ಎರಡು ಡೋಸ್‌ ಲಸಿಕೆ ಪಡೆದವರಿಗೆ ಮಾತ್ರ ಮಾಲ್‌, ಚಿತ್ರಮಂದಿರ ಪ್ರವೇಶಕ್ಕೆ ಅವಕಾಶ: ಬಿಬಿಎಂಪಿ

ಬೆಂಗಳೂರು: ಓಮೈಕ್ರಾನ್‌ ಸೋಂಕು ರಾಜ್ಯದಲ್ಲಿ ಕಾಣಿಸಿಕೊಂಡಿರುವುದರಿಂದ ಹೆಚ್ಚಿನ ಬಿಗಿಕ್ರಮಗಳನ್ನು ಕೈಗೊಂಡಿರುವ ರಾಜ್ಯ ಸರ್ಕಾರವು ಕೋವಿಡ್‌ ನಿಯಂತ್ರಣ ಮಾರ್ಗಸೂಚಿಯನ್ನು ಪರಿಷ್ಕರಣೆ ಮಾಡಿದೆ. ಅಲ್ಲದೆ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯೂ ಸಹ ಮಾರ್ಗಸೂಚಿಯನ್ನು ಅಧಿಕೃತವಾಗಿ ಪ್ರಕಟಿಸಿದೆ.

ಮಾರ್ಗಸೂಚಿ ಪ್ರಕಾರ “ಎರಡು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಮಾಲ್, ಶಾಪಿಂಗ್ ಕಾಂಪ್ಲೆಕ್ಸ್, ಚಿತ್ರಮಂದಿರಗಳಿ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ” ಎಂದು ಪ್ರಕಟಿಸಿದೆ. ಮಾಲ್, ಶಾಪಿಂಗ್ ಕಾಂಪ್ಲೆಕ್ಸ್, ಥಿಯೇಟರ್​​ ಪ್ರವೇಶಕ್ಕೂ ಮುನ್ನ ಎರಡೂ ಡೋಸ್‌ ಲಸಿಕೆಯನ್ನು ಪಡೆಯಲಾಗಿದೆಯೇ ಎಂಬ ಪ್ರಮಾಣ ಪತ್ರವನ್ನು ತೋರಿಸಿ ಪ್ರವೇಶ ಮಾಡಬೇಕು. ವಾಣಿಜ್ಯ ಮಳಿಗೆಗಳಲ್ಲಿ ಪ್ರಮಾಣಪತ್ರವನ್ನು ಪರಿಶೀಲನೆ ಮಾಡಿ ಒಳಗೆ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಬಿಬಿಎಂಪಿ ಅಧಿಕೃತ ಆದೇಶ ನೀಡಿದೆ.

ಎರಡೂ ಡೋಸ್‌ ಕೋವಿಡ್‌ ಲಸಿಕೆಯನ್ನು ಪಡೆದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆಯೇ ಎಂಬುವುದನ್ನು ಬಿಬಿಎಂಪಿ ಅಧಿಕಾರಿಗಳು, ಮಾರ್ಷಲ್​ಗಳು ಪರಿಶೀಲಿಸುತ್ತಾರೆ. ಎರಡೂ ಡೋಸ್‌ ಕೋವಿಡ್‌ ಲಸಿಕೆಯನ್ನು ಪಡೆಯದವರಿಗೆ ಮಳಿಗೆ ಪ್ರವೇಶ ನೀಡಿದರೆ ಅಂತಹ ಮಳಿಗೆಗಳ ಮಾಲೀಕರ ವಿರುದ್ಧವಾಗಿ ನಿರ್ದಾಕ್ಷಿಣ್ಯ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಸಾಮಾಜಿಕ ಅಂತರ ಕಾಯ್ದುಕೊಂಡು ಹಾಗೂ ಎಲ್ಲರೂ ಮಾಸ್ಕ್‌ ಧರಿಸಿದ್ದಾರೆಯೇ ಎಂದು ವಾಣಿಜ್ಯ ಮಳಿಗೆಯ ಸಿಬ್ಬಂದಿಗಳು ಪರಿಶೀಲನೆ ಮಾಡಬೇಕು. ಎಲ್ಲಾ ಕೋವಿಡ್‌ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಸ್ಕ್ರೀನಿಂಗ್‌ ನಡೆಸಲು ಹಾಗೂ ಕೋವಿಡ್‌ ಲಸಿಕೆ ಪಡೆದ ಪ್ರಮಾಣ ಪತ್ರವನ್ನು ಪರಿಶೀಲನೆ ಮಾಡಲು ಅಗತ್ಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಿಕೊಳ್ಳಲು ಸೂಚಿಸಲಾಗಿದೆ.

