ಬೆಳಗಾವಿ: ʻಕೋವಿಡ್ ಸಾಂಕ್ರಾಮಿಕ ರೋಗ ನಿಯಂತ್ರಣಗೊಳಿಸಲು ಸರ್ಕಾರಕ್ಕೆ ಹಣ ಬೇಕಾಗಿದೆ. ಹಾಗಾಗಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾಗುತ್ತಿದೆʼ ಇಂತಹ ಹೇಳಿಕೆ ನೀಡಿದವರು ರಾಜ್ಯ ಆಹಾರ ಸಚಿವ ಉಮೇಶ್ ಕತ್ತಿ ಅವರು. ಜನತೆಯು ಸತತವಾಗಿ ಏರುತ್ತಿರುವ ಬೆಲೆಗಳಿಂದ ಕಂಗಾಲಾಗಿರುವ ಇಂತಹ ಸಂದರ್ಭದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.
ಪ್ರತಿಬಾರಿಯೂ ಒಂದಲ್ಲಾಒಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಇರುವ ಸಚಿವ ಉಮೇಶ್ ಕತ್ತಿ ಈ ಬಾರಿ ಬೆಲೆ ಏರಿಕೆಯ ಬಗ್ಗೆ ಕೋವಿಡ್ ನಿಯಂತ್ರಣಕ್ಕೆ ಸರ್ಕಾರಕ್ಕೆ ಹಣ ಬೇಕು ಎಂದರೆ ಎಲ್ಲಿಂದ ತರಬೇಕು? ಅದಕ್ಕಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಲಾಗಿದೆ ಎಂದು ಬೆಳಗಾವಿಯಲ್ಲಿ ಹೇಳಿದ್ದಾರೆ.
ಇದನ್ನು ಓದಿ: “ನೀವು ಉಳೀತಿರೋ ಇಲ್ವೋ ಗೊತ್ತಿಲ್ಲ, ನಾನಂತೂ ಉಳಿಯಬೇಕು” ಸಚಿವ ಉಮೇಶ್ ಕತ್ತಿ ವಿವಾದಾತ್ಮಕ ಹೇಳಿಕೆ
ʻಕೋವಿಡ್ ಹಿನ್ನೆಲೆಯಲ್ಲಿ ತೈಲ ಬೆಲೆ ಹೆಚ್ಚಳವಾಗಿದೆ. ಶೀಘ್ರವೇ ತೈಲ ಬೆಲೆ ಇಳಿಮುಖವಾಗಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೇ ಕಚ್ಚಾ ತೈಲಬೆಲೆ ಹೆಚ್ಚಳವಾಗಿದೆ. ರಾಜ್ಯ-ಕೇಂದ್ರ ಸರ್ಕಾರ ಕೂಡ ತೈಲದ ಮೇಲಿನ ಸುಂಕವನ್ನು ಹೆಚ್ಚಿಸಿವೆʼ ಎಂದರು. ನಿಜವಾಗಿಯೂ ಬೆಲೆ ಕಡಿಮೆ ಆಗುತ್ತದಾ? ಎಂಬ ಪ್ರಶ್ನೆಗೆ ʻನಾನು ಕೇಂದ್ರಮಂತ್ರಿ ಅಲ್ಲ, ದರ ಇಳಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಚರ್ಚಿಸಿದ್ದಾರೆ. ಕೆಲವೇ ದಿನಗಳಲ್ಲಿ ಕ್ರಮ ವಹಿಸಲು ಚಿಂತನೆ ನಡೆಸಿದ್ದಾರೆʼ ಎಂದು ಹೇಳಿದರು.
‘ಹೆಬ್ಬೆಟ್ ಗಿರಾಕಿ ಮೋದಿಯಿಂದ ದೇಶ ನಲುಗುತ್ತಿದೆ’ ಎಂಬ ಕಾಂಗ್ರೆಸ್ ಟ್ವೀಟ್‌ಗೆ ಸಚಿವ ಉಮೇಶ್ ಕತ್ತಿ ಪ್ರತಿಕ್ರಿಯಿಸಿದ್ದು ಪ್ರಧಾನಿ ಮೋದಿ ಜನಪರ ಆಡಳಿತವನ್ನು ಕೊಡುತ್ತಿದ್ದಾರೆ. ಕಾಂಗ್ರೆಸ್‌ಗೆ ಮಾಡಲು ಕೆಲಸವಿಲ್ಲದೆ ಇಂತಹ ಟ್ವೀಟ್ ಮಾಡಿದೆ ಎಂದು ಇದೇ ಸಂದರ್ಭದಲ್ಲಿ ಸಚಿವ ಉಮೇಶ್ ಕತ್ತಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಮೇ-ಜೂನ್‍ನಲ್ಲಿ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಸಹೋದರ ರಮೇಶ್ ಕತ್ತಿ ಸ್ಪರ್ಧಿಸುತ್ತಾರಾ? ಎಂಬ ಪ್ರಶ್ನೆಗೆ, ‘ಅದನ್ನು ಅವರಿಗೆ ಕೇಳಬೇಕು. ನನಗೆ ಆ ಬಗ್ಗೆ ಗೊತ್ತಿಲ್ಲ” ಎಂದು ಹೇಳಿದರು.
ಸಚಿವರಿಂದ ಈ ಹಿಂದೆ ವಿವಾದಾತ್ಮಕ ಹೇಳಿಕೆ
ಸಚಿವ ಉಮೇಶ್ ಕತ್ತಿ ವಿವಾದಾತ್ಮಕ ಹೇಳಿಕೆ ನೀಡುವುದು ಹೊಸತೇನಲ್ಲ. ಈ ಹಿಂದೆ ಸಾರ್ವಜನಿಕ ಪಡಿತರದಲ್ಲಿ ಅಕ್ಕಿ ಕಡಿಮೆ ಕೊಡಲಾಗುತ್ತಿದೆ. ಹಸಿವಿನಿಂದ ಸಾಯಬೇಕಾ? ಎಂದು ರೈತನೊಬ್ಬ ದೂರವಾಣಿ ಕರೆ ಮಾಡಿ ಕೇಳಿದಾಗ, “ಸತ್ತೋದ್ರೆ ಒಳ್ಳೆಯದು. ನನಗೆ ಫೋನ್ ಮಾಡಬೇಡ” ಎಂದು ಕರೆ ಬಂದ್ ಮಾಡಿದ್ದರು.
ಕೋವಿಡ್-19 ಎರಡನೇ ಅಲೆ ತೀವ್ರವಾಗಿದ್ದ ಸಂದರ್ಭದಲ್ಲಿ ಜನಸಾಮಾನ್ಯರು ಸರಿಯಾದ ಆಕ್ಸಿಜನ್, ವೈದ್ಯಕೀಯ ಸೌಲಭ್ಯ ಸಿಗದೆ ಮೃತಪಡುತ್ತಿದ್ದರು. ಇಂತಹ ಸಂದರ್ಭದಲ್ಲಿ “ಸಾಯುವವರು ಸಾಯುತ್ತಾರೆ. ಅವರಿಗೇನು ಪಂಪ್ ಹೊಡೆದು ಧೈರ್ಯ ತುಂಬಲು ಆಗುತ್ತಾ?” ಎಂದು ಸಚಿವರು ವಿವಾದಾತ್ಮಕ ಹೇಳಿಕೆ ನೀಡಿದ್ದರು.