ಗುಡ್ಡ ಕುಸಿತ : ಸಿಎಂ ಹಾಗೂ ಕೇಂದ್ರ ಹೆದ್ದಾರಿ ಮಂತ್ರಿಗಳ ಭೇಟಿಗೆ ಸಿಪಿಐಎಂ ಒತ್ತಾಯ

ಉತ್ತರ ಕನ್ನಡ: ಜಿಲ್ಲೆಯಲ್ಲಿ ಮಳೆಗಾಳಿಯಿಂದಾಗಿ  ಅವೈಜ್ಞಾನಿಕ ಕಾಮಗಾರಿಗಳಿಂದ ಕಳೆದ ಕೆಲವು ದಿನಗಳಿಂದ  ವ್ಯಾಪಕವಾಗಿ ಸಂಭವಿಸುತ್ತಿರುವ ಗುಡ್ಡ ಕುಸಿತ ಮತ್ತು ನೆರೆಹಾವಳಿ ಹಾಗೂ ಇತರ ಪ್ರಕೃತಿ ವಿಕೋಪಗಳಿಗೆ ಮುಗ್ಧರು ಜೀವಕಳಕೊಳ್ಳುವಂತಾಗಿದೆ; ಜನಜೀವನ ತತ್ತರಿಸುವಂತಾಗಿದೆ ಮತ್ತು ನಿರಂತರ ಅಭದ್ರತೆ ಹಾಗೂ ಆತಂಕ ಮನೆಮಾಡಿದೆ. ಅನೇಕ ಕಡೆಗಳಲ್ಲಿ ಒಂದು ಊರಿನಿಂದ ಇನ್ನೊಂದು ಊರಿಗೆ ಸಂಪರ್ಕವೇ ಇಲ್ಲದಂತೆ ಆಗಿ ವ್ಯಾಪಾರೋದ್ಯಮ, ಪ್ರವಾಸೋದ್ಯಮಕ್ಕೆ ಮಾತ್ರವಲ್ಲದೇ ತುರ್ತು ಚಿಕಿತ್ಸೆಗೆ ಸುಸಜ್ಜಿತ ಆಸ್ಪತ್ರೆಗೆ ಹೊರಜಿಲ್ಲೆ-ಹೊರ ರಾಜ್ಯಗಳಿಗೆ ಹೋಗಲಿಕ್ಕೂ ಆಗದ ಪರಿಸ್ಥಿತಿ ನಾವು ನೋಡುತ್ತಿದ್ದೇವೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಯಮುನಾ ಗಾಂವ್ಕರ್ ಹೇಳಿದ್ದಾರೆ. ಹೆದ್ದಾರಿ 

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಐಆರ್.ಬಿ ಕಂಪನಿಗಳು ಹತ್ತಾರು ವರ್ಷಗಳಲ್ಲಿ ನಡೆಸಿದ ಸಂಪೂರ್ಣ ಅವೈಜ್ಞಾನಿಕ ಮತ್ತು ಮನಸೋಇಚ್ಛೆ ಅಮಾನವೀಯ ಕಾಮಗಾರಿಗಳ ಕ್ರಮದಿಂದಾಗಿ ಹಾಗೂ ಸೀಬರ್ಡ ನೌಕಾನೆಲೆಯ ಕಾರಣಕ್ಕೆ ನಿರ್ಮಾಣಗೊಂಡ ಸಮುಚ್ಛಯಗಳಿಂದಾಗಿ ಕಾರವಾರ ತೀರ ಪ್ರದೇಶದಲ್ಲಿ ಅತಿಹೆಚ್ಚು ದುರ್ಘಟನೆಗಳು ಸಂಭವಿಸಿವೆ. ಜಿಲ್ಲಾಡಳಿತ ಅವಘಡ ನಿರ್ವಹಣೆಯನ್ನು ಮಾಡುವ ಪ್ರಯತ್ನ ಮಾಡುತ್ತಿದೆಯಾದರೂ ಸಮರೋಪಾದಿಯಲ್ಲಿ ಆಗಬೇಕಾದ ಕೆಲಸಕ್ಕೆ ಅಗತ್ಯ ಇರುವಷ್ಟು ಯಂತ್ರೋಪಕರಣಗಳು, ತಜ್ಞರ ತಂಡ ಸಾಕಷ್ಟು ಪೂರೈಕೆ ಆಗಿಲ್ಲವೆಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಹೆದ್ದಾರಿ ಪ್ರಾಧಿಕಾರ ಮತ್ತು ಐಆರ್‌ಬಿ ಸ್ಥಳೀಯ ಆಡಳಿತಕ್ಕೆ ಸ್ಪಂದಿಸುವಂತೆ ಮಾಡಲು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸರ್ಕಾರದ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಇಲಾಖೆಯ ಮಂತ್ರಿಗಳು ಕೂಡಲೇ ಜಿಲ್ಲೆಗೆ ಆಗಮಿಸಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕೆಂದು ಭಾರತ ಕಮ್ಯುನಿಷ್ಟ ಪಕ್ಷ (ಮಾರ್ಕ್ಸವಾದಿ) ಸಿಪಿಐಎಂ ಉತ್ತರ ಕನ್ನಡ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಮುಸ್ಲೀಮರಿಲ್ಲದ `ಮೊಹರಂ’ ಏನಿದರ ಕುರುಹು?

ಪ್ರಕೃತಿ ವಿಕೋಪಕ್ಕಿಂತ ಮುನ್ನೋಟವಿಲ್ಲದ ಸರ್ಕಾರದ ಅಭಿವೃದ್ಧಿ ಪ್ರಣಾಳಿಕೆಯು  ನಿರ್ಮಿಸಿದ ದುರಂತದ ಸಾಲು ಜಿಲ್ಲೆಯನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಲಿದೆ. ಹಾಗಾಗಿ ಈ ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ವೈಜ್ಞಾನಿಕ ಕ್ರಮ ಕೈಗೊಳ್ಳಬೇಕೆಂದು, ಈ ದುರ್ಘಟನೆಗೆ ಕಾರಣವಾದವರ ಮೇಲೆ ನಿರ್ದಾಕ್ಷಿಣ್ಯವಾಗಿ ನಿಷ್ಪಕ್ಷಪಾತವಾಗಿ ಮೊಕದ್ದಮೆ ದಾಖಲಿಸಬೇಕೆಂದು, ಜೀವಹಾನಿಗೆ, ಬೆಳೆಹಾನಿ ಹಾಗೂ ಇನ್ನಿತರೇ ಯಾವುದೇ ಸವರೂಪದ ಕಷ್ಟನಷ್ಟಕ್ಕೆ ಗರಿಷ್ಟ ಮೊತ್ತದ ಸಹಾಯಧನ ನೀಡಿ, ಅವಲಂಬಿತರಿಗೆ ಖಾಯಂ ಉದ್ಯೋಗ, ಖಾಯಂ ಮನೆ ನಿರ್ಮಾಣ ಹಾಗೂ ಕಾಳಜಿ ಕೇಂದ್ರದಲ್ಲಿರುವವರಿಗೆ ಗುಣಮಟ್ಟದ ಆಹಾರ ಪದಾರ್ಥ, ಆರೋಗ್ಯ ಸಾಧನ, ದೈಹಿಕ ಮಾನಸಿಕ ಆಘಾತಕ್ಕೆ ಒಳಗಾದವರ ಬಗ್ಗೆ ವಿಶೇಷ ವೈದ್ಯಕೀಯ ನೆರವು, ಗುಣಮಟ್ಟದ ಉಚಿತ ಚಿಕಿತ್ಸೆ, ಉತ್ತಮ ಕುಡಿಯುವ ನೀರು ಪೂರೈಕೆ, ಲಿಂಗಸಂವೇದನೆಯೊಂದಿಗೆ ಮೂಲಸೌಕರ್ಯಗಳನ್ನು ನೀಡಲು ಕೇಳಿಕೊಂಡಿದ್ದಾರೆ.

ಲಕ್ಷಾಂತರ ರೂಪಾಯಿಯ ಪೆಟ್ರೋಲಿಯಂ ಉತ್ಪನ್ನ ವಾತಾವಣದಲ್ಲಿ ಕೆಟ್ಟಪರಿಣಾಮ ಬೀರದಂತೆ ಮುನ್ನೆಚ್ಚರಿಕೆ ಮಾಡಲು, ಅಣಶಿ, ಅರಬೈಲ್, ಅನಮೋಡ, ದೇವಿಮನೆ, ಬಡಾಳ, ಶರಾವತಿ, ಕಾಳಿ, ಅಘನಾಶಿನಿ, ಗಂಗಾವಳಿ, ಗೋಕರ್ಣ, ಕೋಗಾರ ಆಖಾತ ಪ್ರದೇಶ ಹೀಗೆ ಜಿಲ್ಲೆಯ ಘಟ್ಟ ಮತ್ತು ನದಿಮುಖಜ ಪ್ರದೇಶಗಳ ಅಧ್ಯಯನ ನಡೆಸಿ ಮುಂದಿನ ದಿನಗಳಲ್ಲಿ ಆಗಬಹುದಾದ ಅನಾಹುತ ತಪ್ಪಿಸಲು ಜಿಲ್ಲಾಡಳಿತಕ್ಕೆ ಈ ಪರಿಸ್ಥಿತಿ ನಿಭಾಯಿಸುವ ಎಲ್ಲಾ ರೀತಿಯ ಶಕ್ತಿಸಾಮರ್ಥ್ಯ, ಹಣಕಾಸು ಸಂಪನ್ಮೂಲಗಳನ್ನು ಒದಗಿಸಬೇಕೆಂದು, ಜಿಲ್ಲೆಯಲ್ಲಿ ಕೆಲಸ ಸ್ಥಗಿತವಾಗಿ ನಿಂತಿರುವ ವಾಹನಗಳ ಕಾರ್ಮಿಕರಿಗೆ ಪರಿಹಾರ ಹಾಗೂ ವಿಶ್ರಾಂತಿಗೆ ಸ್ಥಳಾವಕಾಶ ನೀಡಬೇಕೆಂದು, ಅರಣ್ಯಅತಿಕ್ರಮಣ ಸಾಗುವಳಿದಾರರನ್ನೂ ಒಳಗೊಂಡು ಯಾವುದೇ ಸ್ವರೂಪದಲ್ಲಿ ಅನಾಹುತಕ್ಕೆ ಒಳಗಾದವರಿಗೆ ಸೂಕ್ತ ಪರಿಹಾರ ನೀಡಬೇಕೆಂದು, ಅತಿಯಾದ ಮಳೆ ನೆರೆಹಾವಳಿ ಕೊಳಚೆಯಿಂದ ಅನಾರೋಗ್ಯಕರ ವಾತಾವರಣ ಮತ್ತು ರೋಗ ರುಜಿನ ತಡೆಗಟ್ಟಲು ಸಾಮೂಹಿಕವಾಗಿ ವ್ಯಾಪಕವಾಗಿ ಸೊಳ್ಳೆನಾಶಕ ಸಿಂಪಡಿಸಲು, ಅರಣ್ಯ ಇಲಾಖೆ ನೆಲದ ಸಾರ ಕೊಚ್ಚಿ ಹೋಗುವುದನ್ನು ತಪ್ಪಿಸಲು, ನೀರಿಂಗಿಸುವ ತೋಡುಗಳನ್ನು ಮಾಡಿಸಲು, ಜನಸ್ನೇಹಿಯಾಗಿ ಸ್ಪಂದಿಸಲು ಮುಂದಾಗಬೇಕೆಂದು ಸಿಪಿಐಎಂ ಉತ್ತರ ಕನ್ನಡ ಜಿಲ್ಲಾ ಸಮಿತಿ ಆಗ್ರಹಿಸಿದೆ.

ಕಾಮಗಾರಿಯು ಅವೈಜ್ಞಾನಿಕವಾಗಿದ್ದಾಗ ಅತಿವೃಷ್ಟಿ ಹಾಗೂ ಪ್ರಕೃತಿ ವಿಕೋಪ ತಡೆಗಟ್ಟುವ, ನಿಭಾಯಿಸುವ  ವಿಧಾನ ಸರಿ ಇಲ್ಲದಿದ್ದಾಗ ಮಾರಣಾಂತಿಕ ಅನಾಹುತಗಳು ಸಂಭವಿಸುತ್ತವೆ ಎಂಬ ಅರಿವು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಇರಬೇಕಿತ್ತು. ಕಳೆದ ವರ್ಷ ಕಳಚೆ, ಅರಬೈಲ್ ಹಾಗೂ ಅಣಶಿ ಗುಡ್ಡ ಕುಸಿತವಾದಾಗಲೆ ಎಚ್ಚೆತ್ತುಕೊಳ್ಳಬೇಕಿತ್ತು. ಸೀಬರ್ಡ ನೌಕಾನೆಲೆ, ಅಣುವಿದ್ಯುತ್ ಸ್ಥಾವರ, ಚತುಷ್ಪಥ ಯೋಜನೆಗಳು ಜಾರಿಯಾಗಿರುವ ಈ ಮೂವತ್ತು ವರ್ಷಗಳ ಅವಧಿಯಲ್ಲಿ ಸಂಸತ್ತಿನಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದವರು ಅದರ ಸಾಧಕ ಬಾಧಕ ಅಭ್ಯಸಿಸಿ ಪಾರ್ಲಿಮೆಂಟಿನಲ್ಲಿ ಧ್ವನಿ ಎತ್ತಲಿಲ್ಲ. ಹಾಗೆಯೇ ರಾಜ್ಯದಲ್ಲಿ ಶಾಸಕರುಗಳು ಮಂತ್ರಿಗಳೂ ಪೂರ್ಣ ಕಾಳಜಿ ವಹಿಸಲಿಲ್ಲ. ಜಿಲ್ಲೆಗೆ ಜನಸ್ನೇಹಿ ಪರಿಸರ ಮತ್ತು ಕೃಷಿ ಪೂರಕ ಯೋಜನೆ ತರಲು ಪ್ರಯತ್ನಿಸಲೇ ಇಲ್ಲ. ಐಆರ್.ಬಿ ಒಂದು ದೈತ್ಯ ಕಂಪನಿ. ಇದಕ್ಕೆ ರಾಷ್ಟ್ರೀಯ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳ ಮತ್ತು ಅತಿಯಾದ ಲಾಭ ತುಂಬಿರುತ್ತದೆ. ಸಾಮಾನ್ಯ ಜನತೆ ಇಂತಹ ಕಂಪನಿಗಳನ್ನು ಎದುರು ಹಾಕಿಕೊಳ್ಳುವುದು ಕಷ್ಟಸಾಧ್ಯವಿರುವಾಗ ಸರ್ಕಾರ ಜನರ ರಕ್ಷಣೆಗೆ ನಿಲ್ಲಬೇಕಾಗುತ್ತದೆಂದು ಸಿಪಿಐಎಂ ಒತ್ತಾಯಿಸಿದೆ.

ಜಿಲ್ಲೆಯಲ್ಲಿ ಸಂಭವಿಸಿದ ಈ ದುರ್ಘಟನೆಯ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳು, ಕೇಂದ್ರ ಸರ್ಕಾರದ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಮಂತ್ರಿಗಳು ಹಾಜರಿದ್ದು, ಉಸ್ತುವಾರಿ ಮಂತ್ರಿಗಳು, ಸಂಸದರು, ಶಾಸಕರುಗಳನ್ನು, ಎಲ್ಲಾ ರಾಜಕೀಯ ಪಕ್ಷಗಳನ್ನು, ಸಂಘ ಸಂಸ್ಥೆಗಳನ್ನು, ಗಣ್ಯರನ್ನು, ತಜ್ಞರನ್ನು, ಅರಣ್ಯ ಇಲಾಖೆ, ಹೆದ್ದಾರಿ ಇಲಾಖೆ, ಲೋಕೋಪಯೋಗಿ ಇಲಾಖೆ ಕರೆದು ತುರ್ತಾಗಿ ಎಲ್ಲಾ ಕಾಮಗಾರಿಗಳನ್ನು ವ್ಯವಸ್ಥಿತವಾಗಿ ಪೂರ್ಣಗೊಳಿಸಲು, ಜಿಲ್ಲೆಯ ಪರಿಸರ ಪೂರಕ ಅಭಿವೃದ್ಧಿಗೆ ಮುಂದಾಗಬೇಕೆಂದು ಸಿಪಿಐಎಂ ಉತ್ತರ ಕನ್ನಡ ಜಿಲ್ಲಾ ಸಮಿತಿಯು ಒತ್ತಾಯಿಸಿದೆ.

ಇದನ್ನೂ ನೋಡಿ: ಎರಡು ಸಾವಿರ ಹುದ್ದೆಗೆ ಮೂವತ್ತು ಸಾವಿರ ಅರ್ಜಿ – ನೋಡಿ ಮೋದಿ ಸಾಹೇಬ್ರೆ ಎಷ್ಟುಂದು ನಿರುದ್ಯೋಗಿಗಳುJanashakthi Media

Donate Janashakthi Media

Leave a Reply

Your email address will not be published. Required fields are marked *