ತ್ರವನ್ನು ನಾವು ಮೊನಚುಗೊಳಿಸಬೇಕಿದೆ. ಅಸ್ತ್ರವೆಂದರೆ ಚಾಕು, ಚೂರಿಯಲ್ಲ. ನಮ್ಮ ಸಿದ್ಧಾಂತವೇ ನಮ್ಮ ಅಸ್ತ್ರ. ಸೈದ್ಧಾಂತಿಕ ಅಸ್ತ್ರವನ್ನು ಹರಿತಗೊಳಿಸಬೇಕು” ಎಂದರು.

“ಸರ್ಕಾರ ಕಾರ್ಮಿಕರ ಹಕ್ಕನ್ನು ಕಸಿಯುತ್ತಿದೆ. ಕಾರ್ಪೋರೇಟ್ ಸಂಸ್ಥೆಗಳ ಪರವಾಗಿದೆ. ಪ್ರಧಾನಿ ನರೇಂದ್ರ ಮೋದಿ ವೈಯಕ್ತಿಕವಾಗಿ ಅದಾನಿ, ಅಂಬಾನಿ ಜತೆ ಸ್ನೇಹ ಹೊಂದಿರುವುದಲ್ಲ. ಸದ್ಯ ಅಭಿವೃದ್ಧಿ, ಜಿಡಿಪಿ ಎಂದು ಹೇಳಲಾಗುತ್ತದೆ. ಆದರೆ ಯಾರಿಗೆ ಈ ಅಭಿವೃದ್ಧಿ. ಅಭಿವೃದ್ಧಿಯಾಗಿದ್ದರೆ ಇಂದಿಗೂ ಪಡಿತರ ನೀಡಲು ಜನರು ಮನವಿ ಮಾಡಬೇಕಾಗಿತ್ತೇ? ಈ ಅಭಿವೃದ್ಧಿ ಅಂಬಾನಿ-ಅದಾನಿ ಮನೆಗೆ ಸೇರುತ್ತಿದೆ. ಜನರ ಮನೆಗೆ ತಲುಪುತ್ತಿಲ್ಲ. ಈ ಅಭಿವೃದ್ಧಿಗಾಗಿ ಕೊಡುಗೆ ನೀಡಿದ ಜನರಿಗೆ ಅಭಿವೃದ್ಧಿಯನ್ನು ಅನುಭವಿಸುವ ಅವಕಾಶವಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“29 ಕಾರ್ಮಿಕ ಕಾನೂನುಗಳನ್ನು ಸೇರಿಸಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಕಾನೂನುಗಳನ್ನು ಸರಳೀಕರಿಸಲು, ಆಧುನೀಕರಿಸಲು ಈ ಬದಲಾವಣೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ ಕಾರ್ಮಿಕರು ಅಥವಾ ಕಾರ್ಮಿಕ ಸಂಘಟನೆಗಳು ಕಾರ್ಮಿಕ ಕಾನೂನುಗಳನ್ನು ಸರಳೀಕರಿಸಲು, ಆಧುನೀಕರಿಸಲು ಹೇಳಿದೆಯೇ” ಎಂದು ಪ್ರಶ್ನಿಸಿದ ಸಿಪಿಐಎಂ ನಾಯಕಿ ವಾಸುಕಿ, “ಕಾರ್ಪೋರೇಟ್ ಸಂಸ್ಥೆಗಳ ಆಗ್ರಹದಂತೆ ಕಾರ್ಮಿಕ ಕಾನೂನು ಬದಲಾಯಿಸಲಾಗಿದೆ. ನಿಜವಾಗಿ ಇದು ಕಾರ್ಮಿಕ ಸಂಹಿತೆಯಲ್ಲ, ಕಾರ್ಪೋರೇಟ್ ಸಂಹಿತೆ” ಎಂದು ದೂರಿದರು.

“ದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ. ಸರ್ಕಾರ ಅತ್ಯಾಚಾರಿಗಳನ್ನು ಬೆಂಬಲಿಸುತ್ತಿದೆ. ಹೆಚ್ಚಿನ ಅಪರಾಧಿಗಳು ಬಿಜೆಪಿಯಲ್ಲಿದ್ದಾರೆ. ಅಲ್ಪಸಂಖ್ಯಾತರ ಮೇಲೆಯೂ ದೌರ್ಜನ್ಯ ಹೆಚ್ಚಾಗುತ್ತಿದೆ. ಬಿಹಾರ ಮುಖ್ಯಮಂತ್ರಿ ಮಹಿಳೆಯ ಹಿಜಾಬ್ ಎಳೆದಿರುವುದು ನೀವೇ ನೋಡಿದ್ದೀರಿ. ದೇಶದಲ್ಲಿ ಅಲ್ಪಸಂಖ್ಯಾತರೂ ನಾಗರಿಕರು. ಅವರ ಹಕ್ಕನ್ನು ರಕ್ಷಿಸುವುದು ನಮ್ಮ ಕರ್ತವ್ಯ” ಎಂದು ಹೇಳಿದರು.

ಇನ್ನು ಕಾರ್ಯಕ್ರಮದಲ್ಲಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಆಗಮಿಸಿ ಹಕ್ಕೊತ್ತಾಯ ಪತ್ರ ಸ್ವೀಕರಿಸಿದರು. ಕಾರ್ಮಿಕ ಮುಖಂಡೆ ಎಸ್‌.ವರಲಕ್ಷ್ಮಿ ಹಕ್ಕೊತ್ತಾಯ ಪತ್ರ ಮಂಡಿಸಿದ್ದು, ಶೀಘ್ರವೇ ಕಾರ್ಮಿಕ ಸಂಘಟನೆಗಳೊಂದಿಗೆ ಸಭೆ ನಡೆಸಬೇಕು, ಸಚಿವರು ದಿನಾಂಕ ನೀಡಬೇಕು ಎಂದು ಮನವಿ ಮಾಡಿದರು.

ಹಕೊತ್ತಾಯ ಸ್ವೀಕರಿಸಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದಂತೆ ನಾನು ಇಲ್ಲಿಗೆ ಭೇಟಿ ನೀಡಿ ಹಕ್ಕೊತ್ತಾಯ ಸ್ವೀಕರಿಸಿದ್ದೇನೆ. ಸಿಪಿಐಎಂ ರಾಜ್ಯ ಸಮಿತಿ ಜನರ ಸಮಸ್ಯೆಗಳನ್ನು ಗುರುತಿಸಿ 20 ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಸಿಎಂ ಜತೆ ಚರ್ಚಿಸಿ ಶೀಘ್ರವೇ ಜಂಟಿ ಸಭೆಯನ್ನು ನಡೆಸಲಾಗುವುದು. ಬೇಡಿಕೆಗಳನ್ನು ಈಡೇರಿಸಲು ಕ್ರಮಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.

ಹಾಗೆಯೇ, “ರಾಜ್ಯ ಸರ್ಕಾರ ನಿಮಗೆ ಸ್ಪಂದಿಸುತ್ತದೆ. ಆದರೆ ಕೇಂದ್ರ ಸರ್ಕಾರ ಹೇಗೆಂದು ನಿಮಗೆ ತಿಳಿದಿದೆ. ರಾಜ್ಯಕ್ಕೆ ಸಿಗಬೇಕಾದ ನಿಧಿಯನ್ನು ಈವರೆಗೂ ಬಿಡುಗಡೆ ಮಾಡಿಲ್ಲ  ಹೀಗಿರುವಾಗ ಕೇಂದ್ರದ ಮೇಲೆ ನಿರೀಕ್ಷೆ ಇಡಲಾಗದು” ಎಂದು ದೂರಿದರು.

ಬಹಿರಂಗ ಸಭೆಯ ಅಧ್ಯಕ್ಷತೆಯನ್ನು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಯು. ಬಸವರಾಜ ವಹಿಸಿದ್ದರು. ಸಿಪಿಐಎಂ ರಾಜ್ಯ ಕಾರ್ಯದರ್ಶಿ ಡಾ. ಕೆ.ಪ್ರಕಾಶ್‌,  ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಸ್.‌ ವರಲಕ್ಷ್ಮಿ, ಮೀನಾಕ್ಷಿ ಸುಂದರಂ, ಕೆ,ನೀಲಾ, ಸೈಯದ್‌ ಮುಜೀಬ್‌, ಚಂದ್ರಪ್ಪ ಹೊಸ್ಕೇರಾ, ಗೋಪಾಲಕೃಷ್ಣ ಹರಳಹಳ್ಳಿ, ಮುನಿವೆಂಕಟಟಪ್ಪ, ಯಾದವಶೆಟ್ಟಿ, ಕೆ.ಮಹಾಂತೇಶ್‌, ಕೆ.ಎಸ್‌.ವಿಮಲಾ, ಹಿರಿಯ ನಾಯಕರಾದ ವಿಜೆಕೆ ನಾಯರ್‌, ಜಿ.ಎನ್.‌ ನಾಗರಾಜ್‌ ವೇದಿಕೆಯಲ್ಲಿದ್ದರು. ರಾಜ್ಯದ ವಿವಿಧ ಜಿಲ್ಲೆಗಳ ಸಿಪಿಐ(ಎಂ)ನ ಸಾವಿರಾರು ಕಾರ್ಯಕರ್ತರು ಹಾಜರಿದ್ದರು.

ಇದನ್ನೂ ನೋಡಿ : ಅಗತ್ಯ ಊಟ ಕೊಟ್ಟು, ಆರೋಗ್ಯ ಕಾಪಾಡುವುದು ಸರ್ಕಾರದ ಕರ್ತವ್ಯ Janashakthi Media

 

Donate Janashakthi Media

Leave a Reply

Your email address will not be published. Required fields are marked *