ನವದೆಹಲಿ : ಕೋವಿಡ್ 19 ಸೋಂಕು ಪತ್ತೆಗಾಗಿ ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ ಅನ್ನು ಮನೆಯಲ್ಲೇ ಮಾಡುವುದಕ್ಕೆ ಹೋಮ್ ಟೆಸ್ಟಿಂಗ್ ಕಿಟ್ ಬಳಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅನುಮೋದನೆ ನೀಡಿದ್ದು ಈಗ ಮನೆಯಲ್ಲೆ ಕೋವಿಡ್ ಟೆಸ್ಟ್ ಮಾಡಿಕೊಂಡು ಕ್ಷಣಾರ್ಧದಲ್ಲಿ ಫಲಿತಾಂಶವನ್ನು ಪಡೆಯಬಹುದು.
ಹೌದು, ಸ್ವತಃ ಪರೀಕ್ಷೆ ಮಾಡಿಸಿಕೊಳ್ಳಬಹುದಾದ ಕೋವಿಸೆಲ್ಫ್ ಎಂಬ ರ್ಯಾಪಿಡ್ ಆಯಂಟಿಜೆನ್ ಟೆಸ್ಟ್(ಆರ್ಎಟಿ) ಕಿಟ್ವೊಂದನ್ನು ಪುಣೆಯಲ್ಲಿರುವ ಮೈಲ್ಯಾಬ್ ಡಿಸ್ಕವರಿ ಸಲ್ಯೂಷನ್ಸ್ ಎಂಬ ಕಂಪನಿ ಕಂಡುಹಿಡಿದಿದೆ. ಈ ಕಿಟ್ ಮೂಲಕ 2 ನಿಮಿಷದಲ್ಲಿ ಕರೊನಾ ಟೆಸ್ಟ್ ಮಾಡಿಸಿಕೊಳ್ಳಲು ಸಾಧ್ಯವಿದ್ದು, 15 ನಿಮಿಷಗಳಲ್ಲೇ ಫಲಿತಾಂಶ ಕೂಡ ಲಭಿಸುತ್ತದೆ. ಈ ಟೆಸ್ಟ್ ಕಿಟ್‌ಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮಾನ್ಯತೆ ಕೂಡ ಸಿಕ್ಕಿದೆ.
ಕೆಮ್ಮು, ಶೀತ, ಜ್ವರ ಮುಂತಾದ ಲಕ್ಷಣಗಳು ಕಂಡು ಬಂದಾಗ ಬಂದಿರುವುದು ಸಾಮಾನ್ಯ ಜ್ವರವೇ ಅಥವಾ ಕೋವಿಡ್ 19 ಇರಬಹುದೇ ಎಂಬ ಸಂಶಯ ಎಲ್ಲರಲ್ಲಿ ಇರುತ್ತದೆ, ಆದರೆ ಅದು ತಿಳಿಯಬೇಕಾದರೆ ಕೋವಿಡ್ ಟೆಸ್ಟ್ ಮಾಡಿದರೆ ಮಾತ್ರ ತಿಳಿಯುವುದು. ಕೋವಿಡ್ ಟೆಸ್ಟ್‌ಗೆ ಹೋದರೆ ಇಷ್ಟು ಉದ್ದ ಕ್ಯೂ, ಇನ್ನು ಅದರ ಫಲಿತಾಂಶ ಬರಲು ಒಂದು ಅಥವಾ ಎರಡು ದಿನ ಕಾಯುವುದು ಇವೆಲ್ಲಾ ಕಿರಿಕಿರಿ ಮಾತ್ರವಲ್ಲ ಸೋಂಕು ಹೆಚ್ಚು ಹರಡುವುದಕ್ಕೂ, ಸಕಾಲಕ್ಕೆ ಚಿಕಿತ್ಸೆ ಸಿಗದೆ ರೋಗ ಉಲ್ಭಣವಾಗುವುದಕ್ಕೂ ಒಂದು ಪ್ರಮುಖ ಕಾರಣ ಎಂಬುವುದನ್ನು ಅಲ್ಲಗಳೆಯುವಂತಿಲ್ಲ.
ಕೋವಿಡ್ ಪರೀಕ್ಷೆಗೆ ಒಳಪಟ್ಟವರು ಫಲಿತಾಂಶ ಬರಲು ತಡವಾದರೆ ನಮಗೆ ನೆಗೆಟಿವ್ ಬಂದಿರಬಹುದು ಅದಕ್ಕೆ ಫಲಿತಾಂಶ ಬಂದಿಲ್ಲ ಎಂದು ಹೊರಗಡೆ ಸುತ್ತಾಡಿ ಸೋಂಕು ಹರಡುತ್ತಾರೆ, ಇನ್ನು ಸೋಂಕಿತರಿಗೆ ಫಲಿತಾಂಶ ಬರುವವರಿಗೆ ಅದಕ್ಕೆ ಸಂಬಂಧಿಸಿದ ಚಿಕಿತ್ಸೆ ಸಿಗಲ್ಲ, ಈ ಕಾರಣ ರೋಗ ಲಕ್ಷಣಗಳು ಅಧಿಕವಾಗುವ ಸಾಧ್ಯತೆಗಳು ಹೆಚ್ಚಾಗಿದ್ದವು. ಈಗ ಅದಕ್ಕೆಲ್ಲಾ ಒಂದು ಪರ್ಯಾಯ ವ್ಯವಸ್ಥೆ ರೆಡಿಯಾಗಿದೆ. ಇನ್ನು ಕೋವಿಡ್ 19 ಪರೀಕ್ಷೆ ಮನೆಯಲ್ಲಿಯೇ ಮಾಡಿ ಕೋವಿಡ್ 19 ಸೋಂಕು ತಗುಲಿದೆಯೇ, ಇಲ್ಲವೇ ಎಂದು ತಿಳಿಯಬಹುದು. ಇದರ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಮನೆಯಲ್ಲಿಯೇ ರ‍್ಯಾಪಿಡ್ ಆಯಂಟಿಜನ್ ಟೆಸ್ಟ್‌ಗೆ ಅನುಮತಿ ಸಿಕ್ಕಿದೆ. ಐಸಿಎಂಆರ್ (The Indian Council of Medical Research) ಇದನ್ನು ಯಾರು ಬಳಸಬಹುದು, ಹೇಗೆ ಬಳಸಬೇಕು ಎಂಬುವುದರ ಬಗ್ಗೆ ಮಾರ್ಗಸೂಚಿಯನ್ನೂ ಕೂಡ ನೀಡಿದೆ.
ICMR issues advisory for #COVID19 home testing using Rapid Antigen Tests (RATs) pic.twitter.com/3M4kctCpk3
— ANI (@ANI) May 19, 2021
ಇದನ್ನೂ ಓದಿ : ಕೋವಿಡ್‌ನಿಂದ 600 ಶಿಕ್ಷಕರು, 175 ಜನ ವಕೀಲರ ಸಾವು
ಯಾರು ಬಳಸಬೇಕು? : ಕೋವಿಡ್ 19 ರೋಗ ಲಕ್ಷಣಗಳಿದ್ದರೆ ಅಥವಾ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಇರುವವರು ಈ ಪರೀಕ್ಷೆ ಮಾಡಬಹುದು. ಇನ್ನು ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಿ ಪಾಸಿಟಿವ್ ಬಂದವರು ಇದನ್ನು ಮತ್ತೆ ಮಾಡಬೇಕಾಗಿಲ್ಲ, ಒಂದು ವೇಳೆ RTPCRನಲ್ಲಿ ನೆಗೆಟಿವ್ ವರದಿ ಬಂದು ರೋಗ ಲಕ್ಷಣ ಇರುವವರು ಇದನ್ನು ಬಳಸಿ ಸೋಂಕು ಇದೆಯೇ, ಇಲ್ಲವೇ ಎಂದು ತಿಳಿಯಬಹುದು.
ಪರೀಕ್ಷೆ ಮಾಡುವುದು ಹೇಗೆ? : ನಾಸಲ್ ಸ್ವ್ಯಾಬ್ ಬಳಸಿ ಸ್ವ್ಯಾಬ್ ತೆಗೆಯಬೇಕು. 18 ವರ್ಷ ಮೇಲ್ಪಟ್ಟವರು ಸ್ವತಃ ಸ್ವ್ಯಾಬ್ ತೆಗೆದು ಪರೀಕ್ಷೆ ಮಾಡಬಹುದು. 2 ವರ್ಷ ಮೇಲ್ಪಟ್ಟ ಮಕ್ಕಳ ಹಾಗೂ ವಯಸ್ಸಾದವರ ಸ್ವ್ಯಾಬ್ ಅನ್ನು ಬೇರೆಯವರು ತೆಗೆದು ಪರೀಕ್ಷಿಸಬೇಕು.
ತಿಳಿಯುವುದು ಹೇಗೆ?: ರ‍್ಯಾಪಿಡ್ ಆಯಂಟಿಜನ್ ಟೆಸ್ಟ್ ಕಿಟ್‌ನಲ್ಲಿ ನಾಸಲ್ ಸ್ವ್ಯಾಬ್ ಮತ್ತು ಮೊದಲೇ ತುಂಬಿರುವ ಎಕ್ಸಟ್ರಾಕ್ಸನ್ ಟ್ಯೂಬ್ ಮತ್ತು ಒಂದು ಟೆಸ್ಟ್ ಕಾರ್ಡ್ ಇರುತ್ತದೆ.
ಇದನ್ನು ಪರೀಕ್ಷೆ ಮಾಡುವವರು ಮೊಬೈಲ್‌ನಲ್ಲಿ, ಮೈಲ್ಯಾಬ್ ಆಯಪ್ ಡೌನ್‌ಲೋಡ್ ಮಾಡಬೇಕು, ಅಲ್ಲಿ ಅಗ್ಯತ ಮಾಹಿತಿಗಳನ್ನು ತುಂಬ ಬೇಕು.
ನಾಸಲ್ ಸ್ವ್ಯಾಬ್‌ನ ತುದಿ ಮುಟ್ಟದೆ ಅದನ್ನು ಮೂಗಿನ ಒಳಗಡೆ ಹಾಕಿ 5 ಬಾರಿ ಮೆಲ್ಲನೆ ತಿರುಗಿಸಿ. ಮೂಗಿನ ಎರಡೂ ಬದಿಯಲ್ಲಿ ಹೀಗೆ ಮಾಡಿ. ನಂತರ ಆ ಸ್ವ್ಯಾಬ್ ಅನ್ನು ಮೆಲ್ಲನೆ ತೆಗೆದು ಟ್ಯೂಬ್‌ನಲ್ಲಿ ಮುಳುಗಿಸಿ.
ಟ್ಯೂಬ್‌ನ ಒಳಗಡೆ ನಾಸಲ್ ಟ್ಯೂಬ್ ಮುಳುಗಿದೆಯೇ ಎಂಬುವುದನ್ನು ಖಚಿತ ಒಡಿಸಿ.
ಬ್ರೇಕ್ ಪಾಯಿಂಟ್ ನೋಡಿ ಸ್ವ್ಯಾಬ್ ಮುರಿಯಬೇಕು. ಟ್ಯೂಬ್ ಮುಚ್ಚಿ ಎರಡು ಹನಿ ಟೆಸ್ಟ್ ಕಿಟ್‌ಗೆ ಹಾಕಿ.
ನಂತರ 15 ನಿಮಿಷ ಕಾಯಬೇಕು. ಯಾವುದೇ ಫಲಿತಾಂಶ 20 ನಿಮಿಷದ ನಂತರ ಬಂದರೆ ಅದು ಪರಿಗಣಿಸಲು ಸಾಧ್ಯವಾಗುವುದಿಲ್ಲ.
15 ನಿಮಿಷ ಆಗುತ್ತಿದ್ದಂತೆ ಆಯಪ್‌ನಲ್ಲಿ ರಿಂಗ್ ಕೇಳಿಸುವುದು, ಅದರಲ್ಲಿ ಫಲಿತಾಂಶ ಸಿಗುವುದು.
