“ಅಬಕಾರಿ ಸುಂಕಗಳ ಏರಿಕೆ ಲಸಿಕೀಕರಣಕ್ಕೆ, ಕೇಂದ್ರೀಯ ಸ್ಕೀಮುಗಳಿಗೆ ಎಂಬ ಅಸಂಬದ್ಧ ಹಾಸ್ಯಾಸ್ಪದ ಸಮರ್ಥನೆ!”

ಬಜೆಟಿನಲ್ಲಿ ಇವಕ್ಕೆ ಕೊಟ್ಟಿರುವ 4.5 ಲಕ್ಷ  ಕೋಟಿ ರೂ. ಏನಾದವು?- ಸಿಪಿಐ(ಎಂ) ಕೇಂದ್ರ ಸಮಿತಿ ಪ್ರಶ್ನೆ

ನವದೆಹಲಿ: ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಕೇಂದ್ರೀಯ ಅಬಕಾರಿ ಸುಂಕಗಳ ಹೆಚ್ಚಳವು ಉಚಿತ ಲಸಿಕೆಗಳು ಮತ್ತು ಮೋದಿ ಸರ್ಕಾರವು ಜಾರಿಗೊಳಿಸುತ್ತಿರುವ ವಿವಿಧ ಸಾಮಾಜಿಕ ವಲಯದ ಯೋಜನೆಗಳಿಗೆ ಹಣಕಾಸು ಒದಗಿಸುತ್ತಿದೆ ಎಂಬ ಕೇಂದ್ರ ಸಂಪುಟದ ಮಂತ್ರಿಗಳು ಅಸಂಬದ್ಧ ದಾವೆಗಳನ್ನು ಮುಂದಿಡುತ್ತಿದ್ದಾರೆ. ಇದು ಹಾಸ್ಯಾಸ್ಪದ. ಅಂದರೆ  ಲಸಿಕೀಕರಣ ಉಚಿತವಲ್ಲ , ಜನರು ತಾವೇ ಬೆಲೆ ತೆತ್ತು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ ಎಂದೇ ಆಗುತ್ತದೆ. ಹಾಗಿದ್ದರೆ ಲಸಿಕೀಕರಣಕ್ಕೆ  ರೂ. 35,000 ಕೋಟಿ ಬಜೆಟ್ ಹಂಚಿಕೆ ಏನಾಯಿತು ವಿವಿಧ ಕೇಂದ್ರ ಪ್ರಾಯೋಜಿತ ಯೋಜನೆಗಳು ಮತ್ತು ಸಬ್ಸಿಡಿಗಳಿಗಾಗಿ ಈಗಾಗಲೇ ಕೊಟ್ಟಿರುವ ಸುಮಾರು ರೂ. 4 ಲಕ್ಷ ಕೋಟಿ ರೂ.- ಎಲ್ಲ ಹಣಎಲ್ಲಿ ಹೋದವು ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಮೋದಿ ಸರಕಾರವನ್ನು ಪ್ರಶ್ನಿಸಿದೆ.ಮೋದಿ ಸರಕಾರ ತನ್ನ ದೈನಂದಿನ ದುಂದುವೆಚ್ಚಗಳಿಗೆ ಆದಾಯ ಗಳಿಸಲು ಜನರನ್ನು ಲೂಟಿ ಮಾಡುತ್ತಿದೆಯಷ್ಟೇ ಎಂದು ಆಪಾದಿಸಿರುವ ಸಿಪಿಐ(ಎಂ) ಕೇಂದ್ರ ಸಮಿತಿ ಇದು ಆರ್ಥಿಕ ವ್ಯವಸ್ಥೆಯಲ್ಲಿ ಒಟ್ಟಾರೆ ಹಣದುಬ್ಬರದ ಸುರುಳಿಯನ್ನು ಪ್ರಚೋದಿಸಿದೆ, ಹೆಚ್ಚುತ್ತಿರುವ ಸಾರಿಗೆ ವೆಚ್ಚಗಳು ಆಹಾರ, ತರಕಾರಿಗಳು, ಹಾಲು ಮತ್ತು ದೈನಂದಿನ ಬಳಕೆಯ ಇತರ ವಸ್ತುಗಳು ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳಲ್ಲಿ ಏರಿಕೆಗೆ ಕಾರಣವಾಗುತ್ತವೆ ಎಂದಿದೆ; ಬೆಲೆ ಏರಿಕೆಯ ವಿರುದ್ಧ ಅಖಿಲ ಭಾರತ ಪ್ರತಿಭಟನಾ ಕಾರ್ಯಾಚರಣೆಗಳಿಗೆ ಅದು ಕರೆ ನೀಡಿದೆ. ಕಾರ್ಯಾಚರಣೆಗಳನ್ನು ಗ್ರಾಮ/ತಾಲೂಕು ಮಟ್ಟದಲ್ಲಿ ಮತ್ತು ನಗರಗಳಲ್ಲಿ ದೇಶದಾದ್ಯಂತ ನಡೆಸಬೇಕು ಎಂದು ಅದು ಹೇಳಿದೆ.

ಅಕ್ಟೋಬರ್‍ 22ರಿಂದ 24 ರವರೆಗೆ ನವದೆಹಲಿಯ ಹರ್ಕಿಷನ್ ಸಿಂಗ್‍ ಸುರ್ಜಿತ್‍ ಭವನದಲ್ಲಿ ಸಭೆ ಸೇರಿದ ಕೇಂದ್ರ ಸಮಿತಿ ಬೆಲೆಯೇರಿಕೆಯ ಪ್ರಶ್ನೆಯಲ್ಲದೆ,  ಎಲ್ಲಾ ಜನ ವಿಭಾಗಗಳಿಂದ, ಸೌಹಾರ್ದತೆ , ಮತ್ತು ನ್ಯಾಯಯುತ ಬೇಡಿಕೆಗಳಿಗೆ ವ್ಯಾಪಕ ಬೆಂಬಲವನ್ನು ಪಡೆಯುತ್ತಿರುವ ಐತಿಹಾಸಿಕ ರೈತ ಹೋರಾಟ, ರಾಷ್ಟ್ರೀಯ ಸೊತ್ತುಗಳ ಲೂಟಿ, ಜನರ ಗಮನವನ್ನು ಮಹಾಸಾಂಕ್ರಾಮಿಕದ ಕಳಪೆ ನಿರ್ವಹಣೆಯಿಂದ ಬೇರೆಡೆಗೆ ಸೆಳೆಯಲು ನೂರು ಕೋಟಿ ಲಸಿಕೆಗಳ ‘ಆಚರಣೆ’, ಜಮ್ಮು ಮತ್ತು ಕಾಶ್ಮೀರದಲ್ಲಿ 1990 ರ ದಶಕದಲ್ಲಿ ಇದ್ದಂತಹ  ಪರಿಸ್ಥಿತಿಯನ್ನು  ಹೋಲುವ ಆತಂಕಕಾರಿ ಪರಿಸ್ಥಿತಿ ಮತ್ತು ತೀವ್ರ ವಿದ್ಯುತ್ ಕೊರತೆಯತ್ತ ಒಯ್ಯುತ್ತಿರುವ ಸನ್ನಿವೇಶ ಹಾಗೂ  ಜಾತಿಗಣತಿಯ ಅಗತ್ಯ ಮುಂತಾದ ವಿಷಯಗಳನ್ನು ಚರ್ಚಿಸಿತು.ಎಪ್ರಿಲ್‍ 2022ರಲ್ಲಿ ನಡೆಲಿರುವ ಪಕ್ಷದ 23ನೇ ಮಹಾಧಿವೇಶನದಲ್ಲಿ ಮಂಡಿಸಲಿರುವ ರಾಜಕೀಯ ನಿರ್ಣಯದ ರೂಪುರೇಷೆಯನ್ನೂ ಸಭೆ ಚರ್ಚಿಸಿತು ಎಂದಿರುವ  ಈ ಕುರಿತ ಹೇಳಿಕೆಯೊಂದನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್‍ ಯೆಚುರಿ ಅಕ್ಟೋಬರ್ 25 ರಂದು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.

ಐತಿಹಾಸಿಕ ರೈತ ಹೋರಾಟಕ್ಕೆ ನಮನಸಂಪೂರ್ಣ ಬೆಂಬಲ

ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಲು ಮತ್ತು ಎಂಎಸ್‌ಪಿಗೆ ಕಾನೂನುಬದ್ಧತೆಯನ್ನು ಒತ್ತಾಯಿಸಿ ನಮ್ಮ ರೈತರು ನಡೆಸಿರುವ ವೀರೋಚಿತ ಹೋರಾಟ ಸ್ವತಂತ್ರ ಭಾರತ ಕಂಡ ಅತ್ಯಂತ ಸುದೀರ್ಘ ಅವಿರತ ಹೋರಾಟ ಎನ್ನುತ್ತ ಸಿಪಿಐ(ಎಂ) ಕೇಂದ್ರ ಸಮಿತಿಯು ತನ್ನ ನಮನಗಳನ್ನು ಸಲ್ಲಿಸಿದೆ.

ಹೋರಾಟವನ್ನು ಅಡ್ಡಿಪಡಿಸುವ  ಎಲ್ಲಾ ಪ್ರಯತ್ನಗಳು ಮತ್ತು ಪ್ರಚೋದನೆಗಳ ಹೊರತಾಗಿಯೂ,ರೈತರು ಸಂಯುಕ್ತ ಕಿಸಾನ್ ಮೋರ್ಚಾ(ಎಸ್‍.ಕೆ.ಎಂ.) ನೇತೃತ್ವದಲ್ಲಿ ಈ ಹೋರಾಟವನ್ನು ಶಾಂತಿಯುತವಾಗಿ ಒಂದು ಮಾದರಿಯಾಗುವ ರೀತಿಯಲ್ಲಿ ನಡೆಸುತ್ತಿದ್ದಾರೆ.

ಲಖಿಂಪುರ್ ಖೇರಿಯ ಆಘಾತಕಾರಿ ಘಟನೆಯಂತಹ  ಹಿಂಸಾಚಾರವನ್ನು ಹರಿಯ ಬಿಡುವ  ಮೂಲಕ ಈ ಹೋರಾಟವನ್ನು ಛಿದ್ರಗೊಳಿಸುವ ಬಿಜೆಪಿಯ ಪ್ರಯತ್ನಗಳು ಸಹ ಯಶಸ್ವಿಯಾಗಲಿಲ್ಲ. ತದ್ವಿರುದ್ಧವಾಗಿ, ಈ ಭೀಕರ ಘಟನೆ  ಜನರಲ್ಲಿ ಹೆಚ್ಚು ವ್ಯಾಪಕವಾದ ಕೋಪವನ್ನು ಬಡಿದೆಬ್ಬಿಸಿದೆ. ಕೇಂದ್ರ ಗೃಹ ರಾಜ್ಯ ಸಚಿವರ ಪುತ್ರ ಇದರಲ್ಲಿ ಪ್ರಮುಖ ಆರೋಪಿಯಾಗಿದ್ದರೂ, ಅವರನ್ನು ಪ್ರಧಾನಿ ಮೋದಿ ಕೇಂದ್ರ ಸಚಿವ ಸಂಪುಟದಿಂದ ತೆಗೆದುಹಾಕಿಲ್ಲ. ಹಾಗೆ ಮಾಡಲು ನಿರಾಕರಿಸುವುದು ಈ ಬರ್ಬರತೆಯಲ್ಲಿ ಮೋದಿ ಸರ್ಕಾರವೂ ಶಾಮೀಲಾದಂತಾಗುತ್ತದೆ. ಸುಪ್ರೀಂ ಕೋರ್ಟ್ ಸಚಿವರ ಮಗ ಮತ್ತು ಇತರ ಆರೋಪಿಗಳ ವಿರುದ್ಧ ಉತ್ತರಪ್ರದೇಶ ಸರ್ಕಾರವು ಈ ಪ್ರಕರಣವನ್ನು ಮುಂದುವರಿಸಲು ವಿಳಂಬ ಮಾಡುತ್ತಿರುವುದನ್ನು ಟೀಕಿಸಿದೆ. ನ್ಯಾಯವೂ ಶೀಘ್ರವೇ ಸಿಗುವಂತಾಗಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ.

ರೈತರ  ಹೋರಾಟವು ಎಲ್ಲಾ ವಿಭಾಗಗಳಿಂದ, ವಿಶೇಷವಾಗಿ ಸಂಘಟಿತ ಕಾರ್ಮಿಕ ಚಳವಳಿ ಮತ್ತು ಕೃಷಿ ಕಾರ್ಮಿಕರಿಂದ ಪಡೆಯುತ್ತಿರುವ ಸೌಹಾರ್ದತೆ  ನಮ್ಮ ರೈತರುಗಳ ನ್ಯಾಯಯುತ ಬೇಡಿಕೆಗಳಿಗೆ ವ್ಯಾಪಕ ಬೆಂಬಲವನ್ನು ಬಿಂಬಿಸುತ್ತದೆ ಎಂದಿರುವ ಸಿಪಿಐ(ಎಂ) ಕೇಂದ್ರ ಸಮಿತಿ ನವೆಂಬರ್ 26 ರಂದು ಹೋರಾಟದ ವಾರ್ಷಿಕೋತ್ಸವವನ್ನು ಆಚರಿಸಲು ಎಸ್.ಕೆ.ಎಂ. ಮತ್ತು ಕೇಂದ್ರ ಕಾರ್ಮಿಕ ಸಂಘಟನೆಗಳ ಎಲ್ಲಾ ಕರೆಗಳು ಮತ್ತು ಪ್ರತಿಭಟನೆಗಳಿಗೆ ತನ್ನ ಸಂಪೂರ್ಣ ಸೌಹಾರ್ದ ಮತ್ತು ಬೆಂಬಲವನ್ನು ವ್ಯಕ್ತಪಡಿಸಿದೆ  ಮತ್ತು ಪ್ರತಿಭಟನಾ ಕಾರ್ಯಾಚರಣೆಗಳಿಗೆ ಸಕ್ರಿಯ ಬೆಂಬಲ ನೀಡುವಂತೆ ತನ್ನ ಘಟಕಗಳಿಗೆ ಕರೆ ನೀಡಿದೆ.

ಭಾರತದ ರಾಷ್ಟ್ರೀಯ ಸೊತ್ತುಗಳ ಲೂಟಿಯ ವಿರುದ್ಧ ಐಕ್ಯ ಹೋರಾಟ

ಎಲ್ಲಾ ರಾಷ್ಟ್ರೀಯ ಸೊತ್ತುಗಳ/ಸಾರ್ವಜನಿಕ ವಲಯದ ಉದ್ದಿಮೆಗಳ ಸಾರಾಸಗಟು ಖಾಸಗೀಕರಣದ ಹತಾಶ ಕಸರತ್ತು ನಡೆಯುತ್ತಿದೆ. ರಾಷ್ಟ್ರೀಯ ನಗದೀಕರಣ ಕ್ರಮಾಚರಣೆ (ಎನ್.ಎಂ.ಪಿ.) ಖಾಸಗಿ ಕಾರ್ಪೊರೇಟ್‌ಗಳಿಗೆ ವಿಶಾಲವಾದ ಮೂಲಸೌಕರ್ಯ ಸೊತ್ತುಗಳು/ಯಂತ್ರೋಪಕರಣಗಳನ್ನು ವರ್ಗಾಯಿಸುವ ಮೂಲಕ, ಸುಮಾರಾಗಿ ಪುಕ್ಕಟೆಯಾಗಿಯೇ ಭಾರತದ ಮಾರಾಟ  ನಡೆಯುತ್ತದೆ ಎಂದೇ ಹೇಳಬಹುದಾಗಿದೆ. ಇದರಲ್ಲಿ ಇತ್ತೀಚಿನದು ಟಾಟಾಗಳಿಗೆ ನೀಡುತ್ತಿರುವ  ಏರ್ ಇಂಡಿಯಾದ ಉಚಿತ ಉಡುಗೊರೆ. ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ವರ್ಣಿಸಿದೆ.

ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಅನುಕೂಲವಾಗುವಂತೆ ಬ್ಯಾಂಕ್ ರಾಷ್ಟ್ರೀಕರಣ ಕಾಯ್ದೆಗೆ ತಿದ್ದುಪಡಿ ಮಸೂದೆಗಳನ್ನು ತರುವಲ್ಲಿ ಸರ್ಕಾರ ಈಗಾಗಲೇ ಮುಂದುವರಿದ ಹಂತದಲ್ಲಿದೆ.

ಈ ವಿನಾಶಕಾರಿ ಕ್ರಮಗಳ ವಿರುದ್ಧ ವಿವಿಧ ವಲಯಗಳಲ್ಲಿ ಕಾರ್ಮಿಕ ಸಂಘಟನೆಗಳ ಆಂದೋಲನಗಳು ನಡೆಯುತ್ತಿವೆ. ಕೇಂದ್ರ ಕಾರ್ಮಿಕ ಸಂಘಟನೆಗಳು/ ಒಕ್ಕೂಟಗಳು ಈ ವಿಷಯಗಳ ಕುರಿತು ದೇಶವ್ಯಾಪಿ ಹೋರಾಟಗಳನ್ನು ಆರಂಭಿಸಲು ಮುಂದಾಗುತ್ತಿವೆ. ಕೇಂದ್ರ ಸಮಿತಿಯು ಹೀಗೆ ನಡೆಯುತ್ತಿರುವ  ಕಾರ್ಮಿಕ ವರ್ಗದ ಐಕ್ಯ ಹೋರಾಟಗಳಿಗೆ ತನ್ನ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದೆ.

60%ಕ್ಕಿಳಿದ ಲಸಿಕೀಕರಣ ಗುರಿಮರೆಮಾಚಲುಆಚರಣೆಗಳು

ಕೋವಿಡ್ ಮಹಾಸಾಂಕ್ರಾಮಿಕದ ತನ್ನ ಅಸಮರ್ಪಕ ನಿರ್ವಹಣೆಯನ್ನು ಮತ್ತು ಲಸಿಕೀಕರಣದಲ್ಲಿ ಮುಗ್ಗರಿಸಿರುವುದನ್ನು ಮುಚ್ಚಿಹಾಕಲು, ಮೋದಿ ಸರ್ಕಾರವು ನೂರು ಕೋಟಿ ಲಸಿಕೆಗಳನ್ನು ನೀಡುವ ‘ಆಚರಣೆ’ಗಳನ್ನು ಆಯೋಜಿಸುವ ಮೂಲಕ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸಿದೆ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಅಭಿಪ್ರಾಯ ಪಟ್ಟಿದೆ.

ಈ ಮೈಲಿಗಲ್ಲನ್ನು, ವಿಳಂಬವಾಗಿಯಾದರೂ ತಲುಪಿರುವುದು ಶ್ಲಾಘನೀಯವಾಗಿದ್ದರೂ, ನಮ್ಮ ಜನಸಂಖ್ಯೆಯಲ್ಲಿ ಕೇವಲ 21% ಮಾತ್ರ ಸಂಪೂರ್ಣ ಲಸಿಕೆ ಹಾಕಲಾಗಿದೆ ಎಂಬುದನ್ನು ಗಮನಿಸಬೇಕು. ವರ್ಷಾಂತ್ಯದ ವೇಳೆಗೆ ಭಾರತದ ವಯಸ್ಕ ಜನಸಂಖ್ಯೆಗೆ ಸಂಪೂರ್ಣವಾಗಿ ಲಸಿಕೆ ಹಾಕುವುದಾಗಿ ಮೋದಿ ಸರ್ಕಾರವು ನೀಡಿದ ಭರವಸೆಯನ್ನು ಸ್ಪಷ್ಟವಾಗಿ ಕೈಬಿಟ್ಟು, ಗುರಿಯನ್ನು ಈಗ ಜನಸಂಖ್ಯೆಯ 60 ಶೇಕಡಾಕ್ಕೆ ಎಂದು ಪರಿಷ್ಕರಿಸಲಾಗಿದೆ. ಇದು ಸಹ ಪ್ರತಿದಿನ 1.5 ಕೋಟಿ ಲಸಿಕೆಗಳನ್ನು ನೀಡದ ಹೊರತು ಸಾಧ್ಯವಿಲ್ಲ. ಲಸಿಕೀಕರಣ ದರವು ಇಳಿಯುತ್ತಿದೆ,  ಪ್ರಸ್ತುತ ದಿನಕ್ಕೆ 40 ಲಕ್ಷಕ್ಕಿಂತ ಕಡಿಮೆ ಇದೆ.

ಹೊಸ ಕೋವಿಡ್ ಪ್ರಕರಣಗಳು ಮತ್ತೊಮ್ಮೆ ಹೆಚ್ಚುತ್ತಿರುವಾಗ ಇದು ಆತಂಕಕಾರಿಯಾಗಿದೆ. ಪ್ರತಿದಿನ ಸುಮಾರು 16,000 ಹೊಸ ಪ್ರಕರಣಗಳು ವರದಿಯಾಗುತ್ತಿದ್ದು, 650 ಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತಿವೆ.

ಜನರ ಮೇಲೆ ಇನ್ನೂ ಹೆಚ್ಚು ಸಂಕಟಗಳನ್ನು ಉಂಟುಮಾಡುವ ಯಾವುದೇ ಮತ್ತಷ್ಟು ಆರೋಗ್ಯ ಅನಾಹುತ ಸಂಭವಿಸದಂತೆ  ತಡೆಗಟ್ಟಲು ಲಸಿಕೀಕರಣದ ವೇಗವನ್ನು ಹೆಚ್ಚಿಸಬೇಕೆಂದು ಕೇಂದ್ರ ಸಮಿತಿಯು ಆಗ್ರಹಿಸಿದೆ.

ಜಮ್ಮು ಮತ್ತು ಕಾಶ್ಮೀರ:ಆತಂಕಕಾರಿ ಸ್ಥಿತಿನಗೆಪಾಟಲಿನ ದಾವೆ

ಕೇಂದ್ರ ಗೃಹ ಸಚಿವರು ನೂರಾರು ಜನರನ್ನು ದಸ್ತಗಿರಿ ಮಾಡಿ ಬೃಹತ್ ಮಿಲಿಟರಿ ಕೋಟೆ ನಿರ್ಮಿಸಿಕೊಂಡು ಅದರ ಮರೆಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಅವರು ಕಲಮು 370 ರದ್ದು ಮತ್ತು ಹಿಂದಿನ ಜಮ್ಮು ಮತ್ತು ಕಾಶ್ಮೀರದ ರಾಜ್ಯದ ವಿಸರ್ಜನೆಯೊಂದಿಗೆ ಪರಿಸ್ಥಿತಿ ಸುಧಾರಿಸಿದೆ ಎಂಬ ನಗೆಪಾಟಲಿನ ದಾವೆ ಹೂಡಿದ್ದಾರೆ.

ಇತ್ತೀಚೆಗೆ ಸಾಮಾನ್ಯ ನಾಗರಿಕರನ್ನು ಗುರಿಯಿಟ್ಟು  ನಡೆದಿರುವ ಸರಣಿ ಹತ್ಯೆಗಳು 1990 ರ ದಶಕದಲ್ಲಿ ಇದ್ದಂತಹ  ಪರಿಸ್ಥಿತಿಯನ್ನು  ಹೋಲುವಂತದ್ದು.. ಇದು ಆತಂಕಕಾರಿಯಾಗಿದೆ.

ಪ್ರಜಾಪ್ರಭುತ್ವ ರಾಜಕೀಯ ಪ್ರಕ್ರಿಯೆಯ ಮರುಸ್ಥಾಪನೆಯೊಂದಿಗೆ ಜನರ ಸಹಭಾಗಿತ್ವವನ್ನು ಸ್ಥಾಪಿಸದ ಹೊರತು, ಈ ಹೆಚ್ಚುತ್ತಿರುವ ಉಗ್ರಗಾಮಿ ಹಿಂಸಾಚಾರವನ್ನು ಎದುರಿಸುವುದು ಕಷ್ಟಕರವಾಗುತ್ತದೆ ಎಂದಿರುವ ಸಿಪಿಐ(ಎಂ) ಕೇಂದ್ರ ಸಮಿತಿಯು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ತಕ್ಷಣವೇ ಮರುಸ್ಥಾಪಿಸಬೇಕು, ಎಲ್ಲಾ ರಾಜಕೀಯ ಬಂಧಿಗಳನ್ನು ಬಿಡುಗಡೆ ಮಾಡಬೇಕು, ಮಾಧ್ಯಮಗಳ ಮೇಲಿನ ನಿರ್ಬಂಧಗಳನ್ನು ಕೊನೆಗೊಳಿಸಬೇಕು ಮತ್ತು ನಿರ್ದಿಷ್ಟವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಯುವಕರನ್ನು ಮನಬಂದಂತೆ ಬಂಧಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದೆ.

ಸಿಪಿಐ (ಎಂ) ಅರ್ಜಿ ಸೇರಿದಂತೆ ಭಾರತೀಯ ಸಂವಿಧಾನದ 370 ಮತ್ತು 35 ವಿಧಿಗಳನ್ನು ರದ್ದುಗೊಳಿಸುವ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿರುವ ಅರ್ಜಿಗಳನ್ನು ಪರಿಗಣಿಸುವುದನ್ನು ಆರಂಭಿಸಬೇಕು ಎಂದು  ಕೇಂದ್ರ ಸಮಿತಿಯು ಸುಪ್ರೀಂ ಕೋರ್ಟನ್ನು ಒತ್ತಾಯಪೂರ್ವಕವಾಗಿ ವಿನಂತಿಸಿದೆ.

ವಿದ್ಯುತ್ ಬೆಲೆಗಳನ್ನು ನಿಯಂತ್ರಿಸಿ

ಆಮದು ಮಾಡಿದ ಕಲ್ಲಿದ್ದಲನ್ನೇ ಅವಲಂಬಿಸಿರುವ ಖಾಸಗಿ ಕಾರ್ಪೊರೇಟ್ ಗಳ ಒಡೆತನದ ವಿದ್ಯುತ್ ಉತ್ಪಾದಿಸುವ ಘಟಕಗಳು ಅಂತಾರಾಷ್ಟ್ರೀಯ ಕಲ್ಲಿದ್ದಲು ಬೆಲೆ ಏರಿಕೆಯ ಹೊರೆಯನ್ನು ಪ್ರತಿ ಯೂನಿಟ್ ವಿದ್ಯುತ್ ಗೆ ಹೆಚ್ಚಿನ ದರಗಳನ್ನು ವಿಧಿಸುವ ಮೂಲಕ ಗ್ರಾಹಕರ ತಲೆಯ ಮೇಲೆ ವರ್ಗಾಯಿಸುತ್ತಿದೆ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಖೇದ  ವ್ಯಕ್ತಪಡಿಸಿದೆ.

ದೇಶದೊಳಗೆ  ಕಲ್ಲಿದ್ದಲಿನ ಕೊರತೆ ಇಲ್ಲ. ಮೋದಿ ಸರ್ಕಾರದ ಖಾಸಗೀಕರಣ, ನಿಯಂತ್ರಣ ರದ್ಧತಿ ಮತ್ತು ವಿದ್ಯುತ್/ಇಂಧನ ಕ್ಷೇತ್ರದ ಸಂಪೂರ್ಣ ಕಳಪೆ ನಿರ್ವಹಣೆ  ಈ ಬಿಕ್ಕಟ್ಟನ್ನು ಸೃಷ್ಟಿಸಿದೆ. ಇದು ತೀವ್ರ ವಿದ್ಯುತ್ ಕೊರತೆಗಳಿಗೂ ಕಾರಣವಾಗುತ್ತಿದೆ. ಈಗಾಗಲೇ ನರಳುತ್ತಿರುವ ಜನರ ಮೇಲೆ ಇನ್ನಷ್ಟು ಸಂಕಷ್ಟಗಳನ್ನು ಉಂಟುಮಾಡುವ ಮತ್ತು ಆರ್ಥಿಕ ಚಟುವಟಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಯಾವುದೇ ವಿದ್ಯುತ್ ಕಡಿತವಾಗದಂತೆ ಖಾತ್ರಿಪಡಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂದಿರುವ ಕೇಂದ್ರ ಸಮಿತಿ ಇದನ್ನು ಖಚಿತಪಡಿಸಲು ಕೇಂದ್ರ ಸರ್ಕಾರವು ಸರಿಯಾದ ನಿಯಮಾವಳಿಗಳನ್ನು ಮತ್ತು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

2021 ಜನಗಣತಿಯೊಂದಿಗೆ ಜಾತಿ ಗಣತಿ

2021 ರ ಜನಗಣತಿಯೊಂದಿಗೆ ಜಾತಿ ಗಣತಿಯನ್ನು ನಡೆಸಬೇಕೆಂಬ ಪಕ್ಷದ ಬೇಡಿಕೆಯನ್ನು ಸಿಪಿಐ(ಎಂ) ಕೇಂದ್ರ ಸಮಿತಿಯು ಪುನರುಚ್ಚರಿಸಿದೆ.ಅಂತಹ ಜನಗಣತಿಯನ್ನು ನಡೆಸಲು ಸಂಸತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರಕಾರ  ಖಚಿತಪಡಿಸಬೇಕು ಎಂದು ಅದು ಹೇಳಿದೆ.

ಸಿಪಿಐ(ಎಂ) 23ನೇ ಮಹಾಧಿವೇಶನ

ಏಪ್ರಿಲ್ 2022 ರಲ್ಲಿ ಕೇರಳದ ಕಣ್ಣೂರಿನಲ್ಲಿ ನಡೆಯಲಿರುವ ಪಕ್ಷದ 23 ನೇ ಮಹಾಧಿವೇಶನದ ಮುಂದೆ ಮಂಡಿಸಬೇಕಾದ ಕರಡು ರಾಜಕೀಯ ನಿರ್ಣಯದ ರೂಪುರೇಷೆಯನ್ನು ಕೇಂದ್ರ ಸಮಿತಿಯು ಚರ್ಚಿಸಿತು. ಪಕ್ಷದ ಮಹಾಧಿವೇಶನದ ಮುಂದೆ ಮಂಡಿಸಲು ಕೇಂದ್ರ ಸಮಿತಿಯು ಪರಿಗಣಿಸಿ ಅಂತಿಮಗೊಳಿಸಬೇಕಾದ ಕರಡನ್ನು ಪಾಲಿಟ್ ಬ್ಯೂರೋ ಸಿದ್ಧಪಡಿಸುತ್ತದೆ ಎಂದು ಹೇಳಿಕೆ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *