ಹುಚ್ಚುತನ ಬಿಡಿ, ಗೋಮೂತ್ರ ಔಷಧಿ ಅಲ್ಲ !

ಮೊನ್ನೆ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) , ಮದ್ರಾಸಿನ ನಿರ್ದೇಶಕರು ಚೆನ್ನೈನ ಪಶ್ಚಿಮ ಮಾಂಬಲಂನಲ್ಲಿರುವ ಗೋಶಾಲೆಯಲ್ಲಿ, ಜಾನುವಾರುಗಳಿಗೆ ಮೀಸಲಾದ ‘ಮಟ್ಟು ಪೊಂಗಲ್’ ಹಬ್ಬದ ಸಂದರ್ಭದಲ್ಲಿ ಗೋಮೂತ್ರ ಶಿಲೀಂದ್ರ ನಾಶಕ, ಜೀವ ನಿರೋಧಕ ಮತ್ತು ಊತನಿವಾರಕ ಔಷಧಿ ಎಂದು ಹೇಳಿದಾಗ ಅದರ ಪರ ಮತ್ತು ವಿರುದ್ಧ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆದವು. ನಂತರ ಅವರು ಅದಕ್ಕೆ ಸಂಬಂಧಿಸಿದಂತೆ ಕೆಲವು ಸಂಶೋಧನಾ ಲೇಖನಗಳನ್ನೂ ಸಹ ಬಿಡುಗಡೆ ಮಾಡಿದರೂ ಸಹ ಈ ಕುರಿತು ಎಂದಿನಂತೆ ಚರ್ಚೆ ಮುಂದುವರೆದಿದೆ. ಒಂದು ವಿಷಯ ಗಮನದಲ್ಲಿರಲಿ. ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕರು ಅವರ ಕ್ಷೇತ್ರದಲ್ಲಿ ಪರಿಣಿತರು ನಿಜ. ಆದರೆ ವೈದ್ಯಕೀಯ ವಿಷಯಗಳಂತ ಸಂಕೀರ್ಣ ವಿಷಯಗಳಲ್ಲಿ ಅಭಿಪ್ರಾಯ ನೀಡುವಾಗ ಅದರ ಬಗ್ಗೆ ಮಾಹಿತಿ ಹೊಂದಿದ್ದರೆ ಒಳ್ಳೆಯದು. ಹಾಗಿದ್ದರೆ ಏಕೆ ಹೀಗೆಲ್ಲಾ ವಿವಾದಗಳಾಗುತ್ತಿವೆ? ನಿಜವಾಗಿಯೂ ಗೋಮೂತ್ರಕ್ಕೆ ಔಷಧದ ಗುಣವಿದೆಯೇ ಅಥವಾ ಏನಿದು ನೋಡೋಣ.

ಡಾ ಎನ್.ಬಿ.ಶ್ರೀಧರ

ಎಲ್ಲರಿಗೂ ತಿಳಿದಂತೆ ಮೂತ್ರ ದೇಹದ ತ್ಯಾಜ್ಯಗಳನ್ನು, ಸತ್ತ ಜೀವಕೋಶಗಳನ್ನು, ನೀರನ್ನು, ಯೂರಿಯಾ ಇತ್ಯಾದಿ ಅನೇಕ ವಸ್ತುಗಳನ್ನು ಶರೀರದಿಂದ ಹೊರಹಾಕಲು ಇರುವ ಮಾಧ್ಯಮ. ಮಲ ಘನ ರೂಪದಲ್ಲಿದ್ದು ಜೀರ್ಣವಾಗದ ವಸ್ತುಗಳನ್ನು ಶರೀರದಿಂದ ಹೊರಹಾಕಿದ್ದು ಘನ ರೂಪದಲ್ಲಿದ್ದರೆ ಮೂತ್ರವು ದ್ರವರೂಪದಲ್ಲಿರುತ್ತದೆ. ಇದು ಗೋವು, ಮನುಷ್ಯ ಮತ್ತು ಎಲ್ಲಾ ಪ್ರಾಣಿಗಳಿಗೂ ಸಹ ಅನ್ವಯಿಸುತ್ತದೆ. ಮೂತ್ರದಲ್ಲಿ ಶೇ 90-95 ರಷ್ಟು ನೀರು, ಯೂರಿಯಾ 2.5-3.5%, ಕ್ರಿಯಾಟಿನಿನ್0.1-0.4%, ಯೂರಿಕ್ ಆಮ್ಲ 0.02–0.05%, ಹಿಪ್ಪುರಿಕ್ ಆಮ್ಲ 0.1-0.5%, ಸೋಡಿಯಂ, 2.5-3.0%, ಪೊಟ್ಯಾಸಿಯಮ್, 1.2-2.0%, ಕ್ಯಾಲ್ಶಿಯಂ, 0.5–1.5%, ಮೆಗ್ನೀಸಿಯಮ್ 0.1-0.5%, ಅಮೋನಿಯಾ, 0.05–0.1%, ಗಂಧಕ, 0.05-0.2% ಮತ್ತು ಕೆಲವೊಂದು ಜೈವಿಕ ಸಂಯುಕ್ತಗಳು ಮತ್ತು ಸಾವಯವ ವಸ್ತುಗಳಿರುತ್ತವೆ. ಇವುಗಳ ಪ್ರಮಾಣ ಆಯಾ ಪ್ರಾಣಿಯ ಪ್ರಬೇಧದ ಮೇಲೆ ಒಂದಿಷ್ಟು ವ್ಯತ್ಯಾಸವಾದರೂ ಸಹ ಮೂಲ ಅದೇ ಇರುತ್ತದೆ.

ಇಷ್ಟಾಗಿಯೂ ಸಹ ಗೋಮೂತ್ರಕ್ಕೆ ಅದರದೇ ಆದ ಮಹತ್ವವಿದೆ.ಆದರೆ ಔಷಧಿ ಎಂದಲ್ಲ. ಬದಲಾಗಿ ಕೃಷಿಯಲ್ಲಿ ಇದು ಸಸಾರಜನಕ ಯೂರಿಯಾ ಆಗರ. ಗೋಮೂತ್ರದಲ್ಲಿ ಬೇವಿನಸೊಪ್ಪನ್ನು ಮಿಶ್ರಣಮಾಡಿದರೆ ಅದು ಉತ್ತಮ ಕೀಟನಾಶಕವಾಗಿ ಕೆಲಸಮಾಡಬಲ್ಲದು ಅನ್ನುವುದರ ಕುರಿತು ವರದಿಗಳಿವೆ. ಗೋಮೂತ್ರವನ್ನು ಶಿಲೀಂದ್ರನಾಶಕವಾಗಿಯೂ ಸಹ ಬಳಸಬಹುದು ಎಂಬುದರ ಬಗ್ಗೆ ನಿದರ್ಶನಗಳಿವೆ.

ಇದನ್ನೂ ಓದಿ: ಇಂದಿನ ಭಾರತದಲ್ಲಿ ಬಳಕೆ-ಆಧಾರಿತ ಜಿಡಿಪಿ ಬೆಳವಣಿಗೆ ಸಾಧ್ಯವೇ?

ಪಿತ್ತಜನಕಾಂಗದಲ್ಲಿ ನಿರ್ವಿಷಗೊಂಡ ಹಲವು ಔಷಧಗಳು, ಪ್ರಾಣಿಯು ಸೇವಿಸಿದ ವಿಷಕಾರಕ ವಸ್ತುಗಳು ಹೊರಗೆ ಬರಲು ಮುಖ್ಯವಾದ ಮಾರ್ಗ ಮೂತ್ರ. ಹಸುಗಳಲ್ಲಿ ದೇಶಿ ಆಕಳುಗಳ ಮೂತ್ರ ಔಷಧಿಯಾಗಿದ್ದು ಉಳಿದವುಗಳ ಮೂತ್ರ ಔಷಧಿ ಅಲ್ಲವೆಂದು ನಂಬಲಾಗಿದೆ. ಆದರೆ ಈಗಾಗಲೇ ಹೇಳಿದಂತೆ ಒಂದಿಷ್ಟು ಸಣ್ಣ ಪುಟ್ಟ ವ್ಯತ್ಯಾಸ ಬಿಟ್ಟರೆ ಬಹುತೇಕ ಹಸುಗಳ ಮೂತ್ರವೂ ಸಹ ಭೌತಿಕ ಮತ್ತು ರಾಸಾಯನಿಕವಾಗಿ ಒಂದೇ. ನಮ್ಮಲ್ಲಿ ಯಾವುದೇ “ವಿದೇಶಿ” ತಳಿಯ ಜಾನುವಾರುಗಳು ಇಲ್ಲ. ಮಿಶ್ರ ತಳಿಯ ಜಾನುವಾರುಗಳನ್ನು ವಿದೇಶಿ ತಳಿ ಎಂದು ತಪ್ಪಾಗಿ ಕರೆಯುತ್ತಿದ್ದಾರೆ. ತಳಿ ಯಾವುದೇ ಇರಲಿ ಸಗಣಿ, ಮೂತ್ರ ಇವೆರದೂ ದೇಹದ ತ್ಯಾಜ್ಯವನ್ನು ಹೊರಗೆ ಹಾಕುವ ಮಾಧ್ಯಮಗಳು.

ಇವು ಜಾನುವಾರು ತಿನ್ನುವ ಆಹಾರ, ಅದರ ಜೀರ್ಣಕ್ರಿಯೆ, ದೈಹಿಕ ಸಮನ್ವಯ, ಕಿಣ್ವಗಳ ಸಾಂದ್ರತೆ, ಕರುಳಿನಲ್ಲಿ ಮತ್ತು ಹೊಟ್ಟೆಯಲ್ಲಿ ಹೀರುವಿಕೆಯ ಸಾಮರ್ಥ್ಯ, ಕುಡಿಯುವ ನೀರಿನ ಪ್ರಮಾಣ, ಆರೋಗ್ಯ, ಸೂಕ್ಷ್ಮಾಣುಗಳು ಮತ್ತು ಪರೋಪಜೀವಿಗಳ ಬಾಧೆ, ಮೆಲಾಕಾಡಿಸುವಿಕೆಯ ಪ್ರಮಾಣ, ಉತ್ಪಾದನೆಯಾಗುವ ಜೊಲ್ಲಿನ ಪ್ರಮಾಣ, ಉತ್ಪಾದನೆಯಾಗುವ ಅನಿಲದ ಪ್ರಮಾಣ, ಜಾನುವಾರಿಗೆ ಆಹಾರ ಜೀರ್ಣ ಮಾಡಲು ಸಿಗುವ ವಿಶ್ರಾಂತಿ, ಸಮಯ, ಕರುಳಿನ ಚಲನೆ, ಪಿತ್ತದ ಉತ್ಪಾದನೆ, ಗರ್ಭ ಧಾರಣೆ, ಹಾರ್ಮೋನುಗಳ ಉತ್ಪಾದನೆ, ನರಮಾನಸಿಕ ಸ್ಥಿತಿ ಅಲ್ಲದೇ ಇನ್ನೂ ಅನೇಕ ರೀತಿಯ ಅಂಶಗಳ ಮೇಲೆ ಬದಲಾಗಬಹುದು. ಒಟ್ಟಾರೆ ಹೇಳಬೇಕಾದರೆ ಸಗಣಿ ಮತ್ತು ಮೂತ್ರದ ಪ್ರಾಥಮಿಕ ರಚನೆ ಎಲ್ಲಾ ರೋಮಾಂತಕ ಅಂದರೆ ನಾಲ್ಕು ಹೊಟ್ಟೆ ಇರುವ ಜೀವಿಗಳಲ್ಲಿ ಹೆಚ್ಚು ಕಡಿಮೆ ಒಂದೇ ರೀತಿ ಇರುತ್ತದೆ. ಮಿಶ್ರ ತಳಿ ಮತ್ತು ದೇಶಿ ಇವುಗಳ ಮೂತ್ರ ಮತ್ತು ಸಗಣಿಯಲ್ಲಿ ಭೌತಿಕವಾದ ವ್ಯತ್ಯಾಸಗಳಿರಬಹುದೇ ಹೊರತು ಒಂದಕ್ಕಿಂದ ಒಂದು ಶ್ರೇಷ್ಠ ಎನ್ನುವ ವಿಶೇಷ ಔಷಧೀಯ ಅಥವಾ ಇತರ ಯಾವುದೇ ಹೆಚ್ಚುವರಿ ಅಂಶಗಳಿರಲ್ಲ.

ಅಲ್ಲದೇ ಗೋವುಗಳು ಕಾಡಿನಲ್ಲಿರುವ ಔಷಧಿಯ ಗುಣಗಳನ್ನು ಹೊಂದಿದ ಸಸ್ಯಗಳನ್ನು ತಿನ್ನುವುದರಿಂದ ಅವುಗಳ ಮೂತ್ರದಲ್ಲಿ ಔಷಧಿಯ ಗುಣಗಳು ಬರುತ್ತವೆ ಎನ್ನಲಾಗಿದೆ. ಆದರೆ ಈ ರೀತಿಯ ಆಯ್ದ ಔಷಧಿಯ ಗುಣಗಳನ್ನು ಮಾತ್ರ ಮೇಯುವ ಗುಣ ಯಾವ ಗೋವುಗಳಲ್ಲಿಯೂ ಸಹ ಕಾಣಿಸಲಿಲ್ಲ. ಅಲ್ಲದೇ ಇದೇ ಸ್ಥಳದಲ್ಲಿ ಮೇಯುವ ಎಮ್ಮೆ, ಕೋಣ, ಎತ್ತು, ಹೋರಿ, ಜರ್ಸಿ, ಹೆಚ್ ಎಫ್ ಇತ್ಯಾದಿಗಳ ಮೂತ್ರದಲ್ಲಿಯೂ ಸಹ ಇದೇ ಗುಣ ಇರಬೇಕಾಗುತ್ತದೆ. ಕಾಡಿನಲ್ಲಿ ಅನೇಕ ವಿಷಕಾರಿ ಸಸ್ಯಗಳೂ ಇರುವುದರಿಂದ ಅವುಗಳ ಶೇಷವೂ ಸಹ ಮೂತ್ರದಲ್ಲಿ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಯಾವ ಔಷಧಗಳೂ ಇಲ್ಲದ ಕಾಲದಲ್ಲಿ ಗೋಮೂತ್ರ ಔಷಧಿಯಾಗಿರಬಹುದು. ಆದರೆ ಈಗ ಅತ್ಯಂತ ಪರಿಣಾಮಕಾರಿ, ಗೋಮೂತ್ರಕ್ಕಿಂತ ಕಡಿಮೆ ಅಡ್ಡಪರಿಣಾಮಕಾರಿ ಮತ್ತು ಕಡಿಮೆ ದರದ ವೈಜ್ಞಾನಿಕವಾಗಿ ಪ್ರಮಾಣೀಕರಣಗೊಂಡ ಪರ್ಯಾಯ ಔಷಧಿಗಳು ಭಾರತವೂ ಸೇರಿದಂತೆ ವಿಶ್ವದ ಮಾರುಕಟ್ಟೆಯಲ್ಲಿವೆ. ಕಾಲ ಬದಲಾವಣೆಯಾದ ಹಾಗೆ ವೈಜ್ಞಾನಿಕವಾಗಿ ಪ್ರಮಾಣಿಕರಣಗೊಂಡ ಆಧುನಿಕ ವಿಚಾರಗಳನ್ನು ಆಧುನಿಕ ಮೈಗೂಡಿಸಿಕೊಂಡು ಅಳವಡಿಸಿಕೊಳ್ಳಬೇಕು. ಯಾವುದೋ ಕಾಲದ ವಿಚಾರವನ್ನು ಹಿಡಿದುಕೊಂಡು ನಂಬಿಕೆ ಮೈಗೂಡಿಸಿಕೊಂಡು ಧರ್ಮದ ಹೆಸರಿನಲ್ಲಿ ಭಾವನಾತ್ಮಕವಾಗಿ ಸುಮ್ಮನೆ ಸಮರ್ಥನೆ ಸಲ್ಲದು.

