“ಸ್ವಾತಂತ್ರ್ಯದ ನಂತರ ನಮ್ಮ ದೇಶವು ಇಷ್ಟು ಗಂಭೀರವಾದ ರಾಷ್ಟ್ರೀಯ ಮುಜುಗರವನ್ನು ಎಂದೂ ಎದುರಿಸಿಲ್ಲ”
ನವದೆಹಲಿ: ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಕೂಟವು ನಡೆಸಿದ ಕಾನೂನುಬಾಹಿರ ಯುದ್ಧದ ಬಗ್ಗೆ ಕೇಂದ್ರ ಸರ್ಕಾರದ ನಿಲುವು ಶೋಚನೀಯ ಎಂದು ಸಿಪಿಐ(ಎಂ)) ಪೊಲಿಟ್ ಬ್ಯುರೊ ಬಲವಾಗಿ ಖಂಡಿಸಿದೆ.
ಒಕ್ಕೂಟ ಸರ್ಕಾರದ ಮೌನ ಮತ್ತು ನಿಷ್ಕ್ರಿಯತೆಯು ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಬುಡಮೇಲು ಮಾಡುತ್ತದೆ ಮತ್ತು ದೇಶದ ದೀರ್ಘಕಾಲದ ಸಾಮ್ರಾಜ್ಯಶಾಹಿ-ವಿರೋಧಿ ಮತ್ತು ಅಲಿಪ್ತ ಪರಂಪರೆಯನ್ನು ದುರ್ಬಲಗೊಳಿಸುತ್ತದೆ ಎಂದು ಅದು ಖೇದ ವ್ಯಕ್ತಪಡಿಸಿದೆ. ಇರಾನ್
ಇರಾನ್ ವಿರುದ್ಧದ ಪಾಶವೀ ಯುದ್ಧವು ಪಶ್ಚಿಮ ಏಷ್ಯಾದ ಆಚೆಗೂ ವಿಸ್ತರಿಸಿದೆ, ನಮ್ಮ ನೆರೆಹೊರೆಗೂ ತಲುಪಿದೆ. ಇರಾನಿನ ನೌಕಾ ಹಡಗು
‘ಐರಿಸ್ ದೇನಾ’ ವನ್ನು ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಜಲಾಂತರ್ಗಾಮಿ ನೌಕೆಯಿಂದ ಹಾರಿಸಲಾದ ಟಾರ್ಪಿಡೊಗಳಿಂದ ಮುಳುಗಿಸಲಾಗಿದೆ.
ವಿಶಾಖಪಟ್ಟಣದಲ್ಲಿ ಜಂಟಿ ನೌಕಾ ಕವಾಯತಿನ ನಂತರ ಆ ಹಡಗು ಹಿಂತಿರುಗುತ್ತಿತ್ತು ಮತ್ತು ಭಾರತವು ಅದರ ಸುರಕ್ಷಿತ ನಿರ್ಗಮನಕ್ಕೆ ಯಾವುದೇ ಭದ್ರತಾ ರಕ್ಷಣೆಯನ್ನು ಒದಗಿಸಲು ವಿಫಲವಾಯಿತು. ಈ ನಾಚಿಕೆಗೇಡೀ ಬೆಳವಣಿಗೆಗೆ ವಿರುದ್ಧವಾಗಿ, ಶ್ರೀಲಂಕಾ ಇರಾನಿನ ಎರಡನೇ ಹಡಗು ‘ಐರಿಸ್ ಬುಶೆಹರ್’ ನ ಎಲ್ಲ 208 ಸಿಬ್ಬಂದಿಯನ್ನು ರಕ್ಷಿಸಿದ ನಂತರ ಟ್ರಿಂಕೋಮಲಿಯಲ್ಲಿ ಅದಕ್ಕೆ ಸುರಕ್ಷಿತ ನಿಲುಗಡೆ ತಾಣವನ್ನು ಒದಗಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ಅದರ ಮಾನವೀಯತೆಯ ಬಗೆಗಿನ ಬದ್ಧತೆಗೆ ಸಾಕ್ಷಿಯಾಗಿದೆ.
ಇದನ್ನೂ ಓದಿ: ಜನಪರತೆಯ ಮುಖವಾಡ ಧರಿಸಿ-ಬಂಡವಾಳಗಾರರಿಗೆ ಮಣೆ ಹಾಕುವ ಬಜೆಟ್-1.34 ಲಕ್ಷ ಕೋಟಿ ಸಾಲದ ಹೊರೆ-ಹೊರಿಸಿದ ಬಜೆಟ್-ಸಿ.ಪಿ.ಐ(ಎಂ) ಟೀಕೆ
ಅಂತರ್ರಾಷ್ಟ್ರೀಯ ಕಡಲ ಕಾನೂನುಗಳ ಪ್ರಕಾರ ಶ್ರೀಲಂಕಾದ ಈ ಮಾನವೀಯ ಸ್ಪಂದನೆಯ ನಂತರ ದಕ್ಷಿಣ ಏಷ್ಯಾದಲ್ಲಿ ಪ್ರಮುಖ ರಾಷ್ಟ್ರವಾಗಿ ಭಾರತ ತನ್ನ ಸ್ಥಾನಮಾನವನ್ನು ಹಾಳುಮಾಡಿಕೊಳ್ಳುತ್ತಿರುವುದು ತೀವ್ರ ಗಮನ ಸೆಳೆದಿದೆ.
ಯುದ್ಧದ ಮುನ್ನಾದಿನ ಪ್ರಧಾನ ಮಂತ್ರಿಗಳ ಇಸ್ರೇಲ್ ಭೇಟಿಯು ಭಾರತದ ವಿದೇಶಾಂಗ ನೀತಿಯ ಸಂಪೂರ್ಣ ಶರಣಾಗತಿಯನ್ನು ಬಿಂಬಿಸಿದೆ. ಅಂತರರಾಷ್ಟ್ರೀಯ ನ್ಯಾಯಾಲಯ ಯುದ್ಧ ಅಪರಾಧಿ ಎಂದು ಘೋಷಿಸಿರುವ ನೆತನ್ಯಾಹು ಅವರೊಂದಿಗೆ ಮೋದಿಯವರ ಕುಖ್ಯಾತ ಅಪ್ಪುಗೆ ಭಾರತೀಯ ಸರ್ಕಾರದ ತಟಸ್ಥತೆ ಮತ್ತು ಸಾಮರಿಕ ಸ್ವಾಯತ್ತತೆಯ ಎಲ್ಲಾ ತೋರಿಕೆಗಳನ್ನು ಅಳಿಸಿ ಹಾಕಿದೆ.
ಈ ಹಿಂದೆ, ಭಾರತ ಸದಾ ಎಲ್ಲ ರಾಷ್ಟ್ರಗಳ ಶಾಂತಿ ಮತ್ತು ಸಾರ್ವಭೌಮತ್ವದ ಪರವಾಗಿ ನಿಂತಿದೆ. ಅಲಿ ಖಾಮೇನೈ ಸೇರಿದಂತೆ ಇರಾನಿನ ಉನ್ನತ ನಾಯಕತ್ವದ ಮೇಲೆ ಗುರಿಯಿಟ್ಟು ಹತ್ಯೆ ಮಾಡಿರುವುದನ್ನು ಖಂಡಿಸಲು ಸಹ ಪ್ರಸ್ತುತ ಒಕ್ಕೂಟ ಸರ್ಕಾರ ವಿಫಲವಾಗಿರುವುದು ನಾಚಿಕೆಗೇಡಿನ ಸಂಗತಿ.
ಈ ನಡುವೆ, ಇರಾನ್ ಹಾರ್ಮುಜ್ ಜಲಸಂಧಿಯನ್ನು ತೈಲ ಮತ್ತು ಅನಿಲ ಸಾಗಣೆಗೆ ಮುಚ್ಚಿರುವುದು ಭಾರತದ ಇಂಧನ ಭದ್ರತೆಗೆ ತೀವ್ರ ಅನಿಶ್ಚಿತತೆಯನ್ನು ಉಂಟುಮಾಡುತ್ತದೆ.
ತನ್ನ ಉದಾರತೆಯನ್ನು ಪ್ರದರ್ಶಿಸಲೋ ಎಂಬಂತೆ ಅಧ್ಯಕ್ಷ ಟ್ರಂಪ್ ಮತ್ತು ಅವರ ಆಡಳಿತವು ಭಾರತಕ್ಕೆ ರಷ್ಯಾದ ತೈಲವನ್ನು ಖರೀದಿಸಲು 30 ದಿನಗಳ ಕಾಲಾವಕಾಶ ನೀಡುವುದಾಗಿ ಹೇಳಿದೆ. ಗಾಯಕ್ಕೆ ಮತ್ತಷ್ಟು ಉಪ್ಪು ಸವರುವಂತೆ, ಚೀನಾಕ್ಕೆ ನೀಡಲಾದ ರಿಯಾಯಿತಿಗಳನ್ನು ಭಾರತಕ್ಕೆ ಎಂದಿಗೂ ನೀಡಲಾಗುವುದಿಲ್ಲ ಎಂದು ಅಮೆರಿಕದ ಅಧಿಕಾರಿಯೊಬ್ಬರು ಸ್ಪಷ್ಟವಾಗಿ ಹೇಳಿದ್ದಾರೆ ಮತ್ತು ಭಾರತ-ಯುಎಸ್ ವ್ಯಾಪಾರ ಒಪ್ಪಂದದಲ್ಲಿ ಯುಎಸ್ ಪರ ಅಂಶಗಳನ್ನು ತುಂಬಲಾಗಿದೆ ಎಂದೂ ಹೇಳಿದ್ದಾರೆ.
ಸ್ವಾತಂತ್ರ್ಯದ ನಂತರ ನಮ್ಮ ದೇಶವು ಇಷ್ಟು ಗಂಭೀರವಾದ ರಾಷ್ಟ್ರೀಯ ಮುಜುಗರವನ್ನು ಎಂದೂ ಎದುರಿಸಿಲ್ಲ. ಈ ಪರಿಸ್ಥಿತಿಯನ್ನು ಸರಿಪಡಿಸಲು, ಮೋದಿ ಸರ್ಕಾರ ಯುದ್ಧವನ್ನು ತಕ್ಷಣವೇ ನಿಲ್ಲಿಸುವಂತೆ ಕರೆ ನೀಡಬೇಕು , ಆ ಮೂಲಕ ಶಾಂತಿಯನ್ನು ಪುನಃಸ್ಥಾಪಿಸಲು ಮತ್ತು ನಮ್ಮ ರಾಷ್ಟ್ರೀಯ ಸ್ವಾಭಿಮಾನವನ್ನು ಮರಳಿ ಪಡೆಯಲು ಸಾಧ್ಯವಾಗಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ.
ಪಶ್ಚಿಮ ಏಷ್ಯಾದಾದ್ಯಂತ ಹರಡಿರುವ ಭಾರತದ ಒಂದು ಕೋಟಿ ವಲಸೆ ಕಾರ್ಮಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಲು ಎಲ್ಲಾ ಸಂಭಾವ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪೊಲಿಟ್ ಬ್ಯುರೊ ಒಕ್ಕೂಟ ಸರ್ಕಾರವನ್ನು ಆಗ್ರಹಿಸಿದೆ.
ಇದನ್ನೂ ನೋಡಿ: ಭೂ ಹಕ್ಕಿನ ಹೋರಾಟದ ಧ್ವನಿ | ಮರಕುಂಬಿ ಹೋರಾಟದ ರೂವಾರಿ ನಿತ್ಯಾನಂದ ಸ್ವಾಮಿ Janashakthi Media