ಕೋವಿಸೆಲ್ಫ್ ಕಿಟ್ ವಿಶೇಷವೇನು? ಮಹಾರಾಷ್ಟ್ರದ ಪುಣೆಯ ಮೈಲ್ಯಾಬ್ ಡಿಸ್ಕವರಿ ಸೊಲ್ಯುಶನ್ಸ್ ಲಿ. ಕಂಪನಿ ಪರಿಚಯಿಸಿರುವ ಕೋವಿಸೆಲ್ಫ್ (ಪ್ಯಾಥೊಕ್ಯಾಚ್) ಕೋವಿಡ್-19 ಒಟಿಸಿ ಆಯಂಟಿಜೆನ್ ಎಲ್‌ಎಫ್ ಡಿವೈಸ್ ಎಂಬ ಹೋಮ್ ಟೆಸ್ಟಿಂಗ್ ಕಿಟ್ ಬಳಸಲು ಐಸಿಎಂಆರ್ ಅನುಮೋದನೆ ನೀಡಿದೆ. ಈ ಉಪಕರಣ ಮತ್ತು ಬಳಕೆ ಕುರಿತು ಸಂಪೂರ್ಣ ಮಾಹಿತಿಯ ವಿಡಿಯೋ ಡೆಮೊ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಲಭ್ಯವಿದೆ. ಅಲ್ಲದೆ, ಸೂಚನೆಗಳ ಕೈಪಿಡಿ ಕೂಡ ಲಭ್ಯವಿದೆ. ಹೋಮ್ ಟೆಸ್ಟಿಂಗ್ ಕಿಟ್ ಬೆಲೆ ₹250 ಎಂದು ಮೈಲ್ಯಾಬ್ಸ್ ಹೇಳಿದೆ. ಜತೆಗೆ 15 ನಿಮಿಷದಲ್ಲೇ ಕೋವಿಡ್ 19 ಪರೀಕ್ಷೆಯ ಫಲಿತಾಂಶ ಬರಲಿದೆ ಎಂದು ಕಂಪನಿ ತಿಳಿಸಿದೆ.
ಹೀಗೆ ಸ್ವಯಂಪರೀಕ್ಷೆ ಮಾಡಿಸಿಕೊಳ್ಳಬಹುದಾದ ಕೋವಿಸೆಲ್ಫ್ ಟೆಸ್ಟ್ ಕಿಟ್ ಇನ್ನೊಂದು ವಾರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ದೇಶದಲ್ಲಿರುವ 7 ಲಕ್ಷಕ್ಕೂ ಅಧಿಕ ಫಾರ್ಮಸಿಗಳಲ್ಲಿ ಹಾಗೂ ಆನ್ಲೈನ್ ಫಾರ್ಮಸಿಗಳಲ್ಲೂ ಈ ಕಿಟ್ಗಳು ಸಿಗಲಿವೆ. ಭಾರತದ ಶೇ. 90ರಷ್ಟು ಪಿನ್ಕೋಡ್ ಪ್ರದೇಶಗಳಿಗೆ ಈ ಕಿಟ್ ತಲುಪಿಸುವ ಗುರಿ ಇರಿಸಿಕೊಳ್ಳಲಾಗಿದೆ ಎಂದು ಮೈಲ್ಯಾಬ್ ಡಿಸ್ಕವರಿ ಸಲ್ಯೂಷನ್ಸ್ ಕಂಪನಿಯ ನಿರ್ದೇಶಕ ಸುಜೀತ್ ಜೈನ್ ತಿಳಿಸಿದ್ದಾರೆ.
ಕೋವಿಡ್ ತೀವ್ರ ಲಕ್ಷಣಗಳಿದ್ದೂ, ರ್‍ಯಾಪಿಡ್ ಆಯಂಟಿಜನ್ ಟೆಸ್ಟ್ ಹೋಮ್ ಟೆಸ್ಟ್ ಕಿಟ್ ಮೂಲಕ ಪರಿಶೀಲಿಸಿದಾಗ ನೆಗೆಟಿವ್ ಫಲಿತಾಂಶ ಬಂದರೆ, ಅವರು ಶೀಘ್ರದಲ್ಲೇ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಐಸಿಎಂಆರ್ ಹೇಳಿದೆ. ರ್‍ಯಾಪಿಡ್ ಆಯಂಟಿಜನ್ ಟೆಸ್ಟ್ ಮೂಲಕ ಪರಿಶೀಲಿಸಿದಾಗ ಕೆಲವೊಮ್ಮೆ ವೈರಲ್ ಲೋಡ್ ಕಡಿಮೆ ಇದ್ದರೆ ನೆಗೆಟಿವ್ ಫಲಿತಾಂಶ ಬರುವ ಸಾಧ್ಯತೆಯಿರುತ್ತದೆ. ರ್‍ಯಾಪಿಡ್ ಆಯಂಟಿಜನ್ ಟೆಸ್ಟ್ ಹೋಮ್ ಕಿಟ್‌ನಲ್ಲಿ ಸೂಚಿಸಲಾಗುವ ಹಂತಗಳನ್ನು ಪಾಲಿಸುವುದು ಕಡ್ಡಾಯ. ಜತೆಗೆ ಬಳಕೆ ಮಾಡಿದ ಬಳಿಕ ಟೆಸ್ಟ್ ಕಿಟ್, ಇತರ ವಸ್ತುಗಳನ್ನು ಸುರಕ್ಷಿತವಾಗಿ ವಿಸರ್ಜಿಸಬೇಕು ಎಂದು ಸುಜಿತ್ ಜೈನ್ ಕರೆ ನೀಡಿದ್ದಾರೆ.
ಇದೊಂದು ದಂಧೆಯಾಗದಿರಲಿ : ಮೆನೆಯಲ್ಲಿಯೇ ಕೋವಿಡ್ ಟೆಸ್ಟ್ ಮಾಡಿಕೊಳ್ಳುವ ಕಿಟ್‌ಗೆ ಐಎಸ್‌ಎಂಆರ್ ಒಪ್ಪಿಗೆ ಸೂಚಿಸಿರಬಹುದು. ಆದರೆ ಅದರ ಫಲಿತಾಂಶದ ಕುರಿತು ಇನ್ನೂ ನಿಖರವಾದ ಮಾಹಿತಿ ಹೊರ ಬಿದ್ದಿಲ್ಲ. ಈಗಾಗಲೆ ರೆಮ್ಡೆಸಿವಿರ್ ಕಾಳಸಂತೆಯಲ್ಲಿ ವ್ಯಾಪಕವಾಗಿ ದುಬಾರಿ ಬೆಲೆಗೆ ಮಾರಾಟ ಮಾಡುವ ಮೂಲಕ ದಂಧಯೆನ್ನಾಗಿಸಿದ್ದಾರೋ, ಆ ಸಾಲಿಗೆ ಈ ಕಿಟ್ಟ ನಿಲ್ಲದಿರಲಿ. ಸ್ಟಾಕ್ ಇಲ್ಲ. ಇರೋ ಸ್ಕಾಕ್ ಕಡಿಮೆ ಇದೆ ಎಂದು ದುಬಾರಿ ಬೆಲೆಗೆ ಮಾರುವ ಕ್ರಿಯೆಗಳಿಗೆ ಬ್ರೇಕ್ ಹಾಕುವ ನಿಯಮಗಳನ್ನು, ಕಾನೂನು ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕಿದೆ. ಸುಲಭವಾಗಿ ಕೈಗೆಟಕುವ ದರದಲ್ಲಿ ಸಿಗುತ್ತಿದ್ದ ಪಲ್ಸ್ ಆಕ್ಸಿಮೀಟರ್ ದರ ಈಗ ಎರಡ್ಮೂರು ಪಟ್ಟು ಹೆಚ್ಚಾಗಿದ್ದನ್ನು ನೋಡುತ್ತೇವೆ. ಸೋಂಕಿನ ವೇಗ, ಆರ್ಭಟಕ್ಕೆ ಜನ ಹೆದರಿದ್ದು, ಇಂತಹ ಸುಲಭದ ಮಾರ್ಗೋಪಾಯಗಳು ಬಂದಾಗ ಸಹಜವಾಗಿ ಖರೀದಿಸುವ ಪ್ರಕ್ರಿಯೆ ಹೆಚ್ಚಾಗಿರುತ್ತದೆ. ಅದನ್ನು ಸರಕಾರ ಅಥವಾ ಏಜನ್ಸಿ ಅಥವಾ ಮಾರಾಟದ ಪ್ರತಿನಿಧಿಗಳು ದುರುಪಯೋಗ ಪಡಸಿಕೊಳ್ಳಬಾರದು ಎಂದು ತಜ್ಞರು ಸಲಹೆ ನೀಡಿದ್ದಾರೆ.