ಬೆಂಗಳೂರು: ಮಲಗಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದು, ಮಚ್ಚಿನಿಂದ ಕಾಲಿಗೆ ಹೊಡೆದು ಕ್ರೌರ್ಯ ಮೆರೆದಿರುವ ಘಟನೆ ಚಾಮರಾಜಪೇಟೆಯಲ್ಲಿ ನಡೆದಿದೆ.
ಚಾಮರಾಜಪೇಟೆಯ ವಿನಾಯಕ ನಗರದ ಓಲ್ಡ್ ಪೆನ್ಷನ್ ಮೊಹಲ್ಲಾದ ರಸ್ತೆ ಬದಿಯ ಶೆಡ್‌ನಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದ, ಮಚ್ಚಿನಿಂದ ಕಾಲಿಗೆ ಹೊಡೆದಿದ್ದ ಆರೋಪಿಯನ್ನು ಕಾಟನ್‌ಪೇಟೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಶೇಖ ನಸ್ರೂ(35) ಬಂಧಿತ ಆರೋಪಿ.
ಭಾನುವಾರ ಬೆಳಿಗ್ಗೆ ಘಟನೆ ನಡೆದಿದ್ದು, ಬಿಎನ್‌ಎಸ್ ಸೆಕ್ಷನ್ 325 ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ : ಜಾರ್ಖಂಡ್| 10ನೇ ತರಗತಿ ವಿದ್ಯಾರ್ಥಿನಿಯರ ಶರ್ಟ್ ಬಿಚ್ಚಿಸಿ ಮನೆಗೆ ಕಳಿಸಿದ ಪ್ರಿನ್ಸಿಪಾಲ್
ಕೃತ್ಯ ನಡೆದ ಸ್ಥಳದಿಂದ ಸುಮಾರು 50 ಮೀಟರ್‌ನಷ್ಟು ದೂರ ಇರುವ ಪ್ಲಾಸ್ಟಿಕ್ ಹಾಗೂ ಬ್ಯಾಗ್ ಹೊಲಿಗೆ ಅಂಗಡಿಯಲ್ಲಿ ಆರೋಪಿ ಕೆಲಸ ಮಾಡುತ್ತಿದ್ದ. ಮದ್ಯದ ನಶೆಯಲ್ಲಿ ಹಸುಗಳ ಕೆಚ್ಚಲು ಕೊಯ್ದಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.
ಆರೋಪಿ ಒಬ್ಬನೇ ಕೃತ್ಯ ಎಸಗಿದ್ದಾನೆ. ಬೇರೆ ಯಾರೂ ಭಾಗಿ ಆಗಿಲ್ಲ. ಆದರೂ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಆರೋಪಿಯನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗಿದ್ದು, ಜನವರಿ 24ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿಯನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಸ್ಥಳೀಯರು ಹಾಗೂ ಬಿಜೆಪಿ ಮುಖಂಡರು ಭಾನುವಾರ ಪ್ರತಿಭಟನೆ ನಡೆಸಿದ್ದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿತ್ತು. ಈಗಲೂ ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ ಎಂದು ಗೊತ್ತಾಗಿದೆ. ಪಶು ಆಸ್ಪತ್ರೆಯಲ್ಲಿ ಮೂರು ಹಸುಗಳಿಗೆ ಚಿಕಿತ್ಸೆ ಕೊಡಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿವೆ ಎಂದು ಮೂಲಗಳು ಹೇಳಿವೆ.
ಇದನ್ನೂ ನೋಡಿ : ಮುಖ್ಯಮಂತ್ರಿಗೆ ಘೇರಾವ್ : DYFI ಕಾರ್ಯಕರ್ತರ ಬಂಧನ Janashakthi Media