ಸಿಪಿಐ(ಎಂ) ಪೊಲಿಟ್ ಬ್ಯೂರೋ ಸದಸ್ಯೆ ಸುಭಾಷಿಣಿ ಅಲಿ ಮತ್ತು ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್ ಅವರನ್ನೊಳಗೊಂಡ ಸಿಪಿಐ(ಎಂ) ನಿಯೋಗವು
ಉತ್ತರಪ್ರದೇಶದ ಮುಝಫ್ಫರ್ ನಗರ ಜಿಲ್ಲೆಯ ಒಂದು ಹಳ್ಳಿಯ ಶಾಲೆಯ ಮಾಲೀಕರೂ ಆದ ಶಿಕ್ಷಕರ ಕ್ರೂರ ವರ್ತನೆಗೆ ಗುರಿಯಾದ ಮುಸ್ಲಿಂ ಬಾಲಕನ ಕುಟುಂಬವನ್ನು ಆಗಸ್ಟ್ 30ರಂದು ಭೇಟಿ ಮಾಡಿತು.
ನಿಯೋಗವು ಖುಬ್ ಬಾಪುರ್ ಗ್ರಾಮದ ಅವರ ಅವಿಭಕ್ತ ಕುಟುಂಬದ ಮನೆಯಲ್ಲಿ ಆ ಚಿಕ್ಕ ಹುಡುಗನನ್ನು ಮತ್ತು ಆತನ ಪೋಷಕರಾದ ಇರ್ಷಾದ್ ಮತ್ತು
ರುಬೀನಾರನ್ನು ಭೇಟಿ ಮಾಡಿತು. ಅವರು ಬಡ ಜನಗಳು. ಅವರ ಇಬ್ಬರು ಹಿರಿಯ ಪುತ್ರರು ಚಂಡೀಗಢದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಕಿರಿಯವನು ತನ್ನ ಓದನ್ನು ತ್ಯಜಿಸಿ ದಿನಗೂಲಿಯಾಗಬೇಕಾಯಿತು. ಅವರಿಬ್ಬರೂ ಶಿಕ್ಷಕರನ್ನು ಭೇಟಿಯಾಗಲು ಹೋಗಿದ್ದರು. ಆದರೆ ಆಕೆ ತನ್ನ ವರ್ತನೆಗೆ ಯಾವುದೇ ವಿಷಾದ ವ್ಯಕ್ತಪಡಿಸಲಿಲ್ಲ. ಸಿಪಿಐ(ಎಂ) ನಿಯೋಗವು ಅವರಿಗೆ ಬೆಂಬಲ ಮತ್ತು ಸೌಹಾರ್ದದ ಭರವಸೆ ನೀಡಿತು ಮತ್ತು ಚಿಕ್ಕ ಹುಡುಗ ಮತ್ತು ಅವನ ಸಹೋದರನ ಶಿಕ್ಷಣವನ್ನು ನೋಡಿಕೊಳ್ಳಲಾಗುವುದು ಎಂದು ಹೇಳಿತು.
ಇದನ್ನೂ ಓದಿ:ಭಿನ್ನ ಅಭಿಪ್ರಾಯಗಳನ್ನು ದಮನಿಸುವುದನ್ನು ನಿಲ್ಲಿಸಬೇಕು -ಸಿಪಿಐ(ಎಂ) ಪೊಲಿಟ್ ಬ್ಯುರೊ
ಶಾಲೆಯ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಎಂದು ಸುಭಾಷಿಣಿ ಅಲಿ ಮತ್ತು ಜಾನ್ ಬ್ರಿಟ್ಟಾಸ್ ಅವರಿಗೆ ತಿಳಿಸಲಾಯಿತು. ಅವರು ಆ ಶಿಕ್ಷಕಿಯನ್ನು
ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ ಮತ್ತು ಉತ್ತರಪ್ರದೇಶ ಸರ್ಕಾರವು ಪಕ್ಷಪಾತದ ರೀತಿಯಲ್ಲಿ ಕಾನೂನುಗಳನ್ನು ಜಾರಿಗೆ ತರುತ್ತಿರುವಂತೆ ಕಾಣುತ್ತದೆ,
ಇದು ಅತ್ಯಂತ ದುರದೃಷ್ಟಕರ ಎಂದು ಹೇಳಿದ್ದಾರೆ.