ಕೊಡಗು: ಲಾಕ್ ಡೌನ್ ಆಗಿರುವುದರಿಂದ ಮಧ್ಯಮ ವರ್ಗದ ಜನರು ಕೂಡ ಬದುಕು ದೂಡುವುದು ದುಸ್ಥರವಾಗಿದೆ. ಆದರೆ 8 ರಿಂದ ಹತ್ತು ಸಾವಿರ ಗೌರವಧನ ಪಡೆಯುತ್ತಾ ಕೊರೊನಾ ವಾರಿಯರ್ಸ್ ಗಳಾಗಿ ದುಡಿಯುತ್ತಿದ್ದವರಿಗೆ ಏಳೆಂಟು ತಿಂಗಳಾದರೂ ಸಂಬಳವಿಲ್ಲದೆ ಕಣ್ಣೀರಿನಲ್ಲಿ ಕೈತೊಳೆಯುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಗ್ರಾಪಂ ನೌಕರರು ಪ್ರತಿಭಟನೆ ನಡೆಸಿದ್ದಾರೆ.
ಕೊಡಗು ಜಿಲ್ಲೆಯ ಪಂಚಾಯಿತಿ ನೌಕರರ ಕರುಣಾಜನಕ ಕಥೆ. ಕೊಡಗು ಜಿಲ್ಲೆಯಲ್ಲಿ 104 ಗ್ರಾಮ ಪಂಚಾಯಿತಿಗಳಿದ್ದು, ಅವುಗಳ ಪೈಕಿ 27 ಗ್ರಾಮ ಪಂಚಾಯಿತಿಗಳ ನೂರಾರು ನೌಕರರಿಗೆ ಏಳು ತಿಂಗಳಿಗೆ ಗೌರವಧನವೇ ಸಿಕ್ಕಿಲ್ಲ. ಒಂದೆಡೆ ಲಾಕ್ ಡೌನ್ ಆಗಿದ್ದು, ಬೇರೆ ಕೆಲಸಗಳು ಸಿಗುತ್ತಿಲ್ಲ. ಹೀಗಾಗಿ ಪಂಚಾಯಿತಿಯಿಂದ ಸಿಗುವ ಗೌರವಧನವನ್ನು ನಂಬಿಕೊಂಡು ಸಂಸಾರ ಸಾಗಿಸುತ್ತಿದ್ದ ನೂರಾರು ಕುಟುಂಬಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಸಂಘಟಿಕರು ಆರೋಪಿಸಿದ್ದಾರೆ.
ವಿಪರ್ಯಾಸವೆಂದರೆ ಏಳೆಂಟು ತಿಂಗಳಿನಿಂದ ಗೌರವಧನವನ್ನು ನೀಡದಿದ್ದರೂ ಪಂಚಾಯಿತಿ ಪಿಡಿಓ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಪಂಚಾಯಿತಿ ನೌಕರರನ್ನು ಕೊವಿಡ್ ಕೇರ್ ಸೆಂಟರ್ ಗಳಿಗೆ ಕರ್ತವ್ಯಕ್ಕೆ ನಿಯೋಜನೆ ಮಾಡುತ್ತಿದ್ದಾರೆ. ತಮ್ಮ ಪಂಚಾಯಿತಿಗಳಿಂದ 60 ರಿಂದ 70 ಕಿಲೋಮೀಟರ್ ದೂರದಲ್ಲಿರುವ ಕೊವಿಡ್ ಕೇರ್ ಸೆಂಟರ್ ಗಳಿಗೆ ಹೋಗಿ ಬರುವುದಕ್ಕೆ ಕನಿಷ್ಠ ಬಸ್ ಚಾರ್ಜ್ ಗೂ ಬೇರೆಯವರಿಂದ ಸಾಲ ಮಾಡಿ ಹೋಗಿ ಬರಬೇಕಾದ ಸ್ಥಿತಿ ಇದೆ. ಜೊತೆಗೆ ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲೂ ಯಾವುದೇ ಕೊವಿಡ್ ಪಾಸಿಟಿವ್ ಪ್ರಕರಣ ಆದರೂ, ಆ ಮನೆಯನ್ನು ಸೀಲ್‍ಡೌನ್ ಮಾಡಲು, ಅಲ್ಲಿ ಔಷಧ ಸಿಂಪಡಿಸಲು ಮತ್ತು ಸೀಲ್ ಡೌನ್ ಮನೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಪಂಚಾಯಿತಿ ನೌಕರರೇ ಕೊವಿಡ್ ವಾರಿಯರ್ಸ್ ಗಳಾಗಿ ದುಡಿಯುತ್ತಿದ್ದಾರೆ. ಆದರೂ ಪಂಚಾಯಿತಿಗಳಲ್ಲಿ ಮಾತ್ರ ಅನುದಾನಗಳ ಕೊರತೆಯ ನೆಪವೊಡ್ಡಿ ತಮ್ಮ ನೌಕರರಿಗೆ ಗೌರವಧನವನ್ನೇ ಕೊಡುತ್ತಿಲ್ಲ. ಮುಖ್ಯವಾಗಿ ವಿರಾಜಪೇಟೆ ತಾಲ್ಲೂಕಿನ ನಾಲ್ಕೇರಿ ಗ್ರಾಮ ಪಂಚಾಯಿತಿ, ಸೋಮವಾರಪೇಟೆ ತಾಲ್ಲೂಕಿನ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ, ಮಡಿಕೇರಿ ತಾಲ್ಲೂಕಿನ ಮರಗೋಡು ಗ್ರಾಮ ಪಂಚಾಯಿತಿ ಸೇರಿದಂತೆ 27 ಪಂಚಾಯಿತಿಗಳಲ್ಲಿ ಗೌರವಧನ ನೀಡಿಲ್ಲ. ಹದಿನೈದನೇ ಹಣಕಾಸು ನಿಧಿಯಲ್ಲಿ ನೌಕರರಿಗೆ ಸಂಬಳ ಕೊಡಲು ಸರ್ಕಾರ ನಿಯಮವನ್ನೇ ಮಾಡಿದೆ ಆದರೆ ನಮಗೆ ವೇತನ ನೀಡುತ್ತಿಲ್ಲ ಎಂದು ಗ್ರಾಪಂ ನೌಕರರ ಸಂಘಟನೆಯ ಜಿಲ್ಲಾ ಮುಖಂಡ ಭರತ್, ಪಿಆರ್ ಆರೋಪಿಸಿದ್ದಾರೆ.
ಆದರೆ ಪಂಚಾಯಿತಿ ಆಡಳಿತ ಮಂಡಳಿ ಮತ್ತು ಪಿಡಿಓಗಳು ಕೇವಲ ಕಾಮಗಾರಿಗಳಿಗೆ ಹಣವನ್ನು ವಿನಿಯೋಗಿಸುತ್ತಿದ್ದು, ನೌಕರರ ಗೌರವಧನವನ್ನು ಮಾತ್ರ ಕೊಡುತ್ತಿಲ್ಲ. ಹೀಗಾಗಿ ಪಂಚಾಯಿತಿ ನೌಕರರು ಏಳೆಂಟು ತಿಂಗಳಿಂದ ಗೌರವಧನವಿಲ್ಲದೆ ಸಾಲ ಮಾಡಿ ಬದುಕುದೂಡುತ್ತಿದ್ದಾರೆ ಕೂಡಲೇ ರಾಜ್ಯ ಸರಕಾರ ಕೋವಿಡ್ ವಾರಿಯರ್‌ಗಳಿಗೆ ವೇತನ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನೆಕಾರರು ಆಗ್ರಹಸಿದ್ದಾರೆ.
ಜನಶಕ್ತಿ ಮೀಡಿಯಾ ವರದಿ ತುಂಬಾ ಅದ್ಭುತ ವಗಿದೆ ಮೂಡಿ ಬರಲಿ ದೆ 🙏🙏🙏💐💐💐💐💐💐👍