ನೂಹ್ ಮತ್ತು ಗುರ್‌ಗಾಂವ್‌ಗೆ ಸಿಪಿಐ(ಎಂ) ನಿಯೋಗದ ಭೇಟಿ

“ಕೋಮು ಧ್ರುವೀಕರಣದ ಉದ್ದೇಶದಿಂದಲೇ ಚೆನ್ನಾಗಿ ಸಂಯೋಜಿಸಿದ ಹುನ್ನಾರದ ಫಲಿತಾಂಶ”

ಹರ್ಯಾಣದ ನೂಹ್‍ ಮತ್ತಿತರ ಕಡೆ ನಡೆದಿರುವ ಹಿಂಸಾಚಾರವು ಅಕಸ್ಮಾತ್ತಾಗಿ ನಡೆದದ್ದಲ್ಲ, ಬದಲಾಗಿ ಪಕ್ಕದ ರಾಜಸ್ಥಾನ ವಿಧಾನಸಭೆಗೆ ಮುಂಬರುವ ಚುನಾವಣೆ ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ಚುನಾವಣಾ ಲಾಭ ಗಳಿಸುವ ಸಲುವಾಗಿ ಕೋಮು ಧ್ರುವೀಕರಣದ ಉದ್ದೇಶದಿಂದ ಚೆನ್ನಾಗಿಯೇ ಸಂಯೋಜಿತ ಹುನ್ನಾರದ ಫಲಿತಾಂಶವಾಗಿದೆ ಎಂದು ಹಿಂಸಾಛಾರಪೀಡಿತ ನೂಹ್‍ಗೆ ಮತ್ತು ಗುರುಗ್ರಾಮಕ್ಕೆ ಭೇಟಿ ನೀಡಿ ಅಲ್ಲಿಯ ಜನಗಳೊಂದಿಗೆ ಮಾತನಾಡಿದ ಸಿಪಿಐ(ಎಂ)ನ ನಾಯಕರ ನಿಯೋಗ ಅಭಿಪ್ರಾಯ ಪಟ್ಟಿದೆ.

ಗೋಕಾವಲುಕೋರರ ಸಶಸ್ತ್ರ  ಪಡೆಗಳು ಯಾವುದೇ ಭಯವಿಲ್ಲದೆ ಜಾನುವಾರು ಸಾಕಣೆದಾರರು ಮತ್ತು ವ್ಯಾಪಾರಿಗಳನ್ನು ಹೊಡೆದು ಸಾಯಿಸುವ ಘಟನೆಗಳ ಒಂದು ಸರಣಿಯೇ ಇಲ್ಲಿ ಸುತ್ತಮುತ್ತಲಿನ ಸ್ಥಳಗಳಲ್ಲಿ  ನಡೆದಿದೆ. ಇದರಲ್ಲಿ ಇತ್ತೀಚಿನದ್ದು ಫೆಬ್ರವರಿಯಲ್ಲಿ ಪಕ್ಕದ ರಾಜಸ್ಥಾನದ ಘಕ್ಮಿಕಾ ಎಂಬ ಹಳ್ಳಿಯ ಇಬ್ಬರು ಮಿಯೋ ಯುವಕರನ್ನು ಅಪಹರಿಸಿ ಹರ‍್ಯಾಣದ ಭಿವಾನಿಯ ಲೋಹರು ಗ್ರಾಮದಲ್ಲಿ ಸುಟ್ಟು ಕೊಂದ ಅತ್ಯಂತ ಕ್ರೂರ ಪ್ರಸಂಗ. ಅಂದಿನಿಂದ ಈ ಘೋರ ಅಪರಾಧದ ಪ್ರಮುಖ ಆರೋಪಿ ಮೋನು ಮಾನೇಸರ್‌ನನ್ನು ಬಂಧಿಸಲು ರಾಜಸ್ಥಾನ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಆದರೆ ಆತ ಹರಿಯಾಣ ಪೊಲೀಸರ ರಕ್ಷಣೆಯಲ್ಲಿ ಸುರಕ್ಷಿವಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೆ ಚುನಾವಣೆಗಳನ್ನು ತಕ್ಷಣವೇ ನಡೆಸಬೇಕು- ಸಿಪಿಐ(ಎಂ) ಕೇಂದ್ರ ಸಮಿತಿ ಆಗ್ರಹ

ಹರ್ಯಾಣ ಮತ್ತು ರಾಜಸ್ಥಾನದಲ್ಲಿ ಹರಡಿರುವ ಮೇವಾತ್ ಪ್ರದೇಶವು ಪರಿಪೂರ್ಣ ಕೋಮು ಸೌಹಾರ್ದಕ್ಕೆ ಹೆಸರುವಾಸಿಯಾಗಿದೆ, ಇಲ್ಲಿ ಕೋಮುಗಲಭೆಗಳ ಇತಿಹಾಸವಿಲ್ಲ. ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಆಯೋಜಿಸಿದ ಜುಲೈ 31ರ ‘ಧಾರ್ಮಿಕ ಯಾತ್ರೆ’ಗೆ ಸಂಪೂರ್ಣವಾಗಿ ಹೊರಗಿನಿಂದಲೇ ಶಸ್ತ್ರಾಸ್ತ್ರಗಳನ್ನು ಹೊಂದಿದ ರೌಡಿ ಗುಂಪುಗಳನ್ನು ಸಂಘಟಿಸಲಾಗಿತ್ತು. ಮೋನು ಮಾನೇಸರ್ ಮತ್ತು ಇತರರಿಂದ ಅತಿರೇಕದ ಮತ್ತು ಕೋಮುಪ್ರಚೋದಕ ವೀಡಿಯೊಗಳು ಯಾತ್ರೆಗೆ ಮುನ್ನ ವೈರಲ್ ಆಗಿದ್ದವು, ಆದರೂ ಸ್ಥಳೀಯ ಶಾಸಕರು ಮತ್ತು ನೂಹ್‌ನ ಇತರ ಪ್ರಮುಖರ ಆತಂಕಗಳನ್ನು ಜಿಲ್ಲಾ ಅಧಿಕಾರಿಗಳು ಗಮನಿಸದೆ ಅದಕ್ಕೆ ಅನುಮತಿ ನೀಡಿದ್ದರು ಎಂಬುದು ಈಗ ಎಲ್ಲರಿಗೂ ತಿಳಿದಿರುವ ಸತ್ಯ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಸದಸ್ಯರಾದ ನೀಲೋತ್ಪಲ ಬಸು ನೇತೃತ್ವದ ನಿಯೋಗ ಹೇಳಿದೆ.

ನೂಹ್ ಪ್ರವೇಶಿಸಿದ ನಂತರ ವಿಎಚ್‌ಪಿ – ಬಜರಂಗದಳದ ಹುನ್ನಾರಗಳ ಅವಹೇಳನಕಾರಿ ಭಾಷೆ ಮತ್ತು ಆಕ್ರಮಣಕಾರಿ ಭಂಗಿಗಳನ್ನು ಬಳಸಿದ ವೀಡಿಯೊಗಳು ಹಿಂಸಾಚಾರಕ್ಕೆ ಕಾರಣವಾದ ಕೆಲವು ಸ್ಥಳೀಯ ಅಂಶಗಳೊಂದಿಗೆ ಪ್ರಚೋದಕವಾಗಿ ಕೆಲಸ ಮಾಡಿದ್ದು, ಗುರ್ಗಾಂವ್ ಅಂಜುಮನ್ ಮಸೀದಿಯ ಯುವ ಇಮಾಮ್ ಸೇರಿದಂತೆ 6 ಜನರ ದುರದೃಷ್ಟಕರ ಸಾವಿಗೆ ಕಾರಣವಾಯಿತು. ರಾತ್ರಿಯ ಸಮಯದಲ್ಲಿ ಉನ್ಮಾದಗೊಂಡ ಜನಜಂಗುಳಿ ಮಸೀದಿಯನ್ನು ಧ್ವಂಸಗೊಳಿಸಲು ಅವಕಾಶ ನೀಡಲಾಯಿತು ಮತ್ತು ದಾಳಿಯ ಸಾಧ್ಯತೆಯಿದ್ದ ಸ್ಥಳವನ್ನು ರಕ್ಷಿಸಲು ಪೊಲೀಸರನ್ನು ನಿಯೋಜಿಸದ ಕಾರಣ ಇಮಾಮ್ ಅನ್ನು ಗುಂಡಿಕ್ಕಿ ಕೊಲ್ಲಲಾಯಿತು.

ಅತ್ಯಂತ ಹೀನ ಪ್ರಭುತ್ವ-ಪ್ರಾಯೋಜಿತ ಪ್ರತೀಕಾರದ ಕೃತ್ಯಗಳು ನಡೆದದ್ದು ಒಂದು ವಾರದ ಕರ್ಫ್ಯೂ ಅವಧಿಯಲ್ಲಿಯೇ ಎಂಬುದು ಸ್ಥಳಕ್ಕೆ ಭೇಟಿ ನೀಡಿದ ನಿಯೋಗಕ್ಕೆ ತಿಳೀದು ಬಂದ ಸಂಗತಿ. ನೂಹ್ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಭಯೋತ್ಪಾದಕ ಆಳ್ವಿಕೆಯನ್ನು ಸೃಷ್ಟಿಸಲು ಮಿಯೋ ಯುವಕರನ್ನು ವಿವೇಚನೆಯಿಲ್ಲದೆ ಬಂಧಿಸುವ ಮತ್ತು ಥಳಿಸುವ ಏಕಪಕ್ಷೀಯ ದಮನವನ್ನು ಹರಿಯಬಿಡಲಾಗಿದೆ. ಅದು ಇನ್ನೂ ಮುಂದುವರೆದಿದೆ. ಕರ್ಫ್ಯೂ ಮತ್ತು ಇಂಟರ್ನೆಟ್ ಕಡಿತದ ಪರಿಸ್ಥಿತಿಯಲ್ಲಿ ಬುಲ್ಡೋಜರ್‌ಗಳನ್ನು ಹರಿಸಿ ಸಾಮೂಹಿಕವಾಗಿ ಅಂಗಡಿಗಳು, ವಸತಿಗಳು, ಶೋರೂಮ್‌ಗಳು ಇತ್ಯಾದಿಗಳನ್ನು ನೆಲಸಮಗೊಳಿಸಲಾಯಿತು, ಇದು ಕರ್ಫ್ಯೂ ಹೇರುವಿಕೆಯ ನಿಜವಾದ ಉದ್ದೇಶವನ್ನು ಬಯಲಿಗೆ ತರುತ್ತದೆ. ಏಕೆಂದರೆ ಕರ್ಫ್ಯೂ ಹೇರುವುದನ್ನು ಸಮರ್ಥಿಸಿಕೊಳ್ಳಲು ಇಲ್ಲಿ ಯಾವುದೇ ಸ್ಥಳೀಯ ಗಲಭೆಯನ್ನು ತೋರಿಸಲು ಸಾಧ್ಯವಿಲ್ಲ. ನಲ್ಹಾರ್ ಮೆಡಿಕಲ್ ಕಾಲೇಜು ಮುಂಭಾಗದಲ್ಲಿ ನೆಲಸಮಗೊಂಡ ಅಂಗಡಿಗಳಿಂದ ನೊಂದವರು ತಮ್ಮ ನೋವನ್ನು ನಿಯೋಗಕ್ಕೆ ತಿಳಿಸಿದರು. ಆಗಿರುವ ಅಪಾರ ನಷ್ಟ ಪರಿಹಾರಕ್ಕೆ ಶ್ರಮಿಸುವುದಾಗಿ ಮುಖಂಡರು ಭರವಸೆ ನೀಡಿದರು.

ಇದನ್ನೂ ಓದಿಮಣಿಪುರದಲ್ಲಿ ಶಾಂತಿ ಮರಳುತ್ತಿದೆ ಎಂದು ಪ್ರಧಾನಿಗಳಿಗೆ ಹೇಳಿದವರಾರು? ಬೃಂದಾ ಕಾರಟ್ ಪ್ರಶ್ನೆ

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸೋಮವಾರ ತಾನಾಗಿಯೇ ಇದನ್ನು ಪರಿಗಣನೆಗೆ ತಗೊಂಡು ನೆಲಸಮಗೊಳಿಸುವುದನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಆದೇಶಿಸಿರುವುದೇ ಈ ಕೃತ್ಯದ ನಿಜಸ್ವರೂಪವನ್ನು ತಿಳಿಸುತ್ತದೆ ಎಂದು ನಿಯೋಗ ಹೇಳಿದೆ. ನೂಹ್ ಮೂಲಕ ಹಾದುಹೋಗುವ ಯಾರಾದರೂ ರಸ್ತೆಯ ಎರಡೂ ಬದಿಗಳಲ್ಲಿ ವಿನಾಶದ ಜಾಡನ್ನು ಕಾಣದಿರಲು ಸಾಧ್ಯವಿಲ್ಲ. ಅಂಗಡಿಕಾರರು ಮತ್ತು ಇತರ ರಸ್ತೆ ಬದಿಯ ನಿವಾಸಿಗಳ ಹಿಂಸಾಚಾರದಿಂದಾಗಿ ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಕೆಡವಲಾಗುತ್ತಿದೆ ಎಂದು ಮ್ಯಾಜಿಸ್ಟ್ರೇಟ್ ಮಾಧ್ಯಮಗಳಿಗೆ ಬಹಿರಂಗವಾಗಿ ಹೇಳುವುದಕ್ಕಿಂತ ಹೆಚ್ಚು ನಾಚಿಕೆಗೇಡಿನ ಸಂಗತಿ ಏನಿದೆ ಎಂದು ಪ್ರಶ್ನಿಸಿರುವ ನಿಯೋಗ, ತಮಗೆ ರಕ್ಷಣೆಯಿಲ್ಲ ಎಂಬ ಭಾವನೆಯಿಂದ ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ತೆರಳುತ್ತಿದ್ದಾರೆ, ಏಕೆಂದರೆ ಪೊಲೀಸರು ಸುರಕ್ಷತೆಯ ಬಗ್ಗೆ ಅವರ ಆತಂಕಗಳನ್ನು ಪರಿಹರಿಸಲು ವಿಫಲರಾಗಿದ್ದಾರೆ ಎಂದು ಹೇಳಿದೆ.

ಪಟ್ಟಣದ ಗಣ್ಯರನ್ನು ಭೇಟಿ ಮಾಡಿದಾಗ, ಮುಸ್ಲಿಮರಿಗೆ ಸರಿಯಾದ ಪಾಠ ಕಲಿಸಲಾಗಿದೆ ಎಂಬ ನಿಸ್ಸಂದಿಗ್ಧ ಸಂದೇಶವನ್ನು ದೇಶದಾದ್ಯಂತ ರವಾನಿಸಲು ಇನ್ನೂ ಎಷ್ಟೊಂದು ಭಯ ಮತ್ತು ಭೀತಿಯನ್ನು ಸೃಷ್ಟಿಸಲಾಗುತ್ತಿದೆ ಎಂಬುದು ತಿಳಿಯಿತು ಎಂದೂ ಸಿಪಿಐ(ಎಂ) ತಂಡ ಹೇಳಿದೆ.

ಯಾವುದೇ ರೀತಿಯ ಕೋಮು ಪ್ರಚೋದನೆಗಳಿಗೆ ಬಲಿಯಾಗದೆ ತಮ್ಮ ಭವ್ಯವಾದ ಇತಿಹಾಸಕ್ಕೆ ತಕ್ಕಂತೆ ತಮ್ಮ ನಡುವೆ ಶಾಂತಿಯನ್ನು ಕಾಪಾಡಿಕೊಂಡಿದ್ದಕ್ಕಾಗಿ ಎರಡೂ ಸಮುದಾಯಗಳ ಜನರನ್ನು ಶ್ಲಾಘಿಸಿರುವ ತಂಡವು, ಈಗಾಗಲೇ ಈ ವಿಷಯವನ್ನು ಕೈಗೆತ್ತಿಕೊಂಡಿರುವ ಹೈಕೋರ್ಟಿನ ಮೇಲ್ವಿಚಾರಣೆಯಲ್ಲಿ ನ್ಯಾಯಾಂಗ ವಿಚಾರಣೆಯ ಮೂಲಕ ನಿಷ್ಪಕ್ಷಪಾತ ತನಿಖೆಯನ್ನು ಪ್ರಾರಂಭಿಸಬಹುದು ಎಂದು ಅಭಿಪ್ರಾಯಪಟ್ಟಿದೆ.

ಜನರ ಓಡಾಟದ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಬೇಕು ಮತ್ತು ಕಾನೂನುಬದ್ಧವಾಗಿ ಸ್ಥಾಪಿಸಲಾದ ಕಾರ್ಯವಿಧಾನದ ಅಡಿಯಲ್ಲಿ ನಿಜವಾದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಸಾಮಾನ್ಯ ಸ್ಥಿತಿಯನ್ನು ಮರುಸ್ಥಾಪಿಸಬೇಕು, ಅಮಾಯಕರಿಗೆ ಕಿರುಕುಳ ಕೊಡಬಾರದು ಎಂದು ಒತ್ತಾಯಿಸಿರುವ ಸಿಪಿಐ(ಎಂ) ನಿಯೋಗ, ಮೋನು ಮಾನೇಸರ್‌ನಂತಹ ಗುರುತಿಸಲಾದ ವ್ಯಕ್ತಿಗಳನ್ನು ಇದುವರೆಗೆ ಬಂಧಿಸದಿರುವುದು ಆಶ್ಚರ್ಯ ಉಂಟು ಮಾಡುತ್ತದೆ ಎಂದು ಹೇಳಿದೆ.

ಹಿರಿಯ ಸಿಪಿಐ(ಎಂ) ಮುಖಂಡ ನೀಲೋತ್ಪಲ ಬಸುರವರಲ್ಲದೆ, ಸಿಪಿಐ(ಎಂ) ರಾಜ್ಯಸಭಾ ಸಂಸದರಾದ ಎ ಎ ರಹೀಮ್ ಮತ್ತು ವಿ ಶಿವದಾಸನ್ ಮತ್ತು  ಸಿಪಿಐ(ಎಂ) ಹರಿಯಾಣ ರಾಜ್ಯ ಕಾರ್ಯದರ್ಶಿ ಇಂದರ್‌ಜಿತ್ ಸಿಂಗ್ ಮತ್ತು ಇತರರನ್ನು ಒಳಗೊಂಡ ನಿಯೋಗವು ಆಗಸ್ಟ್ 10 ರಂದು ನೂಹ್ ಮತ್ತು ಗುರ್‌ಗಾಂವ್‌ಗೆ ಭೇಟಿ ನೀಡಿತ್ತು. ಜುಲೈ 31 ಮತ್ತು ನಂತರದ ವ್ಯಾಪಕ ಹಿಂಸಾಚಾರದ ಪರಿಸ್ಥಿತಿಯಲ್ಲಿ ಮೇವಾತ್‌ನ ಹಿಂಸಾಚಾರ ಪೀಡಿತ ಪ್ರದೇಶವನ್ನು ತಲುಪಿದ ಮೊದಲ ವಿರೋಧ ಪಕ್ಷದ ನಿಯೋಗ ಇದು ಎಂದು ಹೇಳಲಾಗಿದೆ.

Donate Janashakthi Media

Leave a Reply

Your email address will not be published. Required fields are marked *