- ಬಿಜೆಪಿ ನೀಡಿರುವ ಭರವಸೆಯನ್ನು ಪ್ರಶ್ನಿಸಿ ಆಯೋಗಕ್ಕೆ ಸಾಮಾಜಿಕ ಕಾರ್ಯಕರ್ತ ಸಾಕೇತ್ ಗೋಖಲೆ ದೂರು
ನವದೆಹಲಿ: ‘ಬಿಹಾರದ ಜನರಿಗೆ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಬಿಜೆಪಿ ನೀಡಿದ್ದ ಭರವಸೆಯು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗುವುದಿಲ್ಲ’ ಎಂದು ಕೇಂದ್ರ ಚುನಾವಣಾ ಆಯೋಗ ಶನಿವಾರ ಸ್ಪಷ್ಟಪಡಿಸಿದೆ.
ಬಿಜೆಪಿ ನೀಡಿರುವ ಭರವಸೆಯನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಸಾಕೇತ್ ಗೋಖಲೆ ಅವರು ಆಯೋಗಕ್ಕೆ ದೂರು ನೀಡಿದ್ದರು. ಬಿಜೆಪಿಯ ಭರವಸೆಯು ತಾರತಮ್ಯದಿಂದ ಕೂಡಿದ್ದು, ಚುನಾವಣೆಯ ವೇಳೆ ಕೇಂದ್ರ ಸರ್ಕಾರದ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.
‘ನಿಗದಿತ ಚುನಾವಣೆಯ ವೇಳೆ ಮತದಾರರನ್ನು ಓಲೈಸುವುದಕ್ಕಾಗಿ ಎಲ್ಲಾ ಪಕ್ಷಗಳು ಹಾಗೂ ಅಭ್ಯರ್ಥಿಗಳು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡುವುದು ಸಾಮಾನ್ಯ. ಬಿಜೆಪಿಯ ಭರವಸೆಯು ಮಾದರಿ ನೀತಿ ಸಂಹಿತೆಗೆ ವಿರುದ್ಧವಾಗಿಲ್ಲ’ ಎಂದು ಆಯೋಗ ಹೇಳಿದೆ.
‘ಕೇಂದ್ರ ಸರ್ಕಾರವು ನಿರ್ದಿಷ್ಟ ರಾಜ್ಯವನ್ನು ಗಮನದಲ್ಲಿಟ್ಟುಕೊಂಡು ಈ ಭರವಸೆ ನೀಡಿದೆ ಎಂಬುದನ್ನು ಚುನಾವಣಾ ಆಯೋಗ ಮರೆತಿದೆ. ಇದರಿಂದ ನಿಜಕ್ಕೂ ತುಂಬಾ ಆಘಾತವಾಗಿದೆ’ ಎಂದು ದೂರುದಾರ ಸಾಕೇತ್ ಗೋಖಲೆ ಟ್ವೀಟ್ ಮಾಡಿದ್ದಾರೆ.
ಈ ತಿಂಗಳ ಆರಂಭದಲ್ಲಿ ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಐಸಿಎಂಆರ್ ಒಪ್ಪಿಗೆ ದೊರೆತ ಕೂಡಲೇ ಬಿಹಾರದ ಜನತೆಗೆ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಭರವಸೆ ನೀಡಿದ್ದರು.
ಬಿಹಾರಕ್ಕೆ ಉಚಿತ ಕೋವಿಡ್ ಲಸಿಕೆ: ಬಿಜೆಪಿ ಭರವಸೆಗೆ ಆಕ್ರೋಶ ಬಿಜೆಪಿಯ ಈ ನಡೆಯನ್ನು ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿದ್ದವು. ಆಡಳಿತಾರೂಢ ಸರ್ಕಾರವು ಮತದಾರರಿಗೆ ಆಮಿಷ ಒಡ್ಡುತ್ತಿದೆ. ಹೀಗಾಗಿ ಬಿಜೆಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದವು.