ಕೋವಿಡ್‌ ನಿಯಮ : ಆಡಳಿತಾರೂಢ ಪಕ್ಷಕ್ಕೆ ಒಂದು ನಿಯಮ, ಸಾಮಾನ್ಯರಿಗೆ ಒಂದು ನಿಯಮ?.

ಮೆಡಿಕಲ್‌ ಕಾಲೇಜ್‌ ಬೇಕು ಎಂದು ಪ್ರತಿಭಟಿಸಿದ್ಧಕ್ಕೆ ಕೇಸ್‌ ಜಡಿದ‌ ಸರಕಾರ

ಬಾಗಲಕೋಟೆ : ಸರ್ಕಾರ ವೈದ್ಯಕೀಯ ಕಾಲೇಜು ಸ್ಥಾಪನೆಯ ಕಾರ್ಯರಾಂಭಕ್ಕೆ ಅನುದಾನ  ಒದಗಿಸುವಂತೆ ಒತ್ತಾಯಿಸಿ ಬಾಗಲಕೋಟೆ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ನಡೆಸಿದ  9 ಪ್ರತಿಭಟನಾಕಾರರ ಮುಖಂಡರ ಮೇಲೆ ಪ್ರಕರಣ ದಾಖಲಾಗಿದೆ.

ಕೋರೊನಾ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಆದೇಶವನ್ನು ಉಲ್ಲಘಿಸಿ ನಗರದ ಬೀಳೋರು ಗುರುಬಸವನ ದೇವಸ್ಥಾನದಿಂದ ಬಸವೇಶ್ವರ ಸರ್ಕಲ್‌ ವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದ್ದಾರೆಂಬ ಕಾರಣಕ್ಕೆ ಬಾಗಲಕೋಟೆ ತಹಸೀಲ್ದಾರ ಗುರುಸಿದ್ದಯ್ಯ ಹಿರೇಮಠ ಅವರು ನೀಡಿರುವ ದೂರಿನ ಮೇರೆಗೆ ರಕವೇ ಜಿಲ್ಲಾಧ್ಯಕ್ಷ ರಮೇಶ ಬದ್ನೂರು ಸೇರಿದಂತೆ 9 ಜನರ ಮೇಲೆ ಕಲಂ 143, 147, 269, 270 ಹಾಗೂ ಐಪಿಸಿ ಕಲಂ  51, ರಾಷ್ಟ್ರೀಯ ವಿಪತ್ತು ಕಾಯ್ದೆ 2005 ರಡಿ ಪ್ರಕರಣ ದಾಖಲಾಗಿದೆ.

ಈ ಕ್ರಮವನ್ನು ವಿರೋಧಿಸಿ ದಿನೇಶ್‌ ಕುಮಾರ್‌ ಅವರು ಮಾತನಾಡಿ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಬೇಕು ಎಂಬುದು ಕರವೇ ಸಂಘಟಿನೆಯ ಹಲವು ವರ್ಷಗಳ ಬೇಡಿಕೆಯಾಗಿದೆ. ಈ ಹಿಂದೆ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ವೈದ್ಯಕೀಯ ಕಾಲೇಜು ಮಂಜೂರೂ ಆಯಿತು. ಆದರೆ ಇದರ ಮುಂದಿನ ಕಾರ್ಯರಾಂಬಕ್ಕೆ ಈ ವರೆಗೂ ಹಣ ಮಂಜೂರಾಗದಿರುವುದಕ್ಕೆ ಕರವೇ ಸಂಘಟಿನೆ ಪ್ರತಿಭಟನೆ ನಡೆಸಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪ್ರಮುಖ ಮುಖಂಡರ ಮೇಲೆ ಕೇಸು ದಾಖಲಾಗಿದೆ. ಇದು ಎಷ್ಟು ಸರಿ? ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಬೇಕು ಎಂಬುದು ತಪ್ಪೇ? ಬಾಗಲಕೋಟೆಯ ಜನಪ್ರತಿನಿಧಿಗಳಿಗಂತೂ ಕಾಲೇಜು ಕಾರ್ಯರಾಂಭಕ್ಕೆ ಈವರೆಗೂ ಹಣ ತರಲು ಸಾಧ್ಯವಾಗಿಲ್ಲ.

ಕರವೇ ಸಂಘಟಿಸಿದ ಪ್ರತಿಭಟನೆಯಲ್ಲಿ ಹತ್ತಾರು ಸಂಘಟನೆಗಳ ಪ್ರಮುಖರು, ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಪ್ರತಿಭಟನೆಯ ತೀವ್ರತೆಗೆ ಆಳುವ ಪಕ್ಷದ ನಾಯಕರುಗಳಿಗೆ ನಡುಕ ಹುಟ್ಟಿಕೊಂಡಿದೆ.

ಆದರೆ ಅದೇ ದಿನ ಶಾಸಕ‌ ವೀರಣ್ಣ ಚರಂತಿಮಠ ನೇತೃತ್ವದಲ್ಲಿ ಅದೇ ಬಾಗಲಕೋಟೆಯಲ್ಲಿ ಬಿಜೆಪಿ ಸಂಸ್ಥಾಪನಾ ದಿನವೂ ನಡೆದಿದೆ. ಅದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ಯಾರ ಮುಖದಲ್ಲೂ ಮಾಸ್ಕ್ ಕೂಡ ಇಲ್ಲ. ಇವರ ಮೇಲೆ ಕೇಸು ಇಲ್ಲ. ಇವರಿಗೆ ರಾಷ್ಟ್ರೀಯ ವಿಪತ್ತು ಕಾಯ್ದೆ ಅನ್ವಯಿಸುವುದಿಲ್ಲವೇ?

ಇದೆಂಥ ದರಿದ್ರ ವ್ಯವಸ್ಥೆ? ಆಡಳಿತಾರೂಢ ಪಕ್ಷಕ್ಕೆ, ಅದರ ನಾಯಕರಿಗೆ, ಕಾರ್ಯಕರ್ತರಿಗೆ ಒಂದು ನಿಯಮ. ಸಾಮಾನ್ಯ ಜನರಿಗೆ ಒಂದು ನಿಯಮ ಇರಲು ಸಾಧ್ಯವೇ? ಜಿಲ್ಲಾಡಳಿತಕ್ಕೆ ಮಾನ ಮಾರ್ಯಾದೆ ಎಂಬುದೇನಾದರೂ ಇದೆಯೇ? ಒಂದು ಕೆಲಸ ಮಾಡಿ, ನಮ್ಮ‌ ಮೇಲಿನ ಕೇಸನ್ನು ನಾವು ಎದುರಿಸುತ್ತೇವೆ. ಸಂಸ್ಥಾಪನಾ ದಿನಾಚರಣೆ ಮಾಡಿದವರ ಮೇಲೆ ಕೇಸು ಹಾಕಲು ನಮಗೆ ನರ ಇಲ್ಲ ಎಂದು ಸಾರ್ವಜನಿಕವಾಗಿ ಒಪ್ಪಿಕೊಂಡುಬಿಡಿ. ನಾವು ಆಳುವವರ ಬೂಟು ನೆಕ್ಕುವುದಕ್ಕಾಗಿಯೇ ಸಂಬಳ ತಗೋತಾ ಇದ್ದೀವಿ ಎಂದು ಒಂದು ಇಡೀ ಬಾಗಲಕೋಟೆಯಲ್ಲಿ ಮೈಕ್ ಹಾಕಿ ಕೂಗಿಬಿಡಿ. ನಿಮ್ಮ ನಿಯತ್ತು ಇಡೀ ಜಗತ್ತಿಗೆ ಸಾರಿಬಿಡಿ ಎಂದು ತಮ್ಮ ಆಕ್ರೋಶವನ್ನು ಹಂಚಿಕೊಂಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *