ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಸುಧಾಕರ್ ಹಾಗೂ ಬಿಜೆಪಿ ಬೆಂಬಲಿಗರು, ಸಿಪಿಐಎಂ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ “ಮುನಿವೆಂಕಟಪ್ಪ ಎಂ.ಪಿ” ಅವರ ಚಿಹ್ನೆ ಕುರಿತು ಮತದಾರರಿಗೆ ಗೊಂದಲ ಮೂಡಿಸುತ್ತಿದ್ದಾರೆ ಎಂದು ಸಿಪಿಐಎಂ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ಮಾದರಿ ಮತಪತ್ರ ನಮೂನೆ 7ಎ ಗೆ ಭಿನ್ನವಾಗಿ ಅಭ್ಯರ್ಥಿಗಳ ಚಿಹ್ನೆಗಳನ್ನು ಬದಲಾಯಿಸಿ ಮಾದರಿ ಮತಯಂತ್ರ ನಮೂನೆಯನ್ನು ಪ್ರಕಟಿಸಿ ಮತದಾರರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಸಿಪಿಐಎಂ ದೂರಿದೆ.
ಮೊದಲ ಹಂತದ ಮತದಾನ ಏಪ್ರಿಲ್ 26 ರಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ನಡೆಯುತ್ತಿದ್ದು, ಚುನಾವಣಾ ಆಯೋಗದಿಂದ ಏಪ್ರಿಲ್ 8 ರಂದು ಮಾದರಿ ಮತಪತ್ರದ ನಮೂನೆ 7ಎ ಅನ್ನು ಪ್ರಕಟಿಸಿ, ಅಭ್ಯರ್ಥಿಗಳ ಕ್ರಮ ಸಂಖ್ಯೆ, ಹೆಸರು, ಭಾವಚಿತ್ರ ಸಹಿತ ಅವರ ಚಿಹ್ನೆಗಳನ್ನು ಆಯೋಗ ಸ್ಪಷ್ಟವಾಗಿ ನೀಡಿದೆ.
ಇದನ್ನೂ ಓದಿ: ನುಡಿದಂತೆ ನಡೆದು, ಸತ್ಯ ಹೇಳುವವರನ್ನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬೆಂಬಲಿಸಬೇಕು, ಸತ್ಯಕ್ಕೆ ಜಯ ಸಿಗಬೇಕು; ಸಿದ್ದರಾಮಯ್ಯ
ಆದರೆ, ಚುನಾವಣಾ ಪ್ರಚಾರದ ವೇಳೆ ಕ್ರಮ ಸಂಖ್ಯೆ 4 ರಲ್ಲಿ ಇರುವ ಬಿಜೆಪಿ ಅಭ್ಯರ್ಥಿ ಡಾ. ಕೆ.ಸುಧಾಕರ್ ಅವರ ಹೆಸರನ್ನು ದೊಡ್ಡದಾಗಿ ತೋರಿಸುವಂತಹ ಮಾದರಿ ಮತಯಂತ್ರದ ನಕಲಿ ನಮೂನೆಯನ್ನು ಮತದಾರರಿಗೆ ವಿತರಿಸಲಾಗುತ್ತಿದೆ. ಆದರೆ, ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮಾದರಿ ಮತಪತ್ರದಲ್ಲಿ ಕ್ರಮ ಸಂಖ್ಯೆ 5 ರಲ್ಲಿ ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಕಮ್ಯೂನಿಸ್ಟ್ ಪಕ್ಷದ ಅಭ್ಯರ್ಥಿ ಕಲಾವತಿ.ಎನ್ ಇವರಿಗೆ ಮಡಿಕೆ (POT) ಚಿಹ್ನೆಯನ್ನು ನೀಡಲಾಗಿದ್ದು, ಸಿಪಿಐಎಂ ( ರಾಷ್ಟ್ರೀಯ ಪಕ್ಷವಾದ ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷ)ಗೆ ಪಕ್ಷದ ಚಿಹ್ನೆಯಾಗಿರುವ ಕುಡಗೋಲು ಸುತ್ತಿಗೆ ನಕ್ಷತ್ರ ಚಿಹ್ನೆ ನೀಡಿದೆ.
ಆದರೆ, ಬಿಜೆಪಿಯ ಅಭ್ಯರ್ಥಿ ಸುಧಾಕರ್ ಕೆ. ಕಡೆಯ ಬಿಜೆಪಿ ಬೆಂಬಲಿಗರು ಮತದಾರರಲ್ಲಿ ಗೊಂದಲ ಸೃಷ್ಟಿಸಲೆಂದೇ, ಯುನಿಟಿ ಸೆಂಟರ್ ಆಫ್ ಕಮ್ಯೂನಿಸ್ಟ್ ಪಕ್ಷದ ಅಭ್ಯರ್ಥಿ ಕಲಾವತಿ.ಎನ್ ಇವರ ಭಾವಚಿತ್ರದ ಮುಂದೆ ನಕಲಿ ಮತದಾನಪತ್ರದಲ್ಲಿ ಬೇಕಂತಲೇ ದಪ್ಪನಾಗಿ ಕಾಣುವಂತಹ ಕುಡಗೋಲು ಸುತ್ತಿಗೆ ನಕ್ಷತ್ರ ಚಿಹ್ನೆಯನ್ನು ಮುದ್ರಿಸಿ ಮತದಾರರಿಗೆ ಹಂಚುತಿದೆ.
ಅಲ್ಲದೇ ಸಿಪಿಐಎಂ ಅಭ್ಯರ್ಥಿ ಮುನಿವೆಂಕಟಪ್ಪ ಎಂ.ಪಿ ಅವರಿಗೂ ಹಾಗೂ ಕ್ರಮ ಸಂಖ್ಯೆ 5 ಇವರ ಚಿಹ್ನೆಯನ್ನು ಸರಿಯಾಗಿ ನಮೂದಿಸದೆ ಅವರಿಗೂ ನಷ್ಟ ಉಂಟಾಗುವಂತೆ ಮಾಡಿರುತ್ತಾರೆ.
ಇದು ಪ್ರಜಾಪ್ರತಿನಿಧಿ ಕಾಯ್ದೆ ಮತ್ತು ಮಾದರಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿರುತ್ತದೆ. ಆದ್ದರಿಂದ ಚುನಾವಣಾ ಆಯೋಗ ನಕಲಿ ಮತದಾನಪತ್ರ ಮುದ್ರಿಸಿ ಚಿಹ್ನೆಯನ್ನು ಬದಲಾಯಿಸಿ ಚಿಕ್ಕಬಳ್ಳಾಪುರದ ಮತದಾರರಿಗೆ ಗೊಂದಲಸೃಷ್ಟಿಸುತ್ತಿರುವ ಬಿಜೆಪಿ ಅಭ್ಯರ್ಥಿಯ ವಿರುದ್ಧ ಸೂಕ್ತ ಕಾನೂಕು ಕ್ರಮ ಕೈಗೊಳ್ಳುವಂತೆ ಸಿಪಿಐಎಂ ಪಕ್ಷದ ಮುಖಂಡರು ದೂರಿನಲ್ಲಿ ವಿನಂತಿಸಿದ್ದಾರೆ.
ಈ ವೇಳೆ ಸಿಪಿಐಎಂ ಅಭ್ಯರ್ಥಿ ಮುನಿವೆಂಕಟಪ್ಪ, ರಾಜ್ಯ ಕಾರ್ಯದರ್ಶಿ ಯು. ಬಸವರಾಜ, ಕೇಂದ್ರ ಸಮಿತಿ ಸದಸ್ಯ ಕೆ.ಎನ್. ಉಮೇಶ್, ಮುಖಂಡರಾದ ಚನ್ನರಾಯಪ್ಪ ಇದ್ದರು.
ಇದನ್ನೂ ನೋಡಿ: “ಸಬ್ ಕಾ ಸಾಥ್, ಸಬ್ ಕಾ ವಿಕಾಸ್” ಎಂದರೆ, ಹಿಂದುತ್ವ ಕೋಮುವಾದ ಘೋಷಣೆಯಾ ಮೋದಿಯವರೆ? ಕೆ.ಎಸ್.ವಿಮಲಾ