ಇನ್ನು ಸಂಶೋಧನೆಯ ವಿಚಾರಕ್ಕೆ ಬಂದರೆ ಗೋಮೂತ್ರಕ್ಕೆ ಔಷಧ ಗುಣ ಇದೆ ಎಂಬ ಬಗ್ಗೆ ಒಂದಿಷ್ಟು ಪ್ರಾಥಮಿಕ ವೈಜ್ಞಾನಿಕ ದಾಖಲೆಗಳು ಸಿಗುತ್ತವೆ. ಇವುಗಳೆಲ್ಲಾ ಪ್ರಾಥಮಿಕ ಹಂತದ ಸಂಶೋಧನೆಗಳು. ಅಲ್ಲದೇ ಇದಕ್ಕೆ ಇರುವ ಅಡ್ಡಪರಿಣಾಮಗಳ ಬಗ್ಗೆಯೂ ಸಹ ಸಾಕಷ್ಟು ಅಧ್ಯಯನಗಳಾಗಿವೆ.
ಹಸುವಿನ ಮೂತ್ರವನ್ನು ಸಾಂಪ್ರದಾಯಿಕವಾಗಿ ಆಯುರ್ವೇದ ಔಷಧದಲ್ಲಿ ಬ್ಯಾಕ್ಟಿರಿಯಾ ನಾಶಕ, ರೋಗನಿರೋಧಕ, ಪಿತ್ತಜನಕಾಂಗ ರಕ್ಷಕ ಮತ್ತು ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳಿಗಾಗಿ ಬಳಸಲಾಗುತ್ತದೆ (ಚೌಹಾಣ್ ಮತ್ತು ಇತರರು, 2019; ಗುಪ್ತ ಮತ್ತು ಇತರರು, 2016). ದೇಹದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಹೆಚ್ಚಿಸುವಲ್ಲಿ, ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವಲ್ಲಿ ಮತ್ತು ಗಾಯವನ್ನು ಗುಣಪಡಿಸುವಲ್ಲಿ ಇದು ಸಾಮರ್ಥ್ಯವನ್ನು ಹೊಂದಿದೆ ಎಂಬ ಬಗ್ಗೆ ಸಹ ಅಧ್ಯಯನಗಳಿವೆ (ಶರ್ಮಾ ಮತ್ತು ಇತರರು, 2017; ಪಾಟೀಲ್ ಮತ್ತು ಇತರರು, 2016).

ಹಸುವಿನ ಮೂತ್ರದ ಬಟ್ಟಿಯು ಕ್ಯಾನ್ಸರ್ ಔಷಧಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ ಎಂದು ಕೆಲವು ಸಂಶೋಧನೆಗಳು ಸೂಚಿಸುತ್ತವೆ (ಚೌಹಾನ್ ಮತ್ತು ಇತರರು, 2019). ಇದು ಮಧುಮೇಹ ನಿವಾರಕ ಮತ್ತು ಹೃದಯ ರಕ್ಷಕ ಗುಣದಂತ ಪ್ರಯೋಜನಗಳನ್ನು ಹೊಂದಿದೆ ಎಂಬ ಬಗ್ಗೆ ಸಹ ವರದಿಗಳಿವೆ (ಮಿಶ್ರಾ ಮತ್ತು ಇತರರು, 2018; ಸಿಂಗ್ ಮತ್ತು ಇತರರು, 2019). ಇವೆಲ್ಲವೂ ಸಹ ಇನ್ ವಿಟ್ರ‍ೋ ಅಥವಾ ಪ್ರಯೋಗಶಾಲೆಯಲ್ಲಿ ಮತ್ತು ಇಲಿಗಳ ಮೇಲೆ ನಡೆದ ಅತ್ಯಂತ ಪ್ರಾಥಮಿಕ ಹಂತದ ಅಧ್ಯಯನಗಳು. ಔಷಧಿಯೆಂದು ಘೋಷಿತವಾಗಲು ಅದು ಅನೇಕ ಹಂತಗಳ ಕಠಿಣ ಪರೀಕ್ಷೆಗಳನ್ನು ದಾಟಿ ಬರಬೇಕು.

ಗೋಮೂತ್ರದ ಔಷಧ ಗುಣದ ಬಗ್ಗೆ ಸುಮಾರು ಪೇಟೆಂಟುಗಳು ಅಮೇರಿಕಾ ಮತ್ತಿತರ ಕಡೆ ಇವೆ. ಜೂನ್ ೨೫, ೨೦೦೨ ರಂದು ಅಮೇರಿಕಾ ದೇಶದ ಪೇಟೆಂಟ್ ಸಂಸ್ಥೆ ಭಾರತೀಯ ವೈಜ್ಞಾನಿಕ ಮತ್ತು ಔಧ್ಯಮಿಕ ಸಂಶೋಧನ ಪರಿಷತ್ತು (ಸಿ ಎಸ್ ಐ ಆರ್) ಇದರ ಸುಮಂತ್ ಪ್ರೀತ್ ಸಿಂಘ್ ಮತ್ತಿತರರಿಗೆ ಗೋಮೂತ್ರಕ್ಕೆ ಅದರ ಪೇಟೆಂಟ್ ಅಥವಾ ಹಕ್ಕುಸ್ವಾಮಿತ್ವವನ್ನು ಗೋಮೂತ್ರವನ್ನು ಕೆಲವೊಂದು ಜೀವನಿರೋಧಕಗಳು ಮತ್ತು ಶಿಲೀಂದ್ರನಾಶಕಗಳ ಜೊತೆ ಪ್ರಯೋಗಶಾಲೆಯಲ್ಲಿ ಬಳಸಿದಾಗ ಅವುಗಳ ಪರಿಣಾಮ ಹೆಚ್ಚಾಗುತ್ತದೆ ಎಂದು ನೀಡಲಾಗಿದೆ.

ಪೇಟೆಂಟ್ ಇದ್ದ ಮಾತ್ರಕ್ಕೆ ಎಲ್ಲವೂ ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದಲ್ಲ. ಇದೊಂದು ಹಕ್ಕು ಸ್ವಾಮ್ಯದ ಮೂಲಭೂತ ದಾಖಲೆ ಅಷ್ಟೆ. ಈ ತಂತ್ರಜ್ಞಾನ ಬಳಸಿ ವಾಣಿಜ್ಯ ಬಳಕೆಗೆ ಮುಂದಾದಲ್ಲಿ ಮೂಲ ಪೇಟೆಂಟು ಮಾಡಿಕೊಂಡವರಿಗೆ ಗೌರವ ಧನ ನೀಡಬೇಕು. ಗೋಮೂತ್ರಕ್ಕೆ ಇರುವ ಯಾವುದೇ ಪೇಟೆಂಟ್ ವಾಣಿಜ್ಯ ಉದ್ದೇಶಕ್ಕೆ ಮಾರಾಟವಾಗಿಲ್ಲ ಎನ್ನುತ್ತದೆ ದಾಖಲೆ. ಇದರರ್ಥ ಯಾವುದೇ ಔಷಧ ಕಂಪನಿಗಳಿಗೆ ಆಕಳ ಮೂತ್ರ ಮಾರಾಟ ಮಾಡುವಂತ ಔಷಧ ಗುಣ ಹೊಂದಿಲ್ಲ ಅನಿಸಿರಬಹುದು. ಕೆಲವೊಮ್ಮೆ ಸಂಶೋಧನಾ ರಂಗದಲ್ಲಿರುವವರು ಅವರ ವೈಯಕ್ತಿಕ ಬಯೋಡೇಟಾ ಜಾಸ್ತಿಯಾಗಲು ಸಹ ಪೇಟೆಂಟ್ ಪಡೆಯುವುದೂ ಸಹ ಇದೆ.

ಇದರ ಪ್ರತಿಕೂಲ ಪರಿಣಾಮಗಳು ಮತ್ತು ವಿಷಗುಣದ ಬಗ್ಗೆಯೂ ಸಹ ಅನೇಕ ಗಮನಾರ್ಹ ಸಂಶೋಧನೆಗಳಿವೆ. ಹಾನಿಕಾರಕ ಇ. ಕೊಲಿ,ಮೈಕೋಬ್ಯಾಕ್ಟೀರಿಯಂ ಪ್ಯಾರಾಟ್ಯೂಬರ್ಕ್ಯುಲೋಸಿಸ್, ಬ್ರುಸೆಲ್ಲೋಸಿಸ್ ಸೇರಿದಂತೆ ಮನುಷ್ಯನಿಗೆ ಹಸುಗಳಿಂದ ಬರುವ ಅನೇಕ ರೋಗಗಳನ್ನು ಗೋಮೂತ್ರವು ತರುತ್ತದೆ ಮತ್ತು ಇದರಿಂದ ಮನುಷ್ಯನ ಆರೋಗ್ಯಕ್ಕೆ ಗಣನೀಯ ತೊಂದರೆ ಇದೆ ಎಂಬ ಬಗ್ಗೆ ಸಂಶೋಧನೆಗಳಿವೆ (ಶರ್ಮಾ ಮತ್ತು ಇತರರು, 2023; ಚೌಧರಿ ಮತ್ತು ಇತರರು, 2023).
ನೈಜೇರಿಯಾದಲ್ಲಿಯೂ ಸಹ ಗೋಮೂತ್ರವನ್ನು ಪಾರಂಪರಿಕವಾಗಿ ಔಷಧಿಯೆಂದು ಬಳಸುತ್ತಿದ್ದು ಅಲ್ಲಿ ಇದನ್ನು ಅಪಸ್ಮಾರದ ಚಿಕಿತ್ಸೆಗಾಗಿ ಬಳಸಿದಾಗ ಮಕ್ಕಳಲ್ಲಿ ಮಾತ್ರ ತೀವ್ರವಾದ ವಿಷಬಾಧೆಯ ಲಕ್ಷಣಗಳು ಗೋಚರಿಸಿ ಕೆಲವು ಮಕ್ಕಳು ಮರಣವನ್ನಪ್ಪಿದರು.

ಈ ಕುರಿತು 1977 ರಲ್ಲಿ ನಾಯಿಗಳಲ್ಲಿ ಅಧ್ಯಯನವನ್ನು ಮಾಡಿದಾಗ ಅದು ಹೃದಯದ ಮೇಲೆ ಪರಿಣಾಮ ಬೀರಿ ಪ್ರಾರಂಭಿಕವಾಗಿ ಹೃದಯ ಬಡಿತ ಕಡಿಮೆ ಮಾಡಿ ಪ್ರಾರಂಭಿಕವಾಗಿ ರಕ್ತದೊತ್ತಡ ಕಡಿಮೆ ಮಾಡಿ ನಂತರ ಇದ್ದಕ್ಕಿದ್ದ ಹಾಗೆ ಜಾಸ್ತಿ ಮಾಡಿ ಮರಣಕ್ಕೆ ಕಾರಣವಾಯಿತು ಎಂದು ಸಿದ್ಧವಾಯಿತು. ಅಲ್ಲದೇ ಇದನ್ನು ಒಂದು ತಿಂಗಳ ಅವಧಿಗೆ ನೀಡಿದಾಗ ತೀವ್ರತರವಾದ ಶ್ವಾಸಕೋಶದ ತೊಂದರೆಗಳೂ ಸಹ ಕಂಡುಬಂದವು. ಕಾರಣ ಗೋಮೂತ್ರವನ್ನು ಮಕ್ಕಳಿಗೆ ಮತ್ತು ಹೃದಯದ ಅಥವಾ ಶ್ವಾಸಕೋಶದ ರೋಗ ಇರುವವರಿಗೆ ನೀಡಬಾರದು ಎಂಬುದು ಸಿದ್ಧವಾಗಿ ಅಲ್ಲಿನ ಸರ್ಕಾರ ಶಾಸನ ಸಹ ತಂದಿತು (ಒಡುಯೆ ಮತ್ತು ಒಕುನಾಡೆ, 1977).

1987 ರಲ್ಲಿ ನಡೆದ ಮತ್ತೊಂದು ಅಧ್ಯಯನದಲ್ಲಿ ಒಕೊಂಕ್ವೊ ಮತ್ತಿತರರು ಗೋಮೂತ್ರದಲ್ಲಿನ ಕೆಲವೊಂದು ಅಂಶಗಳು ಇತರ ಔಷಧಗಳ ಜೊತೆ ಕರುಳಿನಲ್ಲಿ ಅಥವಾ ರಕ್ತದಲ್ಲಿ ಸಂಯೋಜನೆ ಹೊಂದಿದಾಗ ಮೂಲ ಔಷಧಗಳ ವಿಷಗುಣವನ್ನು ಸಹ ಹೆಚ್ಚಿಸಬಹುದು ಎಂದು ಅಭಿಪ್ರಾಯ ಮಂಡಿಸಿದ್ದಾರೆ.

ಕೃತಿಕಾ ಮತ್ತು ಇತರರು 2015 ರಲ್ಲಿ ಮಾಡಿದ ಅಧ್ಯಯನದ ಪ್ರಕಾರ ಗರ್ಭಧರಿಸಿದ ಆಕಳುಗಳ ಮೂತ್ರವನ್ನು ಇಲಿಗಳ ಮೇಲೆ ಪ್ರಯೋಗಿಸಿದಾಗ ಅದರಲ್ಲಿ ಸ್ರಾವವಾಗುವ ಪ್ರೊಜೆಸ್ಟಿರಾನ್ ಮತ್ತು ಈಸ್ಟ್ರೋಜೆನ್ ಮತ್ತಿತರ ಹಾರ್ಮೋನುಗಳ ಪ್ರಭಾವದಿಂದ ಅವುಗಳ ಅಂಡಾಶಯದಲ್ಲಿ ಅಂಡಗುಳ್ಳೆಗಳು ಗಣನೀಯವಾಗಿ ಬೆಳೆದವು ಮತ್ತು ಅವು ಬೇಗ ಬೆದೆಗೆ ಬಂದವು. ಇದೇ ಪರಿಣಾಮವು ಮನುಷ್ಯರಲ್ಲೂ ಸಹ ಗರ್ಭಧರಿಸಿದ ಆಕಳಿನ ಗೋಮೂತ್ರ ಕುಡಿದಾಗ ಆಗಬಹುದು ಮತ್ತು ಗರ್ಭಧಾರಣಾ ಸಾಮರ್ಥ್ಯ ಕಡಿಮೆಯಾಗಬಹುದು ಅಥವಾ ಕನ್ಯೆಯರು ಬೇಗ ಋತುಮತಿಯರಾಗಬಹುದು ಎಂದು ವ್ಯಾಖ್ಯಾನಿಸಬಹುದು.

ನೇತ್ರಶಾಸ್ತ್ರದ ಪ್ರಾದೇಶಿಕ ಸಂಸ್ಥೆ, ರೋಹ್ಟಕ್, ಹರಿಯಾಣ ಇಲ್ಲಿನ ನೇತ್ರ ವಿಜ್ಞಾನಿ ಡಾ: ಸಿಂಗ್ ಮತ್ತು ಇತರ ನೇತ್ರ ತಜ್ಞರು ೨೦೧೭ ರಲ್ಲಿ ನಡೆಸಿದ ಸಂಶೋಧನೆಯಲ್ಲಿ ಕಣ್ಣಿನ ತೊಂದರೆಯಿಂದ ಮತ್ತು ಅಂಧತ್ವದಿಂದ ಬಳಲುತ್ತಿದ್ದ ರೋಗಿಗಳಲ್ಲಿ ಕೆಲವರ ಕಣ್ಣಿಗೆ ಸ್ಥಳೀಯ ನಾಟಿವೈದ್ಯನೊಬ್ಬ ಗೋಮೂತ್ರ ಮಿಶ್ರಣವನ್ನು ನೇರವಾಗಿ ಕಣ್ಣಿಗೆ ಬಿಟ್ಟಿದ್ದರಿಂದ ಅದರಲ್ಲಿನ ಅಮೋನಿಯಾವು ಕಣ್ಣೀರಿನ ಸಂಪರ್ಕಕ್ಕೆ ಬಂದಾಗ ಅಮೋನಿಯಂ ಹೈಡ್ರಾಕ್ಸೈಡ್ ಆಗಿ ಪರಿವರ್ತನೆಗೊಂಡು ಕಣ್ಣಿಗೆ ಹಾನಿ ಮಾಡಿದ್ದು ಮೂತ್ರದಲ್ಲಿರುವ ಸ್ಟ್ಯಾಫಿಲೋಕೊಕಸ್ ಎಪಿಡರ್ಮಿಡಿಸ್ ಎಂಬ ಬ್ಯಾಕ್ಟಿರಿಯಾ ಸೋಂಕಿನಿಂದ ಅಂಧತ್ವ ಬಂದಿದೆ ಎಂದು ವರದಿ ಮಾಡಿದ್ದು ಇದೇ ವರದಿಯಾಗದ ಅನೇಕ ಪ್ರಕರಣಗಳಿರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಭಾರತೀಯ ಪಶುವೈದ್ಯಕೀಯ ಅನುಸಂಧಾನ ಪರಿಷತ್ತು, ಬರೇಲಿಯ ವಿಜ್ಞಾನಿ ಡಾ: ಬೋಜ್ ರಾಜ್ ಸಿಂಗ್ ಮತ್ತಿತರು 2022 ರಲ್ಲಿ ಸಂಶೋಧನೆ ನಡೆಸಿ ಮುರ್ರಾ ಎಮ್ಮೆ, ಸಾಹಿವಾಲ್, ಥಾರ್ಪಾರ್ಕರ್, ವೃಂದಾವನಿ ಮತ್ತು ಮನುಷ್ಯ ಹೀಗೆ ಒಟ್ಟು 73 ಮೂತ್ರದ ಮಾದರಿಗಳಲ್ಲಿ ವಿವಿಧ ರೋಗಕಾರಕ ಬ್ಯಾಕ್ಟಿರಿಯಾಗಳನ್ನು ಪತ್ತೆ ಮಾಡಿ ಅದರಲ್ಲಿ ಇ. ಕೊಲೈ ಸೇರಿದಂತೆ 14 ರೀತಿಯ ಮಾರಕ ಬ್ಯಾಕ್ಟಿರಿಯಾಗಳಿದ್ದು ೨೮ ಮಾದರಿಗಳ ಮೂತ್ರಗಳು ಅಲ್ಪ ಬ್ಯಾಕ್ಟಿರಿಯಾ ನಾಶಕಗುಣ ಹೊಂದಿದ್ದು ಗೋಮೂತ್ರ ಔಷಧವಾಗಿ ಮನುಷ್ಯ ಸೇವನೆಗೆ ಅರ್ಹವಲ್ಲ ಎಂದು ವರದಿ ಮಾಡಿರುತ್ತಾರೆ.

2023 ರಲ್ಲಿ ನಡೆದ ಅಧ್ಯಯನವೊಂದರಲ್ಲಿ ಮೆಹ್ತಾ ಮತ್ತಿತರರು ಗೋಮೂತ್ರದಲ್ಲಿನ ಕೆಲವೊಂದು ವಿಷವಸ್ತುಗಳು ಶರೀರದಲ್ಲಿನ ನಿರ್ನಾಳ ಗ್ರಂಥಿಗಳ ಮತ್ತು ಹಾರ್ಮೋನುಗಳ ಕಾರ್ಯದಲ್ಲಿ ತೊಂದರೆ ಪಡೆಸಿ ಶರೀರದ ಮೇಲೆ ಅಡ್ಡ ಪರಿಣಾಮವಾಗಿರುವುದರ ಕುರಿತು ತಿಳಿಯಪಡಿಸಿದ್ದಾರೆ.

ಗೋಮೂತ್ರದಲ್ಲಿ ಅದನ್ನು ಸಂಗ್ರಹಿಸುವುದರಿಂದ ಪ್ರಾರಂಭಿಸಿ ಶೇಖರಣೆ, ಸಂಶ್ಲೇಷಣೆ ಇತ್ಯಾದಿ ಹಂತಗಳಲ್ಲಿ ಅನೇಕ ಹಾನಿಕಾರಕ ಬ್ಯಾಕ್ಟಿರಿಯಾಗಳು ಕಂಡುಬಂದಿದ್ದು ಇವುಗಳು ಮನುಷ್ಯರ ಆರೋಗ್ಯದ ಮೇಲೆ ತೀವ್ರವಾದ ಪರಿಣಾಮ ಬೀರಬಹುದಾಗಿದೆ ಎಂದು 2023 ರಲ್ಲಿ ನಡೆದ ಅಧ್ಯಯನ ತಿಳಿಸುತ್ತದೆ (ಒಗುಂಶ್ವೆ ಮತ್ತಿತರು.೨೦೨೩). ಇದನ್ನು ಜೋರ್ವೇಕರ್ ಮತ್ತಿತರು ೨೦೨೩ ರಲ್ಲಿ ಮಾಡಿದ ಅಧ್ಯಯನ ಮತ್ತೊಮ್ಮೆ ಖಚಿತ ಪಡಿಸಿ ಗೋಮೂತ್ರವನ್ನು ಪರ್ಯಾಯ ಔಷಧಿಯಾಗಿ ಬಳಿಸಿದಾಗ ಆದ ತೊಂದರೆಗಳ ಕುರಿತು ಬೆಳಕು ಚೆಲ್ಲಿದ್ದು ಅದರಲ್ಲಿ ಅಡ್ಡಪರಿಣಾಮಗಳೇ ಜಾಸ್ತಿ ಒರುವುದರಿಂದ ಔಷಧಿಯಾಗಿ ಬಳಸುವುದು ಸೂಕ್ತವಲ್ಲ ಎಂದಿದ್ದಾರೆ.

ಪೆನಿಸಿಲಿನ್ ಚುಚ್ಚುಮದ್ದು ಸೇರಿದಂತೆ ಬಹುತೇಕ ಕಾಯಿಲೆಗಳಲ್ಲಿ ನೀಡುವ ಔಷಧಗಳು ನೀಡಿದ ಜಾನುವಾರಿನ ಮೂತ್ರದಲ್ಲಿ ವಿಸರ್ಜಿಸಲ್ಪಡುವುದರಿಂದ ಗೋಮೂತ್ರ ಸೇವನೆಯಿಂದ ಈ ಔಷಧಗಳು ಮನುಷ್ಯನ ದೇಹ ಸೇರಿ ಅಪಾಯ ಉಂಟು ಮಾಡುವ ಖಚಿತ ನಿದರ್ಶನಗಳಿವೆ. ಪೆನಿಸಿಲಿನ್ ಅಲರ್ಜಿ ಇರುವವರಿಗೆ ಹಲವು ಸಲ ವ್ಯತಿರಿಕ್ತ ಪರಿಣಾಮವಾದ ವರದಿಗಳಿವೆ.

ಅನೇಕ ಕಾಯಿಲೆಗಳು ನಂಬಿಕೆಯ ಮೇಲೆಯೇ ಕಡಿಮೆಯಾಗುತ್ತವೆ. ನಿಮಗೆ ಆದ ಅನುಭವ ಬೇರೆಯವರಿಗೆ ಆಗಬೇಕೆಂದೇನೂ ಇಲ್ಲ. ಅಷ್ಟಕ್ಕೂ ಪಶುಗಳು ಮೂತ್ರ ವಿಸರ್ಜನೆ ಸಮಯದಲ್ಲಿ ಬಿಡುಗಡೆ ಮಾಡುವ ಅಮೋನಿಯಾದ ಘಾಟು ವಾಸನೆಗೆ ಶ್ವಾಸನಾಳದ ವಿಕಸನವಾಗುವುದು ನಿಜವಾದರೂ ಸಹ ಇದು ಒಂದಿಷ್ಟು ಸೇವನೆಗೆ ಮಾತ್ರ ಸೀಮಿತ. ಜಾಸ್ತಿಯಾದರೆ ವಿಷವೂ ಸಹ ಹೌದು. ಇದಕ್ಕೆ ಗೋಮೂತ್ರವೂ ಸಹ ಸೇರಬಹುದು.

ಯಾವುದಕ್ಕೆ ಪರಿಣಾಮಕಾರಿ ಔಷಧಿಯೆಂದು ಕರೆಯುತ್ತೇವೆಯೋ ಅದಕ್ಕೆ ಒಂದಲ್ಲ ಒಂದು ಅಡ್ಡ ಪರಿಣಾಮ ಇದ್ದೇ ಇರುತ್ತದೆ. ಅಡ್ಡ ಪರಿಣಾಮವಿರದಿದ್ದರೆ ಅದಕ್ಕೆ ಪರಿಣಾಮವೂ ಇಲ್ಲ ಎನ್ನಬಹುದು. ಕಾರಣ ಔಷಧಿಯನ್ನು ಬಳಸುವಾಗ ಅದರ ಪರಿಣಾಮ ಮತ್ತು ಅಡ್ಡಪರಿಣಾಮ ಎರಡನ್ನೂ ಗಮನಿಸಿ ಚಿಕಿತ್ಸೆಗೆ ಬಳಸಬೇಕಾಗುತ್ತದೆ. ಉದಾಹರಣೆಗೆ ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಔಷಧಗಳ ಪರಿಣಾಮ ಮತ್ತು ಅಡ್ಡಪರಿಣಾಮ ಬಹುತೇಕ ಸಮೀಪ ಇವೆ. ಆದರೆ ಸಧ್ಯಕ್ಕೆ ಪರ್ಯಾಯ ಮಾರ್ಗ ಇರದ ಕಾರಣ ಅಷ್ಟೆಲ್ಲಾ ಅಡ್ಡಪರಿಣಾಮ ಇದ್ದರೂ ಸಹ ಜೀವ ಉಳಿಸಲು ಅಥವಾ ಬದುಕುವ ಅವಧಿಯನ್ನು ಮುಂದೆ ಹಾಕಲು ಬಳಸಲಾಗುತ್ತಿದೆ. ಮುಂದೆ ಉತ್ತಮ ಔಷಧ ಬರಬಹುದು. ಪರಿಣಾಮ ಕಡಿಮೆ ಅಡ್ಡ ಪರಿಣಾಮ ಜಾಸ್ತಿ ಅಥವಾ ಮಾರುಕಟ್ಟೆಯಲ್ಲಿ ಅದಕ್ಕಿಂತ ಹೆಚ್ಚಿನ ಪರಿಣಾಮಕಾರಿ ಮತ್ತು ಕಡಿಮೆ ಅಡ್ಡಪರಿಣಾಮಕಾರಿ ಮತ್ತು ಕಡಿಮೆ ವೆಚ್ಚದ ಔಷಧಿ ಲಭ್ಯವಿದ್ದಾಗ ಅದನ್ನು ಬಳಸಬೇಕಾಗುತ್ತದೆ. ಈ ವಿಷಯ ಗೋಮೂತ್ರಕ್ಕೂ ಸಹ ಔಷಧ ಎಂದು ನಮೂದಿಸಿದಾಗ ಅನ್ವಯ. ಕಾರಣ ತುಲನಾತ್ಮಕವಾಗಿ ಹೋಲಿಸಿದಾಗ ಗೋಮೂತ್ರಕ್ಕೆ ಅಂತಹ ಪರಿಣಾಮಕಾರಿ ಪ್ರಭಾವ ಮತ್ತು ಕಡಿಮೆ ಅಡ್ಡಪರಿಣಾಮ ಪ್ರಭಾವ ಕಂಡು ಬರುವುದಿಲ್ಲ.

ನಿಂಬೆ ರಸ ಕೆಲವೊಂದು ಕಾಯಿಲೆಗೆ ಔಷಧಿ ಮತ್ತು ಅಸ್ಕಾರ್ಬಿಕ್ ಆಮ್ಲದ ಆಗರ. ಆದರೆ ಅದನ್ನು ಔಷಧಿಯೆಂದು ಮೂಗಿಗೆ ಬಿಟ್ಟುಕೊಳ್ಳುವ “ಸ್ವಯಂ ವೈದ್ಯ” ಅಪಾಯಕಾರಿಯಾಗಬಲ್ಲುದು. ಕೋವಿಡ್ ಸಂದರ್ಭದಲ್ಲಿ ಹಿರಿಯರಾದ ಶ್ರೀ ವಿಜಯ ಸಂಕೇಶ್ವರ್ ಸಹ ನಿಂಬೆಹಣ್ಣಿನ ರಸ ಮೂಗಿಗೆ ಬಿಟ್ಟುಕೊಳ್ಳುವ ವಿಧಾನ ಹೇಳಿ ಸಾರ್ವಜನಿಕ ಟೀಕೆಗೆ ಗುರಿಯಾಗಿದ್ದರು. ವೈದ್ಯಕೀಯ ಚಿಕಿತ್ಸೆ ಏನಿದ್ದರೂ ತಜ್ಞ ವೈದ್ಯರೇ ಮಾಡಬೇಕು. ಸಣ್ಣ ಪುಟ್ಟ ಕಾಯಿಲೆಗಳಿಗೆ, ಪ್ರಥಮ ಚಿಕಿತ್ಸೆಗೆ ಮಾತ್ರ ಮನೆ ಮದ್ದು ಸೀಮಿತವಾಗಿರಲಿ.

ಗೋಮೂತ್ರ ಈ ಕಾಲದಲ್ಲೂ ಸಹ ಔಷಧಿ ಎನ್ನುವವರಿಗೆ ಕೊನೆಗೊಂದು ಮಾತು. ಈ ರೀತಿಯ ವಿಚಾರವನ್ನು ಈ ವರ್ಷವಾದರೂ ಬಿಟ್ಟು ಬಿಡಿ. ಗೋಮೂತ್ರಕ್ಕೆ ವಿವಿಧ ಔಷಧ ಗುಣಗಳು ಇವೆ ಎನ್ನುವ ಅಧ್ಯಯನಗಳು ಅತ್ಯಂತ ಪ್ರಾಥಮಿಕ ಹಂತದವುಗಳು. ಅವುಗಳನ್ನು ಪ್ರಯೋಗಶಾಲೆಯಲ್ಲಿ ಇನ್ ವಿಟ್ರೋ ವಿಧಾನದ ಮಾಡಲಾಗಿದೆ. ಬಹುತೇಕ ಅಧ್ಯಯನಗಳಲ್ಲಿ ಅದು ಬ್ಯಾಕ್ಟಿರಿಯಾ ನಾಶಕ ಎನಿಸಿಕೊಳ್ಳಲು ಪ್ರಯೋಗಶಾಲೆಯಲ್ಲಿ ರೋಗಕಾರಕ ಬ್ಯಾಕ್ಟಿರಿಯಾಗಳನ್ನು ತಂದು ವಿವಿಧ ಮಾಧ್ಯಮಗಳಲ್ಲಿ ಬೆಳೆದು ಗೋಮೂತ್ರ ಅದರ ಅರ್ಕವನ್ನು ವಿವಿಧ ಸಾಂದ್ರತೆಗಳಲ್ಲಿ ಹಾಕಿ ಆಗ ಅವು ಸತ್ತಾಗ ಅದನ್ನು ಬ್ಯಾಕ್ಟಿರಿಯಾ ನಾಶಕ ಎನ್ನಲಾಗಿದೆ. ಆದರೆ ಪ್ರಯೋಗಶಾಲೆಯಲ್ಲಿ ಸ್ವಲ್ಪ ಜಾಸ್ತಿಯ ಸಾಂದ್ರತೆಯ ಉಪ್ಪಿನ ದ್ರಾವಣ ಹಾಕಿದರೂ ಸಹ ಬ್ಯಾಕ್ಟಿರಿಯಾ ಸಾಯುತ್ತವೆ.

ರೋಗ ಪೀಡಿತ ಪ್ರಾಣಿಗಳಲ್ಲಿ ಅದರ ಪರಿಣಾಮ ಸಾಬೀತಾಗಬೇಕಾದರೆ ಆಯಾ ಕಾಯಿಲೆಯನ್ನು ಪ್ರಯೋಗ ಪಶುಗಳಲ್ಲಿ ಭರಿಸಿ ಎಷ್ಟು ಪ್ರಮಾಣದ ಗೋಮೂತ್ರ ನೀಡಿದರೆ ಅದು ಕರುಳಿನ ಮೂಲಕ ದೇಹವನ್ನು ಸೇರಿ ಬ್ಯಾಕ್ಟಿರಿಯಾಗಳು ಇರುವ ಸ್ಥಳವನ್ನು ತಲುಪಿ ಎಷ್ಟು ಪ್ರಮಾಣದಲ್ಲಿ ಬ್ಯಾಕ್ಟಿರಿಯಾ ಸಾಯಿಸಿ ರೋಗ ಗುಣ ಮಾಡುತ್ತವೆ ಎಂಬ ಬಗ್ಗೆ ಅಧ್ಯಯನ ಮಾಡಬೇಕು ಮತ್ತು ಅಷ್ಟು ಪ್ರಮಾಣದಲ್ಲಿ ಗೋಮೂತ್ರ ಅಥವಾ ಅದರ ಅರ್ಕವನ್ನು ಸೇವಿಸಿದಾಗ ಅದರಲ್ಲಿನ ಅಮೋನಿಯಾ, ಯೂರಿಯಾ ಮತ್ತಿತರ ಅಂಶಗಳಿಂದ ವಿಷಬಾಧೆಯಾಗಲ್ಲ ಅನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಪ್ಲಾಸೆಬೋ ಪರಿಣಾಮವನ್ನು ಹೊರತು ಪಡಿಸಿ ಈ ರೀತಿಯ ಪ್ರಯೋಗಗಳು ಮೊದಲು ಪ್ರಯೋಗಪ್ರಾಣಿಗಳಾದ ಇಲಿ, ನಾಯಿ ನಂತರ ೪ ಹಂತಗಳಲ್ಲಿ ಮನುಷ್ಯರ ಮೇಲೆ ನಡೆಯಬೇಕು. ಈ ರೀತಿಯ ಅಧ್ಯಯನಗಳು ನಿಖರವಾಗಿ ನಡೆದಿಲ್ಲ. ಹಾಗೆ ನೋಡಿದರೆ ನಾವು ಭೂಮಿಯಲ್ಲಿ ನೋಡುವ ಪ್ರತಿ ಗಿಡ, ಮರ, ಮಣ್ಣು ಇತ್ಯಾದಿಗಳಿಗೆಲ್ಲಾ ಒಂದಲ್ಲ ಒಂದು ಔಷಧಿ ಗುಣ ಇದ್ದೇ ಇರುತ್ತದೆ. ಪರಿಶೀಲಿಸಬೇಕಾದಾರೆ ನಿಮಗೆ ತಿಳಿದ ಯಾವುದೇ ಗಿಡದ ಔಷಧಿಯ ಗುಣ ಎಂದು ಗೂಗಲ್ ಮಾಡಿ ಒಂದಲ್ಲ ಒಂದು ಗುಣ ಬರದಿದ್ದರೆ ಕೇಳಿ.

* ಗೋಮೂತ್ರಕ್ಕೆ ನೋವು ನಿವಾರಕ ಗುಣ ಇದೆಯೆಂದರೆ ಅದನ್ನು ತಲೆ ನೋವು ಹೋಗಲು ೫೦-೭೦ ಮಿಲಿ ಕುಡಿಯಬೇಕು. ಇದು ಒಂದು ಪ್ಯಾರಸೆಟಮಾಲ್ ಮಾತ್ರೆಯಿಂದ ಸಾಧ್ಯ. ಒಂದು ಪ್ಯಾರಾಸೆಟಮಾಲ್ ೬೫೦ ಮಿಲಿಗ್ರಾಂ ಬೆಲೆ ರೂ:೧-.೧೫.

* ಈಗಾಗಲೇ ಅನೇಕ ಬ್ಯಾಕ್ಟಿರಿಯಾ ರೋಗಗಳಿಗೆ ಉತ್ತಮ ಎಲ್ಲಾ ಅಧ್ಯಯನ ನಡೆಸಿ ಕಂಡು ಹಿಡಿದ ಜೀವ ನಿರೋಧಕವಿದ್ದಾಗ ಸುಮಾರು ೬೦-೭೦ ಮಿಲಿ ಗೋಮೂತ್ರವನ್ನು ೮-೯ ದಿನ ಕುಡಿಯಲು ಸಾಧ್ಯವೇ? ಅದಕ್ಕೂ ಸಹ ಜೀವನಿರೋಧಕಗಳಿಗೆ ಪ್ರತಿರೋಧಶಕ್ತಿಯನ್ನು ಬ್ಯಾಕ್ಟಿರಿಯಾಗಳು ಬೆಳೆಸಿಯೇ ಬೆಳೆಸಿಕೊಳ್ಳುತ್ತವೆ. ಇದು ಅವುಗಳ ಬದುಕುವ ವಿಧಾನ.

* ಗೋಮೂತ್ರ ಸಂಗ್ರಹಿಸುವಾಗ ಆಯಾ ಗೋವಿಗೆ ಮನುಷ್ಯನಿಗೆ ಮೂತ್ರವನ್ನು ಸಂಗ್ರಹಿಸುವಾಗ ಆಗುವ ಸಗಣಿಯ ಸಮ್ಮಿಶ್ರದ ಮೂಲಕ ಬರುವ ಸೋಂಕು ಕಾಯಿಲೆಗಳಾದ ಲೆಪ್ಟೋಸ್ಪೈರೋಸಿಸ್, ಬ್ರುಸೆಲ್ಲೋಸಿಸ್, ಸಾಲ್ಮೊನೆಲ್ಲೋಸಿಸ್, ಕ್ಷಯ, ಕ್ರಿಪ್ಟೋಸ್ಪೋರಿಡಿಯೋಸಿಸ್, ಜಿಯಾರ್ಡಿಯಾಸಿಸ್, ಟ್ರಿಪನೋಸೋಮಿಯಾಸಿಸ್ (ಅಪರೂಪ), ಹಿಸ್ಟೋಪ್ಲಾಸ್ಮೋಸಿಸ್ ಇವು ಬರಲಾರವು ಎಂದು ಹೇಳಲಾಗದು. ಬಂದ ಅನೇಕ ವರದಿಗಳಿವೆ.

* ಗೋಮೂತ್ರಕ್ಕೆ ಜಂತು ನಾಶಕ ಎಂದು ಪ್ರಯೋಗಶಾಲೆಯಲ್ಲಿ ಫಲಿತಾಂಶ ಬಂದಿರಬಹುದು. ಸಧ್ಯ ಅನೇಕ ಅತ್ಯಂತ ಸುರಕ್ಷಿತವಿರುವ ದುಂಡುಹುಳು, ಚಪ್ಪಟೆ ಹುಳು ಮತ್ತು ಲಾಡಿ ಹುಳನಾಶಕ ಔಷಧಗಳು ೧೦-೨೦ ರೂ ಒಳಗೆ ದೊರಕುತ್ತಿದ್ದು ಶೇ:೧೦೦ ರಷ್ಟು ಜಂತು ನಾಶ ಮಾಡುವಾಗ ಇನ್ನೂ ಅನೇಕ ಪರೀಕ್ಷಾ ಹಂತ ದಾಟಬೇಕಾದ ಗೋಮೂತ್ರವನ್ನು ಜಂತು ನಾಶಕವಾಗಿ ಬಳಸುವ ಪ್ರಮೇಯ ಬರುವುದಿಲ್ಲ.

* ಗೋಮೂತ್ರಕ್ಕೆ ಕ್ಯಾನ್ಸರ್ ನಿವಾರಕ ಗುಣವಿದೆ ಎನ್ನಲಾದರೂ ಸಹ ಅದು ಕೇವಲ ಕೆಲವರ ಹೇಳಿಕೆಗೆ ಮತ್ತು ಅಭಿಪ್ರಾಯದ ಕ್ರೋಢೀಕರಣಕ್ಕೆ ಸೀಮಿತವಾಗಿದೆಯೇ ಹೊರತು ವೈಜ್ಞಾನಿಕವಾಗಿ ಸಾಬೀತಾಗಿಲ್ಲ.

ಗೋವು ಮಾನವನಿಗೆ ಅತ್ಯಂತ ಉಪಕಾರಿ ಪ್ರಾಣಿ. ಆದರೆ ಅದರ ವಿಷಯದಲ್ಲಿ ತಪ್ಪು ವೈಭವೀಕರಣ ಸಲ್ಲದು. ಗೋವಿನ ಬಗ್ಗೆ ಗೋವು ಸಾಕುವವರು, ಪಶುವಿಜ್ಞಾನಿಗಳು, ಪಶುವೈದ್ಯರು ಮಾತನಾಡಬೇಕು. ಆದರೆ ಪರಿಸ್ಥಿತಿ ಹಾಗೆಲ್ಲಿದೆ?

ಈ ಕಾರಣದಿಂದ ಅನೇಕ ವರ್ಷಗಳ ಹಿಂದೆ ಕೆಲವು ಕಾಯಿಲೆಗಳಿಗೆ ಸಸ್ಯ ಮೂಲದ ಔಷಧಿಗಳು ಪರಿಣಾಮಕಾರಿ ಎಂದು ಗೊತ್ತಿರದ ಕಾಲದಲ್ಲಿ ಗೋಮೂತ್ರವನ್ನು ಔಷಧಿಯಾಗಿ ಬಳಸಿರಬಹುದು. ಆದರೆ ಅದು ಈ ಕಾಲಕ್ಕೆ ಅಪ್ರಸ್ತುತ. ಆಧುನಿಕ ವೈದ್ಯಕೀಯ ವಿಜ್ಞಾನ ಮತ್ತು ಗಿಡಮೂಲಿಕೆ ಔಷಧಿಗಳು ಗೋಮೂತ್ರಕ್ಕಿಂತ ಅನೇಕ ಪಟ್ಟು ಜಾಸ್ತಿ ಉತ್ತಮ ಮತ್ತು ಪರಿಣಾಮಕಾರಿ ಎಂದು ಸಾಬೀತಾದ ಈ ಕಾಲದಲ್ಲಿ ಗೋಮೂತ್ರ ಉತ್ತಮ ಔಷಧಿ ಎಂದು ಹೇಳುವ ಅವಶ್ಯಕತೆ ಇಲ್ಲ.

ಪ್ರತಿ ದಿನ ಬೆಳಿಗ್ಗೆ ಏಳುವುದರಿಂದ ಹಿಡಿದು ರಾತ್ರಿ ಮಲಗುವವರೆಗೂ ಸಹ ಬೆಳಗಿನ ಹಲ್ಲು ಉಜ್ಜುವಿಕೆಯ ಬ್ರಶ್ ನಿಂದ ಹಿಡಿದು, ಕೊಳಾಯಿ, ನಲ್ಲಿ, ಬಿಸಿ ನೀರು, ಅಡುಗೆಯಲ್ಲಿ ಬಳಸುವ ಗ್ಯಾಸ್, ಸ್ಟೋವ್, ಮೊಬೈಲ್, ಟಿವಿ, ಅಂತರ್ಜಾಲ, ಬಸ್, ಕಾರ್, ರೈಲು, ವಿಮಾನ ಹೀಗೆ ಪ್ರತಿಯೊಂದಕ್ಕೂ ಸಹ ಆಧುನಿಕ ವಿಜ್ಞಾನದ ಆವಿಷ್ಕಾರಗಳನ್ನು ಬಳಸುವ ನಾವುಗಳು ವೈಜ್ಞಾನಿಕ ವಿಚಾರಗಳನ್ನು ವೈಜ್ಞಾನಿಕ ಮನೋಭಾವವನ್ನು ಅಳವಡಿಸಿಕೊಳ್ಳದಿದ್ದರೆ, ಯಾವುದನ್ನೂ ಸಹ ಕೇವಲ ನಂಬಿಕೆಯ ಆಧಾರದ ಮೇಲೆ ನಂಬದೇ ಅದರಲ್ಲಿ ಸತ್ಯವಿದ್ದರೆ ಮಾತ್ರ ಒಪ್ಪಿಕೊಳ್ಳುವ ಸ್ವಭಾವ ಹೊಂದದಿದ್ದರೆ ಅದು ನಮಗೆ ನಾವು ಮಾಡಿಕೊಳ್ಳುವ ಆತ್ಮ ವಂಚನೆಯಷ್ಟೆ.

ಇದನ್ನೂ ನೋಡಿ: “ಸೌಹಾರ್ದತೆ – ಸಮಾನತೆ” ದೇಶದ ಎರಡು ಕಣ್ಣುಗಳು – ಬರಗೂರು ರಾಮಚಂದ್ರಪ್ಪ Janashakthi Media

Donate Janashakthi Media

Leave a Reply

Your email address will not be published. Required fields are marked *