ನವದೆಹಲಿ: ಕೇಂದ್ರ ಸರ್ಕಾರದ ತಜ್ಞರ ಸಮಿತಿಯು ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಅನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಶಿಫಾರಸ್ಸು ಮಾಡಿದೆ.
ಕೋವಿಡ್‌ನ ವಿಷಯ ತಜ್ಞರ ಸಮಿತಿ (ಎಸ್‌ಇಸಿ) ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್‌ನ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿದೆ. ಕೆಲವು ಷರತ್ತುಗಳೊಂದಿಗೆ ಸ್ವದೇಶಿ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಅನ್ನು ನಿಯಮಿತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅನುಮೋದನೆಗೆ ಶಿಫಾರಸ್ಸು ಮಾಡಿದೆ.
ಸದ್ಯಕ್ಕೆ ತುರ್ತು ಪರಿಸ್ಥಿತಿಯಲ್ಲಿ ಬಳಕೆಗೆ ಮಾತ್ರವೇ ಕೊರೊನಾ ನಿರೋಧಕ ಲಸಿಕೆಗಳಿಗೆ ದೇಶದಲ್ಲಿ ಸರಕಾರದಿಂದ ಅನುಮತಿ ನೀಡಲಾಗಿದೆ. ಹಾಗಾಗಿ ಮುಕ್ತ ಮಾರುಕಟ್ಟೆಗಳಲ್ಲಿ ಅವುಗಳನ್ನು ಮಾರಾಟ ಮಾಡಲಾಗುತ್ತಿಲ್ಲ.
ಕೊರೊನಾ ವಿರುದ್ಧ ಹೋರಾಡಲು ಜನತೆಗೆ ಉಚಿತವಾಗಿ ಒದಗಿಸಲಾಗುತ್ತಿರುವ ಲಸಿಕೆಗಳು ಮುಕ್ತ ಮಾರುಕಟ್ಟೆಯಲ್ಲಿ ಒದಗಿಸಲು ಅವಕಾಶ ನೀಡಲಾಗಿದೆ.
ಮುಕ್ತ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಅನುವು ಮಾಡಿಕೊಡುವುದಕ್ಕೆ ಸಂಬಂಧಿಸಿದಂತೆ ಈ ಲಸಿಕೆಗಳನ್ನು ಕೋವಿನ್ ನಲ್ಲಿ ನೋಂದಾಯಿಸಲಾದ ಕ್ಲಿನಿಕ್‌ಗಳು ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುತ್ತದೆ ಎಂದು ಮೂಲಗಳು ತಿಳಿಸಿವೆ.
ದೇಶದ ಜನರಿಗೆ ಈಗಾಗಲೇ 100 ಕೋಟಿಗೂ ಅಧಿಕ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ನೀಡಲಾಗಿದೆ. 15 – 18 ವರ್ಷದ ಮಕ್ಕಳ ಲಸಿಕಾ ಅಭಿಯಾನದ ಅಡಿಯಲ್ಲಿ ಲಕ್ಷಾಂತರ ಡೋಸ್ ಕೋವ್ಯಾಕ್ಸಿನ್ ನೀಡಲಾಗುತ್ತಿದೆ.
ಜನವರಿ 23ಕ್ಕೆ 3ನೇ ಅಲೆ ಉತ್ತುಂಗಕ್ಕೆ
ಮುಂಬರುವ ಜನವರಿ 23ಕ್ಕೆ ದೇಶದಲ್ಲಿ ಕೊರೊನಾ ಮೂರನೇ ಅಲೆಯು ಉತ್ತುಂಗಕ್ಕೆ ತಲುಪಲಿದೆ. ಆದರೆ, ನಿತ್ಯ ಸೋಂಕಿತರ ಸಂಖ್ಯೆ 4 ಲಕ್ಷ ದಾಟಲ್ಲ ಎಂದು ಐಐಟಿ ಕಾನ್ಪುರದ ವಿಜ್ಞಾನಿಗಳು ತಿಳಿಸಿದ್ದಾರೆ. ಅವರು ತಮ್ಮ ಸೂತ್ರ ಕೋವಿಡ್ ಮಾಡೆಲ್ ಮೂಲಕ ಸಂಭಾವ್ಯ ಕೊರೊನಾ ಉತ್ತುಂಗವನ್ನು ಪತ್ತೆ ಮಾಡಿದ್ದಾರೆ.
ಆರೋಗ್ಯ ತಜ್ಞರ ಪ್ರಕಾರ, ಮೂರನೇ ಅಲೆಯು ಹಿರಿಯ ನಾಗರಿಕರು ಮತ್ತು ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರ ಮೇಲೆ ಕೊರೊನಾ ಹೆಚ್ಚು ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದೆ.