ಬೆಂಗಳೂರು: ಕರ್ನಾಟಕ ರಾಜ್ಯದ ಬಿಜೆಪಿ ಸರ್ಕಾರವು ಕೋವಿಡ್-19 ಎರಡನೇ ಅಲೆಯನ್ನು ನಿಯಂತ್ರಿಸುವ ಸಲುವಾಗಿ ಮೇ 10 ರವರೆಗೆ ಮೊದಲ ಹಂತದ ಮತ್ತು ಮೇ 24 ರವರೆಗೆ ಎರಡನೇ ಹಂತಹ ಲಾಕ್ಡೌನ್ ಘೋಷಣೆ ಮಾಡಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವಕೋವಿಡ್ ಸೋಂಕಿತರ ಸಂಖ್ಯೆ ಮತ್ತು ಸಾವಿನ ಪ್ರಮಾಣವು ಜನತೆಯಲ್ಲಿ ಆತಂಕವನ್ನು ಸೃಷ್ಟಿಸಿದೆ. ಇದಕ್ಕೆ ಸಂಪೂರ್ಣವಾಗಿ ಸರಕಾರದ ವಿಫಲತೆಯೇ ಕಾರಣವೆಂದು ಸಿಐಟಿಯು, ಕೆಪಿಆರ್ಎಸ್, ಎಐಎಡಬ್ಲ್ಯೂಯು ಸಂಘಟನೆಯು ಜಂಟಿಯಾಗಿ ಇಂದು ರಾಜ್ಯಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿತು.
ರಾಜ್ಯದ್ಯಂತ ನಡೆದ ಪ್ರತಿಭಟನೆಯಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು), ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್ಎಸ್), ಅಖಿಲ ಭಾರತ ಕೃಷಿ ಕೂಲಿಕಾರರ ಸಂಘಟನೆ (ಎಐಎಡಬ್ಲ್ಯೂಯು) ಜಂಟಿ ಸಂಘಟನೆಯ ಕಾರ್ಯಕರ್ತರು ಕೋವಿಡ್ ನಿಯಮಗಳ ಪಾಲಿಸಿ ತಾವು ವಾಸಿಸುವ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸಿದರು.
ಇದನ್ನು ಓದಿ: ಮೂರು ತಿಂಗಳು ಕನಿಷ್ಠ ರೂ.10 ಸಾವಿರ ಪರಿಹಾರಕ್ಕೆ ಚಾಲಕರ ಒತ್ತಾಯ
ರಾಜ್ಯದಲ್ಲಿ ಕೃಷಿ ಕೂಲಿಕಾರರೂ ಸೇರಿದಂತೆ 3 ಕೋಟಿಗೂ ಹೆಚ್ಚಿನ ಅಸಂಘಟಿತ ಕಾರ್ಮಿಕರು ಸರಿಯಾದ ಕೆಲಸಗಳಿಲ್ಲದೆ ಮತ್ತು ಆದಾಯಗಳಿಲ್ಲದೆ ಸಮಸ್ಯೆಗೆ ಸಿಲುಕಿದ್ದಾರೆ. ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು, ಖಾಸಗಿ ವಾಹನ ಚಾಲಕರು, ಬೀದಿ ಬದಿ ವ್ಯಾಪಾರಿಗಳು, ಮನೆಗೆಲಸಗಾರರು, ಹಮಾಲಿಗಳು, ಬಿಸಿಯೂಟ ನೌಕರರು, ದಿನಗೂಲಿಗಳು, ಗುತ್ತಿಗೆ-ಹೊರಗುತ್ತಿಗೆಕಾರ್ಮಿಕರು, ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಮತ್ತು ಸಿಬ್ಬಂದಿಗಳು ಮುಂತಾದವರುಆದಾಯಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸಂಘಟನೆಯ ಆರೋಪಿಸಿದೆ.
ಜನರ ಆದಾಯಗಳು ಕುಸಿದ ಮತ್ತು ಬೆಲೆಗಳ ಏರಿಳಿತದ ಪರಿಣಾಮವಾಗಿ ಕೃಷಿ ಮಾರುಕಟ್ಟೆ ಕುಸಿದಿದೆ. ಕೋವಿಡ್-19 ರಆತಂಕ ಹಾಗೂ ಲಾಕ್ಡೌನ್ ಕಾರಣದಿಂದ ಹೂವು, ಹಣ್ಣು ಮತ್ತು ತರಕಾರಿ ಮುಂತಾದ ಪದಾರ್ಥಗಳಿಗೆ ಮಾರುಕಟ್ಟೆ ಸಂಕುಚಿತಗೊಂಡಿದೆ. ಕೃಷಿ ಚಟುವಟಿಕೆಗಳು ಕುಂಠಿತಗೊಂಡಿವೆ. ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ರೈತರ ಆದಾಯಗಳು ಕುಸಿಯುತ್ತಿವೆ. ಕೆಲವು ಬೆಳೆಗಳಿಗೆ ನೀಡುತ್ತಿದ್ದ ಬೆಂಬಲ ಬೆಲೆಯ ಪ್ರೋತ್ಸಾಹಧನ ಘೋಷಣೆಯನ್ನು ಮತ್ತ ಖರೀದಿಯನ್ನು ನಿಲ್ಲಿಸಲಾಗಿದೆ ಎಂದು ಕೆಪಿಆರ್ಎಸ್ ಸಂಘಟನೆಯು ತಿಳಿಸಿದೆ.
ಇದನ್ನು ಓದಿ: ಜನತೆಗೆ ಬೇಕಿರುವುದು ತೋರಿಕೆಯ ಪರಿಹಾರವಲ್ಲಾ, ನಿಜ ಪರಿಹಾರ!: ಸಿಪಿಐ(ಎಂ) ಒತ್ತಾಯ
ಇಂತಹ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಕೋವಿಡ್ ಪರಿಹಾರ ಎಂಬ ತೋರಿಕೆಯ ಕ್ರಮಗಳನ್ನು ಘೋಷಿಸಿದೆ. ವಿವಿಧ ಜನ ವಿಭಾಗಗಳಿಗೆ 2 ರಿಂದ 3 ಸಾವಿರ ಪರಿಹಾರವೆಂದು ಘೋಷಿಸಲಾಗಿದ್ದು, ಇದಕ್ಕಾಗಿಒಟ್ಟು ರೂ. 1,111.82 ಕೋಟಿಗಳನ್ನು ಖರ್ಚು ಮಾಡುತ್ತಿರುವುದಾಗಿ ಸರ್ಕಾರ ಹೇಳಿದೆ. ಇದರಲ್ಲಿ ಕಟ್ಟಡ ಕಾರ್ಮಿಕಕಲ್ಯಾಣ ಮಂಡಳಿಯ ರೂ. 494 ಕೋಟಿಗಳನ್ನು ಬಳಸಲಾಗುತ್ತಿದೆ. ಹೀಗಾಗಿ ಸರ್ಕಾರ ಅಸಲಿಗೆ ಖರ್ಚು ಮಾಡುತ್ತಿರುವುದುರೂ. 617.82 ಕೋಟಿಗಳು ಮಾತ್ರ. ರಾಜ್ಯದಲ್ಲಿ ಸುಮಾರು 3 ಕೋಟಿ ಅಸಂಘಟಿತ ಕಾರ್ಮಿಕರಿದ್ದು ಇಷ್ಟು ಅತ್ಯಲ್ಪ ಮೊತ್ತವನ್ನು ಕೇವಲ ಕೆಲವೇ ಜನರಿಗೆ ಮಾತ್ರ ಕೊಡಬಹುದು. ಬಹುಸಂಖ್ಯಾತ ಅಸಂಘಟಿತ ಕಾರ್ಮಿಕರಿಗೆ ಯಾವುದೇ ಪರಿಹಾರವೂ ಸಿಗುವುದಿಲ್ಲ. ಎಲ್ಲ ಅಸಂಘಟಿತರಿಗೂ ಸರ್ಕಾರರೂ. 10,000 ಪರಿಹಾರವನ್ನು ಮ ತಲಾ 10 ಕೆಜಿ ರೇಷನ್ ನೀಡಬೇಕಾಗಿದೆ ಎಂದು ಸಿಐಟಿಯು ಸಂಘಟನೆಯು ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಜಂಟಿ ಸಂಘಟನೆಗಳು ಬೇಡಿಕೆಗಳಿಗೆ ಈಡೇರಿಸಬೇಕೆಂದು ಪ್ರತಿಭಟನೆ ಮೂಲಕ ರಾಜ್ಯ ಸರಕಾರವನ್ನು ಆಗ್ರಹಿಸಿವೆ.
ಬೇಡಿಕೆಗಳು
- ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು, ಆಟೋ, ಟ್ಯಾಕ್ಸಿ, ಗೂಡ್ಸ್ ಮುಂತಾದ ಖಾಸಗಿ ಮತ್ತು ವಾಣಿಜ್ಯ ವಾಹನ ಚಾಲಕರು, ಬೀದಿ ಬದಿ ವ್ಯಾಪಾರಿಗಳು, ಮನೆಗೆಲಸಗಾರರು, ಹಮಾಲಿಗಳು, ಬಿಸಿಯೂಟ ನೌಕರರು, ದಿನಗೂಲಿಗಳು, ಗುತ್ತಿಗೆ-ಹೊರಗುತ್ತಿಗೆ ಕಾರ್ಮಿಕರು, ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಮತ್ತು ಸಿಬ್ಬಂದಿಗಳು, ಮೆಕ್ಯಾನಿಕ್ಗಳು, ಕ್ಷೌರಿಕರು, ದೋಬಿಗಳು, ಸೆಕ್ಯೂರಿಟಿಗಳು ಮುಂತಾದ ಎಲ್ಲಾಅಸಂಘಟಿತ ಶ್ರಮಜೀವಿಗಳಿಗೆ ಮತ್ತುಆದಾಯ ತೆರಿಗೆ ಪಾವತಿ ವ್ಯಾಪ್ತಿಯಲ್ಲಿ ಬರದಿರುವ ರೈತ ಕೂಲಿಕಾರರು, ಬಡ ರೈತರು ಹಾಗೂ ದಲಿತರೂ ಸೇರಿದಂತೆ ಎಲ್ಲರಿಗೂ ಪ್ರತಿ ತಿಂಗಳು ರೂ.10,000 ದಂತೆ ಮೂರು ತಿಂಗಳು ನೇರ ಹಣ ವರ್ಗಾವಣೆ ಮಾಡಬೇಕು. ಈಗಾಗಲೇ ರಾಜ್ಯದ ವಿವಿಧ ಮೂಲಗಳಿಂದ‘ಪಿಎಂ-ಕೇರ್ಸ್’ಗೆ ನೀಡಲಾಗಿರುವ ಹಣದಲ್ಲಿ ಪಾಲು ಹಾಗೂ ರಾಜ್ಯದ ಎಲ್ಲ ಕಾರ್ಪೊರೇಟ್ ಕಂಪನಿಗಳ ಬಳಿಯಿರುವ ಸಿಎಸ್ಆರ್ ನಿಧಿಯನ್ನು ಸಮರ್ಪಕವಾಗಿ ಕ್ರೋಢೀಕರಿಸಿದರೆ ಇದಕ್ಕೆ ಬೇಕಾದ ಸಂಪನ್ಮೂಲವನ್ನು ಸಂಗ್ರಹಿಸಬಹುದು.
- ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾವಣೆಯಾಗಿರುವ ಎಲ್ಲಾ ಫಲಾನುಭವಿಗಳಿಗೆ ವಾರಕ್ಕೆ ರೂ. 2,500 ರಂತೆ ಮಾಸಿಕ ರೂ. 10,000 ಪರಿಹಾರವನ್ನುಒದಗಿಸಬೇಕು. ಇದರಿಂದ ಜನರ ಆದಾಯವನ್ನು ಸಂರಕ್ಷಿಸಲು ಮತ್ತುಆರೋಗ್ಯವನ್ನುಕಾಪಾಡಲು ಸಹಾಯಕವಾಗುತ್ತದೆ. ರಾಜ್ಯ ಸರ್ಕಾರ ಘೋಷಿಸಿರುವ ಪರಿಹಾರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಇದರಿಂದ ವಾಸ್ತವದಲ್ಲಿ ಬಹುತೇಕರಿಗೆ ಪ್ರಯೋಜವಾಗುವುದಿಲ್ಲ.
- ಕೈಗಾರಿಕಾ ಕಾರ್ಮಿಕರಿಗೆ ಹಾಗೂ ಸಂಘಟಿತ ಕಾರ್ಮಿಕರಿಗೆ ಲಾಕ್ಡೌನ್ ಅವಧಿಯಲ್ಲಿ ನೀಡಲಾಗುವ ರಜೆಗಳನ್ನು “ಸಂಬಳ ಸಹಿತ ರಜೆ” ಎಂದು ಘೋಷಿಸಬೇಕು. ಈ ಅವಧಿಯಲ್ಲಿ ಯಾವುದೆ ಲೇ-ಆಫ್, ರಿಟ್ರೆಂಚ್ಮೆಂಟ್ ಹಾಗು ಉದ್ಯೋಗ ನಷ್ಟವಾಗುವ ಯಾವುದೇ ಕ್ರಮಗಳನ್ನು ಕಾನೂನು ಬಾಹಿರವೆಂದು ಘೋಷಿಸಬೇಕು.
- ರೈತರ ಬದುಕನ್ನುಕಾರ್ಪೊರೇಟ್ ಕಂಪನಿಗಳ ಅಧೀನಕ್ಕೆ ಒಪ್ಪಿಸುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೃಷಿ ಕಾಯ್ದೆಗಳನ್ನು ಕೈಬಿಡುವಂತೆ ರಾಜ್ಯ ಸರ್ಕಾರ ತೀರ್ಮಾನಿಸಬೇಕು. ರೈತರ ಬೆಳೆಗೆ ಸೂಕ್ತವಾದ ಮಾರುಕಟ್ಟೆ ವ್ಯವಸ್ಥೆಯನ್ನುಒದಗಿಸಬೇಕು. ಎಲ್ಲಾ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಗೆ ಪ್ರೋತ್ಸಾಹ ಧನ ಘೋಷಿಸಬೇಕು. ಮಾರುಕಟ್ಟೆಯಿಲ್ಲದೆ ನಷ್ಟಕ್ಕೊಳಗಾಗುತ್ತಿರುವುದರಿಂದ ರೈತರಿಗೆ ಬೆಳೆ ಪರಿಹಾರವನ್ನು ಘೋಷಿಸಬೇಕು.
- ಗ್ರಾಮೀಣ ಉದ್ಯೋಗ ಖಾತ್ರಿ ಅಡಿಯಲ್ಲಿ ಕೃಷಿ ಕೂಲಿಕಾರರಿಗೆ ಕನಿಷ್ಟ 200 ದಿನಗಳ ಉದ್ಯೋಗವನ್ನು ನೀಡಬೇಕು. ದಿನದಕೂಲಿಯನ್ನು 700 ರೂಗಳಿಗೆ ಹೆಚ್ಚಿಸಬೇಕು. ದಿನಗೂಲಿಗಳ ಬಾಕಿ ವೇತನವನ್ನು ಕೂಡಲೇ ಪಾವತಿಸಬೇಕು. ಕೃಷಿ ಕೂಲಿಕಾರರಿಗೆ ಸಮಗ್ರವಾದ ಸಾಮಾಜಿಕ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಬೇಕು.
- ಕರ್ನಾಟಕ ರಾಜ್ಯದ ಪ್ರತಿ ವ್ಯಕ್ತಿಗೆ ತಿಂಗಳಿಗೆ 10 ಕೆ.ಜಿ.ಆಹಾರ ಧಾನ್ಯವನ್ನುಆರು ತಿಂಗಳ ಕಾಲ ಪಡಿತರ ವ್ಯವಸ್ಥೆ ಮೂಲಕ ಉಚಿತವಾಗಿ ನೀಡಬೇಕು. ಎಫ್ಸಿಐ ಮಳಿಗೆಗಳಲ್ಲಿ ಆಹಾರ ಧಾನ್ಯಗಳು ಕೊಳೆಯುವುದನ್ನು ತಪ್ಪಿಸಿ, ಅದನ್ನು ಜನರಿಗೆ ಹಂಚಬೇಕು. ಪ್ರತಿಯೊಬ್ಬರಿಗೂ 10 ಕೆ.ಜಿ. ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಬೇಕೆಂಬ ಕರ್ನಾಟಕ ಉಚ್ಚ ನ್ಯಾಯಾಲಯವು ನೀಡಿರುವು ಸೂಚನೆಯನ್ನು ರಾಜ್ಯ ಸರ್ಕಾರವು ಪಾಲಿಸಬೇಕು. ನೆರೆಯ ಕೇರಳ ಮತ್ತು ತಮಿಳುನಾಡು ರಾಜ್ಯ ಸರ್ಕಾರಗಳು ಅಲ್ಲಿನ ಜನತೆಗೆ ಉಚಿತ ರೇಷನ್ ಮತ್ತು ಹಣಕಾಸಿನ ನೆರವನ್ನು ನೀಡುತ್ತಿರುವ ರೀತಿಯಲ್ಲಿ ಕರ್ನಾಟಕ ಸರ್ಕಾರವು ಕೂಡಲೇ ಇಂತಹ ಯೋಜನೆಯನ್ನು ಪ್ರಕಟಿಸಬೇಕು.
- ಇಂದಿರಾ ಕ್ಯಾಂಟೀನ್ಗಳಲ್ಲಿ ಪೌಷ್ಟಿಕ ಮತ್ತು ಗುಣಮಟ್ಟದ ಆಹಾರವನ್ನು ನೀಡಬೇಕು. ಕೋವಿಡ್ ಪರಿಹಾರ ಸಾಮಗ್ರಿಗಳ ಖರೀದಿಯಲ್ಲಿ ವ್ಯಾಪಕವಾದ ಭ್ರಷ್ಟಾಚಾರ ನಡೆಯುತ್ತಿದ್ದು ಸಮಗ್ರವಾದ ತನಿಖೆಗೆ ಒಳಪಡಿಸಬೇಕು.
- ಕೋವಿಡ್ ಸೋಂಕಿತರನ್ನು ಪತ್ತೆ ಹಚ್ಚಲು ಪರೀಕ್ಷೆಗಳ ವ್ಯಾಪಕತೆಯನ್ನು ಹೆಚ್ಚಿಸಬೇಕು. ಅಗತ್ಯವಾದ ಹಾಸಿಗೆಗಳು, ಔಷಧಿಗಳು, ಇಂಜೆಕ್ಷನ್ಗಳು, ಆಮ್ಲಜನಕ, ವೆಂಟಿಲೇಟರ್ ವ್ಯವಸ್ಥೆಗಳನ್ನು ಸಮರೋಪಾದಿಯಲ್ಲಿ ಒದಗಿಸಬೇಕು. ಇದಕ್ಕೆಅಗತ್ಯವಾದ ಹಣವನ್ನುಕ್ರೋಢೀಕರಿಸಲು, ತುರ್ತಲ್ಲದ ಬಂಡವಾಳ ವೆಚ್ಚದ ಯೋಜನೆಗಳನ್ನು ಮುಂದೂಡಬೇಕು. ಲಸಿಕೆಯನ್ನು ಸಾರ್ವತ್ರಿಕವಾಗಿ ಹಾಗೂ ಉಚಿತವಾಗಿ ನೀಡಬೇಕು. ಕೋವಿಡ್ ಆತಂಕದ ಸಂದರ್ಭಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಕಾಳಸಂತೆಕೋರರ ಮೇಲೆ ತೀವ್ರವಾದ ಕ್ರಮಕೈಗೊಳ್ಳಬೇಕು. ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಕೋವಿಡ್ ಯೋಧರಿಗೂ ಕಡ್ಡಾಯ 30 ಲಕ್ಷ ವಿಮೆಯನ್ನು ಖಾತ್ರಿಗೊಳಿಸಬೇಕು.
ಈ ಮೇಲಿನ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ವಿವಿಧ ಜಿಲ್ಲೆಗಳಿಂದ ರಾಜ್ಯದ ಮುಖ್ಯಮಂತ್ರಿಗಳಿಗೆ ಜಂಟಿ ಸಂಘಟನೆಗಳು ಮನವಿಯನ್ನು ಸಲ್ಲಿಸಿದೆ.
ರಾಜ್ಯ ಸರಕಾರವು ಬೇಡಿಕೆಗಳನ್ನು ಈಡೇರಿಸಲಿ ಒತ್ತಾಯಿಸಿ ಪ್ರತಿಭಟನೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ ಎಲ್ಲಾ ರೈತ ಕಾರ್ಮಿಕ ಸಂಘಟನೆಯ ಕಾರ್ಯಕರ್ತರು ಮತ್ತು ಜನತೆಗೆ ಸಿಐಟಿಯು ಸಂಘಟನೆಯ ರಾಜ್ಯ ಅಧ್ಯಕ್ಷರಾದ ಎಸ್. ವರಲಕ್ಷ್ಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಕೆಪಿಆರ್ಎಸ್ ರಾಜ್ಯ ಅಧ್ಯಕ್ಷರಾದ ಜಿ.ಸಿ.ಬಯ್ಯಾರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಯು.ಬಸವರಾಜ, ಎಐಎಡಬ್ಲ್ಯೂಯು ಸಂಘಟನೆಯ ರಾಜ್ಯ ಅಧ್ಯಕ್ಷರಾದ ನಿತ್ಯಾನಂದಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ ಅವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.