ಬೆಂಗಳೂರು : ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ 2016 ಎಪ್ರಿಲ್ ನಲ್ಲಿ ನಡೆದಿದ್ದು 2021 ಎಪ್ರಿಲ್ ನಲ್ಲಿ ಆಡಳಿತದ ಅವಧಿ ಮುಗಿದಿದ್ದು, ಈಗಾಗಲೇ ಜನ ಪ್ರತಿನಿಧಿಗಳ ಆಡಳಿತ ಇಲ್ಲದೇ ಐದು ವರ್ಷಗಳೂ ಕಳೆದಿರುವುದು ಅಧಿಕಾರ ವಿಕೇಂದ್ರೀಕರಣದ ಪಂಚಾಯತ್ ರಾಜ್ ಕಾಯ್ದೆಯ ಸ್ಪೂರ್ತಿಗೆ ವಿರುದ್ದವಾಗಿದೆ. ಇದರಿಂದ ರಾಜ್ಯದ ಗ್ರಾಮೀಣಾಭಿವೃದ್ದಿ ಮತ್ತು ಮಾನವ ಅಭಿವೃದ್ಧಿಗೆ ಬಹಳ ದೊಡ್ಡ ಹಿನ್ನಡೆಯಾಗಿದೆ. ಜೊತೆಗೆ 15 ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಬರಬೇಕಾಗಿದ್ದ1279ಕೋಟಿ ರೂಪಾಯಿ ಅನುದಾನ ಕಡಿತಗೊಂಡಿದೆ. ಇಂತಹ ಲೋಪಕ್ಕೆ ಅಧಿಕಾರ ಕೇಂದ್ರೀಕರಣದ ಹಾಗೂ ಆಡಳಿತ ಭ್ರಷ್ಟಾಚಾರವನ್ನು ಬೆಂಬಲಿಸುವ ಹಿಂದಿನ ಬಿಜೆಪಿ ಸರ್ಕಾರ ಹಾಗೂ ಈಗಿನ ಕಾಂಗ್ರೆಸ್ ಸರ್ಕಾರ ಪೂರ್ಣ ಹೊಣೆಯಾಗಿದೆ. ಇಂತಹ ಅಕ್ಷಮ್ಯ ಅಪರಾಧ ಮುಂದುವರೆಯದಂತೆ ತಕ್ಷಣ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತ ಚುನಾವಣೆ ನಡೆಸಲು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸುತ್ತದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಡಾ. ಕೆ ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾಗಿದೆ. ಕೇರಳದ ಎಡ ಪ್ರಜಾಪ್ರಭುತ್ವ ರಂಗ ಸರಕಾರವು ನಿಗದಿತ ಕಾಲಾವಧಿಯಲ್ಲಿ ಯಶಸ್ವಿಯಾಗಿ ಚುನಾವಣೆ ನಡೆಸುತ್ತಾ ಬಂದಿದೆ. ಸುಮಾರು ಐದು ವರ್ಷ ಜನಪ್ರತಿನಿಧಿಗಳ ಆಡಳಿತ ಇಲ್ಲದೇ ಸ್ಥಳೀಯ ಸಂಸ್ಥೆಗಳು ಕಾರ್ಯನಿರ್ವಹಣೆ ಅಧಿಕಾರಿಶಾಹಿಗಳ ಕಪಿಮುಷ್ಠಿಯಲ್ಲಿ ಸಿಲುಕಿ ಯಾರಿಗೂ ಉತ್ತರದಾಯಿ ಅಲ್ಲದ ಸ್ಥಿತಿಯಲ್ಲಿ ಇರುವಾಗ, ಮತ್ತಷ್ಟು ವಿಳಂಬ ಮಾಡುವುದು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.
ಇದನ್ನೂ ಓದಿ : ಡಿ.21 ಬೆಂಗಳೂರಿನಲ್ಲಿ “ಪರ್ಯಾಯ ರಾಜಕಾರಣಕ್ಕಾಗಿ ಸಿಪಿಐ(ಎಂ) ಜನದನಿ ರ‍್ಯಾಲಿ”
ಧೀರ್ಘ ಅವಧಿಯ ಚುನಾವಣೆ ಮುಂದೂಡಿಕೆಗೆ ಮೂಲ ಕಾರಣ ಹಿಂದಿನ ಬಿಜೆಪಿ ಸರಕಾರ. ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ನೆಪದಲ್ಲಿ ಚುನಾವಣೆ ಮುಂದೂಡಲಾಗಿತ್ತು. ರಾಜ್ಯ ಚುನಾವಣಾ ಆಯೋಗವು ನಿಗದಿತ ಸಮಯದಲ್ಲಿ ಚುನಾವಣೆ ನಡೆಸಲು ಹೈ ಕೋರ್ಟ್ ಮೆಟ್ಟಲೇರಿತ್ತು. ಈಗಲಾದರೂ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಂಡು ಚುನಾವಣೆ ನಡೆಸಬೇಕೆಂದು ಸಿಪಿಐ(ಎಂ) ಆಗ್ರಹಿಸುತ್ತದೆ ಎಂದು ಒತ್ತಾಯಿಸಿದರು.
ಒಳ ಮೀಸಲಾತಿ ವರ್ಗೀಕರಣದ ಲೋಪ ಸರಿಪಡಿಸಲು ಸಿಪಿಐಎಂ ಆಗ್ರಹ :
ಪರಿಶಿಷ್ಟ ಜಾತಿ ಸಮುದಾಯಗಳ ಒಳ ಮೀಸಲಾತಿ ವರ್ಗೀಕರಣದಲ್ಲಿ ಇದುವರೆಗೆ ಮೀಸಲಾತಿ ಸೌಲಭ್ಯದಿಂದ ವಂಚಿತವಾದ ಅಲೆಮಾರಿ ಮತ್ತಿತರ ವಿಭಾಗಗಳಿಗೆ ನ್ಯಾಯ ಒದಗಿಸುವ ತನ್ನ ಭರವಸೆ ವಿರುದ್ದ ಕಾಂಗ್ರೆಸ್ ಸರ್ಕಾರ ವರ್ತಿಸಿರುವುದನ್ನು ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದರು.
ಒಳ ಮೀಸಲಾತಿ ವರ್ಗೀಕರಣಕ್ಕೆ ಅಗತ್ಯವಾದ ಸಮರ್ಪಕ ದತ್ತಾಂಶಗಳ ಆಧಾರವನ್ನು ಕಡೆಗಣಿಸಿ ಅಂಗೀಕರಿಸಿದ ಶಾಸನವು ನ್ಯಾಯಾಂಗದ ಪರಾಮರ್ಶೆಯಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಗೆ ಯಾವುದೇ ದೂರದೃಷ್ಟಿ ಇಲ್ಲದ ರಾಜ್ಯ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ. ಅದ್ದರಿಂದ ಒಳ ಮೀಸಲಾತಿಯ ಸೂಕ್ತವಾದ ವರ್ಗೀಕರಣ ಹಾಗೂ ಹಂಚಿಕೆಯನ್ನು ಮಾಡಬೇಕು ಎಂದು ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸುತ್ತದೆ ಎಂದು ತಿಳಿಸಿದರು.
ಇದನ್ನೂ ನೋಡಿ : “ಪರ್ಯಾಯ ರಾಜಕಾರಣಕ್ಕಾಗಿ ಜನದನಿ ರ‍್ಯಾಲಿ” Janashakthi Media
