ಮಣಿಪುರ ಭೇಟಿಯ ನಂತರ ಸಿಪಿಐ(ಎಂ)-ಸಿಪಿಐ ಜಂಟಿ ನಿಯೋಗದ ಆಗ್ರಹ
ಮಣಿಪುರದ ಬಿರೇನ್ ಸಿಂಗ್ ಸರ್ಕಾರದ ಮುಂದುವರಿಕೆ ರಾಜ್ಯದಲ್ಲಿ ಶಾಂತಿ ಮತ್ತು ಸಹಜಸ್ಥಿತಿಯನ್ನು ಮರುಸ್ಥಾಪಿಸುವಲ್ಲಿ ಒಂದು ಪ್ರಮುಖ ಅಡ್ಡಿಯಾಗಿದೆ ಎಂದು ಕಲಹ ಪೀಡಿತ ಮಣಿಪುರಕ್ಕೆ ಭೇಟಿ ನೀಡಿರುವ ಸಿಪಿಐ(ಎಂ)-ಸಿಪಿಐ ಜಂಟಿ ನಿಯೋಗವು ಅಭಿಪ್ರಾಯಪಟ್ಟಿದೆ. ರಾಜ್ಯವನ್ನು ಅಂಚಿನಿಂದ ಮರಳಿ ತರುವ ಒಂದು ಅರ್ಥಪೂರ್ಣ ಕ್ರಿಯೆಯನ್ನು ಪ್ರಾರಂಭಿಸಲು ಎಲ್ಲಾ ಸಮುದಾಯಗಳು ಮತ್ತು ವಿಭಾಗಗಳನ್ನು ಮತ್ತು ನಾಗರಿಕ ಸಮಾಜವನ್ನು ಜೊತೆಗೆ ತರಬೇಕಾಗಿದೆ ಎಂದು ನಿಯೋಗಕ್ಕೆ ಅನಿಸಿದೆ.
ಸಿಪಿಐ(ಎಂ)ನ ಬಿಕಾಶ್ ರಂಜನ್ ಭಟ್ಟಾಚಾರ್ಯ ಮತ್ತು ಜಾನ್ ಬ್ರಿಟ್ಟಾಸ್ ಹಾಗೂ ಸಿಪಿಐನ ಬಿನೋಯ್ ವಿಶ್ವಂ, ಕೆ. ಸುಬ್ಬರಾಯನ್ ಮತ್ತು ಪಿ.ಸಂದೋಶ್ ಕುಮಾರ್ ಅವರನ್ನೊಳಗೊಂಡ ನಿಯೋಗವು ಜುಲೈ 6, 2023 ರಿಂದ ಮೂರು ದಿನಗಳ ಕಾಲ ಕಣಿವೆ ಮತ್ತು ಬೆಟ್ಟ ಪ್ರದೇಶದ ವಿವಿಧ ಸ್ಥಳಗಳಿಗೆ ಭೇಟಿ ನೀಡಿತು. ಬಯಲು ಸೀಮೆಯಲ್ಲೂ ಮತ್ತು ಗುಡ್ಡಗಾಡುಗಳಲ್ಲಿಯೂ ನಿರಾಶ್ರಿತರೊಂದಿಗೆ ಸಂವಾದ ನಡೆಸಿದ ನಿಯೋಗ, ಅವರ ಸುದೀರ್ಘ ಕಡು ಸಂಕಟಗಳಲ್ಲಿ
ಎದ್ದುಕಾಣುವ ಸಾಮ್ಯತೆ ಇರುವುದನ್ನು ಕಾಣದಿರಲು ಸಾಧ್ಯವಿಲ್ಲ ಎಂದು ಹೇಳಿದೆ. 60,000 ಕ್ಕೂ ಹೆಚ್ಚು ಜನರನ್ನು ಮೂಲೋತ್ಪಾಟನೆ ಮಾಡಲಾಗಿದೆ, ಅವರ ಜೀವನ ಮತ್ತು ಜೀವನೋಪಾಯಗಳು ಧ್ವಂಸಗೊಂಡಿವೆ. ತಮ್ಮ ಮನೆಗಳಿಗೆ ಬೆಂಕಿಯಿಟ್ಟುದನ್ನು ಮತ್ತು ಕುಟುಂಬದ ಸದಸ್ಯರನ್ನು ಗುಂಡಿಕ್ಕಿ ಕೊಂದುದನ್ನು ಕಂಡ ಆಘಾತ ಅವರನ್ನು ಕಾಡುತ್ತಿದೆ ಎಂದು ನಿಯೋಗ ಹೇಳಿದೆ.
ನಾಗರಿಕ ಸಮಾಜದ ವಿವಿಧ ವಿಭಾಗಗಳೊಂದಿಗೆ ತೆರೆದ ಮನಸ್ಸಿನಿಂದ ಚರ್ಚೆಗಳನ್ನು ನಡೆಸಿದ ನಿಯೋಗಕ್ಕೆ ಮುಖ್ಯಮಂತ್ರಿಗಳು ನ್ಯಾಯಸಮ್ಮತತೆ ಮತ್ತು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದ್ದು ರಾಜ್ಯದ ಆಡಳಿತವು ಸಂಪೂರ್ಣವಾಗಿ ಕುಸಿದಿದೆ ಎಂಬುದು ಪ್ರಬಲ ಅಭಿಪ್ರಾಯವಾಗಿ ಕಂಡು ಬಂದಿದೆ. ಹೀಗಾಗಿ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು ಅಧಿಕಾರದಲ್ಲಿ ಮುಂದುವರಿಸುವುದನ್ನು ಸಮರ್ಥಿಸಿಕೊಳ್ಳಲಾಗದಂತಹ ಪರಿಸ್ಥಿತಿಯಿದೆ. ಮಣಿಪುರದ ಪರಿಸ್ಥಿತಿಯ ಬಗ್ಗೆ
ಪ್ರಧಾನಿಯವರ ಕಿವುಡಾಗಿಸುವ ಮೌನದ ಬಗ್ಗೆ ಜನರಿಗೆ ನೋವುಂಟಾಗಿದೆ, ಅವರು ಘಾಸಿಗೊಂಡಿದ್ದಾರೆ ಎಂದಿರುವ ನಿಯೋಗವು ರಾಜ್ಯಪಾಲರಾದ ಅನುಸೂಯಾ ಉಯ್ಕೆಯವರನ್ನು ಭೇಟಿ ಮಾಡಿ ತನ್ನ ಅಭಿಪ್ರಾಯವನ್ನು ತಿಳಿಸಿರುವುದಾಗಿ ಹೇಳಿದೆ.
ಇದನ್ನೂಓದಿ:ಮಣಿಪುರ: ಶಾಲೆಯ ಬಳಿ ಮಹಿಳೆಯ ಗುಂಡಿಕ್ಕಿ ಹತ್ಯೆ
ರಾಜ್ಯದ ಮುಖ್ಯಸ್ಥರಾಗಿ ಅವರು ಎಲ್ಲಾ ವಿಭಾಗಗಳ ನಂಬಿಕೆಯನ್ನು ಪುನಃಸ್ಥಾಪಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ನಿಯೋಗ ಒತ್ತಾಯಿಸಿತು. ಈ ಘಟನೆಗಳಿಂದ ತಾನು ವಿಚಲಿತಳಾಗಿದ್ದೇನೆ, ತನ್ನ ಜೀವನದಲ್ಲಿ ಇಂತಹ ಪರಿಸ್ಥಿತಿಯನ್ನು ಎಂದಿಗೂ ಎದುರಿಸಿಲ್ಲ ಎಂದು ಅವರು ಹೇಳಿದರು.
ರಾಷ್ಟ್ರಪತಿ, ಪ್ರಧಾನಿ, ರಕ್ಷಣಾ ಸಚಿವರು ಮತ್ತು ಗೃಹ ಸಚಿವರಿಗೆ ವಿವರವಾದ ವರದಿಗಳನ್ನು ಶ್ರದ್ಧೆಯಿಂದ ಸಲ್ಲಿಸುತ್ತಿದ್ದೇನೆ ಎಂದು ಅವರು ಹೇಳಿದರು.
ವಿವಿಧ ಪಡೆಗಳ 60,000 ಸಶಸ್ತ್ರ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದರೂ, ಕ್ರಿಯಾತ್ಮಕ ನಾಗರಿಕ ಆಡಳಿತದ ಅನುಪಸ್ಥಿತಿಯಲ್ಲಿ ಅವರು ಪರಿಣಾಮಕಾರಿಯಾಗಿಲ್ಲ ಎಂದು ನಿಯೋಗವು ಗಮನಿಸಿರುವುದಾಗಿ ತಿಳಿಸಲಾಗಿದೆ. ಕುಕಿ ಮತ್ತು ಮೈತೇಯಿ ಸಮುದಾಯಗಳಿಗೆ ಸೇರಿದ ಸಾವಿರಾರು ಸರ್ಕಾರಿ ನೌಕರರು ಅನುಕ್ರಮವಾಗಿ ಕಣಿವೆ ಮತ್ತು ಬೆಟ್ಟಪ್ರದೇಶಗಳಿಂದ ಪಲಾಯನ ಮಾಡಿದ್ದಾರೆ, ಇದರಿಂದ ಆಡಳಿತ ದುರ್ಬಲಗೊಂಡಿದೆ ಎಂದೂ ನಿಯೋಗ ಗಮನಿಸಿದೆ.
ಜನಾಂಗೀಯ ಹಿಂಸಾಚಾರಕ್ಕೆ ಕೋಮು ತಿರುವು ತರಲು ವ್ಯವಸ್ಥಿತ ಮತ್ತು ನಿರ್ದೇಶಿತ ಪ್ರಯತ್ನಗಳು ನಡೆಯುತ್ತಿವೆ ಎಂದು ಗಮನಿಸಿರುವುದಾಗಿ ಹೇಳಿರುವ ನಿಯೋಗವು ಇದರಲ್ಲಿ ರಾಜಕೀಯ ನಾಯಕತ್ವದ ಪಾತ್ರವೂ ಸಾಮಾನ್ಯವಾಗಿ ಅನುಭವಕ್ಕೆ ಬಂದಿದೆ ಎಂದು ಅಭಿಪ್ರಾಯ ಪಟ್ಟಿದೆ. ಇಂಫಾಲ್ ನಗರದ ಹೃದಯಭಾಗದಲ್ಲಿಯೂ ಸಹ ಸಮುದಾಯ ನಡೆಸುವ ಶಾಲೆಗಳೊಂದಿಗೆ ಚರ್ಚುಗಳು ಮತ್ತು ದೇವಾಲಯಗಳಿಗೆ ಗುರಿಯಿಟ್ಟು ಧ್ವಂಸಗೊಳಿಸಲಾಗಿದೆ,ಅವನ್ನು ಬೆಳಕಿಗಾಹುತಿ ಮಾಡಲಾಗಿದೆ. ನಿಯೋಗವು ಇಂತಹ ಸಂಘಟಿತ ವಿಧ್ವಂಸದ ಪ್ರತ್ಯಕ್ಷ ವಿವರಗಳನ್ನು ಪಡೆಯಲು ಕೆಲವು ಸ್ಥಳಗಳಿಗೆ ಭೇಟಿ ನೀಡಿತು. ಎಲ್ಲಾ ಆರೋಪಗಳು ಮತ್ತು ದೂರುಗಳು, ದಾವೆಗಳು ಮತ್ತು ಪ್ರತಿದಾವೆಗಳನ್ನು ಪಕ್ಕದಲ್ಲಿಟ್ಟು, ಶಾಂತಿ ಹಾಗೂ ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸುವುದು ಏಕೈಕ ಗುರಿಯಾಗಬೇಕು ಎಂದು ನಿಯೋಗವು ಅಭಿಪ್ರಾಯಪಟ್ಟಿದೆ. ಕೇಂದ್ರ ಮತ್ತು ರಾಜ್ಯ ಆಡಳಿತಗಳು ಎಲ್ಲಾ ವಿಭಾಗಗಳನ್ನು ಒಟ್ಟುಗೂಡಿಸಲು ಸರ್ವಪ್ರಯತ್ನ ನಡೆಸಬೇಕು, ಪುನರ್ವಸತಿಗಾಗಿ ಮತ್ತು ಜನರ ಸಂಕಷ್ಟಗಳನ್ನು ತಗ್ಗಿಸಲು ತುರ್ತು ಕ್ರಮಗಳನ್ನು ಘೋಷಿಸಬೇಕು ಎಂದು ಸಿಪಿಐ(ಎಂ)-ಸಿಪಿಐ ನಿಯೋಗ ಆಗ್ರಹಪಡಿಸಿದೆ.