ಧಾರವಾಡ: ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊರೊನಾ ನಿರ್ವಹಣೆಯಲ್ಲಿ ನಡೆದ 40,000 ಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಾರ್ವಜನಿಕಗೊಳಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಅತೃಪ್ತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬುಧವಾರ ಮನವಿ ಮಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ಕೋವಿಡ್ ಹಗರಣದಲ್ಲಿ ಕೇಂದ್ರ ಸರ್ಕಾರದ ಕೈವಾಡವನ್ನು ಶಂಕಿಸಿದ್ದು, ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಯತ್ನಾಳ್ ಅವರು ಕನಿಷ್ಠ ವಿವರಗಳನ್ನು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ತನಿಖಾ ಆಯೋಗಕ್ಕೆ ಹಸ್ತಾಂತರಿಸಬೇಕು ಎಂದು ಸಚಿವರು ಹೇಳಿದ್ದಾರೆ.
ಬಿಜೆಪಿ ವಿರುದ್ಧವೆ ನಿರಂತರ ಆಕ್ರೋಶ ವ್ಯಕ್ತಪಡಿಸುತ್ತಲೆ ಇರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಇತ್ತಿಚೆಗೆ ಮಾಧ್ಯಮದ ಜೊತೆಗೆ ಮಾತನಾಡುತ್ತಾ, ತನ್ನನ್ನು ಪಕ್ಷದಿಂದ ಉಚ್ಚಾಟಿಸಿದರೆ ಕೊರೊನಾ ಸಾಂಕ್ರಾಮಿಕದ ವೇಳೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ 40,000 ಕೋಟಿ ರೂಪಾಯಿಗಳ ಅಕ್ರಮಗಳನ್ನು ಬಹಿರಂಗಪಡಿಸುವುದಾಗಿ ಎಚ್ಚರಿಸಿದ್ದರು.
ಇದನ್ನೂ ಓದಿ: ಬೆಂಗಳೂರು ಕಂಬಳ ಮಾದರಿಯಲ್ಲಿ ಕೊಬ್ಬರಿ ಹೋರಿ ನಡೆಸಿ | ಸಿಎಂ ಸಿದ್ದರಾಮಯ್ಯಗೆ ಪತ್ರ
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, “ದಯವಿಟ್ಟು ಕರ್ನಾಟಕದ ಜನರನ್ನು ಗಮನದಲ್ಲಿಟ್ಟುಕೊಂಡು ಮತ್ತು ಅವರ ಹಿತಾಸಕ್ತಿಗಳನ್ನು ಕಾಪಾಡುವ ಮೂಲಕ ದಾಖಲೆಗಳನ್ನು ಸಾರ್ವಜನಿಕಗೊಳಿಸುವಂತೆ ನಾನು ಮಾಧ್ಯಮಗಳ ಮೂಲಕ ಅವರಿಗೆ ಮನವಿ ಮಾಡುತ್ತೇನೆ. ಅಥವಾ ಕನಿಷ್ಠ ಅವುಗಳನ್ನು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಸಮಿತಿಯ ತನಿಖಾ ಆಯೋಗದೊಂದಿಗೆ ಹಂಚಿಕೊಳ್ಳಿ” ಎಂದು ಹೇಳಿದ್ದಾರೆ.
“ಯತ್ನಾಳ್ ಸರಿಯಾಗಿ ಹೇಳಿದ್ದಾರೆ ಎನ್ನವುದು ಜನರಿಗೆ ಗೊತ್ತಿದೆ. ಆದರೆ ಅವರು ತಮ್ಮ ಪ್ರಾಮಾಣಿಕತೆಯನ್ನು ಆಯೋಗದ ಮುಂದೆ ತರಬೇಕು. ನಿಮಗೆ (ಯತ್ನಾಳ್) ಆಯೋಗಕ್ಕೆ ಹಸ್ತಾಂತರಿಸಲು ಆಸಕ್ತಿ ಇಲ್ಲದಿದ್ದರೆ ಅದನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳಿ ಏಕೆಂದರೆ ಅದು 40,000 ಕೋಟಿ ರೂ. ಗಳ ಹಗರಣ. ಹಿಂದಿನ ಬಿಜೆಪಿ ಸರ್ಕಾರ ಶವದಿಂದ ಹಣ ಮಾಡಿದ್ದು, ಅವರಿಗೆ ಮಾನವೀಯತೆಯೆ ಇಲ್ಲ” ಎಂದು ಖರ್ಗೆ ಹೇಳಿದ್ದಾರೆ.
ಇದನ್ನೂ ಓದಿ: ನಾಮಫಲಕದಲ್ಲಿ ಕಡ್ಡಾಯವಾಗಿ ಕನ್ನಡ ಬಳಸಿ; ಬೃಹತ್ ರ್‍ಯಾಲಿ
ಯತ್ನಾಲ್ ಅವರು ತನ್ನನ್ನು ಪಕ್ಷದಿಂದ ಉಚ್ಚಾಟಿಸಿದರೆ ಕೊರೊನಾ ಸಾಂಕ್ರಾಮಿಕದ ವೇಳೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ 40,000 ಕೋಟಿ ರೂಪಾಯಿಗಳ ಅಕ್ರಮಗಳನ್ನು ಬಹಿರಂಗಪಡಿಸುವುದಾಗಿ ಎಚ್ಚರಿಸಿದ್ದರು. “ಕರ್ನಾಟಕದ ಬಿಜೆಪಿ ಸರ್ಕಾರ ಕೊರೊನಾ ವೇಳೆ ಎಲ್ಲವನ್ನೂ ಮಾಡಿದ್ದಾರೆ. ಅವರು ನನಗೆ ನೋಟಿಸ್ ನೀಡಲಿ ಮತ್ತು ಪಕ್ಷದಿಂದ ಹೊರಹಾಕಲು ಪ್ರಯತ್ನಿಸಲಿ, ನಾನು ಅವರ ಅಕ್ರಮವನ್ನು ಬಹಿರಂಗಪಡಿಸುತ್ತೇನೆ” ಎಂದು ಹೇಳಿದ್ದರು.
ಈ ಆರೋಪಗಳು ಕಾಂಗ್ರೆಸ್ ಮಾಡುತ್ತಿಲ್ಲ, ಬದಲಾಗಿ ಬಿಜೆಪಿ ಶಾಸಕ ಮತ್ತು ಮಾಜಿ ಕೇಂದ್ರ ಸಚಿವರೇ ಇದನ್ನು ಹೇಳುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮತ್ತು ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ಖರ್ಗೆ ಒತ್ತಾಯಿಸಿದ್ದಾರೆ. ಕೊರೊನಾ ನಿರ್ವಹಣೆಯಲ್ಲಿನ ಅಕ್ರಮಗಳ ಬಗ್ಗೆ ಬಿಜೆಪಿಯ ಕೇಂದ್ರ ಮಟ್ಟದ ನಾಯಕರು ಏಕೆ ಮೌನವಾಗಿದ್ದಾರೆಂದರೆ ಅವರ ಪಾಲು ಅವರಿಗೂ ಸಿಗುತ್ತಿತ್ತು ಎಂದು ಅವರು ಹೇಳಿದ್ದಾರೆ.
ವಿಡಿಯೊ ನೋಡಿ: ಪ್ರಚೋದನಾಕಾರಿ ಭಾಷಣ ಮಾಡಿದ್ದ ಕಲ್ಲಡ್ಕ ಪ್ರಭಾಕರ್ ಭಟ್ ಬಂಧನಕ್ಕೆ ಸಿಪಿಐಎಂ ಒತ್ತಾಯ Janashakthi Media