ಬಿಬಿಎಂಪಿ ಅಧಿಕೃತ ಮಾರ್ಗಸೂಚಿ

  • ಮಾಲ್‌, ಶಾಂಪಿಂಗ್‌ ಕಾಂಪ್ಲೆಕ್ಸ್‌, ಥಿಯೇಟರ್‌, ಸಿನಿಮಾ ಹಾಲ್‌ಗೆ ಹೋಗುವವರು ಎರಡೂ ಡೋಸ್‌ ಕೋವಿಡ್‌ ಲಸಿಕೆಯನ್ನು ಹಾಕಿಸಿಕೊಂಡಿರಬೇಕು.
  • ಮಳಿಗೆಯ ಮಾಲೀಕರು ಕೋವಿಡ್‌ ಮಾರ್ಗಸೂಚಿಗಳಾದ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಪಾಲಿಸಲಾಗುತ್ತಿದೆಯೇ ಎಂದು ಪರಿಶೀಲಿಸಬೇಕು.
  • ಸ್ಕ್ರೀನಿಂಗ್‌ ಹಾಗೂ ಕೋವಿಡ್‌ ಲಸಿಕೆ ಪ್ರಮಾಣ ಪತ್ರ ಪರಿಶೀಲನೆಗಾಗಿ ಅಗತ್ಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕು.

ರಾಜ್ಯದ ಮಾರ್ಗಸೂಚಿ ಹೀಗಿದೆ

ರಾಜ್ಯ ಸರ್ಕಾರವು ಉನ್ನತ ಮಟ್ಟದ ಸಭೆಯನ್ನು ನಡೆಸಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಶಾಲಾ-ಕಾಲೇಜುಗಳಲ್ಲಿ ಹೆಚ್ಚು ಪ್ರಕರಣಗಳು ಕಂಡು ಬರುತ್ತಿರುವುದರಿಂದ ಫೋಷಕರಿಗೆ ಎರಡು ಡೋಸ್ ಪಡೆದುಕೊಂಡಿರುವ ಅವರ ಮಕ್ಕಳಿಗೆ ಶಾಲಾ-ಕಾಲೇಜುಗಳಿಗೆ ಬರಲು ಅವಕಾಶ ನೀಡಲಾಗುತ್ತದೆ. ಯಾವುದೇ ಶಾಲೆಯಲ್ಲಿ ಸಮಾರಂಭ ಮಾಡುವಂತಿಲ್ಲ.

ಮಾಲ್, ಸಿನಿಮಾ ಮಂದಿರಗಳಿಗೆ ಎರಡು ಡೋಸ್ ಹಾಕಿಸಿಕೊಂಡವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲು ಸೂಚಿಸಲಾಗಿದೆ.

ಹೆಚ್ಚಿನ ಐಸಿಯು ಬೆಡ್‌ಗಳನ್ನು ಮತ್ತೆ ಸ್ಥಾಪಿಸಬೇಕು. ಹೆಚ್ಚಿನ ಆಕ್ಸಿಜನ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಪ್ರಕಟಿಸಲಾಗಿದೆ. ರಾಜ್ಯಾದ್ಯಂತ ಕಂಟ್ರೋಲ್ ರೂಂ ಮತ್ತೆ ಪ್ರಾರಂಭ ಮಾಡಲಾಗಿದೆ. ಅದಕ್ಕೆ ಬೇಕಾದ ಸಿಬ್ಬಂದಿ ವರ್ಗವನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ. ಅಗತ್ಯವಿರುವ ಔಷಧಿ ಖರೀದಿಗೂ ಸೂಚನೆ ಮಾಡಲಾಗಿದೆ.

ಮದುವೆ ಸಮಾರಂಭಗಳಲ್ಲಿ ಐದು ನೂರು ಜನರು ಸೇರಲು ಅವಕಾಶ ನೀಡಲಾಗಿದೆ. ವಿಮಾನ ನಿಲ್ದಾಣದಲ್ಲಿ ಕೋವಿಡ್‌ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ನೆಗೆಟಿವ್ ವರದಿ ಬಂದರೆ ಮಾತ್ರ ವಿಮಾನ ನಿಲ್ದಾಣದಲ್ಲಿ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಜೊತೆಗೆ ನೆಗೆಟಿವ್ ಬಂದರೆ ಮಾತ್ರ ಹೊರಗೆ ಕಳುಹಿಸಲಾಗುತ್ತದೆ.

ಸದ್ಯಕ್ಕೆ ಯಾವುದೇ ನೈಟ್ ಕರ್ಫ್ಯೂ ಇಲ್ಲ. ಇದರ ಬಗ್ಗೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿ ನಿರ್ಧಾರ ಕೂಗೊಳ್ಳಲಾಗುತ್ತದೆ. ಸೋಂಕಿನ ಕುರಿತು ಅಧ್ಯಯನ ಬಂದಿಲ್ಲ. ಈ ಸೋಂಕು ತೀವ್ರತೆ ಇಲ್ಲ ಎಂದು ಸರ್ಕಾರ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *