ಕೊರೊನಾ ಸಾವಿನ ಸಂಖ್ಯೆ ಗಣತಿಯಾಗಬೇಕು: ಸಿದ್ದರಾಮಯ್ಯ

ಬೆಳಗಾವಿ: ಕೋವಿಡ್‌–19ನಿಂದ ಸಾವನ್ನಪ್ಪಿರುವವ ಸಂಖ್ಯೆಯ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರೇ ಸುಳ್ಳು ಹೇಳುತ್ತಾರೆ ಎಂದರೆ ಏನನ್ನಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ‌ ಸಿದ್ದರಾಮಯ್ಯ ಪ್ರಶ್ನಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೊರೊನಾ ಸಾವಿನ ಸಂಖ್ಯೆಯನ್ನು ಸುಳ್ಳು ಹೇಳುತ್ತಿವೆ. ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೆ ಸಾವಿಗೀಡಾದವರು ಮೂರು ಜನ ಎಂದು ಸರ್ಕಾರ ಹೇಳಿತ್ತು. ನಿಜವಾಗಿ ಸತ್ತವರ ಸಂಖ್ಯೆ 39 ಜನ. ಆಗಲೇ ಸಾವಿನ ಸಂಖ್ಯೆಯ ಸುಳ್ಳಿನ ಬಗ್ಗೆ ಗೊತ್ತಾಗಿತ್ತು ಎಂದರು.

ಇದನ್ನು ಓದಿ: ಕೋವಿಡ್‌ನಿಂದ ಭಾರತದಲ್ಲಿ ಸಾವಿಗೀಡಾದವರು 47 ಲಕ್ಷ ಮಂದಿ; ವಿಶ್ವ ಆರೋಗ್ಯ ಸಂಸ್ಥೆ

2020ರ ಜನವರಿಯಿಂದ ಡಿಸೆಂಬರ್‌ವರೆಗೆ ಕರ್ನಾಟಕದಲ್ಲಿ ಸುಮಾರು 5 ಲಕ್ಷ ಜನ, ದೇಶದಲ್ಲಿ ಸುಮಾರು 47 ಲಕ್ಷ ಜನ ಕೊರೊನಾದಿಂದ ಸತ್ತಿದ್ದಾರೆ ಎಂದು ವಿಶ್ವ ಆರೋಗ ಸಂಸ್ಥೆ ಹೇಳಿದೆ. ಇದು ಯಾವುದೋ ರಾಜಕೀಯ ಪಕ್ಷ ಕೊಟ್ಟಿರುವ ಮಾಹಿತಿಯಲ್ಲ. ಆದರೆ ಸರ್ಕಾರದ ಬಳಿ ಈ ಬಗ್ಗೆ ಮಾಹಿತಿ ಇಲ್ಲ ಎಂದು ಯಾರೋ ಅಧಿಕಾರಿಯ ಮೂಲಕ ಡಬ್ಲುಎಚ್‍ಒ ಮಾತನ್ನು ತಿರಸ್ಕರಿಸಿ 5.20 ಲಕ್ಷ ಮಂದಿ ಸಾವಿಗೀಡಾಗಿದ್ದಾರೆ ಅಂತಷ್ಟೆ ಹೇಳಿದೆ.‌ ಡಬ್ಲ್ಯುಎಚ್ಒ ಹೇಳಿದ್ದು ಸುಳ್ಳು ಹೇಗಾಗುತ್ತದೆ?  ಎಂದು ಸಿದ್ದರಾಮಯ್ಯ ಪ್ರಶ್ನಸಿದರು.

ಸಾಕಷ್ಟು ಜನ ಕೊರೊನಾ ಬಂದು ಸತ್ತು ಹೋದ ಮಾಹಿತಿ ನನಗಿದೆ. ನಮ್ಮೂರ ಅಕ್ಕಪಕ್ಕದಲ್ಲಿ ಹಲವಾರು ಜನ ಸತ್ತಿದ್ದಾರೆ, ಕೊರೊನಾದಿಂದ ದೇಶದಲ್ಲಿ ನಿಜವಾಗಿ ಎಷ್ಟು ಜನ ಸತ್ತಿದ್ದಾರೆ ಎಂಬ ಬಗ್ಗೆ ಸಾವಿನ ಗಣತಿ ಆಗಬೇಕು ಮತ್ತು ಸತ್ತವರ ಕುಟುಂಬದವರಿಗೆ 4 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಒತ್ತಾಯಿಸುತ್ತೇನೆ. ಸರ್ಕಾರ ಇರುವುದು ಸತ್ಯ ‌ಹೇಳುವುದಕ್ಕೆ. ಆದರೆ‌ ಇವರು ಸತ್ಯವನ್ನು ಮರೆ ಮಾಚುತ್ತಿದ್ದಾರೆ; ಮುಚ್ಚಿ ಹಾಕುತ್ತಿದ್ದಾರೆ’ ಎಂದು ಆರೋಪಿಸಿದರು.

