ಹಾಸನ: ಆಹಾರ ಪದಾರ್ಥಗಳ ಮತ್ತು ಅಗತ್ಯ ವಸ್ತುಗಳ ಮೇಲೆ ವಿಧಿಸಲಾಗಿರುವ ಜಿಎಸ್‌ಟಿಯನ್ನು ಕೂಡಲೇ ವಾಪಸ್ ಪಡೆಯಬೇಕು ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸುವಂತೆ ಜಿಲ್ಲಾಧಿಕಾರಿ ಕಚೇರಿ ಬಳಿ ಸಿಪಿಎಂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರಿಗೆ ಮನವಿ ಸಲ್ಲಿಸಿದರು.
ಈ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಪಿಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಧರ್ಮೇಶ್, ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಪ್ಯಾಕ್ ಮಾಡಿದ ಅಕ್ಕಿ, ಗೋಧಿ, ಮೊಸರು ಮುಂತಾದ ಎಲ್ಲಾ ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ಹೆಚ್ಚಿಸುವ ಮೂಲಕ ಜನರ ಮೇಲೆ ಮತ್ತೊಂದು ಸುತ್ತಿನ ಭಾರೀ ಹೊರೆಗಳನ್ನು ಹೇರಿರುವುದು ಬ್ರಿಟಿಷರ ಕಾಲದ ದೌರ್ಜನ್ಯವನ್ನು ನೆನಪಿಸುವಂತಿದೆ. ಸ್ವತಂತ್ರ ಭಾರತವು ಆಹಾರ ಪದಾರ್ಥಗಳ ಮೇಲೆ ತೆರಿಗೆ ಹಾಕುವ ವಸಾಹತುಶಾಹಿ ಬ್ರಿಟಿಷ್ ಸರ್ಕಾರದ ನೀತಿಯನ್ನು ಕೈಬಿಟ್ಟಿತು. ಈ ಕಳೆದ 75 ವರ್ಷಗಳಲ್ಲಿ ಅಕ್ಕಿ, ಗೋಧಿ, ಬೇಳೆಕಾಳುಗಳು ಮುಂತಾದ ಆಹಾರ ಪದಾರ್ಥಗಳು, ಮೊಸರು, ಪನೀರ್, ಮಾಂಸ, ಮೀನು, ಬೆಲ್ಲದಂತಹ ದೈನಂದಿನ ಅಗತ್ಯಗಳಿಗೆ ಎಂದಿಗೂ ತೆರಿಗೆ ವಿಧಿಸಲಾಗಿಲ್ಲ. ಆದರೆ ಈಗ ಎಲ್ಲಾ ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ಹೆಚ್ಚಳದ ಮೂಲಕ ಜನರ ಮೇಲೆ ಮತ್ತೊಂದು ಸುತ್ತಿನಲ್ಲಿ ತೀವ್ರತರವಾದ ಹೊರೆಗಳನ್ನು ಹೇರಿದೆ. ಇದು ಆಜಾದಿ ಕಾ ಅಮೃತ್ ಮಹೋತ್ಸವದ ಈ ವರ್ಷದಲ್ಲಿ ಭಾರತೀಯ ಜನತೆಗೆ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾಡಿದ ಮಹಾ ದ್ರೋಹವಾಗಿದೆ ಎಂದರು.
ಆರ್ಥಿಕ ಬಿಕ್ಕಟ್ಟು ಮತ್ತು ಕೋವಿಡ್ ಮಹಾಪಿಡುಗು ಹಾಗೂ ಕಳಪೆ ಕೋವಿಡ್ ನಿರ್ವಹಣೆ ಜನಸಾಮಾನ್ಯರು ಆರ್ಥಿಕವಾಗಿ ದುರ್ಬಲವಾಗಿರುವ ಹೊತ್ತಲ್ಲಿ ಬಡವರು, ಮಧ್ಯಮ ವರ್ಗದ ಜನರು ಬಳಸುವ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿ, ಪದಾರ್ಥಗಳ ಮೇಲೆ ಜಿ.ಎಸ್.ಟಿ. ವಿಧಿಸಿರುವುದು, ಕೇಂದ್ರ ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡೆದಿದೆ. ಮತ್ತು ಶ್ರೀಮಂತರ ಪರವಾಗಿ ಸರ್ಕಾರ ಇದೆ ಎಂಬುದನ್ನು ಸಾಬೀತುಪಡಿಸುತ್ತಿದೆ. ಜಿಎಸ್‌ಟಿ ಮೂಲಕ ಹೆಚ್ಚಿಸಲಾದ ವಸ್ತುಗಳ ಶ್ರೇಣಿಯಲ್ಲಿ ಸ್ಮಶಾನದ ಶುಲ್ಕಗಳು, ಆಸ್ಪತ್ರೆಯ ಕೊಠಡಿಗಳು, ಬರವಣಿಗೆಯ ಶಾಯಿ ಇತ್ಯಾದಿಗಳು ಕೂಡ ಸೇರಿವೆ. ಸ್ವಂತ ಉಳಿತಾಯವನ್ನು ತಮ್ಮ ಬ್ಯಾಂಕ್ ಖಾತೆಯಿಂದ ಹಿಂಪಡೆಯಲು ಸಹ ಜನರು ಬ್ಯಾಂಕ್ ಚೆಕ್‌ಗಳ ಮೇಲೆ 18 ಶೇಕಡಾ ಜಿಎಸ್‌ಟಿ ತೆರಬೇಕಾಗಿದೆ. ಕೂಲಿ ಕಾರ್ಮಿಕರು ದಿನವಿಡಿ ದುಡಿದರೂ ದಿನಬಳಕೆ ವಸ್ತುಗಳನ್ನು ಖರೀದಿಸಲು ಸಾಧ್ಯವಾಗದ ಸ್ಥಿತಿ ಇದೆ. ವಿಪರೀತ ಬೆಲೆ ಏರಿಕೆ, ಗಗನಕ್ಕೇರುತ್ತಿರುವ ನಿರುದ್ಯೋಗ, ಕೆಳಕ್ಕೆ ಉರುಳುತ್ತಿರುವ ರೂಪಾಯಿ, ವ್ಯಾಪಾರೋದ್ಯಮದಲ್ಲಿ ಭಾರೀ ಕೊರತೆ ಮತ್ತು ಜಿಡಿಪಿ ಮುಗ್ಗರಿಸುತ್ತಿರುವ ಸನ್ನಿವೇಶದಲ್ಲಿ ಜನರ ಜೀವನೋಪಾಯದ ಮೇಲೆ ಮತ್ತೊಮ್ಮೆ ಈ ಕ್ರೂರ ಪ್ರಹಾರ ನಡೆಸಲಾಗಿದೆ. ಈ ಬೆಲೆ ಏರಿಕೆಗಳು ಜನರ ಜೀವನೋಪಾಯವನ್ನು ಮತ್ತಷ್ಟು ಹಾಳು ಮಾಡುತ್ತವೆ. ಆದ್ದರಿಂದ ಕೂಡಲೇ ಆಹಾರ ಪದಾರ್ಥಗಳು ಮತ್ತು ಅತ್ಯಗತ್ಯ ಬಳಕೆಯ ಮೇಲೆ ಹಾಕಲಾಗಿರುವ ಜಿ.ಎಸ್.ಟಿ ಯನ್ನು ವಾಪಸ್ಸು ಪಡೆದು, ಏರಿಸಲಾಗಿರುವ ಅಗತ್ಯ ವಸ್ತುಗಳ ಬೆಲೆಗಳಗಳನ್ನು ಇಳಿಕೆ ಮಾಡಬೇಕೆಂದು ಈ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸಿಪಿಎಂ ಸ್ಥಳೀಯ ಸಮಿತಿ ಕಾರ್ಯದರ್ಶಿ ಎಂ.ಜಿ. ಪೃಥ್ವಿ, ಸದಸ್ಯರಾದ ಎಚ್.ಆರ್. ನವೀನ್ ಕುಮಾರ್, ಅರವಿಂದ್, ಜಿ.ಪಿ.ಸತ್ಯನಾರಾಯಣ, ಎಂ.ಬಿ.ಪುಷ್ಪ ಇತರರು ಉಪಸ್ಥಿತರಿದ್ದರು.