ಬೆಂಗಳೂರು: ಕೋವಿಡ್ ದೃಢಗೊಂಡ ಗಂಭೀರವಲ್ಲದ ಸೋಂಕಿತರನ್ನು ವಾಸ ಸ್ಥಳದಲ್ಲಿಯೇ ಆರೈಕೆ ನೀಡಲಾಗಿದ್ದು, ಸದ್ಯ ಅಂತಹವರಿಗೆ ಆರೈಕೆಯನ್ನು 10 ದಿನಗಳಿಂದ 7 ದಿನಗಳಿಗೆ ಇಳಿಕೆ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಬೆಂಗಳೂರಿನಲ್ಲಿ ಹೆಚ್ಚು ಸೋಂಕಿತರು ಮನೆಯಲ್ಲೇ ಇದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಆರೈಕೆಯಲ್ಲಿ ಮೂರು ದಿನಗಳನ್ನು ಕಡಿತಗೊಳಿಸಲಾಗಿದೆ ಎಂದು ಹೇಳಿದರು.
ಅದೇ ರೀತಿ, ಸೋಂಕಿತರು ಗುಣಮುಖರಾದ ಬಳಿಕ ಮತ್ತೆ ಕೋವಿಡ್ ಪರೀಕ್ಷೆ ಮಾಡಿಸಿ, ನೆಗಟಿವ್ ವರದಿ ಪಡೆಯುವ ಅಗತ್ಯತೆ ಇಲ್ಲ. ಏಳು ದಿನಗಳ ಬಳಿಕ ತಮ್ಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು ಎಂದು ತಿಳಿಸಿದರು.
ಎರಡನೇ ಅಲೆ ವೇಳೆ ಮಾತ್ರೆ, ಔಷಧಿ ಬಳಕೆ ತೀವ್ರ ಪ್ರಮಾಣದಲ್ಲಿ ಇದ್ದ ಕಾರಣ ಬ್ಲ್ಯಾಕ್ ಫಂಗಸ್ ಪ್ರಕರಣ ಬೆಳಕಿಗೆ ಬಂದಿತ್ತು. ಹೀಗಾಗಿ ಸೋಂಕಿತರಿಗೆ ಹೆಚ್ಚಿನ ಪ್ರಮಾಣದ ಔಷಧಿಯನ್ನು ನೀಡದೆ, ಸಾಮಾನ್ಯ ಪ್ರಮಾಣದ ಮಾತ್ರೆಗಳನ್ನು ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಸ್ಟಾಪ್ ಒನ್ ಸಂಸ್ಥೆ ಸಹಯೋಗದೊಂದಿಗೆ ಬಿಬಿಎಂಪಿ ವತಿಯಿಂದ ಮನೆಗಳಲ್ಲಿ ಆರೈಕೆಗೆ ಒಳಗಾಗಿರುವ ರೋಗಿಗಳ ಮೇಲೆ ನಿಗಾ ಇರಿಸಿದೆ. ಸೋಂಕಿತರ ಸಹಾಯಕ್ಕೆ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಜನತೆಗೆ ಮನವಿ ಮಾಡಿದರು.
ಕೋವಿಡ್ 3ನೇ ಅಲೆ ಅಪ್ರಾಪ್ತ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಿಲ್ಲ. ಹಾಗಾಗಿ, ಪೋಷಕರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಕೋವಿಡ್ ಸೋಂಕು ಹೆಚ್ಚು ಪರಿಣಾಮಕಾರಿ ಆಗಬಹುದು ಎಂದು ಹೇಳಲಾಗಿತ್ತು. ಆದರೆ, ಅಷ್ಟೊಂದು ಸಮಸ್ಯೆ ಉಂಟಾಗಿಲ್ಲ. ರೋಗ ಲಕ್ಷಣಗಳು ಇದ್ದರೂ, ಜೀವಕ್ಕೆ ಅಪಾಯ ಉಂಟು ಮಾಡಿಲ್ಲ. ಈ ಬಗ್ಗೆ ಮಕ್ಕಳ ತಜ್ಞರು ದೃಢಪಡಿಸಿದ್ದಾರೆ ಎಂದರು.
ಮನೆಯಲ್ಲೇ ಚಿಕಿತ್ಸೆ ಪಡೆಯುವ ರೋಗಿಗಳ ಮೇಲೆ ನಿಗಾ ಇರಿಸಲಾಗಿದ್ದು, ಅವರಿಗೆ ಔಷಧಗಳ ಕಿಟ್ ಉಚಿತವಾಗಿ ಸರಬರಾಜು ಮಾಡಲಾಗುತ್ತಿದೆ. ಜೊತೆ ಜೊತೆಗೆ ಆರೋಗ್ಯ ವೃದ್ಧಿ ಕುರಿತು ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ತಿಳಿಸಿದರು.