ಇದನ್ನು ಓದಿ: ವಿಶ್ವ ಆರೋಗ್ಯ ಸಂಸ್ಥೆಯ ವರದಿಗೆ ಭಾರತ ತೀವ್ರ ಆಕ್ಷೇಪ

ಪ್ರಧಾನಮಂತ್ರಿಗಳು, ಆರೋಗ್ಯ ಸಚಿವರು, ಮುಖ್ಯಮಂತ್ರಿಗಳು ಜನರಿಗೆ ತಪ್ಪು ಮಾಹಿತಿ ನೀಡಿರುವುದರಿಂದ ದೇಶದ ಜನರ ಬಳಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಯತ್ನಾಳ್‌ ಹೇಳಿಕೆ ತನಿಖೆಯಾಗಲಿ

ಬಸವನಗೌಡ ಪಾಟೀಲ್ ಯತ್ನಾಳ್ ನಿನ್ನೆ ಮಾಧ್ಯಮಗಳ ಜೊತೆ ಮಾತನಾಡುವಾಗ ದೆಹಲಿಯಿಂದ ಕೆಲವರು ಬಂದಿದ್ದರು, 2500 ಕೋಟಿ ರೂಪಾಯಿ ಕೊಟ್ಟರೆ ನಿಮ್ಮನ್ನು ಮುಖ್ಯಮಂತ್ರಿ ಮಾಡುತ್ತೇವೆ, ಮಂತ್ರಿ ಆಗಲು 100 ಕೋಟಿ ಸಿದ್ಧ ಮಾಡಿಕೊಳ್ಳಿ ಎಂದಿದ್ದರು, ಆದರೆ ಇಷ್ಟು ಹಣ ನನ್ನ ಬಳಿ ಇರಲಿಲ್ಲ ಹಾಗಾಗಿ ಮುಖ್ಯಮಂತ್ರಿ, ಮಂತ್ರಿ ಆಗಲು ಸಾಧ್ಯವಾಗಿಲ್ಲ ಎಂದಿದ್ದಾರೆ. ಇವರ ಬಳಿ ಹಣ ಕೇಳಿದವರು ಯಾರು? ಅವರನ್ನು ಕಳಿಸಿದ್ದು ಯಾರು? ಹಿಂದೆ ಯಡಿಯೂರಪ್ಪ ಎಷ್ಟು ದುಡ್ಡು ಕೊಟ್ಟು ಮುಖ್ಯಮಂತ್ರಿ ಆಗಿದ್ದರು? ಈಗಿನ ಮುಖ್ಯಮಂತ್ರಿಗಳು ಎಷ್ಟು ಕೊಟ್ಟಿದ್ದಾರೆ? ಮಂತ್ರಿಗಳು ಎಷ್ಟು ಕೊಟ್ಟಿದ್ದಾರೆ? ಈ ಎಲ್ಲವೂ ತನಿಖೆಯಾಗಿ ಸತ್ಯ ಗೊತ್ತಾಗಬೇಕು ಅಲ್ಲವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಇದನ್ನು ಓದಿ: ದೆಹಲಿಯಿಂದ ಬಂದವರು ಸಿಎಂ ಮಾಡ್ತೀವಿ 2500 ಕೋಟಿ ಕೊಡಿ ಅಂದ್ರು: ಬಸನಗೌಡ ಪಾಟೀಲ್‌ ಯತ್ನಾಳ್‌

ಬಸವರಾಜ ಬೊಮ್ಮಾಯಿ ಅವರದು ಹಗರಣಗಳ ಸರ್ಕಾರ. ಬರೀ ಗೃಹ ಇಲಾಖೆಯಲ್ಲಿ ಮಾತ್ರವಲ್ಲ, ಯಾವ ಯಾವ ಇಲಾಖೆಗಳಲ್ಲಿ ನೇಮಕಾತಿ ನಡೆದಿದೆ, ಅಲ್ಲೆಲ್ಲಾ ಭ್ರಷ್ಟಾಚಾರ ನಡೆದಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು 7/6/2021ರಲ್ಲಿ ಪ್ರಧಾನಿಗಳಿಗೆ ಪತ್ರ ಬರೆದು ರಾಜ್ಯ ಬಿಜೆಪಿ ಸರ್ಕಾರ 40% ಕಮಿಷನ್ ಸರ್ಕಾರ, ಇಲ್ಲಿ ಕೆಲಸಗಳನ್ನು ಮಾಡಲು ಆಗುತ್ತಿಲ್ಲ ಎಂದು ದೂರಿದ್ದಾರೆ. ಈ ಪತ್ರ ಬರೆದು ವರ್ಷವಾಗುತ್ತಾ ಬಂದಿದೆ, ಮೋದಿ ಅವರು ಏನು ಕ್ರಮ ಕೈಗೊಂಡರು? ತಾನು ತಿನ್ನುವುದಿಲ್ಲ, ತಿನ್ನುವವರಿಗೂ ಬಿಡುವುದಿಲ್ಲ ಎಂದು ಹೇಳುವ ಪ್ರಧಾನಿಗಳು ತನಿಖೆ ಮಾಡಿಸಬೇಕಿತ್ತು ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *