ಕೋವಿಶೀಲ್ಡ್‌ ಲಸಿಕೆ ಬೆಲೆ ತಾರತಮ್ಯ: ಹಲವರ ಆಕ್ರೋಶ

ನವದೆಹಲಿ: ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಪ್ರಟಿಸಿರುವ ಕೋವಿಶೀಲ್ಡ್‌ ಲಸಿಕೆಗೆ ದರದ ಬಗ್ಗೆ ದೇಶಾದ್ಯಂತ ವಿರೋಧ ವ್ಯಕ್ತವಾಗಿದೆ. ವಿಶೇಷವಾಗಿ ದೇಶವನ್ನು ಆಳುತ್ತಿರುವ ಕೇಂದ್ರದ ಬಿಜೆಪಿ ಸರಕಾರದ ನಡೆಬಗ್ಗೆಯೂ ಆಕ್ರೋಶಗೊಂಡಿದ್ದಾರೆ.

ಸೀರಮ್‌ ಕಂಪನಿಯು ಇಂದು  ಕೋವಿಶೀಲ್ಡ್‌ ಲಸಿಕೆಗೆ ದರ ಪ್ರಕಟಿಸಿದ್ದು, ಪ್ರತಿ ಡೋಸ್‌ ಲಸಿಕೆಗೆ ರಾಜ್ಯ ಸರ್ಕಾರಗಳಿಗೆ ₹400 ಹಾಗೂ ಖಾಸಗಿ ಆಸ್ಪತ್ರೆಗಳಿಗೆ ₹ 600 ದರ ನಿಗದಿ ಮಾಡಿದೆ.

‘ನಮ್ಮ ಕಂಪನಿ ಉತ್ಪಾದಿಸುವ ಲಸಿಕೆಯ ಶೇ 50 ರಷ್ಟನ್ನು ಕೇಂದ್ರದ ಲಸಿಕೆ ಕಾರ್ಯಕ್ರಮಕ್ಕೆ ನೀಡಲಾಗುವುದು. ಉಳಿದ ಶೇ 50 ರಷ್ಟನ್ನು ರಾಜ್ಯ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡಲಾಗುವುದು‘ ಎಂದು ಕಂಪನಿ ಹೇಳಿಕೊಂಡಿದೆ.

ಸೀರಮ್‌ ಕಂಪನಿ ಹೇಳಿಕೆ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿದ್ದು, ಕಂಪನಿಯು ಕೋವಿಶೀಲ್ಡ್‌ ಗೆ ಕೇಂದ್ರ ಸರಕಾರಕ್ಕೆ ರೂ.150ರಂತೆ, ರಾಜ್ಯ ಸರಕಾರಕ್ಕೆ ರೂ.400ರಂತೆ, ಖಾಸಗಿ ಆಸ್ಪತ್ರೆಗಳಿಗೆ ರೂ.600ರಂತೆ ಮೂಲ ಬೆಲೆ ನಿಗದಿ ಮಾಡಿದ್ದಕ್ಕೆ ವಿರೋಧ ವ್ಯಕ್ತವಾಗಿದೆ.

ಅಲ್ಲದೆ, ಕೇಂದ್ರ ಸರಕಾರವೇ ಕೋವಿಶೀಲ್ಡ್‌ ಲಸಿಕೆಯನ್ನು ಖರೀದಿಸಬೇಕು ಹಾಗೂ ಎಲ್ಲಾ ರಾಜ್ಯಗಳಿಗೆ ಹಂಚಿಕೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಯೆಚೂರಿ ಅವರು ಕೊರೊನಾ ಲಸಿಕೆಗಳನ್ನು ಕೇಂದ್ರ ಸರಕಾರವು ನೇರವಾಗಿ ಖರೀದಿಸಬೇಕು ಮತ್ತು ಪಾರದರ್ಶಕವಾಗಿ ಮತ್ತು ನ್ಯಾಯಯುತವಾಗಿ ಎಲ್ಲಾ ರಾಜ್ಯಗಳಿಗೆ ವಿತರಿಸಬೇಕು. ಅಲ್ಲದೆ, ಕಳೆದ 70 ವರ್ಷಗಳಿಂದಲೂ ಭಾರತ ಉಚಿತ ಸಾರ್ವತ್ರಿಕ ವ್ಯಾಕ್ಸಿನೇಷನ್‌ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಕೋವಿಡ್‌ ಆರಂಭದ ನಂತರದಲ್ಲಿ ಕೇಂದ್ರದ ನರೇಂದ್ರ ಮೋದಿ ಸರಕಾರವು ಇದರ ನಿರ್ವಹಣೆಗಾಗಿ ವಿಶೇಷವಾಗಿ ಸ್ಥಾಪಿಸಿದ್ದ ಪಿಎಂ ಕೇರ್ಸ್‌ ಮೂಲಕ ಲಕ್ಷ ಕೋಟಿ ರೂಪಾಯಿವರೆಗೂ ಸಂಗ್ರವಾಗಿದೆ. ಇದರ ಮೂಲಕ ಕೋವಿಡ್‌ ನಿವಾರಣೆಗಾಗಿ ಹಣ ವಿನಿಯೋಗಿಸಬೇಕೆಂದು ಹೇಳಿದ್ದಾರೆ.

ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೆವಾಲ ಅವರು ಸಹ ವಿರೋಧ ವ್ಯಕ್ತಪಡಿಸಿದ್ದು ʻʻಜನರ ಹಣದಿಂದ ಮೋದಿ ಸರಕಾರ ಸಂಪಾದನೆಗೆ ಇಳಿದಿರುವ ಕ್ರೋನಿ ಬೊನನ್ಜಾ ಯೋಜನೆ. ಒಂದು ದೇಶ – ಒಂದು ಲಸಿಕೆ – ಮೂರು ಬೇರೆ ಬೇರೆ ದರಗಳು ಎಂತಹ ಅದ್ಭುತ ಯೋಜನೆ ಎಂದು ಟ್ವೀಟ್‌ ಮಾಡಿದ್ದಾರೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಕೇಂದ್ರ ಸರಕಾರಕ್ಕೆ ಪತ್ರವನ್ನು ಬರೆದು ʻʻ ಸಾಂಕ್ರಾಮಿಕ ಪರಿಣಾಮಗಳಿಂದ ರಾಜ್ಯಗಳು ಈಗಾಗಲೇ ಹೆಚ್ಚುವರಿ ಹಣಕಾಸಿನ ಬದ್ಧತೆಗಳನ್ನು ಎದುರಿಸುತ್ತಿವೆ. ಹೀಗಾಗಿ ಲಸಿಕೆಗಳ ವೆಚ್ಚದಿಂದ ಹೊರೆಯಾಗಬಾರದು. ಲಸಿಕೆಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡಬೇಕು. ಲಸಿಕೆ ಪಡೆಯಲು ಮುಕ್ತ ಮಾರುಕಟ್ಟೆ ಕಂಪನಿಗಳೊಂದಿಗೆ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ ಎಂಬ ಭರವಸೆಯನ್ನು ಕೇಂದ್ರ ನೀಡಬೇಕುʼʼ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.

ಕೋವಿಶೀಲ್ಡ್‌ ಲಸಿಕೆಯ ದರಗಳ ಬಗ್ಗೆ ಚಿತ್ರಮಂದಿರಗಳ ಕ್ಲಾಸ್‌ ವಿಭಾಗದ ಬಗ್ಗೆ ಪ್ರಸ್ತಾಪಿಸಿತ್ತಾ ಗಾಂಧಿ ಕ್ಲಾಸು, ಮಿಡಲ್‌ ಕ್ಲಾಸು, ಬಾಲ್ಕನಿ, ಹೀಗೆ ಲಸಿಕೆ ದರದಲ್ಲಿ ವ್ಯತ್ಯಾಸಗೊಂಡಿದೆ ಎಂದು ಕುಟುಕ್ಕಿದ್ದಾರೆ.

ರಾಜ್ಯಗಳು ಈಗಾಗಲೇ ಹಣಕಾಸು ವೆಚ್ಚದಲ್ಲಿ ಹೆಣಗಾಡುತ್ತಿರುವ ಸಂದರ್ಭದಲ್ಲಿ ರಾಜ್ಯಗಳಿಗೆ ಕೇಂದ್ರ ಸರಕಾರ ಸಹಾಯ ಮಾಡಬೇಕು ಆದರೆ, ಕೋವಿಡ್‌ ನಿವಾರಣೆಯಲ್ಲಿ ರಾಜ್ಯಗಳ ಮೇಲೆ ಹೊಣೆಗಾರರನ್ನಾಗಿ ಮೌನಕ್ಕೆ ಶರಣಾಗಿರುವ ಕೇಂದ್ರದ ಮೋದಿ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *