ಬೆಂಗಳೂರು: ಕನ್ನಡ ಚಿತ್ರರಂಗದ ಮೇರು ನಟ, ಪವರ್ ಸ್ಟಾರ್ ಪುನಿತ್ ರಾಜಕುಮಾರ್ ಅಕಾಲಿಕ ನಿಧನಕ್ಕೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಕರ್ನಾಟಕ ರಾಜ್ಯ ಸಮಿತಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ. ಪ್ರತಿಭಾವಂತ ಯುವ ನಟನ ಅಗಲಿಕೆಯಿಂದ ಕನ್ನಡ ಚಿತ್ರರಂಗ ಬಡವಾದಂತಾಗಿದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಾಲ್ಯದಲ್ಲಿಯೇ ಬಾಲ ಕಲಾವಿದನಾಗಿ ಚಿತ್ರರಂಗವನ್ನು ಪ್ರವೇಶಿಸಿದ ಅಪ್ಪು, ಬಾಲ ಕಲಾವಿದನಾಗಿ 10 ಯಶಸ್ವಿ ಚಲನಚಿತ್ರಗಳನ್ನು ಮತ್ತು 2002 ರಿಂದ ಈ ದಿನದವರೆಗೆ ನಾಯಕನಟನಾಗಿ ಸದಭಿರುಚಿಯ 29 ಚಲನಚಿತ್ರಗಳನ್ನು ನೀಡಿದ್ದಾರೆ. ಹಲವಾರು ಚಲನಚಿತ್ರಕ್ಕೆ ಹಿನ್ನೆಲೆ ಗಾಯಕರಾಗಿಯೂ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ.
ಬಾಲ ಕಲಾವಿದನಾಗಿಯೂ, ನಾಯಕ ನಟನಾಗಿಯೂ ಅನೇಕ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸಾವಿನಲ್ಲೂ ನೇತ್ರ ದಾನ ಮಾಡುವ ಮೂಲಕ ಅಪ್ಪು ಸಾರ್ಥಕತೆ ಮೆರೆದಿದ್ದಾರೆ.
ಪತ್ನಿ, ಇಬ್ಬರು ಮಕ್ಕಳು, ರಾಜ್ ಕುಟುಂಬ ಮತ್ತು ರಾಜ್ಯದ ಅಪಾರ ಅಭಿಮಾನಿ ಬಳಗವನ್ನು, ಸಹೋದ್ಯೋಗಿಗಳನ್ನು ಅಗಲಿದ್ದಾರೆ. ದುಃಖತಪ್ತ ಎಲ್ಲರೂ ತಡೆದುಕೊಳ್ಳುವ ಶಕ್ತಿಯನ್ನು ನೀಡಲಿ ಎಂದು ಸಿಪಿಐ(ಎಂ) ಪಕ್ಷ ಸಂತಾಪ ವ್ಯಕ್ತಪಡಿಸಿದೆ.