ಕೋವಿಡ್ ನಿಯಮಾವಳಿ ರಾಜ್ಯದಲ್ಲಿ ಜಾರಿ ಇರುವಂತೆ ಕೊಡಗು ಜಿಲ್ಲೆಗೂ ಅನ್ವಯ: ಜಿಲ್ಲಾಧಿಕಾರಿ ಆದೇಶ

ಕೊಡಗು: ಕೋವಿಡ್-19 ಮಾರ್ಗಸೂಚಿ ಸಂಬಂಧಿಸಿದಂತೆ ಜುಲೈ 08ರಂದು ಆದೇಶಿಸಿದಂತೆ ರಾಜ್ಯ ಸರಕಾರ ಜುಲೈ 03 ರಂದು ಹೊರಡಿಸಿರುವ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೊಡಗು ಜಿಲ್ಲೆಯಲ್ಲಿಯೂ ಜಾರಿಗೊಳಿಸಲಾಗಿದೆ. ಅದರಂತೆ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಲಾಕ್‌ಡೌನ್‌ ಸಡಿಲಿಕೆ ನಿಯಮಾವಳಿಗಳು ತಕ್ಷಣದಿಂದ ಜಾರಿಗೆ ಬರುವಂತೆ ಜುಲೈ 19ರ ಬೆಳಗ್ಗೆ 6 ಗಂಟೆಯವರೆಗೆ ಇರುತ್ತದೆ ಎಂದು  ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಜಿಲ್ಲೆಯ ಕೋವಿಡ್‌ ನಿಯಮಗಳ ಆದೇಶದ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಚಾರುಲತಾ ಸೋಮಲ್ ಅವರು ಕೋವಿಡ್‌ ಮಾರ್ಗಸೂಚಿ ನಿಯಮದಂತೆ ಸೂಕ್ಷ್ಮ ನಿರ್ಬಂಧಿತ ವಲಯದಲ್ಲಿ ಯಾವುದೇ ಚಟುವಟಿಕೆಗಳು ಇರುವುದಿಲ್ಲ. ಸೂಕ್ಷ್ಮ ನಿರ್ಬಂಧಿತ ವಲಯವಲ್ಲದ ಪ್ರದೇಶಗಳಲ್ಲಿ ಚಟುವಟಿಕೆಗಳನ್ನು ನಡೆಸಲು ಅನುಮತಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ: ಜುಲೈ 05 ರಿಂದ ಲಾಕ್ಡೌನ್‌ ನಿರ್ಬಂಧ ತೆರವು – ಯಾವುದೆಲ್ಲ ಸಡಿಲಿಕೆ, ಇಲ್ಲಿದೆ ಪೂರ್ಣ ಮಾಹಿತಿ

ಚಿತ್ರಮಂದಿರಗಳು ಮತ್ತು ಪಬ್‌ಗಳು, ಈಜುಕೊಳಗಳಲ್ಲಿ ಸ್ಪರ್ಧಾತ್ಮಕ ಉದ್ದೇಶದ ತರಬೇತಿಗೆ ಮಾತ್ರ ಅವಕಾಶ ಇರುತ್ತದೆ. ಈ ಸಂಬಂಧ ಕೋವಿಡ್ ಸಮುಚಿತ ವರ್ತನೆ ಹಾಗೂ ಸಂಬಂಧಪಟ್ಟ ಇಲಾಖೆಯ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು. ತರಬೇತಿ ಉದ್ದೇಶಕ್ಕಾಗಿ ಮಾತ್ರ ಕ್ರೀಡಾ ಸಂಕೀರ್ಣಗಳನ್ನು ಮತ್ತು ಮತ್ತು ಕ್ರೀಡಾಂಗಣಗಳನ್ನು ತೆರೆಯಬಹುದಾಗಿದೆ. ಪ್ರೇಕ್ಷಕರಿಗೆ ಅವಕಾಶ ಇರುವುದಿಲ್ಲ. ಈ ಸಂಬಂಧ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡೆ, ಮನೋರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಸಮಾರಂಭಗಳು, ಗುಂಪುಗೂಡುವಿಕೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಒಗ್ಗೂಡುವಿಕೆಗಳ ಬಗ್ಗೆ ಸರಕಾರದ ಕೋವಿಡ್–19 ಮಾರ್ಗಸೂಚಿಯಂತೆಯೇ ಕಾರ್ಯನಿರ್ವಹಿಸಬೇಕು. ಗರಿಷ್ಠ 100 ಮಂದಿ ಮೀರದಂತೆ ಮದುವೆ, ಕೌಟುಂಬಿಕ ಸಮಾರಂಭಗಳನ್ನು ನಡೆಸಬಹುದು.

ಅಂತ್ಯಕ್ರಿಯೆ / ಶವಸಂಸ್ಕಾರ ಸಂದರ್ಭದಲ್ಲಿ ಗರಿಷ್ಠ 20 ಮಂದಿ ಮೀರದಂತೆ ನಡೆಸಬಹುದು. ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ ಇರುತ್ತದೆ. ಸೇವೆಗಳಿಗೆ ಅವಕಾಶ ಇರುವುದಿಲ್ಲ. ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಲ್ಲಿ ಆಸನ ಸಾಮರ್ಥ್ಯಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ.

ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ಖಾಸಗಿ ಶೈಕ್ಷಣಿಕ ತರಬೇತಿ ಕೇಂದ್ರಗಳು. ಕಾಲೇಜುಗಳು ಸರ್ಕಾರದ ಮುಂದಿನ ಆದೇಶದವರಗೆ ಮುಚ್ಚಲ್ಪಟ್ಟಿರುತ್ತದೆ.  ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಪ್ರಕೃತಿ ವಿಕೋಪ ಕಾಯ್ದೆಯಡಿ ದಂಡವನ್ನು ವಿಧಿಸಲಾಗುವುದು.

ಇದನ್ನು ಓದಿ: ಕಾವೇರಿ ನದಿ ನೀರಿನ ಸ್ವಚ್ಛತೆಯೇ ಕಾಯಕವಾಗಿಸಿಕೊಂಡ ಫ್ಲಾಂಟರ್‌ ಹಸೈನರ್

ಪ್ರತಿದಿನ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ರಾತ್ರಿ ಕಫ್ರ್ಯೂ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ತುರ್ತು, ವೈದ್ಯಕೀಯ, ಸರಕು ಸಾಗಾಣಿಕೆ, ಅತ್ಯವಶ್ಯಕ ಸೇವೆಗಳನ್ನು ಹೊರತುಪಡಿಸಿ, ಉಳಿದಂತೆ ಯಾವುದೇ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸಾರ್ವಜನಿಕರು ವಿನಾ ಕಾರಣ ತಿರುಗಾಡುವುದನ್ನು ನಿಷೇಧಿಸಲಾಗಿದ್ದು, ಕರ್ತವ್ಯದ ನಿಮಿತ್ತ ಸಂಚರಿಸುವವರು ಆಯಾಯ ಇಲಾಖೆ / ಸಂಸ್ಥೆ / ಕಚೇರಿಯಿಂದ ನೀಡಿದ ಅಧಿಕೃತ ಗುರುತಿನ ಚೀಟಿ ಹೊಂದಿರಬೇಕು. ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬಸ್ಸುಗಳಲ್ಲಿ ಸಂಚಾರ ಇರುತ್ತದೆ. ವಿಮಾನ ನಿಲ್ದಾಣ, ರೈಲ್ವೆ, ಬಸ್ ನಿಲ್ದಾಣಗಳಿಂದ ಪ್ರಯಾಣಿಕರನ್ನು ಕರೆತರಲು ಹಾಗೂ ಕರೆದೊಯ್ಯಲು ಅವಕಾಶ ಇರುತ್ತದೆ. ಆದರೆ, ಸಂಚಾರದ ವೇಳೆ ಅಧಿಕೃತ ದಾಖಲೆ, ಟಿಕೆಟ್ ಹೊಂದಿತಕ್ಕದ್ದು ಎಂದು ಜಿಲ್ಲಾಧಿಕಾರಿಗಳು ಅದೇಶ ಹೊರಡಿಸಿದ್ದಾರೆ.

ಅಗತ್ಯ ಸೇವೆಗಳ ಸಂಚಾರಗಳ ಬಗ್ಗೆ ಮಾರ್ಪಾಡು

ಜಿಲ್ಲೆಯಲ್ಲಿ ಮರಳುಗಾರಿಕೆ, ಮರದ ದಿಮ್ಮಿಗಳ ಸಾಗಾಣಿಕೆ ಹಾಗೂ ಭಾರೀ ವಾಹನ ಸಂಚಾರದ ನಿರ್ಬಂಧಿತ ಆದೇಶದ ಬಗ್ಗೆ ಜಿಲ್ಲಾಧಿಕಾರಿ ಮಾರ್ಪಾಡು ಮಾಡಿದ್ದಾರೆ. ವಾಹನದ ನೋಂದಣಿ ತೂಕ 16,200 ಕೆ.ಜಿ.ಗಿಂತ ಹೆಚ್ಚಿನ ತೂಕದ ಸರಕು ಸಾಗಾಣಿಕೆ ಮಾಡುವ ವಾಹನಗಳನ್ನು ಮಾತ್ರ ನಿರ್ಬಂಧಿಸಲಾಗಿದೆ. ಉಳಿದ ವಾಹನಗಳು ಸಂಚರಿಸಲು ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *