ಬೆಂಗಳೂರು: ಕೋವಿಡ್‌ನಿಂದ ಗುಣಮುಖರಾಗಿರುವ ರಾಜ್ಯದ 28 ಲಕ್ಷ ಜನರನ್ನೂ ಕ್ಷಯ ರೋಗ ತಪಾಸಣೆಗೆ ಒಳಪಡಿಸಲು ವಿಶೇಷ ಅಭಿಯಾನವನ್ನು ಆಗಸ್ಟ್ 16 ರಿಂದ 31ರವರೆಗೆ ವಿಶೇಷ ಆಂದೋಲನ ನಡೆಸಲಾಗುತ್ತಿದೆ. ಇಡೀ ದೇಶದಲ್ಲಿಯೇ ಇದು ಮೊದಲ ಪ್ರಯತ್ನ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ‘ಕಳೆದ ಐದು ವರ್ಷಗಳಲ್ಲಿ ಕ್ಷಯ ರೋಗ ಹೆಚ್ಚಾಗಿದೆ. ಶೇಕಡ 33ರಷ್ಟು ಕ್ಷಯ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಕೋವಿಡ್ ಬಂದವರಿಗೂ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಇದನ್ನು ಮಾಡಲಾಗುತ್ತಿದೆʼ ಎಂದರು.
ಇದನ್ನು ಓದಿ: ಪೌಷ್ಠಿಕ ಆಹಾರದ ಬದಲಿಗೆ ನಗದು ವರ್ಗಾವಣೆ: ಅಂಗನವಾಡಿ ನೌಕರರ ರಾಜ್ಯವ್ಯಾಪಿ ಧರಣಿ
ʻರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಗುಣಮುಖರಾದ ಎಲ್ಲರನ್ನೂ ಕ್ಷಯ ರೋಗ ತಪಾಸಣೆಗೆ ಒಳಪಡಿಸುತ್ತೇವೆ. ಕ್ಷಯ ರೋಗ ಸಾಮಾನ್ಯವಾಗಿ ಶ್ವಾಸಕೋಶದ ಸೋಂಕಿನಿಂದ ಬರುತ್ತದೆ. ಕೋವಿಡ್ ಕೂಡಾ ಶ್ವಾಸಕೋಶದ ಸೋಂಕುರೋಗ. ಕೋವಿಡ್‌ನಿಂದ ಗುಣಮುಖರಾದವರಿಗೆ ಸ್ವಲ್ಪ ಪ್ರಮಾಣದಲ್ಲಿ ಕ್ಷಯ ರೋಗ ಕಂಡು ಬಂದಿದೆ. ಕೋವಿಡ್‌ನಿಂದ ಗುಣಮುಖರಾದ 24 ಮಂದಿಯಲ್ಲಿ ಕ್ಷಯ ರೋಗ ಪತ್ತೆಯಾಗಿದೆ. ಹೀಗಾಗಿ, ದೊಡ್ಡ ಸಂಖ್ಯೆಯಲ್ಲಿ ತಪಾಸಣೆಗೆ ಯೋಜಿಸಲಾಗಿದೆ’ ಎಂದು ಸಚಿವರು ತಿಳಿಸಿದರು.
ಜನರು ಸಹ ಆದಷ್ಟೂ ಬೇಗನೇ ತಪಾಸಣೆ ಮಾಡಿಸಿಕೊಳ್ಳಿ. ಕೋವಿಡ್‌ನಿಂದ ಗುಣಮುಖರಾದವರು ಮೊದಲೇ ತಪಾಸಣೆ ಮಾಡಿಸಿಕೊಂಡರೆ ಆರಂಭದಲ್ಲೇ ತಡೆಯಬಹುದು. 3.9 ರಷ್ಟು ಜನರಿಗೆ ಕ್ಷಯ ರೋಗವಿತ್ತು. 2019-20ರಲ್ಲಿ ತಪಾಸಣೆ ಮಾಡಿದಾಗ ಕಡಿಮೆಯಾಗಿದೆ. ಕೋವಿಡ್ ಬಂದ ಹಿನ್ನೆಲೆ ತಪಾಸಣೆ ಕಡಿಮೆ ಮಾಡಲಾಗಿತ್ತು. ಹೀಗಾಗಿ ಕಡಿಮೆ ಆಗಿದೆ ಅಂತ ಭಾವಿಸಬೇಕಾಗಿಲ್ಲಿ ಎಂದು ಹೇಳಿದರು.
ಇದನ್ನು ಓದಿ: ಸದ್ಯಕ್ಕೆ ಲಾಕ್‌ಡೌನ್ ಇಲ್ಲ-ಜಿಲ್ಲಾವಾರು ಕೋವಿಡ್ ತಡೆಗೆ ಕ್ರಮ ಹಾಗೂ ಶಾಲೆಗಳು ಆರಂಭ: ಸಿಎಂ ಬೊಮ್ಮಾಯಿ
‘2017ರಲ್ಲಿ ಕ್ಷಯ ರೋಗ ತಪಾಸಣೆಯಲ್ಲಿ 75 ಲಕ್ಷ ಜನರನ್ನು ಗುರುತಿಸಿ, ಆ ಪೈಕಿ ಶೇಕಡ 88ರಷ್ಟು ಜನರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಅವರಲ್ಲಿ ಸುಮಾರು 4 ಸಾವಿರ ಜನರಲ್ಲಿ (ಶೇ.3.9) ಜನರಿಗೆ ಕ್ಷಯ ರೋಗ ಪತ್ತೆಯಾಗಿದೆ. 2019 ಮತ್ತು 2020ಕ್ಕೆ ಹೋಲಿಸಿದರೆ ಈ ರೋಗದ ಪ್ರಮಾಣ ಕಡಿಮೆ ಕಾಣಿಸಿದ್ದರೂ, ಕೋವಿಡ್‌ನಿಂದ ಕ್ಷಯ ರೋಗದ ತಪಾಸಣೆ ಸಮರ್ಪಕವಾಗಿ ನಡೆಯದಿರುವುದು ಕಾರಣ ಇರಬಹುದು’ 2021ರಲ್ಲಿ 1.25 ಕೋಟಿ ಜನರನ್ನು ಪರೀಕ್ಷೆಗೆ ಒಳಪಡಿಸಲು ಗುರಿ ನಿಗದಿಪಡಿಸಲಾಗಿದೆ. ಈಗಾಗಲೇ 79,938 ಜನರನ್ನು ತಪಾಸಣೆ ನಡೆಸಲಾಗಿದ್ದು, ಆ ಪೈಕಿ, 2,714 ಜನರಿಗೆ ಕ್ಷಯ ರೋಗ ಪತ್ತೆ ಆಗಿದೆ’ ಎಂದು ಹೇಳಿದರು.
ಆರೋಗ್ಯ ನಂದನ ಕಾರ್ಯಕ್ರಮ
ಮೂರನೇ ಅಲೆ ಬಂದರೆ ಮಕ್ಕಳ ಮೇಲೆ ಪರಿಣಾಮ ಬೀರುವುದು ಅಂತ ಹೇಳಲಾಗುತ್ತಿದೆ ಹಾಗಾಗಿ ಮಕ್ಕಳ ವಾತ್ಸಲ್ಯ, ಪ್ರೀತಿ-ಪ್ರೇಮ ಇಡುವಂತಹ ನೂತನ ಹೊಸ ಕಾರ್ಯಕ್ರಮ ಘೋಷಣೆ ಮಾಡಲಾಗುವುದು. ಆರೋಗ್ಯ ನಂದನ ಹೆಸರಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಎಲ್ಲಾ ಮಕ್ಕಳಿಗೆ ತಪಾಸಣೆ ಮಾಡಲಾಗುವುದು. ಪೌಷ್ಟಿಕ ಆಹಾರ ನೀಡುವ ಕೆಲಸ ಮಾಡಲಾಗುವುದು.
‘ಈ ಕಾರ್ಯಕ್ರಮದ ರೂಪುರೇಷೆಗಳು ಸಿದ್ದವಾಗಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಯ ನೀಡಿದ ತಕ್ಷಣ ಚಾಲನೆ ನೀಡಲಾಗುವುದು. ಒಂದೂವರೆ ಕೋಟಿಗೂ ಹೆಚ್ಚು ಮಕ್ಕಳ ರೋಗ ನಿರೋಧಕ ಶಕ್ತಿಯನ್ನು ಪತ್ತೆ ಮಾಡಲು ‘ಆರೋಗ್ಯ ನಂದನ’ ಎಂಬ ವಿನೂತನ ಕಾರ್ಯಕ್ರಮವನ್ನು ವಾರದೊಳಗೆ ಚಾಲನೆ ನೀಡಲಾಗುವುದು ಎಂದು ಸಚಿವ ಡಾ. ಸುಧಾಕರ್ ಹೇಳಿದರು.