ನವದೆಹಲಿ: ಮಕ್ಕಳಿಗಾಗಿ ಕೋವಿಡ್ ಲಸಿಕೆಯನ್ನು ನೀಡುವುದಕ್ಕೆ ಸಂಬಂಧಿಸಿದಂತೆ ಕೊವಿಶೀಲ್ಡ್ ಲಸಿಕೆ ತಯಾರಿಕೆ ಸಂಸ್ಥೆ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಅದರ್ ಪೂನವಾಲಾ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಅಂದರೆ ಮೂರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಮುಂದಿನ ಆರು ತಿಂಗಳೊಳಗೆ ಲಸಿಕೆಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ ಎಂದು ಹೇಳಿದ್ದಾರೆ.
ವರ್ಚುವಲ್ ಸಮ್ಮೇಳನದಲ್ಲಿ 27ನೇ ಸಿಐಐ ಪಾಲುದಾರಿಕೆ ಶೃಂಗಸಭೆ-2021ರಲ್ಲಿ ಮಾತನಾಡಿದ ಪೂನಾವಾಲಾ ಕೊವೊವಾಕ್ಸ್ ಲಸಿಕೆ ಪ್ರಯೋಗದಲ್ಲಿದೆ ಎಂದು ಹೇಳಿದರು.
ನಾವು ಆರು ತಿಂಗಳೊಳಗೆ ಮೂರು ವರ್ಷ ಮೇಲ್ಪಟ್ಟ ವಯಸ್ಸಿನ ಮಕ್ಕಳಿಗೆ ಹೊಸದೊಂದು ಲಸಿಕೆಯನ್ನು ಪ್ರಾರಂಭಿಸಲಿದ್ದೇವೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಕೊವಿಶೀಲ್ಡ್ ಶಿಫಾರಸು ಮಾಡುವುದಿಲ್ಲ ಅಥವಾ ಅನುಮೋದಿಸುವುದಿಲ್ಲ. ಮಕ್ಕಳಿಗಾಗಿ ಕೊವೊವಾಕ್ಸ್ ಪ್ರಯೋಗದಲ್ಲಿದೆ ಎಂದು ಅವರು ಹೇಳಿದರು.
ಓಮಿಕ್ರಾನ್‌ನ ಪ್ರಭಾವ ಮಕ್ಕಳಲ್ಲಿ ಇನ್ನೂ ಕಂಡುಬರದಿದ್ದರೂ, ಮಕ್ಕಳಲ್ಲಿನ ದೇಹ, ಜೀವಕೋಶಗಳು ಮತ್ತು ಅವರ ಶ್ವಾಸಕೋಶಗಳು ಉತ್ತಮವಾಗಿ ಚೇತರಿಸಿಕೊಳ್ಳುತ್ತವೆ ಎಂದು ನಾನು ಭಾವಿಸುತ್ತೇನೆ. ಅವರು ಈ ಒತ್ತಡದಿಂದ ದೊಡ್ಡ ಪರಿಣಾಮ ಬೀರುವುದಿಲ್ಲ ಎಂದು ಅದರ್ ಪೂನವಾಲಾ ಹೇಳಿದರು.
ಓಮಿಕ್ರಾನ ತಳಿಗೆ ಬಗ್ಗೆ ಹೆಚ್ಚಿನ ಆತಂಕಗೊಳ್ಳಬೇಕಿಲ್ಲ ಎಂದು ಹೇಳಿರುವ ಅದರ್ ಪೂನವಾಲಾ ಅವರು “ಆರೋಗ್ಯ ವ್ಯವಸ್ಥೆ, ಆಸ್ಪತ್ರೆಗಳು, ಆಮ್ಲಜನಕ ಪೂರೈಕೆ ಮತ್ತು ಲಸಿಕೆಗಳಿದ್ದರೂ ನಾವು ಉತ್ತಮವಾಗಿ ಸಿದ್ಧರಾಗಿದ್ದೇವೆ. ಪ್ರಪಂಚವು ಈಗ ಮೂರನೇ ಮತ್ತು ನಾಲ್ಕನೇ ಅಲೆಯನ್ನು ಎದುರಿಸಲು ಬೇಕಾದ ಎಲ್ಲಾ ಸಿದ್ದತೆಯನ್ನು ಕೈಗೊಂಡಿದೆ. ಸದ್ಯ ನಾವು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ಕಲಿತಿದ್ದೇವೆ. ಓಮಿಕ್ರಾನ್ ಮತ್ತು ಇತರ ರೂಪಾಂತರಗಳ ಬಗ್ಗೆ ಭಯಪಡಬೇಕಾಗಿಲ್ಲ ಎಂದು ನಾನು ಭಾವಿಸುತ್ತೇನೆ. ನಾವು ಇನ್ನೂ ಭಯಪಡಬಾರದು” ಎಂದು ಅವರು ಹೇಳಿದರು.