ವಿಚಾರವಾದಿ, ಪ್ರಖರ ಚಿಂತಕ ಮತ್ತು ಕೋಮು ಸೌಹಾರ್ದತೆಯ ಸೇನಾನಿ, ಹಿರಿಯ ಕಲಾವಿದ ಮತ್ತು ಸಾಹಿತಿಗಳಾಗಿದ್ದ ಪ್ರೊ.ಜಿ.ಕೆ.ಗೋವಿಂದ ರಾವ್ ಅವರು ನೆನ್ನೆ ನಿಧನರಾಗಿದ್ದಾರೆ. ಅವರಿಗೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಕರ್ನಾಟಕ ರಾಜ್ಯ ಸಮಿತಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ.
ಇದನ್ನು ಓದಿ: ಜಿ ಕೆ ಗೋವಿಂದ ರಾವ್ ಅವರಿಗೆ ಗಣ್ಯರ ನಮನಗಳು
ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಅವರು ಕೋಮುವಾದದ ವಿರುದ್ಧ ನಿರಂತರ ರಾಜಿ ರಹಿತ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಅವರು ಬಾಬರಿ ಮಸೀದಿ ಧ್ವಂಸದ ಸಮಯದಲ್ಲಿ ಬೆಂಗಳೂರಿನಲ್ಲಿ ನಡೆದ ಕೋಮು ಸೌಹಾರ್ದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು. ಬಾಬಾ ಬುಡನಗಿರಿ ಕೇಂದ್ರಿತ ಕೋಮುದೃವೀಕರಣದ ವಿರುದ್ಧ ನಡೆದ ಹೋರಾಟಗಳು ಸೌಹಾರ್ದತೆಯ ಕಾರ್ಯಕ್ರಮಗಳಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದ ಅವರು ರಾಷ್ಟ್ರ ಹಾಗು ರಾಜ್ಯದ ಸೌಹಾರ್ದ ಪರಂಪರೆಯ ಪ್ರತಿಪಾದಕರಾಗಿದ್ದರು ಎಂದು ಸಿಪಿಐ(ಎಂ) ಪಕ್ಷದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಮಾಜಿಕ ನ್ಯಾಯ, ಪ್ರಗತಿಪರ ವಿಚಾರಧಾರೆ ಪರವಾದ ಚಳವಳಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರು. ಗಾಂಧೀಜಿಯವರ ಅಹಿಂಸೆಯ ಅನುಯಾಯಿಯಾದ ಅವರು ನಕ್ಸಲ್‌ವಾದ ಮುಂತಾದ ಎಲ್ಲಾ ಬಗೆಯ ಹಿಂಸೆಯ ಕಡು ವಿರೋಧಿಯಾಗಿದ್ದರು. ಮನುವಾದ, ಹಿಂದುತ್ವ, ಭಯೋತ್ಪಾದನೆ ಹಾಗು ಎಲ್ಲಾ ಬಗೆಯ ಮೂಲಭೂತವಾದದ ವಿರುದ್ಧ ನಿರಂತರ ವೈಚಾರಿಕ ಸಂಘರ್ಷದಲ್ಲಿ ತೊಡಗಿಸಿಕೊಂಡಿದ್ದ ಅವರ ಸಾವು ರಾಜ್ಯದ ಜನಪರ ಚಳವಳಿಗೆ, ಸೌಹಾರ್ಧ ಹಾಗು ಸಂವಿಧಾನ ಉಳಿಸುವ ಹೋರಾಟಕ್ಕೆ ತುಂಬಲಾರದ ನಷ್ಟವನ್ನು ಉಂಟುಮಾಡಿದೆ ಎಂದು ಸಿಪಿಐ(ಎಂ) ಶ್ರದ್ಧಾಂಜಲಿ ಅರ್ಪಿಸಿದೆ.