ಕೋವಿಡ್‌ ನಿಯಂತ್ರಣ ಸೇರಿ ರಾಜ್ಯ ಸರ್ಕಾರದ ಸಾಧನೆಗಳನ್ನು ವಿವರಿಸಿದ ರಾಜ್ಯಪಾಲರು

ಬೆಂಗಳೂರು: ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಮುಖವಾಗಿ ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಮಾಡಲಾದ ಕ್ರಮಗಳನ್ನು ವಿವರಿಸಿದರು.

10 ದಿನಗಳ ವಿಧಾನಮಂಡಲ ಜಂಟಿ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಮೊದಲ ದಿನ ರಾಜ್ಯಪಾಲರ ಭಾಷಣದೊಂದಿಗೆ ಆರಂಭ ಕಂಡಿದೆ. ಜಂಟಿ ಸದನ ಉದ್ದೇಶಿಸಿ 30 ಪುಟಗಳ ಭಾಷಣ ಮಾಡಿದರು.

ಕೋವಿಡ್ ನಿರ್ವಹಣೆ ವಿಚಾರದಲ್ಲಿ ಕರ್ನಾಟಕ ಸರ್ಕಾರವು ಅಗತ್ಯಕ್ಕೆ ಅನುಸಾರವಾಗಿ ಕೆಲಸ ಮಾಡಿದೆ. ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳಿಂದಾಗಿ ರಾಜ್ಯದಲ್ಲಿ ಸಾವಿನ ಸಂಖ್ಯೆ ಕಡಿಮೆ‌ ಮಾಡಲು ಸಾಧ್ಯವಾಗಿದೆ. ಕರ್ನಾಟಕದಲ್ಲಿ ಒಟ್ಟು 6 ಕೋಟಿ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ದೇಶದಲ್ಲಿಯೇ ಹೆಚ್ಚಿನ ಕೋವಿಡ್‌ ಪರೀಕ್ಷೆ ನಡೆಸಿದ ರಾಜ್ಯಗಳಲ್ಲಿ ಒಂದು. ಕೋವಿಡ್-19ರ ಹೊಸ ರೂಪಾಂತರಿ ತಳಿಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಜೀನೋಮ್ ಸೀಕ್ವೆನ್ಸಿಂಗ್ ನಡೆಸಲು ರಾಜ್ಯದಲ್ಲಿ ಐದು ಐಎನ್‌ಎಸ್‌ಎಸಿಒಜಿ ಪ್ರಮಾಣಿತ ಪ್ರಯೋಗ ಶಾಲೆಗಳು ಲಭ್ಯವಿದೆ. ರಾಜ್ಯಗಳ ಆಸ್ಪತ್ರೆಗಳಲ್ಲಿ 55,256 ಎಚ್‌ಡಿಯು ಬೆಡ್ ಗಳು, 7216 ಐಸಿಯು ಬೆಡ್ ಗಳು, 123 ಐಸಿಯು ವೆಂಟಿಲೇಟರ್ (ಒಟ್ಟು 1,94,363) ಬೆಡ್ ಗಳು‌ ಲಭ್ಯ ಇವೆ ಎಂದು ವಿವರಿಸಿದರು.

ರಾಜ್ಯದಲ್ಲಿ 9.33 ಕೋಟಿ ಡೋಸ್  ಕೋವಿಡ್ ಲಸಿಕೆ ನೀಡಲಾಗಿದೆ. ಶೇಕಡ 100ರಷ್ಟು ಜನರಿಗೆ ಮೊದಲ ಡೋಸ್ ಮತ್ತು ಶೇ 85ರಷ್ಟು ಜನರಿಗೆ ಎರಡನೇ ಡೋಸ್ ನೀಡಲಾಗಿದೆ‌ ಎಂದರು.

ಕುಡಿಯುವ‌ ನೀರು ಪೂರೈಸುವ ಯೋಜನೆಗಳು ಚಾಲ್ತಿಯಲ್ಲಿದೆ. 2022-23ರಲ್ಲಿ 27.14 ಲಕ್ಷ ಮತ್ತು 2023- 24ರಲ್ಲಿ 17.45 ಲಕ್ಷ‌ ಮನೆಗಳಿಗೆ ಕುಡಿಯುವ ನೀರಿ‌ನ ಸಂಪರ್ಕ ಕಲ್ಪಿಸಲಾಗುವುದು. 5,965 ಗ್ರಾಮ ಪಂಚಾಯಿತಿಗಳ ಪೈಕಿ 5,571 ಗ್ರಾಮ ಪಂಚಾಯಿತಿಗಳಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಲು ಕ್ರಮಕೈಗೊಳ್ಳಲಾಗಿದೆ ಎಂದು ರಾಜ್ಯಪಾಲರು ಹೇಳಿದರು.

ಪ್ರವಾಹದಿಂದ ಹಾನಿಯಾದ ಪ್ರಕರಣಗಲ್ಲಿ 85,862 ಕುಟುಂಬಗಳಿಗೆ ₹ 85.86 ಕೋಟಿ ಪರಿಹಾರ ನೀಡಲಾಗಿದೆ. ಹಾನಿಗೀಡಾದ ಮನೆಗಳ ಪುನರ್ ನಿರ್ಮಾಣಕ್ಕೆ  ₹ 400.52 ಕೋಟಿ ನೆರವು ಒದಗಿಸಲಾಗಿದೆ. ಮುಖ್ಯಮಂತ್ರಿ ರೈತ ವಿದ್ಯಾರ್ಥಿ ನಿಧಿ ಯೋಜನೆ ಅಡಿಯಲ್ಲಿ 5.2 ಲಕ್ಷ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ₹ 126 ಕೋಟಿ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು.

ರಾಯಣ್ಣ ಹಾಗೂ ಚನ್ನಮ್ಮ ಪ್ರತಿಮೆ ಸ್ಥಾಪನೆ ಬಗ್ಗೆ ಪ್ರಸ್ತಾಪಿಸಿದ ರಾಜ್ಯಪಾಲರು ಭಾಷಾ ಸೂಕ್ಷ್ಮತೆ ಹಾಗೂ ವಿವಾದಕ್ಕೆ ಕಾರಣವಾಗಿರುವ ಬೆಳಗಾವಿಯ ಸುವರ್ಣಸೌಧದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪಿಸಲಾಗುವುದು ಎಂದರು.

ಮುಖ್ಯಮಂತ್ರಿ ಅಮೃತ್‌ ಯೋಜನೆಯ ಸರಣಿಯ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿದ ರಾಜ್ಯಪಾಲರು, ಈ ಯೋಜನೆ ರಾಜ್ಯದ ಭವಿಷ್ಯ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು. ಬೆಂಗಳೂರು ಮೆಟ್ರೋ ರೈಲು ಯೋಜನೆ ಎರಡನೇ ಹಂತದ 32.54 ಕಿಮೀ ಉದ್ದದ ಮಾರ್ಗಗಳನ್ನು 2022-23ರಲ್ಲಿ ಮುಕ್ತಾಯಗೊಳಿಸಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವ ವಿಶ್ವಾಸವನ್ನು ರಾಜ್ಯಪಾಲರ ಭಾಷಣದಲ್ಲಿ ಸರಕಾರ ವ್ಯಕ್ತಪಡಿಸಿದೆ.

ಮೊಟ್ಟೆ ಉತ್ಪಾದನೆ 

ಹೈನೋದ್ಯಮದಲ್ಲಿ ರಾಜ್ಯ ೧೧ನೇ ಸ್ಥಾನದಲ್ಲಿದೆ. ಮೊಟ್ಟೆ ಉತ್ಪಾದನೆಯಲ್ಲಿ 6 ನೇ ಸ್ಥಾನ ಹಾಗೂ ಮಾಂಸ ಉತ್ಪಾದನೆಯಲ್ಲಿ 10 ನೇ ಸ್ಥಾನದಲ್ಲಿದೆ. ರಾಜ್ಯದ ಜಿಡಿಪಿಗೆ ಈ ಕ್ಷೇತ್ರದಿಂದ ಶೇ.3.52 ರಷ್ಟು ಕೊಡುಗೆ ಇದೆ. ಎಸ್ ಡಿಜಿ ಭಾರತ ಸೂಚ್ಯಂಕದ ಪ್ರಕಾರ ರಾಜ್ಯ ನಾಲ್ಕನೇ ಸ್ಥಾನಕ್ಜೆ ಏರಿದೆ ಎಂದು ಉಲ್ಲೇಖಿಸಿದ್ದಾರೆ.

ಇನ್ನು ರಾಜ್ಯಪಾಲರ ಭಾಷಣದಲ್ಲಿ ಎಲ್ಲಿಯೂ ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಸ್ತಾಪವಾಗಿಲ್ಲ. ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಸ್ತಾಪಿಸದ ರಾಜ್ಯಪಾಲರು, ರಾಜ್ಯದಲ್ಲಿ ಎನ್‌ಇಪಿ ಜಾರಿ ಬಗ್ಗೆ ಉಲ್ಲೇಖ ಮಾಡಿದರು. ದೇಶದಲ್ಲೇ ಮೊದಲ ಬಾರಿಗೆ ಎನ್‌ಇಪಿ ಜಾರಿಯಾಗಲಿದ್ದು, ಈ  ಮೂಲಕ ಶೈಕ್ಷಣಿಕ, ಆಡಳಿತ ವ್ಯವಸ್ಥೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ತಂತ್ರಾಂಶ ಅಭಿವೃದ್ಧಿ ಕೈಗೊಳ್ಳಲಾಗಿದೆ ಎಂದು ಜಂಟಿ ಸದನದ ಭಾಷಣದಲ್ಲಿ ತಿಳಿಸಿದರು.

ಕಪ್ಪು ಪಟ್ಟಿ ಧರಿಸಿ ಬಂದಿದ್ದ ಕಾಂಗ್ರೆಸ್ ಸದಸ್ಯರು

ರಾಷ್ಟ್ರಧ್ವಜದ‌ ವಿಚಾರವಾಗಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ವಿವಾದಾತ್ಮಕ ಹೇಳಿಕೆ ಹಾಗೂ ಹಿಜಾಬ್ ವಿವಾದ ಖಂಡಿಸುತ್ತಿರುವ ಕಾಂಗ್ರೆಸ್ ಸದಸ್ಯರು ವಿಧಾನಮಂಡಲ ಅಧಿವೇಶನದ ಮೊದಲ ದಿನ ಕಪ್ಪು ಪಟ್ಟಿ ಧರಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *